200 ಕ್ಕೂ ಹೆಚ್ಚು ಕಲಾವಿದರ ಸಮಾಗಮ : ಸಾಂಸ್ಕೃತಿಕ ರಸ ವೈಭವ - ಡಾ. ಉಮೇಶ್ ಜಾಧವ್ ಅಭಿನಂದನೆ

200 ಕ್ಕೂ ಹೆಚ್ಚು ಕಲಾವಿದರ ಸಮಾಗಮ : ಸಾಂಸ್ಕೃತಿಕ ರಸ ವೈಭವ - ಡಾ. ಉಮೇಶ್ ಜಾಧವ್ ಅಭಿನಂದನೆ

ರಾಷ್ಟ್ರ ರಾಜಧಾನಿಯಲ್ಲಿ ಭವ್ಯ ಬಂಜಾರ ಸಂಸ್ಕೃತಿ ಅನಾವರಣ

200 ಕ್ಕೂ ಹೆಚ್ಚು ಕಲಾವಿದರ ಸಮಾಗಮ : ಸಾಂಸ್ಕೃತಿಕ ರಸ ವೈಭವ - ಡಾ. ಉಮೇಶ್ ಜಾಧವ್ ಅಭಿನಂದನೆ

ನವದೆಹಲಿ : ದೇಶದಾದ್ಯಂತ 26ಕ್ಕೂ ಹೆಚ್ಚು ರಾಜ್ಯಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಬಂಜಾರ ಜನರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಮಾಗಮಗೊಂಡು ಸಂತ ಸೇವಾಲಾಲರ ಜಯಂತಿ ಉತ್ಸವದಂಗವಾಗಿ ವಿಶಿಷ್ಟ ಸಾಂಸ್ಕೃತಿಕ ರಸ ವೈಭವ ಹಾಗೂ ಲಂಬಾಣಿ ಸಂಸ್ಕೃತಿ ಅನಾವರಣಗೊಳಿಸಿದ ಅಪೂರ್ವ ಕಾರ್ಯಕ್ರಮ ನೆರವೇರಿತು.ದೇಶಾದ್ಯಂತದ ಬಂಜಾರ ಜನರು ಹಾಗೂ ಅಭಿಮಾನಿಗಳು ದೆಹಲಿಗೆ ಆಗಮಿಸಿ ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ದಕ್ಕೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರು ಮತ್ತು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ. 

    ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಫೆ. 28 ರಂದು ಬಂಜಾರ ಸಮುದಾಯದ ವಾಶಿಂ ಜಿಲ್ಲೆಯ ಪೌರಘಡದ ಪೌರದೇವಿ ದೇಗುಲದ ಗುರುಗಳಾದ ಶ್ರೀ ಶೇಖರ್ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಮಾಜಿ ಲೋಕಸಭಾ ಸದಸ್ಯರು ಮತ್ತು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ಅವರ ಸಾರಥ್ಯದಲ್ಲಿ ನಡೆದ 7ನೇ ಬಾರಿಯ ಜಯಂತ್ಯುತ್ಸವ ಹಾಗೂ ಶ್ರೀ ರೂಪ್ ಸಿಂಗ್ ಮಹಾರಾಜರ ಪುಣ್ಯ ಸ್ಮರಣೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಅನಾವರಣಗೊಂಡಿತು. 

     ಅಂಬೇಡ್ಕರ್ ಸಭಾಂಗಣವನ್ನು ಲಂಬಾಣಿ ಸಂಪ್ರಾಯದಂತೆ ಪಾರಂಪರಿಕ ಶೈಲಿಯಲ್ಲಿ ಅಲಂಕರಿಸಿ ಜನಮನ ಸೆಳೆಯಿತು. ಹೊರಾಂಗಣದ ವಿಶೇಷ ಮಂಟಪದಲ್ಲಿ ಮಾತಾ ಅಂಬಾ ಭವಾನಿಗೆ ಭೋಗ ಪೂಜೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸಮಾಜದ ಕುಲ ಗುರುಗಳು ಹಾಗೂ ಪೂಜ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಗೋರ್ ಬಂಜಾರ ಸಾಂಪ್ರದಾಯಿಕ ನೃತ್ಯ ಹಾಡು, ಭಜನೆ ನೃತ್ಯಗಳ ಮೂಲಕ ಸಾಂಸ್ಕೃತಿಕ ವೈಭವ ಜರಗಿತು. ಅಗ್ನಿಕುಂಡದ ಪೂಜೆಯನ್ನು ತುಪ್ಪ ಕ್ಷೀರಾಭಿಷೇಕ ತೆಂಗಿನಕಾಯಿ ಸಮರ್ಪಣೆಯೊಂದಿಗೆ ಗುರುಗಳು ನೆರವೇರಿಸಿ ತೀರ್ಥ ಪ್ರೋಕ್ಷಣೆ ಮಾಡಿ ನೆರೆದವರಿಗೆ ಸಿರಾ ಪ್ರಸಾದ ವಿತರಣೆ ಮಾಡಿ ಭೋಗ ಪೂಜೆಯನ್ನು ಕೈಗೊಂಡರು. ನಂತರ ಮುಖ್ಯ ವೇದಿಕೆಯಲ್ಲಿ ಲಂಬಾಣಿ ಗಾಯಕರಾದ ಚಿತ್ರದುರ್ಗದ ಸಾವಿತ್ರಿಬಾಯಿ ಹಾಗೂ ಸುಭಾಷ್ ರಾಥೋಡ್ ಕಮಲಾಪುರ ಗಾನ ಸುಧೆ ಹರಿಸಿ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ದೇಶದ ವಿವಿಧ ರಾಜ್ಯಗಳ ಕಲಾವಿದರು ಮಹಾರಾಜ್ ಸಂತ ಸೇವಾಲಾಲ್ ಹಾಗೂ ಪೌರಾದೇವಿಯ ಕುರಿತು ಭಕ್ತಿ ಹಾಡುಗಳನ್ನು ಹಾಡಿ ಇಡೀ ಸಭಾಂಗಣದಲ್ಲಿ ಭಕ್ತಿ ಗಾನಗಂಗೆ ಹರಿಸಿದರು.

 ಕಲಾವಿದರಿಗೆ ಮಹಾರಾಷ್ಟ್ರದ ಸಚಿವರಾದ ಸಂಜಯ್ ರಾಠೋಡ್, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಅಧ್ಯಕ್ಷರಾದ ಶಂಕರ್ ಪವಾರ್ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾದವ್ ತೆಲಂಗಾಣದ ಮಾಜಿ ವಿಧಾನ ಪರಿಷತ್ ಸದಸ್ಯ ರಾಮುಲು ನಾಯಕ್ ಮುಂತಾದ ಗಣ್ಯರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ಕಲ್ಯಾಣಕ್ಕಾಗಿ ದುಡಿದ ದೇಶದ ಹಲವು ಗಣ್ಯರಿಗೆ ಬಂಜಾರ ಸೇವಾ ಶಿರೋಮಣಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ರಾಜಧಾನಿಯಲ್ಲಿ ನಡೆದ 7ನೇ ವರ್ಷದ ಜಯಂತಿ ಉತ್ಸವವನ್ನು ಸಂತ ಸೇವಾಲಾಲ್ ಮಹಾರಾಜ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಡಾ ಉಮೇಶ್ ಜಾಧವ್ ಅವರ ಮುಂದಾಳುತನದಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಬಂಜಾರ ಸಮುದಾಯದ ಜನರು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡ ದೃಶ್ಯ ಜಾತ್ರೆಯ ಸಡಗರದಂತೆ ಕಂಡುಬಂತು.ದೇಶದ ಮೂಲೆ ಮೂಲೆಗಳ ಗ್ರಾಮ ತಾಂಡಾದ ಜನರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ಸಹಕಾರದಿಂದ ಎರಡು ವಿಶೇಷ ರೈಲು ಗಾಡಿಗಳಲ್ಲಿ ಆಗಮಿಸಿ ಸಂತಸಪಟ್ಟರು ಎಂದು ಡಾ.ಉಮೇಶ್ ಜಾಧವ್ ಹೇಳಿದರು.ಕಾರ್ಯಕ್ರಮದಲ್ಲಿ ಕಾಶಿನಾಥ್ ಬಿರಾದಾರ್, ಅರುಣ್ ಕುಮಾರ್, ಪವಾರ್ ವಿನೋದ್ ಚೌವ್ಹಾ ಣ್, ಉಮೇಶ್ ಚವ್ಹಾಣ್, ರಾಮ್ ಭೀಮ್ ಸಿಂಗ್ ರಾಥೋಡ್ ಮುಂಬಯಿ, ರೋಷನ್ ಚೌವ್ಹಾಣ್, ಲಕ್ಷ್ಮಣ್ ಚವ್ಹಾಣ್,ಚಂದ್ರಕಾಂತ ರೆಡ್ಡಿ ಯಲಕಪಲ್ಲಿ, ರಾಮಕೃಷ್ಣ,  ರಾಧಾಕೃಷ್ಣ ಕೋಡಿ, ತರುಣ್ ಬೆಂಗಳೂರು ಮತ್ತಿತರು ಉಪಸ್ಥಿತರಿದ್ದರು.