"ಗೊತ್ತಿಲ್ಲದ ದಿನಾoಕ"ಕೃತಿ
"ಗೊತ್ತಿಲ್ಲದ ದಿನಾoಕ"ಕೃತಿ
ಮಲ್ಲಮ್ಮ ಶಿವರಾಜ್ ಕಾಳಗಿ ಅವರ ಸುಮಾರು ೨೫ ಕವಿತೆಗಳನ್ನು ಮತ್ತೆ ಮತ್ತೆ ಓದುತ್ತಾ ಹೋದಂತೆ, ಭಕ್ತಿ ಮತ್ತು ಅನುಭಾವ ಪರಂಪರೆ ನೆಲೆಯಲ್ಲಿ ನೋಡಬೇಕಾಗುತ್ತದೆ. ಇವುಗಳು ತೋಯ ತೋಯವ ಬೆರೆತಂತೆ ಎನ್ನಲು ಅಡ್ಡಿಯಿಲ್ಲ. ಇಲ್ಲಿ ತೋಯ ತೋಯವ ಅಂದರೆ ನೀರೊಳಗೆ ನೀರು ಬೆರೆತಂತೆ ಎನ್ನುವ ರೂಪಕಾತ್ಮಕತೆಯಿಂದ ಕೂಡಿದೆ. ನೀರೊಳಗಿನ ನೀರನ್ನು ಹೇಗೆ ಬೇರ್ಪಡಿಸಲಾಗುವುದಿಲ್ಲವೋ ಹಾಗೆ ಅವರ ಕವಿತೆಗಳಲ್ಲಿನ ದೈವ ಮತ್ತು ಭಕ್ತಿ ಬೇರ್ಪಡಿಸ ಲಾಗದಿರುವಷ್ಟರ ಮಟ್ಟಿಗೆ ಒಟ್ಟಾಗಿ ಸಾಗಿದ್ದಾವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಭಕ್ತಿಗೆ ವಿಶಿಷ್ಟವಾದ ಸ್ಥಾನವಿದೆ. ಅದು ಹರಿಹರ, ಕುಮಾರವ್ಯಾಸ, ಕನಕದಾಸರಂಥ ಮೇರು ಕವಿಗಳು ಭಕ್ತಿಯನ್ನು ಸರ್ವಕಾಲಕ್ಕೂ ಸಲ್ಲುವಂತೆ ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿದ್ದಾರೆ. ಅಂಥ ಪರಂಪರೆಯ ಪ್ರತಿನಿಧಿಯಾಗಿ ಮಲ್ಲಮ್ಮ ಅವರ ತಮ್ಮ ಕವಿತೆಗಳು ಮುಂದುವರಿಸಿಕೊಂಡು ಬಂದಿರುವುದು ವಿಶಿಷ್ಟವೇ ಸರಿ. ಮತ್ತಿದು ಸಾಂಸ್ಕೃತಿಕ ಜವಾಬ್ದಾರಿಯೂ ಹೌದು. ಪ್ರಾರಂಭದ ಕವಿತೆಯಲ್ಲಿ ಗಣಪತಿಯನ್ನು ಆರಾಧನಾ ಭಾವದಿಂದ ಮುಂದುವರಿಸಿಕೊಂಡು ಹೋಗುತ್ತಾರೆ. ನಂತರದ ಕವಿತೆಯಲ್ಲಿ ಹೊಸ ವರ್ಷದ ಮೂಲಕ ಹೊಸಜೀವ, ಹೊಸಭಾವ, ಹೊಸಭರವಸೆಯನ್ನು ಹುಟ್ಟಿಸುತ್ತದೆ. ಕವಿತೆಗಳಲ್ಲಿ ವಿಷ್ಣು, ಪರಮಾತ್ಮ, ಕೃಷ್ಣ, ಶ್ರೀದೇವಿ ಮತ್ತು ತಾವು ಸೃಜಿಸಿದ ನೆಲದಲ್ಲಿ ನಡೆದಾಡುವ ದೇವರೆಂದೇ ಭಕ್ತರು ಗುರುತಿಸಿರುವ ಶ್ರೀ ಗುರುಲಿಂಗದೇವರ ಕುರಿತು ಭಕ್ತಿಯಾತ್ಮಕತೆಯು ಕವಿತೆಗಳಲ್ಲಿ ಮೇಲೈಸಿದೆ. ಇಲ್ಲಿಯ ಕವಿತೆಗಳ ಮುಖ್ಯ ವಿಶೇಷತೆ ಏನೆಂದರೆ ಎಲ್ಲಾ ದೈವಗಳನ್ನು ವಿಭಾಗಿಸಿ ನೋಡುವಕ್ರಮವನ್ನು ಅನುಸರಿಸದೆ, ಎಲ್ಲವನ್ನು ಮತ್ತು ಎಲ್ಲರನ್ನೂ ಒಳಗೊಳ್ಳುತ್ತವೆ.
ಕವಿತೆ ಮುಗ್ಧರಿಗೆ ಮಾತ್ರ ಒಲಿಯುತ್ತದೆ ಎನ್ನುವಂಥ ಮಾತೊಂದಿದೆ. ಬಹುಶಃ ಅಂಥ ಮುಗ್ಧತೆಯನ್ನು ಉಳಿಸಿಕೊಂಡ ಮಲ್ಲಮ್ಮ ಕಾಳಗಿಯವರು ಎಲ್ಲಿಯೂ ಹಾರಾಟ, ಚೀರಾಟ ಮತ್ತು ಹುಸಿ ವೈಚಾರಿಕತೆಯನ್ನು ತರದೆ ಮನುಷ್ಯನಾಳದ ಸಹಜತೆಯನ್ನು ತಮ್ಮ ಹೃದಯದ ಭಾಷೆಯನ್ನು ಗರ್ಭಿಕರಿಸಿಕೊಂಡು ಸಹಜತೆ ಮತ್ತು ಸರಳತೆಯಿಂದ ಬರೆಯುತ್ತಾರೆ.
ಕಾವ್ಯವು ಕಾವ್ಯದ ಪೂರ್ಣ ದೃಷ್ಟಿಗಿಂತ, ಬದುಕಿನ ಪೂರ್ಣ ದೃಷ್ಟಿಯನ್ನು ಪ್ರತಿನಿಧಿಸುತ್ತಿರಬೇಕು. ಬಹುಶಃ ಮಲ್ಲಮ್ಮ ಕಾಳಗಿಯವರ ಇನ್ನುಳಿದ ಕವಿತೆಗಳು ಇಂಜಿನಿಯರ್, ವ್ಯಾಪಾರಿ, ಶಿಕ್ಷಕ, ಮಕ್ಕಳು ಈ ರೀತಿಯ ಮುಂತಾದ ಅನ್ವರ್ಥಕ ಪದಗಳ ಮೂಲಕ ಬದುಕನ್ನು ಪ್ರತಿನಿಧಿಸುತ್ತಾ ಹೋಗುತ್ತವೆ. ಸಮಾಜದಲ್ಲಿ ನೀತಿಗಿಂತ ನಿಯತ್ತು ದೊಡ್ಡದೆನ್ನುವ, ಸಮಾಜವನ್ನು ನೋಡುವುದಕ್ಕಿಂತ ಕಾಣುವಿಕೆಯನ್ನು ಕಂಡುಕೊಳ್ಳುವ ಗುಣವನ್ನೇ ಹೆಚ್ಚು ಫೋಕಸ್ ಮಾಡುತ್ತಾರೆ.
ಇಲ್ಲಿಯ ಕವಿತೆಗಳಲ್ಲಿ ಯಾರ ಮೇಲೂ ಸಿಟ್ಟಾಗಲಿ ಇಲ್ಲವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಕಡಿಮೆ, ಇಲ್ಲಿರುವುದು ಮುಖ್ಯವಾಗಿ ಭಕ್ತಿಯ ಮೂಲಕ ಎಲ್ಲರನ್ನು ಪ್ರೀತಿಸುವ, ಗೌರವಿಸುವ, ಆರಾಧನೆ ಮೂಲಕ ತಮ್ಮ ದೈವವನ್ನು ಕಾಣುವ ಗುಣಮುಖ್ಯವಾಗಿ ಕಂಡು ಬರುತ್ತದೆ. ಮಲ್ಲಮ್ಮ ಶಿವರಾಜ್ ಕಾಳಗಿಯವರು ಮತ್ತಷ್ಟು ಲಯಭರಿತ ಕವಿತೆಗಳನ್ನು ಬರೆಯಲು ಶ್ರಮ ವಹಿಸಲಿ ಎಂದು ಹಾರೈಸುತ್ತೇನೆ.
ಡಾ. ಸಂಗನಗೌಡ ಹಿರೇಗೌಡ
