ಇನ್ನೂ ಬಂದಿಲ್ಲದ ನನ್ನ ಗೆಳೆಯನಿಗೆ
ಇನ್ನೂ ಬಂದಿಲ್ಲದ ನನ್ನ ಗೆಳೆಯನಿಗೆ
ನಿನ್ನನ್ನು ಇನ್ನೂ ನೋಡಿಲ್ಲ ನಾನು,
ಆದರೂ ನನ್ನ ಹೃದಯದ ಒಳಗೊಂದು ಜಾಗ
ನಿನ್ನ ಹೆಸರಿಲ್ಲದ ಸ್ಮರಣೆಗೆ ಕಾಯುತ್ತಿದೆ.
ಯಾರೂ ತುಂಬದ ಆ ಖಾಲಿತನ
ನಿನ್ನ ಹೆಜ್ಜೆಗಳಿಗಾಗಿ ಉಳಿದಿದೆ…
ಪ್ರೇಮಿಗಳ ದಿನ ಬಂದಾಗ
ಎಲ್ಲರ ಕಣ್ಣುಗಳಲ್ಲಿ ಜೋಡಿ ಕನಸುಗಳು ಅರಳುತ್ತವೆ;
ಕೈಗಳು ಕೈ ಹಿಡಿದು ನಗುತ್ತವೆ,
ಪ್ರಾರ್ಥನೆಗಳಿಗೂ ಎರಡು ಧ್ವನಿಗಳು ಸೇರುತ್ತವೆ.
ಆ ಕ್ಷಣದಲ್ಲಿ—
ಎಲ್ಲರ ಕೈಗಳು ಜೋಡಿಯಾದಾಗ,
ನನ್ನ ಕೈಗಳು ಮಾತ್ರ
ಮೌನ ಪ್ರಾರ್ಥನೆಯಾಗಿ ಜೋಡಾಗುತ್ತವೆ…
ನೀನು ಎಲ್ಲಿದ್ದೀಯ? ಹೇಗಿದ್ದೀಯ?
ಎಂದು ನನಗೆ ತಿಳಿದಿಲ್ಲ.
ಆದರೂ ಗಾಳಿಯ ಪ್ರತಿಯೊಂದು ಸ್ಪರ್ಶದಲ್ಲೂ
ನಿನ್ನ ಆಗಮನದ ಸುಳಿವು ಹುಡುಕುತ್ತೇನೆ.
ಒಂದು ದಿನ ನನ್ನ ಜೀವನಕ್ಕೆ ಬಾ—
ತಡವಾದರೂ ಪರವಾಗಿಲ್ಲ;
ಆದರೆ ಸತ್ಯವಾದ ಹೃದಯದೊಂದಿಗೆ ಬಾ,
ನಿಸ್ವಾರ್ಥ ಪ್ರೀತಿಯನ್ನು ಹೊತ್ತು ಬಾ.
“ನೀನು ಬರುತ್ತೀಯೆ” ಎನ್ನುವ
ಒಂದು ಸಣ್ಣ ನಂಬಿಕೆ
ನನ್ನ ಹೃದಯದ ಮಣ್ಣಿನಲ್ಲಿ
ಬೇರು ಬಿಟ್ಟ ಮರವಾಗಿದೆ, ಗೆಳೆಯ.
ನನ್ನ ಪ್ರೀತಿ ಈಗಲೂ ಸಿದ್ಧವಾಗಿದೆ—
ನಿನ್ನ ಹೆಸರನ್ನೂ ತಿಳಿಯದೆ,
ನಿನ್ನ ಮುಖವನ್ನೂ ನೋಡದೆ…
ಒಂದು ದಿನ ನೀನು ಬಂದರೆ,
ಫೆಬ್ರವರಿ ಹದಿನಾಲ್ಕೇ ಅಲ್ಲ—
ನನ್ನ ಜೀವನದ ಪ್ರತಿಯೊಂದು ದಿನವೂ
ಪ್ರೇಮದ ಹಬ್ಬವಾಗುತ್ತದೆ…
-ಲೇಖಕಿ: ವೀಣಾ ಎ. ಎನ್
ಆಡಗಾಡಿ (ಗ್ರಾಮ)ಮಂಡಘಟ್ಟ (ಅಂಚೆ) ಶಿವಮೊಗ್ಗ (ತಾಲೂಕು ಮತ್ತು ಜಿಲ್ಲೆ)
