ಕೋ ಚೆನ್ನಬಸಪ್ಪನವರ ಕುರಿತು ಸಂದರ್ಶನ

ಕೋ ಚೆನ್ನಬಸಪ್ಪನವರ ಕುರಿತು ಸಂದರ್ಶನ

ಹಿರಿಯ ಸಾಹಿತಿ, ಪತ್ರಕರ್ತ, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರ ಹಾಗೂ ಸಮಾಜ ಚಿಂತಕರಾದ ಕೋ. ಚೆನ್ನಬಸಪ್ಪ ಅವರ ಜನ್ಮದಿನದಂದು ಅವರನ್ನು ಸ್ಮರಿಸುವುದು ಕನ್ನಡ ನಾಡಿನ ಸಾಹಿತ್ಯ–ಸಾಮಾಜಿಕ ವಲಯಕ್ಕೆ ಗೌರವದ ಕ್ಷಣವಾಗಿದೆ. ತಮ್ಮ ಬರಹ, ಚಿಂತನೆ ಮತ್ತು ಹೋರಾಟಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರು ನಿಜಕ್ಕೂ ಅಪರೂಪದ ವ್ಯಕ್ತಿ.

2018ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿದ್ದ, ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಕೋ. ಚೆನ್ನಬಸಪ್ಪನವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

"ಕರ್ನಾಟಕ ಏಕೀಕರಣ ಚಳುವಳಿಯ ಕ್ಯಾಂಪೇನ್ ಪೇಪರ್ ರೈತಪತ್ರಿಕೆಯ ಅಗತ್ಯ ಮತ್ತು ಅನಿವಾರ್ಯತೆ: ಕೋ.ಚೆನ್ನಬಸಪ್ಪ ಅವರೊಂದಗಿನ ಮಾತುಕತೆ - ದಿ:೧೯.೦೯.೨೦೧೮"

೨೧ನೇ ಶತಮಾನದ ಪತ್ರಿಕಾ ಮಾಧ್ಯಮಗಳು ಬಂಡವಾಳಶಾಹಿಗಳ ಹಿತ ಕಾಪಾಡುವಲ್ಲಿ ಹೆಣಗುತ್ತಿರುವಾಗ, ಹಳ್ಳಿಯ ರೈತರನ್ನು ಹಾಗೂ ಸ್ಥಳೀಯ ಭಾಷಿಕ ಹೋರಾಟಗಳನ್ನು ಮುಖ್ಯವಾಗಿಟ್ಟುಕೊಂಡು ಒಂದು ಪತ್ರಿಕೆಯನ್ನು ಕಟ್ಟಿ ಬೆಳಸಿದ ಯಶೋಗಾಥೆಯನ್ನು ಇಲ್ಲಿ ಹಿಡಿದಿಡಲಾಗಿದೆ. ಕರ್ನಾಟಕ ಏಕೀಕರಣ ಚಳುವಳಿಗೆ ಪತ್ರಿಕಾ ಮಾಧ್ಯಮದ ಮೂಲಕ ಪ್ರಚಾರ ಮತ್ತು ರೂಪವನ್ನು ಕೊಟ್ಟ ಕೋ.ಚೆನ್ನಬಸಪ್ಪ ಅವರ ನಿಷ್ಕಾಮ ಪತ್ರಿಕಾ ಮನೋಧರ್ಮವನ್ನು ಇದರಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಈ ಕಾರ್ಯ ಪ್ರಾದೇಶಿಯವಾಗಿ ನಡೆದಂತೆ ಕಂಡರೂ ಈ ಕಾಲಮಾನದ ಪತ್ರಕರ್ತರಲ್ಲಿರಬೇಕಾದ ಜಾಗತಿಕ ಮನೋಧರ್ಮವನ್ನು ವಿಶ್ಲೇಷಿಸುವ ಗುಣವನ್ನು ಇದು ಹೊಂದಿದೆ.

ಈ ಕುರಿತು ಕೋ.ಚೆ. ಅವರೊಂದಿಗೆ ನಾನು ದಿ:೧೯.೦೯.೨೦೧೮ರಲ್ಲಿ ನಡೆಸಿದ ಮೌಖಿಕ ಸಂದರ್ಶನದ ಸಾರಾಂಶ ಇಲ್ಲಿದೆ. ಈ ಸಂದರ್ಶನಕ್ಕೆ ನಾಡಿನ ಹೆಸರಾಂತ ಪತ್ರಕರ್ತರೂ ಹಾಗೂ ಲೇಖಕರು ಆಗಿರುವ ಶ್ರೀ ಲಕ್ಷ್ಮಣ ಕೊಡಸೆ ಅವರ ಸಹಕಾರವನ್ನು ಪಡೆಯಲಾಗಿದೆ. ಜೊತೆಗೆ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರಿಂದ ‘ಮಾಹಯಾನ ಮಂಜುನಾಥ’ ಎಂಬ ಬಿರುದು ಪಡೆದಿರುವ ಕವಿ ನಾಟಕಕಾರ ಶ್ರೀ ಮಂಜುನಾಥ ಅವರು ಈ ಸಂದರ್ಶನದಲ್ಲಿ ನಮಗೆ ಜೊತೆಯಾಗಿದ್ದರು.

‘ರೈಯತ’ ಎಂಬ ಹೆಸರಿನ ಪತ್ರಿಕೆಯೊಂದು ಮೊದಲು ಹೈದರಾಬಾದ ಸಂಸ್ಥಾನದಲ್ಲಿ ಪ್ರಕಟಗೊಳ್ಳುತ್ತಿತ್ತು. ಎಂ. ನರಸಿಂಗರಾಯರು ಇದರ ಸಂಪಾದಕರಾಗಿದ್ದರು. ಶೋಯಬುಲ್ಲಾಖಾನ್ ಅವರು ‘ಇಮ್ರೋಜ್’ ಪತ್ರಿಕೆಗೆ ಬರುವ ಮುಂಚೆ ಇದೇ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು. ನಿಜಾಮ ಸರ್ಕಾರ ಈ ಪತ್ರಿಕೆಯ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಈ ಪತ್ರಿಕೆಯ ಮುದ್ರಣ ನಿಂತಿತು. ಆನಂತರ ಕೋ.ಚೆ.ಯವರು ಅದೇ ಹೆಸರಿನಲ್ಲಿ ಬಳ್ಳಾರಿಯಿಂದ ‘ರೈತ’ ಪತ್ರಿಕೆಯನ್ನು ಹೊಸದಾಗಿ ಆರಂಭಿಸಿದರು. ಹಳೆಯ ರೈಯತ ಪತ್ರಿಕೆಗೂ ಇದಕ್ಕೂ ಯಾವುದಾದರೂ ಸಂಬಂಧಗಳಿದ್ದವೇ ಎಂಬುದು ತಿಳಿದು ಬಂದಿಲ್ಲ. ಕೇವಲ ಹೆಸರಿನ ಹೋಲಿಕೆ ಅಷ್ಟೇ ನಮಗೆ ಸಿಕ್ಕ ಮಾಹಿತಿ ಆಗಿದೆ.

ಹಿನ್ನಲೆ:

ರೈತ ಪತ್ರಿಕೆ ೧೯೪೮ರಲ್ಲಿ ಆರಂಭವಾಗಿ ೧೯೬೧ರವರೆಗೂ ಮುದ್ರಣ ಕಂಡು, ಆನಂತರ ತನ್ನ ಮುದ್ರಣವನ್ನು ನಿಲ್ಲಿಸಿತು. ಶ್ರೀ ಕೋಣನ ಚೆನ್ನಬಸಪ್ಪನವರು ಇದರ ಸಂಪಾದಕರಾಗಿದ್ದರು. ಇದು ರಜಿಸ್ಟರ್ ನಂ - ಎಂ:೫೨೫೧, ಬಳ್ಳಾರಿ ಕ್ರಮಸಂಖ್ಯೆಯಡಿ ನೋಂದಾಯಿತ ವಾರಪತ್ರಿಕೆಯಾಗಿತ್ತು. ಕರ್ನಾಟಕ ಮುದ್ರಣ ಮಂದಿರ ಬಳ್ಳಾರಿಯಿಂದ ಮುದ್ರಣಗೊಳ್ಳುತ್ತಿತ್ತು. ಶ್ರೀ ಹೆಚ್. ಬಿ. ಗೌಡರು ಇದರ ಮುದ್ರಕರಾಗಿದ್ದರು. ಕೋಣನ ಚೆನ್ನಬಸಪ್ಪ ಅವರನ್ನು ಈ ನಾಡು ಅಭಿಮಾನ ಮತ್ತು ಪ್ರೀತಿಯಿಂದ ಕೋ.ಚೆ. ಎಂದೇ ನೆನಪಿಟ್ಟುಕೊಂಡಿದೆ. ದಿ:೨೬.೦೩.೧೯೫೦ರಲ್ಲಿ ರೈತಪತ್ರಿಕೆ ತನ್ನ ಸ್ವಂತ ಪ್ರೆಸ್ ಅನ್ನು ಹೊಂದಿರುವ ಬಗ್ಗೆ ಪ್ರಕಾಶಕರು ಆ ವಾರದ ರೈತಪತ್ರಿಕೆಯಲ್ಲಿ ಪ್ರಕಟಿಸಿದ್ದರು. ತಮ್ಮದೆ ಸ್ವಂತ ಪ್ರೆಸ್ ಬಂದ ಬಳಿಕ ರೈತಪತ್ರಿಕೆಯನ್ನು ಮೊದಲಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಮುದ್ರಿಸಲಾಯಿತು.

ರೈತ ಪತ್ರಿಕೆಯನ್ನು ನಡೆಸುವ ಸಲುವಾಗಿ ಗ್ರೇಡ್ ಮಾದರಿಯ ಚಂದಾದಾರರನ್ನು ಮಾಡಿಕೊಳ್ಳಲಾಗುತ್ತಿತ್ತು. ನೂರು ಅಥವಾ ಅದಕ್ಕಿಂತ ಹೆಚ್ಚು ರೂಪಾಯಿ ಕೊಡುವವರು ಮೊದಲ ಗ್ರೇಡ್‌ನಲ್ಲಿದ್ದರೆ, ಐವತ್ತು ಅಥವಾ ಅದಕ್ಕಿಂತ ಕಡಿಮೆ ಹಣ ಕೊಡುವವರು ಎರಡನೆ ಗ್ರೇಡ್‌ನಲ್ಲಿದ್ದರು. ಆ ರೀತಿ ಧನ ಸಹಾಯ ಮಾಡಿದವರ ಪಟ್ಟಿಯನ್ನು ‘ಅನುಬಂಧ-೧’ರಲ್ಲಿ ಕೊಡಲಾಗಿದೆ. ರೈತ ಪತ್ರಿಕೆ ನಡೆಸುವ ಸಂದರ್ಭದಲ್ಲಿ ಹಣಕಾಸಿನ ತೊಂದರೆಯ ಕುರಿತು, ಚಂದಾದಾರರನ್ನು ಮಾಡಿಸುವ ಕುರಿತು ಕೋ.ಚೆ.ಯವರ ಅನುಗಾಲದ ಗೆಳೆಯ ಮುದೇನೂರು ಸಂಗಣ್ಣನವರು ಕೋ.ಚೆಯವರಿಗೆ ಬರೆದ ಪತ್ರವೊಂದನ್ನು ‘ಅನುಬಂಧ-೨’ರಲ್ಲಿ ಕೊಡಲಾಗಿದೆ.

ಕರ್ನಾಟಕ ಏಕೀಕರಣಗೊಂಡ ತಕ್ಷಣವೇ ಅಂದರೆ ೧೯೫೬ರಲ್ಲಿಯೇ ರೈತಪತ್ರಿಕೆ ನಿಲ್ಲಬೇಕಾಗಿತ್ತು. ಏಕೆಂದರೆ ಹೊಸದಾಗಿ ರಚನೆಯಾಗಿದ್ದ ಮೈಸೂರು ರಾಜ್ಯಕ್ಕೆ ಕೋಚೆಯವರನ್ನು ‘ಪಬ್ಲಿಕ್ ಪ್ರಾಸಿಕ್ಯೂಟರ್’ ಆಗಿ ನೇಮಕ ಮಾಡುವ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಆದರೆ ಕೊನೆ ಘಳಿಗೆಯಲ್ಲಿ ಅವರ ಹೆಸರನ್ನು ಕೈಬಿಡಲಾಯಿತು. ಹಾಗಾಗಿ ಮತ್ತೆ ಕೆಲವು ವರ್ಷಗಳ ಕಾಲ ರೈತಪತ್ರಿಕೆ ಮುದ್ರಣವನ್ನು ಕಂಡಿತು.

ಶ್ರೀ ವೆಂಕಟರಾವ ಪಾನ್ಸೆ ಅವರು ಇದರ ಸಹಸಂಪಾದಕರಾಗಿದ್ದರು. ಮೈಸೂರು ಆಸ್ಥಾನ ವಿದ್ವಾಂಸರೆಂದು ಬಿರುದು ಪಡೆದಿದ್ದ ಶ್ರೀ ವೈ. ನಾಗೇಶ ಶಾಸ್ತಿçಗಳು, ವಿದ್ವತ್‌ರತ್ನ ವ್ಯಾಕರಣ ತೀರ್ಥ ಎಂದು ಬಿರುದು ಪಡೆದಿದ್ದ ಯಾದಿಗಿರಿಯ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ರೈತ ಪತ್ರಿಕೆಯ ಸಲಹೆಗಾರರಾಗಿದ್ದರು. ಕುವೆಂಪುರAತಹ ಮಹಾತಪಸ್ವಿಗಳು ಇದರ ಬೆನ್ನೆಲುಬಾಗಿದ್ದರು. ಅಪಾರ ಓಡಾಟ, ಅಧ್ಯಯನ ಮತ್ತು ಅನುಭವದಿಂದ ಜನರ ನಾಡಿಮಿಡಿತವನ್ನು ಅರಿತಿದ್ದ ಕೋ.ಚೆ.ಯವರು ಅದನ್ನೇ ಈ ಪತ್ರಿಕೆಯ ಬಂಡವಾಳವಾಗಿಸಿದ್ದರು. ಆ ಮೂಲಕ ಕೋ.ಚೆಯವರು ರೈತ ಪತ್ರಿಕೆಯ ನಾಡಿಮಿಡಿತವಾದರು.

ಕುವೆಂಪು, ತರಾಸು, ಕಟ್ಟಿಮನಿ, ಅನಕೃ, ನಿರಂಜನ, ಪಾಟೀಲ ಪುಟ್ಟಪ್ಪ, ಬೀಚಿ, ಮಹದೇವ ಬಣಕಾರ್, ಬಿ.ಎ. ಸನದಿ, ಎಂ. ಅಕಬರ ಅಲಿ, ಹಗರಿಬೊಮ್ಮನಳ್ಳಿಯ ವೀರೂಪಾಕ್ಷಗೌಡ, ಹಡಗಲಿ ತಾಲೂಕಿನ ಪೆಂಡಕೂರು ಗುರುಮೂರ್ತಿಯವರಲ್ಲದೆ ಅನೇಕ ಹಳೆಬರು ಮತ್ತು ಹೊಸಬರು ಈ ಪತ್ರಿಕೆಗೆ ನಿರಂತರವಾಗಿ ಲೇಖನಗಳನ್ನು/ಕವಿತೆಗಳನ್ನು/ಅಂಕಣಗಳನ್ನು ಬರೆದರು. ಆ ಮೂಲಕ ಅವರು ರೈತಪತ್ರಿಕೆಯ ಶಕ್ತಿಯಾದರೆ, ರೈತಪತ್ರಿಕೆ ಸಹ ಅವರಿಂದ ಶಕ್ತಿಯನ್ನು ಪಡೆಯುವಂತಾಯಿತು.

ಬೇವಿನಕಟ್ಟೆ ತಿಮ್ಮ, ಲಂಚದ ಮಾದರಿ, ಹಳ್ಳಿಯಿಂದ ಡಿಳ್ಳಿಗೆ, ಕಾಯದೆ ಕಾನೂನು, ನೀವು ಕೇಳಿದ್ದು ತಿಮ್ಮ ಹೇಳಿದ್ದು, ರೈತ ವಿಜ್ಞಾನ, ದೇಶದ ಸುದ್ದಿ, ಹೈದರಾಬಾದ-ಕಾಶ್ಮಿರ, ಹಿರಿಯರ ಮಾತು, ಮುಂತಾದ ಅಂಕಣಗಳು ರೈತಪತ್ರಿಕೆಯ ಉಸಿರಾಗಿದ್ದವು. ಅನೇಕರು ಈ ಪತ್ರಿಕೆಯನ್ನು ಅದರಲ್ಲಿ ಬರುವ ಅಂಕಣಗಳ ಸಲುವಾಗಿಯೇ ಕಾದು ಕುಳಿತು ಖರೀದಿಸುತ್ತಿದ್ದರಂತೆ. ಸರ್ಕಾರಿ ಅಧಿಕಾರಿಗಳ ಲಂಚಗುಳಿತನವನ್ನು ಬಯಲು ಮಾಡುತ್ತಿದ್ದ ‘ಲಂಚದ ಮಾದರಿ’ ಎಂಬ ಅಂಕಣ ಅನೇಕ ಸರ್ಕಾರಿ ನೌಕರರ ನಿದ್ದೆಗೆಡಿಸಿತ್ತು. ಸಾರ್ವಜನಿಕ ಜೀವನದಲ್ಲಿರುವ ಲಂಚಗಾರರು ಈ ವಾರ ಎಲ್ಲಿ ನನ್ನ ಬಗ್ಗೆ ವಿವರಣೆ ಬಂದಿದೆಯೋ ಏನೋ ಎಂಬ ಭಯದಲ್ಲಿ ರೈತಪತ್ರಿಕೆಯನ್ನು ಗುಪ್ತವಾಗಿ ಖರೀದಿಸಿ ಒದುತ್ತಿದ್ದ ಬಗ್ಗೆ ಕೋಚೆಯವರಿಗೆ ಅನೇಕರು ಹೇಳುತ್ತಿದ್ದರಂತೆ. ಹೀಗೆ ಬಯಲುಗೊಂಡ ವರದಿಗಳಿಂದ ಅನೇಕ ಅಧಿಕಾರಿ/ನೌಕರರು ಶಿಸ್ತುಕ್ರಮವನ್ನು ಎದುರಿಸಿ ಶಿಕ್ಷೆಗೊಳಪಟ್ಟರು. ಸರ್ಕಾರಿ ಕಛೇರಿಗಳಲ್ಲಿ ರೈತಪತ್ರಿಕೆಯ ಭಯದಿಂದಲೇ ಜನಸಾಮಾನ್ಯರ ಕೆಲಸಗಳು ಸುಗಮವಾಗಿ ಆಗುತ್ತಿದ್ದವು ಎಂಬಷ್ಟರ ಮಟ್ಟಿಗೆ ಈ ಪತ್ರಿಕೆ ಬಳ್ಳಾರಿ ಜಿಲ್ಲೆಯಲ್ಲಿ ತನ್ನ ಛಾಪನ್ನು ಮೂಡಿಸಿತ್ತು. ‘ಬೀವಿನಕಟ್ಟೆ ತಿಮ್ಮ’ ಅಂಕಣದಲ್ಲಿ ಬಂದಿದ್ದ ‘ಒಣ (ವನ) ಮಹೋತ್ಸವ’ ಎಂಬ ವಿಡಂಬನಾತ್ಮಕ ಲೇಖನದಿಂದಾಗಿ ಭ್ರಷ್ಟಾಚಾರಿ ಹಡಗಲಿಯ ತಹಶೀಲ್ದಾರನೊಬ್ಬ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯು ಇದೆ.

ಸ್ವಾತಂತ್ರ್ಯಪೂರ್ವದಲ್ಲಿ ರೈತಪತ್ರಿಕೆ ಗ್ರಾಮೀಣ ಭಾರತವನ್ನು, ರೈತರನ್ನು ಮುಖ್ಯವಾಗಿಟ್ಟುಕೊಂಡು ಬಂದರೆ, ಸ್ವಾತಂತ್ರ್ಯನಂತರ ಹಾಗೂ ಕರ್ನಾಟಕ ಏಕೀಕರಣದ ನಂತರದ ದಿನಗಳಲ್ಲಿ ಬಡತನ, ಹಸಿವು ಮತ್ತು ಜಾತಿಮುಕ್ತ ಭಾರತದ ಕುರಿತು ತನ್ನ ಆಲೋಚನೆಗಳನ್ನು ಗಟ್ಟಿಯಾಗಿ ಪ್ರಚಾರಪಡಿಸಿತು. ಏಕೀಕರಣದ ನಂತರ ಕನ್ನಡದಲ್ಲಿ ಶಿಕ್ಷಣ, ಆಡಳಿತದಲ್ಲಿ ಕನ್ನಡ, ಸ್ಥಳಿಯರಿಗೆ ಉದ್ಯೋಗಾವಕಾಶ ಮುಂತಾದ ವಿಷಯಗಳ ಮೇಲೆ ಅದು ತನ್ನ ದೃಷ್ಟಿಯನ್ನು ನೆಟ್ಟಿತ್ತು.

೧೯೫೩ರಲ್ಲಿ ಮದ್ರಾಸ್ ಪ್ರಾಂತ್ಯದಿಂದ, ಬಳ್ಳಾರಿ ಮತ್ತು ಬಳ್ಳಾರಿಯ ಒಟ್ಟು ೭ ತಾಲೂಕುಗಳು ಮೈಸೂರು ರಾಜ್ಯದಲ್ಲಾದ ವಿಲೀನವನ್ನು ‘ಕರ್ನಾಟಕ ಏಕೀಕರಣ ಚಳುವಳಿಯ ಗಣಪತಿ ಪೂಜೆ’ ಎಂದು ಕರೆಯಲಾದಂತೆ, ‘ರೈತಪತ್ರಿಕೆ’ಯನ್ನು ‘ಕರ್ನಾಟಕ ಏಕೀಕರಣ ಚಳುವಳಿಯ ಕ್ಯಾಂಪೇನ್ ಪೇಪರ್’ ಎಂದೇ ಕರೆಯಲಾಗಿದೆ. ಗ್ರಾಮೀಣ ಭಾರತದ ಹಾಗೂ ಅದರಲ್ಲೂ ವಿಶೇಷವಾಗಿ ರೈತರ ಧ್ವನಿಯಾಗುವ ಜೊತೆಗೆ, ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಚಳುವಳಿಯ ಹೋರಾಟಗಾರರ ಧ್ವನಿಯಾಗಿ ಕೆಲಸ ಮಾಡುವುದು ರೈತ ಪತ್ರಿಕೆಯ ಸ್ಥಾಪನಾ ಉದ್ದೇಶಗಳಲ್ಲಿ ಒಂದಾಗಿತ್ತು.

ಮಾತುಕತೆಯ ಸಾರಾಂಶ:

ದಿ:೧೯.೦೯.೨೦೧೮ರ ಬುಧವಾರದಂದು ಬೆಳಿಗ್ಗೆ ೧೦ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೂ ಕೋ.ಚೆ ಅವರ ಮನೆಯಲ್ಲಿ ಸುದೀರ್ಘವಾಗಿ ಅವರೊಂದಿಗೆ ಮಾತುಕತೆ ನಡೆಸಲಾಯಿತು.

ಕೋ.ಚೆನ್ನಬಸಪ್ಪನವರು ಹುಟ್ಟಿದ್ದು ೧೯೨೨ರಲ್ಲಿ. ಬ್ರಿಟಿಷರ ಆಳ್ವಿಕೆಯಲ್ಲಿಯೇ ಶಿಕ್ಷಣ ಮುಗಿಸಿದ ಅವರಿಗೆ ಗಾಂಧೀಜಿಯವರು ಪ್ರೇರಣೆಯಾಗಿದ್ದರು. ಇತಿಹಾಸದ ವಿದ್ಯಾರ್ಥಿಯಾಗಿದ್ದ ಅವರು ಭರತಖಂಡದ ಚರಿತ್ರೆ ಎಷ್ಟು ಮುಖ್ಯವೋ ಅಷ್ಟೇ ಇಂಗ್ಲಿಷ್ ಚರಿತ್ರೆಯೂ ಮುಖ್ಯ ಎನ್ನುತ್ತಾರೆ. ಅದಕ್ಕೆ ಮುಖ್ಯ ಕಾರಣ ಆಗ ಅವರು ಬ್ರಿಟಿಷರ ಆಡಳಿತದಲ್ಲಿದ್ದುದು. ಗಾಂಧೀಜಿಯವರ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ (ಚಲೇಜಾವ್ ಚಳುವಳಿ) ಆಂದೋಲನದಿಂದ ಹೆಚ್ಚು ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕ್ವಿಟ್ ಇಂಡಿಯಾ ಆಂದೋಲನದಿಂದ ಜೈಲುವಾಸವನ್ನೂ ಅನುಭವಿಸಿದರು. ಸ್ವಾತಂತ್ರ್ಯದ ನಂತರದಲ್ಲಿ ದೇಶ ಮತ್ತು ರಾಜ್ಯಗಳು ಹೇಗಿರಬೇಕು ಮತ್ತು ಹೇಗೆ ಪ್ರಗತಿ ಹೊಂದಬೇಕೆನ್ನುವುದರ ಬಗ್ಗೆ ಕೋ.ಚೆ. ಅವರಿಗೆ ಆಗಿನಿಂದಲೂ ಸ್ಪಷ್ಟ ನಿಲುವಿದೆ. ಸ್ವಾತಂತ್ರ್ಯದ ನಂತರ ಮೊದಲಿಗೆ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸುವುದು ರಾಜ್ಯದ ಪ್ರಗತಿಯ ಮೊದಲ ಹೆಜ್ಜೆ ಎಂದು ತಿಳಿಸಿದ್ದ ಕೋ.ಚೆ.ಯವರು ‘ರೈತ ಪತ್ರಿಕೆ’ಯನ್ನು ಪ್ರಾರಂಭಿಸುವ ಮೂಲಕ ಕರ್ನಾಟಕ ಏಕೀಕರಣ ಹೋರಾಟಕ್ಕೆ ಹಸಿರು ಕಿಚ್ಚು ಹೊತ್ತಿಸಿದರು.

ಗಾಂಧೀಜಿಯವರ ಸತ್ಯ ಮತ್ತು ಅಂಹಿಸೆ ತತ್ವವನ್ನು ಜೀವನ ಆದರ್ಶವಾಗಿ ಪಾಲಿಸುತ್ತಿರುವ ಕೋ.ಚೆ. ಅವರು ಕರ್ನಾಟಕ ಏಕೀಕರಣಕ್ಕೆ ಅವಿರತ ಶ್ರಮಿಸಿದವರು. ಏಕೀಕರಣದ ಆಂದೋಲನವನ್ನು ಎಲ್ಲೆಡೆ ಹಬ್ಬಿಸಲು ಅವರಿಗೆ ಪತ್ರಿಕೆಗಿಂತಲೂ ಮುಖ್ಯವಾದ ಅಸ್ತ್ರ ಬೇರೊಂದಿಲ್ಲ ಎಂಬುದು ತಿಳಿದಿತ್ತು. ಅದಕ್ಕಾಗಿಯೇ ಅವರು ‘ರೈತ ಪತ್ರಿಕೆ’ಯನ್ನು ಪ್ರಾರಂಭಿಸಿದರು.

ಪತ್ರಿಕೆಯನ್ನು ಪ್ರಾರಂಭಿಸುವ ಅವರ ನಿರ್ಧಾರದ ಬಗ್ಗೆ ಕೇಳಿದಾಗ, ಅವರು ಹೇಳಿದ್ದು, “ಲೋಕಕ್ಕೆ ಹಿತ ತರಬೇಕಾದರೆ ಒಬ್ಬ ರಾಜಕಾರಣಿಗೆ ವಿಶಾಲವಾದ ಲೋಕದೃಷ್ಟಿ, ಪ್ರೀತಿ ಅಹಿಂಸೆ ಸೌಹಾರ್ದತೆ ಇರಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನು ತತ್ವಜ್ಞಾನಿಯಾಗಬೇಕು ಮತ್ತು ಒಳ್ಳೆಯವನಾಗಿರಬೇಕು. ಸಾಕ್ರಟಿಸ್ ಹೇಳಿದಂತೆ ಎಲ್ಲಿಯವರೆಗೆ ರಾಜಕಾರಣಿ ತತ್ವಜ್ಞಾನಿಯಾಗುವುದಿಲ್ಲವೋ ಅಲ್ಲೀತನಕ ಲೋಕಕಲ್ಯಾಣವಾಗುವುದಿಲ್ಲ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಇಬ್ಬರೂ ಬದುಕುತ್ತಿರೋ ಅಥವಾ ಒಬ್ಬನ್ನೊಬ್ಬರು ದ್ವೇಷ ಮಾಡಿ ಇಬ್ಬರೂ ಸಾಯುತ್ತೀರೋ? ನೀವೇ ಆಯ್ಕೆ ಮಾಡಿಕೊಳ್ಳಿ. ಗಾಂಧೀಜಿ ರಾಜಕಾರಣಿಯಾದಂತೆಯೇ ಧರ್ಮನಿಷ್ಠರಾಗಿದ್ದರು. ಧರ್ಮವೂ ಸಂಪೂರ್ಣವಾಗಿ ಆಚರಣೆಗೆ ಬರಲಿಲ್ಲ; ರಾಜಕಾರಣವೂ ಪರಿಶುದ್ಧವಾಗಲಿಲ್ಲ. ರೈತ ಪುಟಗಳನ್ನು ಪ್ರಾರಂಭಿಸಲು ಇವೆಲ್ಲಾ ಹಿನ್ನಲೆ ಒದಗಿಸಿದವು. ರಾಜಕಾರಣಿಗಳು ಒಳ್ಳೆಯವರಾಗುವತನಕ ನಮ್ಮ ಕನಸಿನ ಭಾರತ ಸಾಧ್ಯವಿಲ್ಲ. ಆರ್.ಕೆ. ಪ್ರಭು ಒಂದು ಪುಸ್ತಕ ಬರೆದರು, ಹರಿಜನ ಪತ್ರಿಕೆಯಲ್ಲಿ, ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧೀಜಿಯವರು ಬರೆದಿದ್ದನ್ನು ಸಂಪಾದಿಸಿದರು. ಸಿದ್ಧವನಹಳ್ಳಿ ಕೃಷ್ಣಶರ್ಮ, ದಿವಾಕರ ರಂಗರಾಯರು, ಹರ್ಡೇಕರ್ ಮಂಜಪ್ಪನವರು, ಮುಂತಾದರು ಕನ್ನಡಕ್ಕೆ ಅವರನ್ನು ಅನುವಾದ ಮಾಡಿದ್ದಾರೆ. ಗಾಂಧೀಜಿಯ ಕನಸಿನ ಭಾರತ-ಗ್ರಾಮ ಸ್ವರಾಜ್ಯ ರೂಪುಗೊಳ್ಳಬೇಕಾದರೆ ನಮ್ಮ ಹಳ್ಳಿ ಜನರು ಪ್ರಜ್ಞಾವಂತರಾಗಬೇಕು. ಅವರು ಉದ್ಧಾರವಾಗಬೇಕಾದರೆ ಒಳ್ಳೆಯ ರಾಜಕಾರಣ ಇರಬೇಕು. ಗ್ರಾಮೀಣ ಭಾರತ ಪ್ರಜ್ಞಾವಂತರಾದರೆ ದೇಶಕ್ಕೆ ಒಳಿತಾಗುತ್ತದೆ. ಆಗಿನ ಕಾಲದಲ್ಲಿ ರೈತ ಮತ್ತು ಹಳ್ಳಿಗಳನ್ನು ಮುಖ್ಯವಾಗಿಟ್ಟುಕೊಂಡು ಯಾವುದೇ ಪತ್ರಿಕೆಗಳು ಇರಲಿಲ್ಲ. ಕರ್ಮವೀರ, ಧರ್ನುಧಾರಿ, ಧನಂಜಯ, ಶರಣ ಸಂದೇಶ, ನವ ಸಂದೇಶ... ಹೀಗೆ ಹಲವು ವಾರಪತ್ರಿಕೆಗಳಿದ್ದವು ಮತ್ತು ಈ ವಾರಪತ್ರಿಕೆಗಳ ಹೆಸರು ಕೂಡ ತಿಲಕರು ಮತ್ತು ಅರವಿಂದರ ಪ್ರಭಾವದಿಂದಲೇ ಹುಟ್ಟಿದವು. ಸ್ವಾತಂತ್ರ್ಯದ ಆಯ್ಕೆಗೆ ಅನುಗುಣವಾದಂತಹ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುವುದು ಪತ್ರಿಕೆಯ ಉದ್ದೇಶವಾಗಿತ್ತು. ದೇಶದ ಸಮಗ್ರ ಪರಿವರ್ತನೆ ಮಾಡುತ್ತಿದ್ದಂತಹ ಕಾರ್ಯಗಳು ಮೇಲ್ದರ್ಜೆ ಶಿಕ್ಷಿತ ಜನರಿಗಾಗಿಯೇ ಇತ್ತು. ಹಾಗಾಗಿಯೇ ನನಗೆ ಗ್ರಾಮೀಣ ಭಾರತದ ಕಡೆ ಹೆಚ್ಚು ಗಮನ ಕೊಡಬೇಕೆಂದು ಅನ್ನಿಸಿತು. ದೇಶದ ಸಮಗ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪತ್ರಿಕೆಗಳು ಬರುತ್ತಿದ್ದವೇ ವಿನಃ ಹಳ್ಳಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಹಳ್ಳಿಯ ಸಮಸ್ಯೆಗಳು ಮತ್ತು ಅಭಿವೃದ್ಧಿ ಬಗ್ಗೆ ದಾಖಲಿಸುವ ಪತ್ರಿಕೆಗಳು ಬರುತ್ತಿರಲಿಲ್ಲ. ಇದು ನಾನು ‘ರೈತ ಪತ್ರಿಕೆ’ಯನ್ನು ಪ್ರಾರಂಭಿಸಲು ಮುಖ್ಯವಾದ ಕಾರಣ” ಎಂದರು.

೧೯೪೨-೪೩ರಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಕೋ.ಚೆ.ಯವರು ಅನಂತಪುರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದರು. ಆಗ ಆಂಧ್ರಪ್ರದೇಶದ ರಾಜಕೀಯ ಚಟುವಟಿಕೆಗಳ ಮುಖ್ಯ ಕೇಂದ್ರ ಅನಂತಪುರವೇ ಆಗಿತ್ತು. ಅಲ್ಲಿನ ಹಳ್ಳಿ ಜನರನ್ನು ಗಮನಿಸಿದ ಕೋ.ಚೆ.ಯವರಿಗೆ ಏನೂ ಗೊತ್ತಿಲ್ಲದವರೂ, ಗಾಂಧೀ ಎಂಬ ಹೆಸರನ್ನು ಸರಿಯಾಗಿ ತಿಳಿಯದವರೂ ಸಹ ಗಾಂಧಿ ಹೆಸರು ಹೇಳುತ್ತಾ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲಿನಲ್ಲಿರುವುದು ಗೊತ್ತಾಯಿತು. ನೀಲಂ ಸಂಜೀವರೆಡ್ಡಿಯವರ ಹಿಂಬಾಲಕರಾಗಿದ್ದ ಕೋ.ಚೆ.ಯವರಿಗೆ ಸ್ವಾಭಾವಿಕವಾಗಿ ಗಾಂಧೀಜಿಯವರು ತಮ್ಮ ಮುಂದಾಳು ಮತ್ತು ತಮಗೆ ಸ್ವಾತಂತ್ರ್ಯ ಬೇಕು ಎನ್ನುವುದನ್ನು ತಿಳಿದುಕೊಂಡರು. ಮೊದಲಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಸತ್ಯ ಅಹಿಂಸೆಯ ಮಾರ್ಗವನ್ನು ಅನುಸರಿಸುವುದೋ ಅಥವಾ ಕಮ್ಯುನಿಷ್ಟರು ಪ್ರತಿಪಾದಿಸುವ ಹಿಂಸಾ ಮಾರ್ಗವನ್ನು ಹಿಡಿಯುವುದೋ ಎನ್ನುವ ದ್ವಂದ್ವವಿತ್ತು. ಆದರೆ ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಭರತಖಂಡದ ಚರಿತ್ರೆಯನ್ನು ಚೆನ್ನಾಗಿ ತಿಳಿದಿದ್ದ ಕೋ.ಚೆ.ಯವರಿಗೆ ತಿಳಿದಿತ್ತು.

ಗಾಂಧೀಜಿಯ ಅಹಿಂಸಾ ಮಾರ್ಗವೇ ಭಾರತ ಸ್ವಾತಂತ್ರ್ಯ ಹೊಂದಲು ಇರುವ ಏಕೈಕ ಮಾರ್ಗ ಎಂದು ಅರಿತುಕೊಂಡರು. ೧೯೪೨-೪೩ರಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಕೋ.ಚೆ.ಯವರು ಅನಂತಪುರ ಜೈಲಿನಲ್ಲಿದ್ದುದು ಅವರ ಜೀವನದ ಅತ್ಯಂತ ಪ್ರಮುಖ ಘಟ್ಟ. ಸ್ವಾತಂತ್ರ್ಯ ಚಳುವಳಿಯ ಕಾರಣ ವಿಚಾರಣೆಗೆ ಒಳಪಟ್ಟವರ ಮೇಲೆ ಬ್ರಿಟಿಷ್ ಸರ್ಕಾರದವರು ರಾಜದ್ರೋಹ (ಸೆಕ್ಷನ್ ೧೨೦ಬಿ ಐಪಿಸಿ) ಪ್ರಕರಣ ದಾಖಲು ಮಾಡುತ್ತಿದ್ದರು. ಐಪಿಸಿನಲ್ಲಿ ಯಾವ ಶಿಕ್ಷೆ ವಿಧಿಸಿದ್ದರೋ ಅದಕ್ಕಿಂತ ಹೆಚ್ಚು (ಎನ್‌ಹ್ಯಾನ್ಸ್ಡ್) ಮಾಡಿದ್ದರು. ಯಾರಿಗೆ ಆಜೀವ ಶಿಕ್ಷೆ ಎಂದಿರುತ್ತಿತ್ತೋ ಅಂತಹವರಿಗೆ ದೀಪಾಂತರವಾಸವೆಂದು, ಯಾರಿಗೆ ದ್ವೀಪವಾಸ ಎಂಬ ಶಿಕ್ಷೆ ನೀಡಲಾಗಿತ್ತೋ ಅಂತಹವರಿಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಿದ್ದರು. ಅನಂತಪುರ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಕೋ.ಚೆ.ಯವರೊಂದಿಗೆ ಒಟ್ಟು ೧೩ ಜನರನ್ನು ವಿಚಾರಣೆಗೆ ಗುರಿಪಡಿಸಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.

ಆ ೧೩ ಜನರ ಹೆಸರು ಇಂತಿವೆ: ಎ. ಬಿ. ಆರ್. ಕೊಟ್ಟಗೌಡ, ಎ. ಆದಿನಾರಾಯಣ, ಕೆ. ಚೆನ್ನಬಸಪ್ಪ, ಎಸ್. ಪಿ. ನಾಗೀರೆಡ್ಡಿ, ಕೆ. ತಿರುಮಲರೆಡ್ಡಿ, ಎನ್. ರಾಜಶೇಖರರೆಡ್ಡಿ (ನೀಲಂ ಸಂಜೀವ ರೆಡ್ಡಿಯವರ ಸಹೋದರ), ಸದಾಶಿವನ್, ವೆಂಕಟಪ್ಪ, ಜಿ. ವೆಂಕಟಾರೆಡ್ಡಿ, ಕೆ.ಎಸ್. ರಾಘವಾಚಾರ್ಯ, ಎ. ನಂಜಪ್ಪ, ಎನ್.ಸಿ. ಗಂಗೀರೆಡ್ಡಿ ಮತ್ತು ಎಂ. ಮಲ್ಲಯ್ಯ.

ಹಳ್ಳಿಗಳ ಸ್ಥಿತಿಗತಿಗಳನ್ನು ಚೆನ್ನಾಗಿ ತಿಳಿದಿದ್ದ ಕೋ.ಚೆ.ಯವರಿಗೆ ತಮ್ಮ ಕಣ್ಣೆದುರೇ ಕಾಣುತ್ತಿದ್ದ ಅಸಮಾನತೆ, ಅನಕ್ಷರತೆ, ಆರ್ಥಿಕ ದುರ್ಬಲತೆ, ಹರಿಜನರ ದುಸ್ಥಿತಿ, ಸಾಮಾಜಿಕವಾಗಿ ಹಿಂದುಳಿದಿರುವುದು... ಹೀಗೆ ಇವೆಲ್ಲಕ್ಕೂ ಮೊದಲು ಪರಿಹಾರ ಕಂಡುಕೊಳ್ಳಬೇಕೆಂದು ಹಂಬಲಿಸಿದರು. ಹಳ್ಳಿಯ ಬಾವಿಯ ಮುಂದೆ ಸವರ್ಣೀಯರೇ ಇತರೆ ಜನರಿಗೆ ನೀರು ಹುಯ್ಯುತ್ತಿದ್ದುದು ಕೋ.ಚೆ.ಯವರಿಗೆ ಅಸಹ್ಯವೆನಿಸುತ್ತಿತ್ತು. ಆಗ ಅವರಿಗೆ ‘ಬಸವಣ್ಣ’ ಬಹುಮುಖ್ಯವಾಗಿ ಕಂಡರು. ಈಗಲೂ ಸಹ ಬಸವಣ್ಣನವರನ್ನು ಮತ್ತೆ ತಂದು ನಿಲ್ಲಿಸಬೇಕೆಂದುಕೊಂಡರು. ಆದರೆ ಊರ ಮಧ್ಯೆದಲ್ಲಿಯೇ ಕೋಣನ ತಲೆ ಕಡಿದು ವಾರ ಹತ್ತು ದಿನಗಳ ಕಾಲ ಕೋಣನ ತಲೆಯ ಮೇಲೆ ದೀಪ ಇಟ್ಟು ಮಾಡುತ್ತಿದ್ದ ಆಚರಣೆಯನ್ನು ತಡೆಯುವುದು ಹೇಗೆ ಎನ್ನುವುದೇ ಸವಾಲಾಗಿತ್ತು. ಕೋ.ಚೆ.ಯವರ ಬುದ್ದಿ ಕಮ್ಯುನಿಷ್ಟರದ್ದಾಗಿದ್ದರೆ ಹೃದಯ ಗಾಂಧೀಜಿಯೊಡನೆ ಇತ್ತು ಎಂದು ಹೇಳುತ್ತಿದ್ದ ಅವರ ಪಾಲಿಗೆ ವಿವೇಕಾನಂದರು ಪ್ರಜ್ಞೆಯ ಭಾಗವಾಗಿ ಬಂದರು. ಇದರ ಬಗ್ಗೆ ಕೋ.ಚೆ.ಯವರನ್ನು ಕೇಳಿದಾಗ ಅವರು ಹೇಳಿದ್ದು;

“ನಮ್ಮ ಹರಿಜನರ ಸಮಸ್ಯೆಯನ್ನು ಪರಿಹರಿಸಲಿಕ್ಕೆ ನಾವು ಏನಾದರೂ ಕಾರ್ಯ ಮಾಡಬೇಕಾದರೆ ವಿವೇಕಾನಂದರ ಸಂದೇಶ ನಮಗೊಂದು ದಾರಿ ತೋರಬಹುದು ಎಂದು ತಿಳಿಯಿತು. ಈಗಿರುವ ಪ್ರಪಂಚವು ಆತ್ಯಂತಿಕವಲ್ಲ; ಇದನ್ನು ಪರಿವರ್ತನೆ ಮಾಡಬೇಕು, ಪರಿವರ್ತನೆ ಯಾವ ರೀತಿಯಲ್ಲಿ ಆಗಬೇಕೆಂದರೆ ಮೊದಲು ಅವರ ಹೃದಯ ಪರಿವರ್ತನೆಯಿಂದ ಆಗಬೇಕು. ರಾಗಭಾವಗಳಿಗೆ ಹಿತವಾಗುವಂತಹ ಮಾತನ್ನಾಡಿದ್ದರೆ ಮಾತ್ರ ಹೃದಯ ಪರಿವರ್ತನೆ ಸಾಧ್ಯ. ಕ್ರಿಯೇಟಿಂಗ್ ದ ನ್ಯೂ ವರ್ಲ್ಡ್. ಮುಂದಿನ ಪೀಳಿಗೆಯ ಜನ ಭವ್ಯಜೀವಿಗಳಾಗಬೇಕೆಂಬ ಹಂಬಲ ಇತ್ತು. ಇದು ಹೃದಯ ಪರಿವರ್ತನೆಯಿಂದ ಮಾತ್ರ ಸಾಧ್ಯ. ವಿವೇಕಾನಂದರು, ಒಂದು ಭಾಷಣದಲ್ಲಿ ಮತ್ತು ಪತ್ರಿಕೆಯಲ್ಲಿ ಬರೆದಿದ್ದಾರೆ; ‘ಜನರ ಪರಿವರ್ತನೆಗಾಗಿ ಸಾಮಾಜಿಕ ಪರಿವರ್ತನೆ, ಆರ್ಥಿಕ ಪರಿವರ್ತನೆ, ರಾಜಕೀಯ ಪರಿವರ್ತನೆ, ಧಾರ್ಮಿಕ ಸುಧಾರಣೆ ಇವುಗಳನ್ನು ಮಾಡಿದರು ಆದರೆ ಇದೆಲ್ಲದರಿಂದಲೂ ಪೂರ್ಣ ಪರಿವರ್ತನೆ ಆಗಲಿಲ್ಲ’. ಹಾಗಾದರೆ ಪರಿವರ್ತನೆ ಹೇಗೆ ಮಾಡುವುದೆಂಬ ಪ್ರಶ್ನೆ ಬಂದಿತು. ಅದಕ್ಕೆ ಶ್ರೀ ಅರವಿಂದರು ‘ಮನುಷ್ಯನ ಮನಸ್ಸು ಪರಿವರ್ತನೆ ಆಗಬೇಕು’ ಎಂದು ಹೇಳಿದರು. ಅದನ್ನೇ ಬಸವಣ್ಣನವರ ವಚನ ಚಳುವಳಿ ಮಾಡಿದ್ದು; ಅಂಬೇಡ್ಕರ್ ಅವರ ಸಂವಿಧಾನ ಮಾಡಿದ್ದು. ಈ ಸಮಾಜ ಹೃದಯ ಪರಿವರ್ತನೆಯಿಂದ ಸೃಷ್ಟಿಯಾಗುವ ದಿವ್ಯ ಜೀವಿಗಳ ನೆಲೆಯಾಗಬೇಕು ಎಂದು ಶ್ರೀ ಅರವಿಂದರು ಬಯಸಿದ್ದರು. ಇದು ದೈಹಿಕ ಶಿಕ್ಷೆ ನೀಡುವುದರಿಂದ ಸಾಧ್ಯವಾಗುವುದಿಲ್ಲ”.

“ಭೌತವಿಜ್ಞಾನ, ಅಭಿವೃದ್ಧಿ ಎಲ್ಲಕ್ಕೂ ಪರಿಹಾರವಲ್ಲ. ಸರ್ವಸಾಧಾರಣ ಜನ, ಅಕ್ಷರ ಬಾರದವರೂ ಸಹ ಧರ್ಮಿಷ್ಟರಾಗಿ ಬದುಕುತ್ತಾರೆ. ನಮ್ಮ ದೇಶದ ಮಣ್ಣಿನ ಗುಣವೇ ಅದು. ಧರ್ಮನಿಷ್ಟವಾದುದು. ನಮ್ಮ ಹೆಣ್ಣು ಮಕ್ಕಳು ರಾಗಿ ಭತ್ತ ಸಸಿ ನಾಟಿ ಮಾಡುವಾಗ, ಬಿತ್ತುವಾಗ, ಕುಟ್ಟುವಾಗ, ಬೀಸುವಾಗ ಎಲ್ಲ ಕಾರ್ಯಗಳಲ್ಲೂ ಧರ್ಮಿಷ್ಟರಾಗಿಯೇ ಇರುತ್ತಾರೆ. ಹಾಗೆ ಬದುಕುವುದೇ ಅವರ ಜೀವನ ನೀತಿ. ಬಾಳೆಲ್ಲವೂ ಯೋಗವೇ ಆಗಿರುತ್ತಿತ್ತು. (ಆಲ್ ಲೈಫ್ ಇಸ್ ಯೋಗಾ) ಮೌಢ್ಯವನ್ನು ಕೂಡಿಸುವಂತಹ ಒಂದು ಪ್ರವೃತ್ತಿ ಅವರ ಕಾರ್ಯಗಳಲ್ಲಿ ತಂದು ಕೂರಿಸಿರುವುದನ್ನು ಬಿಡುಗಡೆ ಮಾಡಿಸಬೇಕು. ೧೯೩೭ರಲ್ಲಿ ವಿವೇಕಾನಂದರ ಪುಸ್ತಕವನ್ನು ಗ್ರಂಥಾಲಯದಲ್ಲಿ ಓದಿದಾಗ ನನ್ನ ದೃಷ್ಟಿ ಹಳ್ಳಿಗಳು ಮತ್ತು ಸರ್ವಸಾಧಾರಣ ಜನರ ಕಡೆಗೆ ಹೊರಳಿತು. ೧೯೪೮ರಲ್ಲಿ ನಾನು ಪತ್ರಿಕೆ ಪ್ರಾರಂಭಿಸುವುದಕ್ಕೆ ಇದೇ ಮುಖ್ಯ ಕಾರಣ”.

ಬೆಳಗಾವಿಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ಕೋ.ಚೆ.ಯವರಿಗೆ ಅಲ್ಲಿಯೇ ಪಾಟೀಲ ಪುಟ್ಟಪ್ಪ, ಮುಂತಾದ ಸಾಹಿತಿ ಮಿತ್ರರು ಜೊತೆಗಿದ್ದರು. ಬಯಲು ಸೀಮೆಯ ಬಿಸಿಲ ಬೇಗೆಯಿಂದ ಬೆಳಗಾವಿಗೆ ಬಂದ ಕೋ.ಚೆ.ಯವರಿಗೆ ಅಲ್ಲಿನ ಶೀತ ವಾತಾವರಣ ಒಗ್ಗದೆ ಹಿಂದಿರುಗಬೇಕೆಂದುಕೊಂಡಿದ್ದರು. ಆದರೆ ಅವರನ್ನು ತಡೆದವರು ಪಾಟೀಲ ಪುಟ್ಟಪ್ಪನವರು. ಬಸವರಾಜ ಕಟ್ಟಿಮನಿ, ಪಾಟೀಲ ಪುಟ್ಟಪ್ಪ ಮತ್ತು ಕೋ.ಚೆನ್ನಬಸಪ್ಪ ಅವರೆಲ್ಲರೂ ಸೇರಿ ಪತ್ರಿಕೆ ಕುರಿತು ವಿಚಾರ ನಡೆಸುತ್ತಿದ್ದರು. ಕೋ.ಚೆ.ಯವರು ಕಾಲೇಜು ದಿನಗಳಲ್ಲಿಯೇ ಪೂರ್ವ ಕರ್ನಾಟಕ, ಗಡಿನಾಡ ಕರ್ನಟಕದ ಕನ್ನಡಿಗರ ವಿಚಾರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಅನಂತಪುರದಲ್ಲಿದ್ದಾಗ ಅಲ್ಲಿನ ಕನ್ನಡಿಗರ ವಿಚಾರವನ್ನು ಕರ್ನಾಟಕದ ಪತ್ರಿಕೆಗಳಿಗೆ ಲೇಖನ ಬರೆದು ಕಳುಹಿಸಿಕೊಡುತ್ತಿದ್ದರು. ಆಗ ಮುಂಬೈ ಮತ್ತು ಮದ್ರಾಸ್ ಪ್ರಾಂತ್ಯದಲ್ಲಿ ಸಮುದಾಯ ಮತ್ತು ಪ್ರಾಂತ್ಯಕ್ಕೆ ಸಂಬಂಧಿಸಿದ ಪತ್ರಿಕೆ ಮಾತ್ರ ಇತ್ತು. ಅದಕ್ಕಾಗಿಯೇ ಕೋ.ಚೆ.ಯವರು ರೈತರ ದನಿ ಆಳುವ ವರ್ಗಕ್ಕೆ ತಲುಪಿಸಬೇಕೆಂದು ತೀರ್ಮಾನಿಸಿ ‘ರೈತ ಪತ್ರಿಕೆ’ಯನ್ನು ಪ್ರಾರಂಭಿಸಿದರು.

ಬಳ್ಳಾರಿ ಜಿಲ್ಲೆಯಾದ್ಯಂತ ಕೋ.ಚೆ.ಯವರಿಗೆ ಸ್ನೇಹಬಳಗವಿತ್ತು. ಅನೇಕ ಜನ ಸಹಕಾರ ಸಂಘದ ಅಧ್ಯಕ್ಷರೋ ಕಾರ್ಯದರ್ಶಿಯೋ ಆಗಿರುತ್ತಿದ್ದರು. ಬಳ್ಳಾರಿ ಜಿಲ್ಲೆಯಿಂದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಸೆಂಟ್ರಲ್ ಜೈಲಿನಲ್ಲಿದ್ದವರೆಲ್ಲರೂ ಕೋ.ಚೆ.ಯವರ ಪತ್ರಿಕೆಗೆ ಸಹಕಾರ ನೀಡಿದ್ದು ವಿಶೇಷವಾಗಿ ಗಮನಿಸಬೇಕು. ರೈತ ಪತ್ರಿಕೆ ಪ್ರಾರಂಭವಾದಾಗ ‘ಕೋ.ಚೆ, ಅಂಚೆ, ಬಾಚೆ’ ಎನ್ನುವ ಹೆಸರು ಆ ಜಿಲ್ಲೆಯಲ್ಲೆಡೆ ಚಾಲ್ತಿಯಲ್ಲಿತ್ತು. ಕೋಚೆ ಎಂದರೆ ‘ಕೋ.ಚೆನ್ನಬಸಪ್ಪ’, ಅಂಚೆ ಎಂದರೆ ‘ಅಂಗಡಿ ಚನ್ನಬಸಪ್ಪ’ ಮತ್ತು ಬಾಚೆ ಎಂದರೆ ‘ಬಾಚಗೊಂಡನಹಳ್ಳಿ ಚೆನ್ನಬಸವನಗೌಡ’.

ರೈತ ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಹಣಕಾಸಿನ ವ್ಯವಸ್ಥೆಯ ಬಗ್ಗೆ ಕೇಳಿದಾಗ ಕೋ.ಚೆ.ಯವರು ಹೇಳಿದ್ದು: “ಪತ್ರಿಕೆ ಪ್ರಾರಂಭಿಸಲು, ರೈತ ಟ್ರಸ್ಟ್ ಎಂದು ಮಾಡಿಕೊಂಡೆವು. ಅದಕ್ಕೆ ನಮ್ಮ ಜಿಲ್ಲೆಯ ರಾಜಕೀಯ ಮುಖಂಡರು, ವರ್ತಕರು, ವಕೀಲರು, ದೇಶಭಕ್ತರು, ಆಪ್ತಮಿತ್ರರು ತಲಾ ಒಂದು ನೂರು ರೂಪಾಯಿ ದಾನ ಅಂತ ಕೊಟ್ಟು ಟ್ರಸ್ಟ್ನ ಅಜೀವ ಸದಸ್ಯರಾದರು”. ಅಂಥವರ ಹೆಸರುಗಳನ್ನು ಅನುಬಂಧ-೨ರಲ್ಲಿ ಕೊಡಲಾಗಿದೆ.

ರೈತ ಪತ್ರಿಕೆಯ ಮುಖ್ಯ ಆಕರ್ಷಣೆ ಪತ್ರಿಕೆಯ ಎರಡನೇ ಪುಟದಲ್ಲಿದ್ದ ‘ಲಂಚದ ಮಾದರಿ’ ಎನ್ನುವ ಕಾಲಂ. ಇದು ಎಷ್ಟು ಪ್ರಚಾರವಾಗಿತ್ತೆಂದರೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಹಿಡಿದು ಪತ್ರಿಯೊಬ್ಬರು ಪತ್ರಿಕೆಯನ್ನು ಓದುವಂತೆ ಮಾಡಿತ್ತು. ಸ್ವಾತಂತ್ರ್ಯ ಯೋಧ ಎನ್ನುವ ಕಾರಣಕ್ಕೆ ಕೋ.ಚೆ.ಯವರಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮದ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತಿತ್ತು. ಅಲ್ಲಿ ಕೋ.ಚೆ.ಯವರಿಗೆ ಅನೇಕ ಜನರ ಸಂಪರ್ಕ ಸಿಕ್ಕಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದರು. ಪ್ರತಿ ಶುಕ್ರವಾರ ರೈತ ಪತ್ರಿಕೆ ಅಂಚೆ ಕಚೇರಿಯಿಂದ ಹೊರಟರೆ ಸೋಮವಾರ ಎಲ್ಲರ ಕೈ ತಲುಪುತ್ತಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಮೌಲ್ಯಯುತ ಲೇಖನಗಳನ್ನು ಗಮನಿಸಿದಾಗ, ಕಟ್ಟಾ ಗಾಂಧೀವಾದಿಯಾಗಿದ್ದ ಸಂಡೂರಿನ ಡಾ.ಬಸವರಾಜ ಅವರು ೧೯೪೫ರಲ್ಲಿ ನಾಗಾಸಾಕಿ ಹಿರೋಶಿಮ ಮೇಲೆ ಬಾಂಬ್ ದಾಳಿಯಾದಾಗ ಬರೆದ ‘ಅಧಿಕ ಆಹಾರೋತ್ಪತ್ತಿಯಲ್ಲಿ ಅಣುವಿಜ್ಞಾನದ ಪಾತ್ರ’ ಎನ್ನುವ ಲೇಖನ ಕೋ.ಚೆ.ಯವರ ಮೇಲೆ ಪ್ರಭಾವ ಬೀರಿ ಅದನ್ನು ತಮ್ಮ ರೈತ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದು ಪತ್ರಿಕೆಯ ಗುಣಮಟ್ಟವನ್ನು ಸೂಚಿಸುತ್ತದೆ. ಪತ್ರಿಕೆಯಲ್ಲಿನ ‘ಲಂಚದ ಮಾದರಿ’ ಕಾಲಂನಲ್ಲಿ ಪ್ರಕಟವಾದ ಒಂದು ಪ್ರಸಂಗವನ್ನು ಕೋ.ಚೆ.ಯವರು ನೆನಪು ಮಾಡಿಕೊಳ್ಳುತ್ತಾರೆ.

“ಪ್ರತಿ ವರ್ಷ ಜುಲೈ ೧ನೇ ತಾರೀಖು ವನಮಹೋತ್ಸವ ಸಮಾರಂಭ ನಿಗದಿಯಾಗಿತ್ತು. ಹಡಗಲಿಯ ತಹಶೀಲ್ದಾರ್ ಒಬ್ಬರು ವ್ಯಾಪಾರಿಗಳಿಂದ ಲಂಚ ತೆಗೆದುಕೊಂಡು ಒಣ ಮರಗಳೆಂದು ಹೇಳಿ ಮಹೋತ್ಸವಕ್ಕೆ ಹಸಿ ಹೊಸ ಮರಗಳನ್ನು ಕೊಡುತ್ತಿರುವ ವಿಷಯದ ಬಗ್ಗೆ ವೆಂಕಟರಮಣಪ್ಪ ಎಂಬ ರೈತರು ನನಗೆ ಪತ್ರ ಬರೆದಿದ್ದರು. ನಾನು ಪತ್ರಿಕೆಯಲ್ಲಿ ಪ್ರಕಟಿಸಿದೆ. ಅಷ್ಟುಹೊತ್ತಿಗೆ ಬೀಚಿಯವರು ಪತ್ರಿಕೆಯಲ್ಲಿ ‘ಬೇವಿನ ಕಟ್ಟೆ ತಿಮ್ಮ’ ಎಂಬ ಕಾಲಂ ಬರೆಯುತ್ತಿದ್ದರು. ಅವರು ಇದೇ ಘಟನೆಯನ್ನು ಕುರಿತು ‘ಒಣ ಮಹೋತ್ಸವ’ ಎನ್ನುವ ಶೀರ್ಷಿಕೆಯಡಿಯಲ್ಲಿ ಸಂಭಾಷಣಾ ರೂಪದ ವಿಡಂಬನಾತ್ಮಕ ಲೇಖನ ಬರೆದರು. ಅದು ಎಲ್ಲೆಡೆ ಪ್ರಚಲಿತವಾಯಿತು. ಅದರ ಪ್ರಭಾವ ಎಷ್ಟಿತ್ತೆಂದರೆ ಅದನ್ನೇ ಆಧರಿಸಿ ತಹಿಶೀಲ್ದಾರ್ ಮೇಲೆ ವಿಚಾರಣೆ ನಡೆಸಲಾಯಿತು. ವಿಚಾರಣೆ ಸಮಯದಲ್ಲಿ ಸ್ಥಳೀಯ ರೈತರನ್ನೂ ವಿಚಾರಿಸಿ ಘಟನೆಯ ಸತ್ಯವನ್ನು ತಿಳಿದು ತಹಶೀಲ್ದಾರ್ ಅವರಿಗೆ ಹಿಂಬಡ್ತಿ ನೀಡಿ ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡುವ ಶಿಕ್ಷೆ ವಿಧಿಸಲಾಯಿತು. ತಹಶೀಲ್ದಾರರು ಹಡಪದ ಜಾತಿಗೆ ಸೇರಿದವರಾಗಿದ್ದು, ಅವರು ವಿಚಾರಣೆ ನಡೆಸಿ ಶಿಸ್ತುಕ್ರಮ ದಾಖಲಿಸುವ ಮೊದಲೇ ವಿಷ ತೆಗೆದುಕೊಂಡು ಸತ್ತುಹೋದರು. ನನಗೆ ಇದು ತುಂಬಾ ಬೇಸರವಾಯಿತು”.

೧೯೪೬ರಲ್ಲಿ ಕೋಚೆಯವರು ಕಾನೂನು ಪದವಿ ಪಡೆದು ವಕೀಲಿ ವೃತ್ತಿಗೆ ನೋಂದಾಯಿತರಾದರು. ಪತ್ರಿಕೋದ್ಯಮದ ಕಾನೂನು ಮತ್ತು ನಿಯಮಾವಳಿಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದರಿಂದಲೇ ಕೋಚೆಯವರಿಗೆ ಪತ್ರಿಕೆಯನ್ನು ನಿರ್ಭಿಡೆಯಿಂದ ನಡೆಸಲು ಸಾಧ್ಯವಾಯಿತು. ರೈತ ಪತ್ರಿಕೆಗೆ ಅನೇಕ ವಿಚಾರವಂತರು ಲೇಖನಗಳನ್ನು ಕಳಿಸುತ್ತಿದ್ದರು. ಅದರಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ಬೀಚಿ ಎಂದೇ ಪ್ರಚಲಿತರಾಗಿದ್ದ ಶ್ರೀ ಭೀಮಸೇನರಾವ ಅವರು ನಿಯಮಿತವಾಗಿ ಅಂಕಣ ಬರೆದು ಪ್ರಚಾರಕ್ಕೆ ಬಂದರು. ಮೂಢನಂಬಿಕೆಯ ವಿರುದ್ದ ಧ್ವನಿಯೆತ್ತಿದ್ದ ಬೀಚಿಯವರಿಗೂ ಕೋಚೆಯವರಿಗೂ ಅನೇಕ ವಿಷಯಗಳಲ್ಲಿ ಸಹಮತವಿತ್ತು. ಮಧ್ವ ಸಮುದಾಯದಿಂದ ಆಗುತ್ತಿದ್ದ ಸಾಮಾಜಿಕ ಅನ್ಯಾಯ ಅದರಲ್ಲೂ ಸ್ತ್ರೀಯರಿಗೆ ಮದ್ವರಿಗಿದ್ದ ಕನಿಷ್ಠ ಧೋರಣೆಯನ್ನು ವಿರೋಧಿಸಿ ಬೀಚಿಯವರು ಬರೆದಿದ್ದರು. ಮುಂದೆ ಬೀಚಿಯವರು ‘ಬೇವಿನ ಕಟ್ಟೆ ತಿಮ್ಮ’ ಅಂಕಣದ ಮೂಲಕ ನಿರಂತರವಾಗಿ ರೈತ ಪತ್ರಿಕೆಗೆ ವಿಡಂಬನಾತ್ಮಕ ಲೇಖನಗಳನ್ನು ಬರೆದರು. ಇದು ಹೆಚ್ಚು ಜನಪ್ರಿಯವೂ ಆಗಿತ್ತು.

ರೈತ ಪತ್ರಿಕೆಯಲ್ಲಿ ಬರುತ್ತಿದ್ದ ಲೇಖನಗಳು ಹಾಗೂ ಅಂಕಣಗಳು ಎಷ್ಟು ಪ್ರಭಾವಯುತವಾಗಿದ್ದವೆಂದರೆ ಜಿಲ್ಲೆಯ ಉನ್ನತ ಅಧಿಕಾರಿಗಳು ಪತ್ರಿಕೆಯಲ್ಲಿನ ಸುದ್ದಿಯನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಿದ್ದರು. ಒಂದು ಘಟನೆಯನ್ನು ಕೋಚೆಯವರು ತಮ್ಮ ನೆನಪಿನ ಹೊತ್ತಿಗೆಯಿಂದ ಹೀಗೆ ಮೆಲುಕು ಹಾಕುತ್ತಾರೆ;

“ಅಲಾರ್ಡಿಸ್ ಎನ್ನುವ ಅಧಿಕಾರಿಯಿದ್ದ. ಅವನು ಸ್ಕಾಟ್‌ಲ್ಯಾಂಡ್ ದೇಶದವನು. ಅವನು ಅತ್ಯಂತ ಪ್ರಮಾಣಿಕ ಅಧಿಕಾರಿಯಾಗಿದ್ದ. ಒಮ್ಮೆ ನಾನು ‘ಶಿರಗುಪ್ಪ ತಾಲೂಕಿನಲ್ಲಿ ದುಡಿದುಣ್ಣುವುದಕ್ಕಿಂತ ಕುಡಿದುಣ್ಣುವುದು ಲೇಸು’ ಎನ್ನುವ ಶೀರ್ಷಿಕೆಯಡಿ ಒಂದು ಸುದ್ದಿ ಪ್ರಕಟಿಸಿದೆ. ತುಂಗಭದ್ರೆ ಆಚೆಗೆ ಕುಡಿಯಲು ಅನುಮತಿ ಇರಲಿಲ್ಲ. ಅಲ್ಲಿ ಪೊಲೀಸರಿಗೆ ಲಂಚ ಕೊಟ್ಟು ಏನಾದರೂ ಮಾಡಬಹುದಿತ್ತು. ಅದರ ವಿಷಯ ತಿಳಿದು ಲೇಖನ ಬರೆದು ಪ್ರಕಟಿಸಿದೆ. ಅಲಾರ್ಡಿಸ್ ಅದನ್ನು ಓದಿ ನನಗೆ ಹೇಳಿಕಳುಹಿಸಿದ್ದರು. ನಾನು ಹೋದಾಗ ಅವರು ಅತ್ಯಂತ ಪ್ರೀತಿಯಿಂದ ಆಹ್ವಾನಿಸಿ ಸುದ್ದಿಯ ಬರವಣಿಗೆ ಬಗ್ಗೆ ಮೆಚ್ಚುಗೆ ಸೂಚಿಸಿದರು. ಮುಂದೆ ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕೆ ಮುನ್ನ ನನಗೆ ಮಾಹಿತಿ ನೀಡಿ ನಾನು ಕ್ರಮವಹಿಸುತ್ತೇನೆ ಎಂದು ಹೇಳಿದರು. ನಾವು ಪ್ರಮಾಣಿಕರಾದರೆ ಸರ್ಕಾರ ನಮ್ಮ ಮಾತು ಕೇಳುತ್ತಿತ್ತು ಎನ್ನುವುದಕ್ಕೆ ಇದೊಂದು ನಿದರ್ಶನ”

ಕೋಚೆಯವರ ಪ್ರಾಮಾಣಿಕತೆ ಹಾಗೂ ಸತ್ಯನಿಷ್ಠುರ ಸುದ್ದಿಯಿದ್ದುದರಿಂದಲೇ ರೈತ ಪತ್ರಿಕೆ ಅಂದಿನ ಕಾಲಕ್ಕೆ ಜನದನಿಯ ಪತ್ರಿಕೆಯಾಗಿ ಎಲ್ಲೆಡೆ ಪ್ರಚಾರ ಪಡೆದಿತ್ತು. ಆದರೆ ಕೋಚೆಯವರು ಪತ್ರಿಕೆಯನ್ನು ಪ್ರಾರಂಭಿಸುವ ಹಾದಿ ಸುಲಭದ್ದೇನಾಗಿರಲಿಲ್ಲ. ಪತ್ರಿಕೆಯನ್ನು ಪ್ರಾರಂಭಿಸಲು ಅವರ ಮನೆಯೇ ಕಚೇರಿಯಾಗಿತ್ತು. ವಿವಿಧ ಮೂಲಗಳಿಂದ ಸಂಗ್ರಹಿಸಲಾಗುತ್ತಿದ್ದ ಕೇವಲ ಒಂದೆರೆಡು ಸಾವಿರ ರೂಪಾಯಿಗಳಲ್ಲಿ ಪತ್ರಿಕೆಯನ್ನು ನಡೆಸಬೇಕಿತ್ತು. ಬಳ್ಳಾರಿಯಲ್ಲಿದ್ದ ಪ್ರಭಾಕರ ಪ್ರೆಸ್‌ನಲ್ಲಿ ಪತ್ರಿಕೆಯನ್ನು ಮುದ್ರಿಸಲು ಬಹಳ ಸಮಯ ಕಾಯಬೇಕಿತ್ತು. ಆದ್ದರಿಂದ ಸ್ವಂತ ಪ್ರೆಸ್ ಪ್ರಾರಂಭಿಸುವುದು ಕೋಚೆಯವರಿಗೆ ಅವಶ್ಯಕವೂ, ಅನಿವಾರ್ಯವೂ ಆಗಿತ್ತು. ಆಗ ಅವರು ತಮ್ಮ ಮಡದಿಯ ಬಳಿ ಇದ್ದ ಒಂದಿಷ್ಟು ಹಣವನ್ನು ಹಾಗೂ ಬಂಗಾರವನ್ನು ಅಡವಿಟ್ಟು ಬಂದ ಹಣದಲ್ಲಿ ಪ್ರೆಸ್ ಅನ್ನು ಪ್ರಾರಂಭಿಸಿದರು. ಕೋಚೆಯವರ ಪತ್ನಿಯು ಕೇಳದಿದ್ದರೂ ಸ್ವತಃ ಅವರೇ ಒಂದು ಪ್ರಾಮಿಸರಿ ನೋಟ್ ಬರೆದು ತೆಗೆದುಕೊಂಡಿರುವ ಹಣವನ್ನು ಬಡ್ಡಿ ಸಮೇತ ತೀರಿಸುತ್ತೇನೆಂದು ಹೇಳಿ ಹಣ ಪಡೆದಿದ್ದರು. ಇದು ಕೋಚೆಯವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಅವರಲ್ಲಿದ್ದ ಸಮಯಪ್ರಜ್ಞೆ ಮತ್ತು ಪ್ರಮಾಣಿಕ ಮನಸ್ಸು ಈ ಹೊತ್ತಿನ ಜರೂರು ಎನಿಸುತ್ತದೆ. ಸಮಯದ ಅರಿವೇ ಇಲ್ಲದೆ ಬದುಕುವ ಯುವ ಸಮುದಾಯದ ಬಗ್ಗೆ ಕೋಚೆಯವರಿಗೆ ಹೆಚ್ಚಿನ ಭರವಸೆಗಳೇನು ಇದ್ದಿರಲಿಲ್ಲ. ಆದರೂ ಅವರು ತಮ್ಮ ಮಾತುಗಳಲ್ಲಿ ವರ್ತಮಾನದ ಸಮಾಜದ ಬಗ್ಗೆ, ಯುವಕರ ಬಗ್ಗೆ ಆಗಾಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿ ಮಾತನಾಡುತ್ತಿದ್ದರು. ಮುಂಬೈನ ಶಿಕ್ಷಣ ಇಲಾಖೆಯಲ್ಲಿದ್ದ ಡೆಪ್ಯೂಟಿ ಚೆನ್ನಬಸಪ್ಪನವರು ತಮ್ಮ ಹೆಂಡತಿಯ ಒಡವೆಗಳನ್ನು ಒತ್ತೆಯಿಟ್ಟು ಕನ್ನಡ ಪುಸ್ತಕಗಳನ್ನು ಒದಗಿಸಿಕೊಡುತ್ತಿದ್ದ ಬಗೆಯನ್ನು ಇದೇ ಸಂದರ್ಭದಲ್ಲಿ ಕೋಚೆಯವರು ಸ್ಮರಿಸುತ್ತಾರೆ. ಅವರ ತಮ್ಮ ಡಾ. ಕೆ.ಟಿ.ಸ್ವಾಮಿ ಟ್ರೆಡಲ್ ತುಳಿದು ಅಚ್ಚು ಒತ್ತಿ ಸಹಾಯ ಮಾಡಿದ್ದನ್ನು ನಾನೆಂದೂ ಮರೆಯಲಾಗದು ಎಂಬ ಭಾವ ಕೋಚೆಯವರದಾಗಿತ್ತು. ಬಳ್ಳಾರಿ ವಸತಿ ನಿಲಯದ ವಿದ್ಯಾರ್ಥಿಗಳು ಪತ್ರಿಕೆಗೆ ಸ್ಟ್ಯಾಂಪ್ ಹಚ್ಚಿ ವಿಳಾಸ ಬರೆದುಕೊಡುತ್ತಿದ್ದರು. ಕೋಚೆಯವರ ತಮ್ಮ, ತಂಗಿ, ಮಡದಿ ಎಲ್ಲರೂ ಪತ್ರಿಕೆಯನ್ನು ರಾತ್ರಿಯೆಲ್ಲಾ ನಿದ್ದೆಗೆಟ್ಟು ಫೋಲ್ಡ್ ಮಾಡಿ ಸಹಾಯ ಮಾಡುತ್ತಿದ್ದರಂತೆ. ಇವರೆಲ್ಲರ ಸಹಕಾರದಿಂದಲೇ ನಾನು ಪತ್ರಿಕೆಯನ್ನು ಸ್ವತಂತ್ರವಾಗಿ ಹೆಚ್ಚಿನವರ ಸಹಕಾರವಿಲ್ಲದೆ ನಡೆಸಲು ಸಾಧ್ಯವಾಯಿತು ಎನ್ನುತ್ತಾರೆ ಕೋಚೆಯವರು.

ಹೊಸಪೇಟೆಯಲ್ಲಿ ಬೆಲ್ಲದ ಚೆನ್ನಪ್ಪ, ಮುಂತಾದ ರಾಜಕೀಯ ಮುಖಂಡರು ಪತ್ರಿಕೆ ನಡೆಸಲು ಸಹಾಯ ಮಾಡುತ್ತಿದ್ದರು. ವಕೀಲರಾಗಿ ಬಾರ್ ಕೌನ್ಸಿಲ್ ನೀತಿಯನ್ವಯ ಬೇರಾವುದೇ ವೃತ್ತಿ ಮಾಡುವಂತಿಲ್ಲ. ಆ ಕೋಚೆಯವರು ಮದ್ರಾಸ್ ಹೈಕೊರ್ಟ್ ಮತ್ತು ಬಾಂಬೆ ಹೈಕೋರ್ಟಗೆ ಪತ್ರ ಬರೆದು ಪತ್ರಿಕೆಯ ಕೆಲಸ ಗೌರವಾನ್ವಿತ ಹುದ್ದೆ, ಪೂರ್ಣಾವಧಿಯ ಸಂಬಳ ಪಡೆಯುವ ಕೆಲಸವಲ್ಲ ಎಂದು ತಿಳಿಸಿ ಅನುಮತಿ ಪಡೆದಿದ್ದರು. ವಿಷಯದ ಕುರಿತು ಆಳವಾಗಿ ಇಳಿದು ಅದರ ಪೂರ್ವಾಪರಗಳನ್ನು ತಿಳಿದುಕೊಳ್ಳುವುದು ಕೋಚೆಯವರ ಅಧ್ಯಯನದ ಮಾರ್ಗವಾಗಿತ್ತು. ಉದಾಹರಣೆಗೆ ಅವರು ಶಾಕುಂತಲ ನಾಟಕವನ್ನು ಪಠ್ಯದಲ್ಲಿ ಓದಬೇಕೆಂದಿದ್ದರೆ ಅದಕ್ಕೆ ಪೂರಕವಾಗಿದ್ದ ಪುಸ್ತಕಗಳೆಲ್ಲವನ್ನೂ ಓದುತ್ತಿದ್ದರು. ಅವರದ್ದು ವಿಶಾಲ ದೃಷ್ಟಿಕೋನ. ಹಾಗೆ ಅವರು ವಿಷಯವನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರಿಂದಲೇ ವಕೀಲರಾಗಿಯೂ ಪತ್ರಕರ್ತರಾಗಿಯೂ ಜನರ ಮೆಚ್ಚುಗೆ ಗಳಿಸಲು ಸಾಧ್ಯವಾಯಿತು.

ರೈತ ಪತ್ರಿಕೆಗೆ ಬರೆಯುತ್ತಿದ್ದವರ ಬಳಗ ದೊಡ್ಡದಿತ್ತು ಮತ್ತು ಅವರೆಲ್ಲರೂ ವಿದ್ವತ್ ಹಾಗೂ ಸಾಹಿತ್ಯ ಲೋಕದಲ್ಲಿ ಅಪಾರ ಹೆಸರು ಗಳಿಸಿದವರಾಗಿದ್ದರು. ರೈತ ಪತ್ರಿಕೆಯ ವಿಶೇಷ ಸಂಚಿಕೆಗಳಿಗೆ ಕುವೆಂಪು ಅವರು ಕವಿತೆಗಳನ್ನು ಬರೆಯುತ್ತಿದ್ದರು. ರೈತ ಪತ್ರಿಕೆಯ ೮ ಪುಟಗಳಲ್ಲಿ ೪ ಪುಟಗಳನ್ನು ಕೋಚೆಯವರೇ ಬರೆಯುತ್ತಿದ್ದರು. ಬಳ್ಳಾರಿ ಜಿಲ್ಲೆಯ ಕವಿಗಳಿಗೆ ಹೆಚ್ಚು ಆದ್ಯತೆ ನೀಡಿ ಅವರ ಕವಿತೆಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿದ್ದುದು ವಿಶೇಷವಾಗಿತ್ತು. ಅವರಲ್ಲಿ ಹಗರಿಬೊಮ್ಮನಹಳ್ಳಿಯ ವೀರೂಪಾಕ್ಷಗೌಡ, ಹಡಗಲಿ ತಾಲೂಕಿನ ಪೆಂಡಕೂರು ಗುರುಮೂರ್ತಿ, ಬಳ್ಳಾರಿಯ ಬೀಚಿ ಮುಂತಾದ ಕವಿಗಳು ಹೆಚ್ಚು ಪ್ರಸಿದ್ಧಿಗೆ ಬಂದದ್ದು ರೈತ ಪತ್ರಿಕೆಯ ಮೂಲಕವೇ. ಎಂ.ಅಕಬರ ಅಲಿಯವರ ಮೊದಲ ಕವಿತೆಯನ್ನು ರೈತ ಪತ್ರಿಕೆಯೇ ಪ್ರಕಟಿಸಿತು. ಹಾಗೆಯೇ ಬಿ.ಎ. ಸನದಿಯವರು ನಿರಂತರವಾಗಿ ರೈತ ಪತ್ರಿಕೆಗೆ ಕವನಗಳನ್ನು ಬರೆಯುತ್ತಿದ್ದರು. ಮಹದೇವ ಬಣಕಾರ್ ಅವರೂ ರೈತ ಪತ್ರಿಕೆಯ ಮೂಲಕವೇ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದರು. ಬೀಚಿಯವರಂತೂ ತಮ್ಮ ‘ತಿಮ್ಮನ ತಲೆ’ ಎಂಬ ಪುಸ್ತಕದಲ್ಲಿ “ಬೀಚಿ ಎಂಬುದು ಹೆಸರಿಗೆ ಮಾತ್ರ, ನಿಜವಾದ ಕೃತಿಕಾರರು ಕೋಚೆ” ಎಂದು ಬರೆದುಕೊಂಡಿದ್ದರು. ರೈತ ಪತ್ರಿಕೆಯಲ್ಲಿ ಲೇಖನಗಳು ಬಂದ ಮೇಲೆಯೇ ಬೀಚಿಯವರು ಹೆಚ್ಚು ಪ್ರಸಿದ್ಧಿಗೆ ಬಂದರು. ಇದು ನಮ್ಮ ಪತ್ರಿಕೆಯ ಹೆಗ್ಗಳಿಕೆಯೂ ಕೂಡ ಹೌದು ಎನ್ನುತ್ತಾರೆ ಕೋಚೆಯವರು. ಅವರೆಲ್ಲರು ನಿರಂತರವಾಗಿ ಉಳಿದವರಿಗಿಂತ ಭಿನ್ನವಾಗಿ, ಸಮಾಜಮುಖಿಯಾಗಿ ಪ್ರಭುತ್ವದ ವಿರುದ್ದ ಬರೆದ ಕಾರಣಕ್ಕೆ ಪತ್ರಿಕೆಯು ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಕೊಳ್ಳಲು ಸಹಾಯವಾಯಿತು ಎನ್ನುತ್ತಾರೆ ಕೋಚೆಯವರು. ಆಗಿನ ಕಾಲದಲ್ಲಿ ಪ್ರಗತಿಶೀಲ ಲೇಖಕರೆನಿಸಿದ್ದ ಅನಕೃ ಅವರ ಬರೆಹಗಳನ್ನು ರೈತ ಪತ್ರಿಕೆ ಪ್ರಕಟಿಸಿತ್ತು.

ರೈತ ಪತ್ರಿಕೆ ಎಂದಿಗೂ ವೈಚಾರಿಕ ಮನೋಧರ್ಮದಲ್ಲಿ ರಾಜಿಯಾಗುತ್ತಿರಲಿಲ್ಲ. ಈ ರಾಜಿಯಾಗದ ಗುಣವೇ ಅದರ ಬಹುದೊಡ್ಡ ಶಕ್ತಿಯಾಗಿತ್ತು; ಅದರ ದೌರ್ಬಲ್ಯವೂ ಕೂಡ. ಕೋಚೆಯವರ ನಿಷ್ಠುರತೆಯಿಂದಾಗಿ ಅವರು ಪ್ರಭುತ್ವದ ವೈರತ್ವವನ್ನು ಎದುರಿಸಬೇಕಾಯಿತು. ಜೊತೆಗೆ ಸಂಪ್ರದಾಯವಾದಿಗಳ ವಿರೋಧವೂ ಸಹ ಅವರ ಪತ್ರಿಕೆಗೆ ಸಾಕಷ್ಟು ಹಣಕಾಸಿನ ನೆರವು ಸಿಗದಂತೆ ತಡೆಯೊಡ್ಡಿತು. ತರಾಸು, ಬಸವರಾಜ ಕಟ್ಟಿಮನಿ, ನಿರಂಜನ ಅವರೆಲ್ಲರೂ ನಮ್ಮ ಪತ್ರಿಕೆಗೆ ಬರವಣಿಗೆಯ ಮೂಲಕ ಸಹಕಾರ ನೀಡಿದ್ದರಿಂದಲೇ ರೈತ ಪತ್ರಿಕೆ ನಾಡು ನುಡಿಯ ಸಂದರ್ಭದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ೧೯೪೬ರಲ್ಲಿ ನಾನು ವಕೀಲಿ ವೃತ್ತಿಗೆ ಎನ್‌ರೋಲ್ ಆದ ದಿನ ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ನನ್ನನ್ನು ನಾಮನಿರ್ದೇಶನ ಮಾಡಿದ್ದರು. ಆಗಿನ್ನೂ ನಾನು ಕಸಾಪ ಸದಸ್ಯನೂ ಸಹ ಆಗಿರಲಿಲ್ಲ. ಆನಂತರ ಆಜೀವ ಸದಸ್ಯನನ್ನಾಗಿ ಮಾಡಿದರು. ಅವರಿಗೆ ಹಾಗೆ ಮಾಡಲು ನಮ್ಮ ಪತ್ರಿಕೆಯೇ ಕಾರಣವಾಗಿತ್ತು ಎನ್ನುತ್ತಾರೆ ಕೋ.ಚೆ.

ರೈತ ಪತ್ರಿಕೆಯ ಮತ್ತೊಂದು ಮುಖ್ಯ ಉದ್ದೇಶ ಕರ್ನಾಟಕದ ಏಕೀಕರಣ. ರೈತಪತ್ರಿಕೆಯ ಮೂಲಕ ಸಂವಿಧಾನ ಪಾಲನೆಗೆ ಬರುವಾಗ ಅಂದರೆ ೧೯೫೦ ಜನವರಿ ೨೬ರಂದು ಕರ್ನಾಟಕ ರಾಜ್ಯವಾಗಬೇಕೆಂದು ಒತ್ತಾಯ ಮಾಡಲಾಗಿತ್ತು. ಅದರ ನಡವಳಿಗೆ ಕರ್ನಾಟಕವನ್ನು ಪ್ರತಿನಿಧಿಸುವ ಮುಂಬೈ, ಮದ್ರಾಸ್ ಮತ್ತು ಮೈಸೂರು ಪ್ರಾಂತ್ಯದ ನಾಯಕರೆಲ್ಲರೂ ಸಹಿ ಮಾಡಿ ನಡವಳಿ ಪಾಲನೆಯಾಗದಿದ್ದರೆ ರಾಜೀನಾಮೆ ನೀಡಬೇಕೆಂದು ತೀರ್ಮಾನವೂ ಆಗಿತ್ತು. ಆದರೆ ಸಂವಿಧಾನ ಪಾಲನೆಗೆ ಬಂದ ದಿನ ಕರ್ನಾಟಕ ರಾಜ್ಯ ಎಂದು ನಾಮಕರಣವಾಗಲಿಲ್ಲ. ಆಗ ಬೀಚಿಯವರು ‘ಬೇವಿನಕಟ್ಟೆ ತಿಮ್ಮ’ ಅಂಕಣದಲ್ಲಿ ‘ಕರ್ನಾಟಕ ರಾಜ್ಯ ನಯ್’ ಎಂದು ಶೀರ್ಷಿಕೆ ಕೊಟ್ಟು ವಿಡಂಬನೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ರೈತ ಪತ್ರಿಕೆಯ ಮೂಲಕ ಪ್ರಾರಂಭಿಸಿದ ಕರ್ನಾಟಕ ಏಕೀಕರಣ ಚಳುವಳಿ ಎಷ್ಟು ತೀವ್ರವಾಗಿತ್ತೆಂದರೆ ಮುಂದೆ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ್ದವರಿಗೆ ಸನ್ಮಾನ ಮಾಡಬೇಕಾದಾಗ ಬಳ್ಳಾರಿಯಲ್ಲಿದ್ದು ಏಕೀಕರಣಕ್ಕಾಗಿ ದುಡಿದ ೧೦ ಜನರಿದ್ದರು. ಏಕೀಕರಣ ಚಳುವಳಿಗೆ ಹಳೆ ಮೈಸೂರು ಪ್ರಾಂತ್ಯದ ವಿರೋಧವಿದ್ದರೂ, ರಾಜಕೀಯ ವಲಯದಿಂದ ಕೆಂಗಲ್ ಹನುಮಂತಯ್ಯನAತವರ ಮತ್ತು ಸಾಹಿತ್ಯ ವಲಯದಿಂದ ಕುವೆಂಪು ಅಂತಹವರ ಬೆಂಬಲ ಬಹಳ ದೃಢವಾಗಿತ್ತು.

ಕರ್ನಾಟಕ ಏಕೀಕರಣ ಚಳುವಳಿಗೆ ರೈತ ಪತ್ರಿಕೆ ‘ಕ್ಯಾಂಪೇನ್ ಪೇಪರ್’ ಆಗಿತ್ತು ಎನ್ನುತ್ತಾರೆ ಕೋಚೆಯವರು. ಬಾಳಾಸಾಹೇಬ ಠಾಕ್ರೆ ಅವರು ತಮ್ಮ ಮುಂಬೈ ಮಾದರಿಯ ಕೆಲಸಗಳಿಗೆ ‘ಸಾಮ್ನಾ’ ಪತ್ರಿಕೆಯನ್ನು ಬಳಸಿಕೊಂಡಂತೆ, ಕೋಚೆಯವರು ಕರ್ನಾಟಕ ಏಕೀಕರಣ ಚಳುವಳಿಯ ಕೆಲಸಗಳಿಗಾಗಿ ರೈತ ಪತ್ರಿಕೆಯನ್ನು ‘ಮುಖವಾಣಿ’ಯಂತೆ ಬಳಸಿಕೊಂಡರು. ‘ಜಾಣರಾಗುವ ಜೊತೆಗೆ ಒಳ್ಳೆಯವರಾಗಬೇಕು. ಜಾಣರಾಗದಿದ್ದರೂ ಒಳ್ಳೆಯವರಂತೂ ಆಗಲೇಬೇಕು’ ಎನ್ನುವುದು ಅವರ ಪತ್ರಿಕೆಯ ದಿನಗಳ ಉದ್ದೇಶವಾಗಿತ್ತಂತೆ. ಅದನ್ನವರು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರಲ್ಲದೆ, ತಮಗೆದುರಾದ ನವಪೀಳಿಗೆಗೂ ಇದನ್ನೇ ಅವರು ಧಾರೆ ಎರೆದರು. ಕರ್ನಾಟಕ ಏಕೀಕರಣವಾಗಿ ಉದಯಿಸಲು ರೈತಪತ್ರಿಕೆಯ ಹಸಿರು ದೀಪಗಳ ಬೆಳಕು ಬಹುಮುಖ್ಯವಾದುದು. ಕರ್ನಾಟಕ ಏಕೀಕರಣ ಚರಿತ್ರೆಯಲ್ಲಿ ರೈತ ಪತ್ರಿಕೆಯ ಪುಟಗಳ ನೆನಪು ಸದಾ ತಾಜಾ ಆಗಿಯೇ ಉಳಿದಿವೆ.

ಮೈಸೂರು ಕರ್ನಾಟಕ, ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳಲ್ಲಿ ನಡೆದ ಏಕೀಕರಣದ ಪೂರ್ಣ ಚಿತ್ರಣವನ್ನು ರೈತಪತ್ರಿಕೆ ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಏಕೀಕರಣದ ಪರ -ವಿರೋಧಿಗಳ ಸ್ಪಷ್ಟ ಚಿತ್ರಣ ಕೋ.ಚೆ.ಯವರಿಗಿತ್ತು. ಹಾಗಾಗಿ ರೈತಪತ್ರಿಕೆ ಆ ವಿಷಯದಲ್ಲಿ ಸ್ಪಷ್ಟ ಅಂಕಣಗಳನ್ನು ಬರೆಸಲು ಸಾಧ್ಯವಾಯಿತು ಎನ್ನುತ್ತಾರೆ ಕೋ.ಚೆ. ಹೈದರಾಬಾದ ಕರ್ನಾಟಕದಲ್ಲಿ ಸ್ವಾತಂತ್ರö್ಯ ಚಳುವಳಿಯ ಮುಂಚೂಣಿ ನಾಯಕರೆನಿಸಿದ್ದ ‘ಸ್ವಾಮಿ ರಮಾನಂದ ತೀರ್ಥ’ರನ್ನು ಸಾಂದರ್ಭಿಕವಾಗಿ ನೆನಪಿಸಿಕೊಂಡು, ಅವರನ್ನು “ಆರ್‌ಎಸ್‌ಎಸ್‌ನ ಪ್ರಚ್ಛನ್ನ” ಎಂದು ಕರೆದರು. ಆಲೂರು, ಅದವಾನಿ ಮತ್ತು ರಾಯಲಸೀಮೆಗಳ ಸಲುವಾಗಿ ಪೂರ್ಣ ಕರ್ನಾಟಕ ಏಕೀಕರಣ ಸಂಘವನ್ನು ಹುಟ್ಟುಹಾಕಿ ಬಳ್ಳಾರಿ, ಅನಂತಪುರ, ಕರ್ನೂಲ್‌ಗಳಲ್ಲಿ ಹೋರಾಟಗಳನ್ನು ಮಾಡಿದರು. ಈ ಪರಿಣಾಮವಾಗಿ ೧೯೫೩ರಲ್ಲಿ ಅವರ ಮನೆಗೆ ಆಂಧ್ರಪರವಾದಿಗಳು ಬೆಂಕಿ ಹಚ್ಚಿದರು. ಕುವೆಂಪು ಅವರು ‘ಅಪತ್ರಿಕಾ ವಾರ್ತೆ’ ಎಂಬ ತಲೆಬರಹದಡಿ ಒಂದು ಲೇಖನವನ್ನು ಬರೆದು ರೈತಪತ್ರಿಕೆಯ ಈ ಕೆಲಸಗಳಿಗೆ ಬೆಂಬಲಿಸಿದರು.

ಅನುಬಂಧ-೧

ರೈತ ಸೇವಾ ಟ್ರಸ್ಟಿಗಾಗಿ ನಿಧಿ ಸಹಾಯ ಮಾಡಿದವರ ಗ್ರೇಡ್-೧ ಪಟ್ಟಿ:

೧. ಶ್ರೀ ಹೆಚ್. ಪಂಪನಗೌಡ್ರು, ಅಡ್ವೋಕೇಟ್ ಬಳ್ಳಾರಿ, ದಿ:೧೯.೦೨.೧೯೪೯, ರೂ.೧೦೦/-

೨. ಶ್ರೀ ಬೆಲ್ಲದ ಚೆನ್ನಪ್ಪ, ಹೊಸಪೇಟೆ, ದಿ:೧೦.೦.೧೯೪೯, ರೂ.೧೦೦/-

೩. ಶ್ರೀ ಎಂ.ಎಸ್. ಪಟ್ಟಣ, ವ್ಯಾಪಾರಿಗಳು, ಬಳ್ಳಾರಿ, ದಿ:೨೦.೦೨.೧೯೪೯, ರೂ.೧೦೦/-

೪. ಶ್ರೀ ಚಕ್ಕಿ ಚನ್ನಪ್ಪ, ಹಿರೇಕುರುವತ್ತಿ, ದಿ:೧೮.೦೩.೧೯೪೯, ರೂ.೧೦೦/-

೫. ಶ್ರೀ ಕೆ. ಚೆನ್ನಬಸವನಗೌಡ್ರು, ಬಾಚಿಗೊಂಡನಹಳ್ಳಿ, ದಿ:೨೭.೦೪.೧೯೪೯, ರೂ.೧೦೦/-

೬. ಶ್ರೀ ಜೆ. ಜಂಬಣ್ಣ, ದಿ:೧೭.೦೫.೧೯೪೯, ರೂ.೧೦೦/-

೭. ಶ್ರೀಮತಿ ಜ್ಯೋತಿ ಶಿವಲಿಂಗಪ್ಪ, ದಿ:೧೭.೦೯.೧೯೪೯, ರೂ.೧೦೦/-

೮. ಶ್ರೀ ಇಗೇರಿ ದೊಡ್ಡಪ್ಪ, ದಿ:೨೪.೧೧.೧೯೪೯, ರೂ.೧೦೦/-

೯. ಶ್ರೀ ಧೂಳಪ್ಪ, ದಿ:೨೪.೧೧.೧೯೪೯, ರೂ.೧೦೦/-

೧೦. ಶ್ರೀ ತೋರಿಶೆಟ್ಟಿ ಸಂಗಪ್ಪ, ದಿ:೨೪.೧೧.೧೯೪೯, ರೂ.೧೦೦/-

೧೧. ಶ್ರೀ ಡಿ.ಸಿ. ಶೆಟ್ರು, ಹಿರೇಹಾಳ, ದಿ:೨೮.೧೧.೧೯೪೯, ರೂ.೧೦೦/-

೧೨. ಶ್ರೀ ಜಾ. ಸದ್ಯೋಜಾತ ಕೊಟ್ಟೂರು, ದಿ:೧೦.೧೨.೧೯೪೯, ರೂ.೧೦೦/-

೧೩. ಶ್ರೀ ಎಂ. ಮರುಳಸಿದ್ಧನಗೌಡ, ದಿ:೧೦.೧೨.೧೯೪೯, ರೂ.೧೦೦/-

೧೪. ಶ್ರೀ ಅಂಬೂರು ಬಸಲಿಂಗಪ್ಪ ಬಿ. ಕೊಟ್ರಪ್ಪ, ದಿ:೧೦.೧೨.೧೯೪೯, ರೂ.೧೦೦/-

೧೫. ಶ್ರೀ ಟಿ.ಎಸ್. ಗುರುಲಿಂಗಪ್ಪ, ದಿ:೧೧.೧೨.೧೯೪೯, ರೂ.೧೦೦/-

೧೬. ಶ್ರೀಮತಿ ಯಾತಗಿರಿ ಸಿದ್ಧಲಿಂಗಮ್ಮ, ದಿ:೧೧.೧೨.೧೯೪೯, ರೂ.೧೦೦/-

೧೭. ಶ್ರೀ ಕೆ. ರಾಮಚಂದ್ರ ಗುಪ್ತ, ದಿ:೧೧.೧೨.೧೯೪೯, ರೂ.೧೦೦/-

೧೮. ಶ್ರೀ ಸೊಪ್ಪಿನ ಚೆನ್ನಪ್ಪ, ದಿ:೧೧.೧೨.೧೯೪೯, ರೂ.೧೦೦/-

೧೯. ಶ್ರೀ ಮುದೇನೂರು ಸಂಗಣ್ಣ, ದಿ:೧೩.೧೨.೧೯೪೯, ರೂ.೧೦೦/-

೨೦. ಶ್ರೀ ಪಾಟೀಲ ಬಸವನಗೌಡ, ದಿ:೧೩.೧೨.೧೯೪೯, ರೂ.೧೦೦/-

೨೧. ಶ್ರೀ ತಿ. ಗಾಂಧಿಲಿAಗನಗೌಡ, ದಿ:೧೯.೧೨.೧೯೪೯, ರೂ.೧೦೦/-

೨೨. ಶ್ರೀ ಬಿ. ರಂಗನಗೌಡ, ದಿ:೧೯.೧೨.೧೯೪೯, ರೂ.೧೦೦/-

೨೩. ಶ್ರೀ ಆನಿಶೆಟ್ರು ಬಂಡೆಪ್ಪ ಹೊಳಲು, ದಿ:೨೪.೧೨.೧೯೪೯, ರೂ.೧೦೦/-

೨೪. ಶ್ರೀ ಮುರುಕಾಣಿ ಜೆನಿಫರ್, ದಿ:೨೯.೧೨.೧೯೪೯, ರೂ.೧೦೦/-

೨೫. ರೈತ ಸಂಘ ಮುದೇನೂರು, ದಿ:೨೯.೧೨.೧೯೪೯, ರೂ.೧೦೦/-

೨೬. ಶ್ರೀ ಕರ್ನೂಲು ತೇಜಪ್ಪ, ದಿ:೨೯.೧೨.೧೯೪೯, ರೂ.೧೦೦/-

೨೭. ರೈತ ಸಂಘ ಕತ್ತೆಚೆನ್ನೂರು, ದಿ:೨೯.೧೨.೧೯೪೯, ರೂ.೧೦೦/-

೨೮. ಶ್ರೀ ಝೋಟೆಪ್ಪ ಹಲಗಿ, ದಿ:೨೯.೧೨.೧೯೪೯, ರೂ.೧೦೦/-

೨೯. ಶ್ರೀ ಸಾ. ಅನ್ನದಾನೀಶ್ವರ, ದಿ:೩೦.೧೨.೧೯೪೯, ರೂ.೧೦೦/-

೩೦. ಶ್ರೀ ಗೊರ್ಲಿ ಶರಣಪ್ಪ, ದಿ:೧೯.೦೧.೧೯೫೦, ರೂ.೧೦೦/-

೩೧. ಶ್ರೀ ಎಂ.ಹೆಚ್.ಎA. ಗುರುಶಂಕರಯ್ಯ, ದಿ:೨೯.೦೧.೧೯೫೦, ರೂ.೧೦೦/-

೩೨. ಶ್ರೀ ಯಜಾರಿ ಶಿರಸಪ್ಪ ನೆಲ್ಕುದ್ರಿ ಕೊಟ್ರಜ್ಜ, ದಿ:೨೯.೦೧.೧೯೫೦, ರೂ.೧೦೦/-

೩೩. ಶ್ರೀ ಆಲಬೂರು ಪತ್ರಪ್ಪ, ದಿ:೩೦.೦೧.೧೯೫೦, ರೂ.೧೦೦/- (ಶ್ರೀ ನಂಜಪ್ಪನವರ ವಾಗ್ದಾನ)

೩೪. ಅಧ್ಯಕ್ಷರು, ರೈತಸಂಘ, ಹಿರೆಬನ್ನಿಮಟ್ಟಿ, ದಿ:೦೯.೦೩.೧೯೫೦, ರೂ.೧೦೦/-

೩೫. ಶ್ರೀ ಕೆ. ಚೆನ್ನಬಸಪ್ಪ, ರಾಯದುರ್ಗ, ದಿ:೨೯.೦೩.೧೯೫೦, ರೂ.೧೦೦/-

೩೬. ಶ್ರೀ ಸೀತಾರಾಮರೆಡ್ಡಿ ಗೋಟೂರು, ದಿ:೨೯.೦೪.೧೯೫೦, ರೂ.೧೦೦/-

೩೭. ಶ್ರೀಮತಿ ಬೆಳಗಾವಿ ಪರಳಿಕಮ್ಮ, ಹೊಳಲು, ದಿ:೦೮.೦೫.೧೯೫೦, ರೂ.೧೦೦/-

೩೮. ಶ್ರೀ ರೈತಸಂಘ, ನಾರಾಯಣದೇ, ದಿ:೧೨.೦೮.೧೯೫೦, ರೂ.೧೦೧/-

೩೯. ಶ್ರೀ ಎಂ.ಎA.ಪಿ. ಮರಶಾಮಯ್ಯಮರದ ಪಾಟೀಲ, ದಿ:೧೨.೦೮.೧೯೫೦, ರೂ.೧೦೦/-

೪೦. ಶ್ರೀ ಕೆ. ತಿಪ್ಪಣ್ಣ ಹೂಡೇಂ, ದಿ:೧೨.೦೮.೧೯೫೦, ರೂ.೧೦೦/-

೪೧. ಶ್ರೀ ಜೈನರ ವಸುಪಾಲಪ್ಪ ಹಡಗಲಿ, ದಿ:೦೪.೦೯.೧೯೫೦, ರೂ.೧೦೦/-

೪೨. ಶ್ರೀ ಎಂ. ವೆಂಕೋಬಶೆಟ್ಟಿ, ಹೊಸಪೇಟೆ, ದಿ:೦೯.೦೯.೧೯೫೦, ರೂ.೧೦೦/-

೪೩. ಶ್ರೀ ಧ. ಬಸವರೆಡ್ಡಿ, ಕಂಪ್ಲಿ, ದಿ:೦೧.೧೨.೧೯೫೦, ರೂ.೧೦೦/-

೪೪. ಶ್ರೀ ಪಿ. ನಾಗಲಿಂಗಯ್ಯ, ಹೊಸಪೇಟೆ, ದಿ:೦೧.೧೨.೧೯೫೦, ರೂ.೫೦/-

೪೫. ಶ್ರೀ ಗುಂಜಳದ ಭೋಜಪ್ಪ, ಮಾಗಳ, ದಿ:೦೧.೧೨.೧೯೫೦, ರೂ.೧೦೦/-

೪೬. ಶ್ರೀ ಕೆ.ಕೆ.ಬಿ.ಎಂ. ಪಾಟೀಲ ಮಲ್ಲಪ್ಪಯ್ಯ, ದಿ:೦೧.೦೬.೧೯೫೧, ರೂ.೧೦೦/-

೪೭. ಶ್ರೀ ನಾಡಗೌಡ್ರ ಮರಿಬಸವನಗೌಡ್ರು, ದಿ:೧೨.೦೭.೧೯೫೧, ರೂ.೧೦೦/-

೪೮. ಶ್ರೀ ಆರ್.ಎಸ್. ಸತ್ಯನಾರಾಯಣ, ಕೊಟ್ಟೂರು, ದಿ:೨೩.೦೭.೧೯೫೧, ರೂ.೧೦೦/-

೪೯. ಶ್ರೀ ಅಟಮಾಳಿಗಿ ತಿರುಕಯ್ಯ, ಕೊಟ್ಟೂರು, ದಿ:೨೩.೦೭.೧೯೫೧, ರೂ.೧೦೦/-

೫೦. ಶ್ರೀ ವೈ. ನಾಗೇಶ ಶಾಸ್ತಿç, ಬಳ್ಳಾರಿ, ದಿ:೨೩.೦೭.೧೯೫೧, ರೂ.೧೦೦/-

೫೧. ಶ್ರೀ ಸಿಂದಗಿ ಸಿದ್ಧಬಸಪ್ಪ, ಬಳ್ಳಾರಿ ದಿ:೨೩.೦೭.೧೯೫೧, ರೂ.೧೦೦/-

೫೨. ಶ್ರೀ ಮನೂದಿ ವೆಂಕಯ್ಯ, ದಿ:೨೩.೦೭.೧೯೫೧, ರೂ.೧೦೦/-

ಹೀಗೆ ಒಟ್ಟು ರೂ.೫೧೫೧/- ಜಮೆ ಆಗಿದ್ದು, ಅದರಲ್ಲಿ ರೂ.೩೨೮೫/-ಗಳು ಖರ್ಚಾಗಿದ್ದು, ರೂ.೧೮೬೬/-ಗಳುಉಳಿಕೆ ಎಂದು ಕೋ.ಚೆ.ಯವರು ತಮ್ಮ ‘ರೈತ ಸೇವಾ ಟ್ರಸ್ಟ್’ ಹೆಸರಿನ ಡೈರಿಯಲ್ಲಿ ನಮೂದಿಸಿರುತ್ತಾರೆ.

ರೈತ ಸೇವಾ ಟ್ರಸ್ಟಿಗಾಗಿ ನಿಧಿ ಸಹಾಯ ಮಾಡಿದವರ ಗ್ರೇಡ್-೨ ಪಟ್ಟಿ:

೧. ಶ್ರೀ ಜಿ.ಪಿ. ಬಸಪ್ಪ ಕುಡುತಿನಿ, ದಿ:೨೩.೧೧.೧೯೪೯, ರೂ.೫೦/-

೨. ಶ್ರೀಮತಿ ನಾ ಸುಮಿತ್ರಾ, ದಿ:೧೧.೧೨.೧೯೪೯, ರೂ.೫೦/-

೩. ರೈತ ಸಂಘ ಹಿರೆಮಲ್ಲನಕೆರೆ, ದಿ:೧೮.೧೨.೧೯೪೯, ರೂ.೫೦/-

೪. ಶ್ರೀ ಸೇತೂರಾಮಾಚಾರಿ, ದಿ:೨೯.೦೧.೧೯೫೦, ರೂ.೫೦/-

೫. ಶ್ರೀ ಜಿ.ಎಂ. ನೀಲಕಂಠಶಾಸ್ತಿç, ದಿ:೨೯.೦೧.೧೯೫೦, ರೂ.೫೦/-

೬. ಶ್ರೀ ಕುರುಬರ ಕರಿಯಪ್ಪ ವೀರಾಪುರ, ದಿ:೦೧.೧೨.೧೯೫೦, ರೂ.೫೦/-

೭. ಶ್ರೀ ಶೇತೂರಾಮಾಚಾರಿಯವರ ಪರಿಚಯದವರು, ದಿ:೨೯.೦೧.೧೯೫೦, ರೂ.೫೦/-

೮. ಶ್ರೀ ಚೆನ್ನೂರು ಶಿರಸಪ್ಪ, ದಿ:೨೯.೦೧.೧೯೫೦, ರೂ.೨೫/-

೯. ಶ್ರೀ ಬಂಕಾಪುರದ ನಾಗಭೂಷಣ ಬಿ.ಇ., ದಿ:೨೯.೦೧.೧೯೫೦, ರೂ.೨೫/-

ಹೀಗೆ ಒಟ್ಟು ರೂ.೩೫೦/- ಜಮೆ ಆಗಿದ್ದು, ಅದರಲ್ಲಿ ರೂ.೯೫/-ಗಳು ಖರ್ಚಾದ ಬಗ್ಗೆ ಕೋ.ಚೆ.ಯವರು ತಮ್ಮ ‘ರೈತ ಸೇವಾ ಟ್ರಸ್ಟ್’ ಹೆಸರಿನ ಡೈರಿಯಲ್ಲಿ ನಮೂದಿಸಿರುತ್ತಾರೆ.

ಅನುಬಂಧ-೨

ಮುದೇನೂರು ಸಂಗಣ್ಣನಿಂದ

ಚಿಗಟೇರಿ, ೨೧.೭.೫೦

ಆತ್ಮೀಯ ಚೆನ್ನಬಸಣ್ಣ,

ನಮಸ್ಕಾರಗಳು. ನೀವು ಈ ಮೊದಲು ಅಭಿಮಾನವಿರಿಸಿ ಬರೆದ ಪತ್ರಗಳು ಕೈಸೇರಿವೆ. ನಿಮ್ಮ ಪ್ರೀತಿಗಾಗಿ ಕೃತಜ್ಞನಿದ್ದೇನೆ.

ನಿಮ್ಮ ಕೇಳಿಕೆಯ ಪ್ರಕಾರ ಕವಿತೆಯೊಂದನ್ನು ಕಳಿಸಿದ್ದೇನೆ.

ಶ್ರೀ ಬಸವನಗೌಡರನ್ನು ಸದ್ಯ ಕಳಿಸಬೇಡಿ. ಇಲ್ಲಿ ಇನ್ನೂ ಮಳೆಯೇ ಬಂದಿಲ್ಲ. ಹುಟ್ಟಿದ ಪೈರು ಬಾಡುತ್ತಿವೆ. ಒಮ್ಮೆ ಮಳೆ ಬರಲಿ. ಜನರಿಗೆ ಖುಷಿ ಬರಲಿ. ಆಗ ಆದಷ್ಟು ಜಾಸ್ತಿ ಜನರನ್ನು ಚಂದಾದಾರರನ್ನಾಗಿ ಮಾಡಿಕೊಡುತ್ತೇನೆ.

ಇನ್ನು ನಾನು ಕೊಡಬೇಕೆಂದಿರುವ ಹಣದ ಬಗ್ಗೆ ಆಗಸ್ಟ್ ಮೂರನೆಯ ವಾರದಲ್ಲಿ ನನಗೆ ಬಳ್ಳಾರಿಗೆ ಬರುವ ಅಗತ್ಯದ ಕೆಲಸವಿದೆ. ಆಗ ಕೊಡುತ್ತೇನೆ.

ಮತ್ತೆಲ್ಲ ಕ್ಷೇಮ. ಎಂದಿನಂತೆ ಪ್ರೀತಿ ಇರಲಿ.

ಇಂತು ನಿಮ್ಮ ವಿಶ್ವಾಸಿ,

ಸಂಗಣ್ಣ.

ಕೋ.ಚ ಅವರ ಚಿಂತನೆಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂಬುದು ನಮ್ಮ ಹಾರೈಕೆ.

-ಡಾ.ವೀರಶೆಟ್ಟಿ ಬಿ.ಗಾರಂಪಳ್ಳಿ

ಉಪನಿರ್ದೇಶಕರು, ವಿಭಾಗೀಯ ಪತ್ರಾಗಾರ ಮತ್ತು ಗ್ಯಾಸೆಟಿಯರ್‌ ಇಲಾಖೆ,ಕಲಬುರಗಿ