ಸಕಾಲ ಸೇವೆ ನೀಡುವಲ್ಲಿ ಕಲಬುರಗಿ ರಾಜ್ಯದಲ್ಲಿಯೇ ನಂಬರ್-1 ಸ್ಥಾನ -ಬಿ.ಫೌಜಿಯಾ ತರನ್ನುಮ್

ಸಕಾಲ ಸೇವೆ ನೀಡುವಲ್ಲಿ ಕಲಬುರಗಿ ರಾಜ್ಯದಲ್ಲಿಯೇ ನಂಬರ್-1 ಸ್ಥಾನ  -ಬಿ.ಫೌಜಿಯಾ ತರನ್ನುಮ್

ಕಲಬುರಗಿ:

 ಸಾರ್ವಜನಿಕರಿಗೆ ಕಾಲಮಿತಿಯಲ್ಲಿಯೇ ಸರ್ಕಾರಿ ಸೇವೆ ಒದಗಿಸುವ "ಸಕಾಲ" ಯೋಜನೆಯಡಿ ಕಳೆದ ಜುಲೈ ಮಾಹೆಯ ಅರ್ಜಿ‌ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಗಳಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಜುಲೈ ಮಾಹೆಯಲ್ಲಿ ಸಲ್ಲಿಕೆಯಾದ 1,58,990 ಅರ್ಜಿಗಳಲ್ಲಿ 1,46,088 ಅರ್ಜಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದ್ದು, ಮಾಸಾಂತ್ಯಕ್ಕೆ ಕೇವಲ 911 ಅರ್ಜಿ ಮಾತ್ರ ಬಾಕಿ ಉಳಿದುಕೊಂಡಿವೆ. ಕಾಲಮಿತಿಯಲ್ಲಿ ವಿಲೇವಾರಿಗೆ ಶೇ.30, ವಿಳಂಬಕ್ಕೆ ಶೇ.10, ತಿರಸ್ಕಾರಕ್ಕೆ ಶೇ.10, ಒಂದು‌ ಲಕ್ಷ ಜನಸಂಖ್ಯೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಶೇ.30 ಹಾಗೂ ಬಾಕಿ ಅರ್ಜಿಗಳಿಗೆ ಶೇ.20 ಅಂಕಗಳನ್ನು ನೀಡಿ ಒಟ್ಟಾರೆ ರ‌್ಯಾಂಕಿಂಗ್ ತೆಗೆಯಲಾಗಿದ್ದು, ಕಲಬುರಗಿ ಮುಂಚೂಣಿಯಲ್ಲಿ ಹೊರಹೊಮ್ಮಿದೆ ಎಂದರು.

ಬೆಂಗಳೂರು, ಬೆಳಗಾವಿ ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಸ್ವೀಕೃತಗೊಂಡಿದ್ದು, ವಿಲೇವಾರಿಯಲ್ಲಿಯೂ ಕಲಬುರಗಿ‌ ಜಿಲ್ಲೆ ಮುಂದಿದೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳ ಪ್ರಯತ್ನದ ಫಲವಾಗಿ ಜಿಲ್ಲೆ ಇಂದು ರಾಜ್ಯದಲ್ಲಿಯೆ ಮೊದಲನೇ ಸ್ಥಾನದಲ್ಲಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ಡಿ.ಸಿ‌. ಅವರು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಕಂದಾಯ ಸೇವೆಯಲ್ಲಿ ನಂಬರ್-1 ಅಬಾಧಿತ:

ಜುಲೈ ಮಾಹೆಯ ಅರ್ಜಿ ವಿಲೇವಾರಿಯಲ್ಲಿ ಎಲ್ಲಾ ಇಲಾಖೆಯನ್ನೊಳಗೊಂಡಂತೆ ಕಲಬುರಗಿ ಜಿಲ್ಲೆ ನಂಬರ್ 1 ಸ್ಥಾನದಲ್ಲಿದ್ದರೆ, ಇತ್ತ ಸುಮಾರು 59 ಸೇವೆಗಳನ್ನು ನೀಡುವ ಸರ್ಕಾರದ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯು ಕಳೆದ 6 ತಿಂಗಳಿಂದ ಅರ್ಜಿ‌ ವಿಲೇವಾರಿಯಲ್ಲಿ ಸತತ ಪ್ರಥಮ ಸ್ಥಾನದಲ್ಲಿದೆ. ಜಾತಿ-ಆದಾಯ, ವಾಸಸ್ಥಳ, 371ಜೆ ಮೀಸಲಾತಿ, ಸಿಂಧುತ್ವ, ಪಹಣಿ, ಮೊಟೇಷನ್, ಖಾತಾ, ಕೃಷಿಯೇತರ ಭೂಮಿ ಪರಿವರ್ತನೆ ಹೀಗೆ ಅನೇಕ ಸೇವೆಗಳನ್ನು ಇಲಾಖೆ ಸಕಾಲನಡಿ ಕಾಲಮಿತಿಯಲ್ಲಿ ನೀಡುತ್ತಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಮ್ಮ ಇಲಾಖೆಯ ಸಾಧನೆ ಬಿಚ್ಚಿಟ್ಟರು.

ಇಂದು... ನಾಳೆ... ಇನ್ನಿಲ್ಲ , ಹೇಳಿದ ದಿನ ತಪ್ಪೊಲ್ಲ ! ಎಂಬ ಘೋಷವಾಕ್ಯದ ಸಕಾಲ ಯೋಜನೆಯಡಿ ರಾಜ್ಯದ 100 ಇಲಾಖೆ/ ಸಂಸ್ಥೆಗಳ 1,181 ಸೇವೆಗಳನ್ನು ಕಾಲಮಿತಿಯಲ್ಲಿ ನೀಡಲಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ಸಿಗದೆ ಅರ್ಜಿದಾರ ಮೇಲ್ಮನವಿ ಸಲ್ಲಿಸಿದಲ್ಲಿ ಪ್ರತಿ ದಿನದ ವಿಳಂಬಕ್ಕೆ ಅಧಿಕಾರಿ-ಸಿಬ್ಬಂದಿಗಳಿಗೆ ದಂಡ ವಿಧಿಸಿ ಆ ಹಣ ಅರ್ಜಿದಾರರಿಗೆ ನೀಡುವ ಅಪರೂಪದ ಯೋಜನೆ ಇದಾಗಿದೆ.