ಕಾಯಕವೇ ಕೈಲಾಸ: ಸಂತೋಷ–ಕಲ್ಪನಾ ದಂಪತಿಗಳ ಆದರ್ಶ ಬದುಕು
ಕಾಯಕವೇ ಕೈಲಾಸ: ಸಂತೋಷ–ಕಲ್ಪನಾ ದಂಪತಿಗಳ ಆದರ್ಶ ಬದುಕು
ಆದರ್ಶ ದಾಂಪತ್ಯದ ಕಾಯಕ ಜೀವಿಗಳು ಶ್ರೀಮತಿ ಕಲ್ಪನಾ ಸಂತೋಷಕುಮಾರ ಪಾಟೀಲ
ದಾಂಪತ್ಯ ಪರಿಕಲ್ಪನೆ ನಾಗರಿಕ ಸಮಾಜದ ಬೆಳವಣಿಗೆಯೊಂದಿಗೆ ರೂಪುಗೊಂಡ ಮಹತ್ವದ ಸಂಸ್ಥೆಯಾಗಿದೆ. ಮಾನವನು ಪ್ರಾರಂಭದಲ್ಲಿ ಅರಣ್ಯ ಜೀವನ ನಡೆಸಿದರೂ, ತಿಳುವಳಿಕೆ ಬೆಳೆಯುತ್ತಿದ್ದಂತೆ ಕುಟುಂಬ, ವಿವಾಹ ಮತ್ತು ದಾಂಪತ್ಯ ವ್ಯವಸ್ಥೆಗಳು ರೂಪುಗೊಂಡವು. ಸಂತಾನೋತ್ಪತ್ತಿ ಮತ್ತು ಸಮಾಜದ ಸ್ಥಿರತೆಗೆ ಮದುವೆ ಎಂಬ ಪವಿತ್ರ ಬಾಂಧವ್ಯ ಉದಯವಾಯಿತು. ಶ್ವೇತಕೇತುವಿನ ಕಾಲದಿಂದ ಮದುವೆ ಸಂಸ್ಥೆ ಪ್ರಾರಂಭವಾಯಿತೆಂದು ಪುರಾಣಗಳು ತಿಳಿಸುತ್ತವೆ.
ಹಿಂದೂ, ಜೈನ, ಬೌದ್ಧ, ಶೈವ, ವೀರಶೈವ, ಸಿಖ್, ಇಸ್ಲಾಂ, ಕ್ರೈಸ್ತ ಮೊದಲಾದ ವಿವಿಧ ಧರ್ಮಗಳಲ್ಲಿ ವಿವಾಹ ಪದ್ಧತಿಗಳು ಇದ್ದು, ಶಿವ–ಪಾರ್ವತಿಯಂತಹ ದೈವಿಕ ದಾಂಪತ್ಯಗಳು ಆದರ್ಶ ಮಾದರಿಗಳಾಗಿವೆ. ಗಂಧರ್ವ ವಿವಾಹ, ಪ್ರೇಮ ವಿವಾಹ, ಸಾಂಪ್ರದಾಯಿಕ ವಿವಾಹ, ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮುಂತಾದ ವಿವಿಧ ರೂಪಗಳಲ್ಲಿ ವಿವಾಹ ಸಂಪ್ರದಾಯಗಳು ಬೆಳವಣಿಗೆಗೊಂಡಿವೆ. ಕನ್ನಡ ಸಾಹಿತ್ಯದಲ್ಲಿಯೂ ಹಳಗನ್ನಡದಿಂದ ಹೊಸಗನ್ನಡದವರೆಗೆ ಶರಣರ ವಚನಗಳು, ದಾಸರ ಕೀರ್ತನೆಗಳು, ತತ್ವಪದಗಳು ದಾಂಪತ್ಯದ ಮೌಲ್ಯಗಳನ್ನು ಸಾರಿವೆ.
ಇಂತಹ ಆದರ್ಶ ದಾಂಪತ್ಯದ ಪ್ರತಿರೂಪವಾಗಿ ಶ್ರೀ ಸಂತೋಷಕುಮಾರ ಪಾಟೀಲ ಮತ್ತು ಶ್ರೀಮತಿ ಕಲ್ಪನಾ ಸಂತೋಷಕುಮಾರ ಪಾಟೀಲ ದಂಪತಿಗಳು ಕಾಣಿಸಿಕೊಳ್ಳುತ್ತಾರೆ.
ಜೀವನ ಪರಿಚಯ ಶ್ರೀ ಸಂತೋಷಕುಮಾರ ಪಾಟೀಲ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದ ಕೃಷಿಕ ಕುಟುಂಬದಲ್ಲಿ ದಿನಾಂಕ 24-07-1981 ರಂದು ಜನಿಸಿದರು. ತಂದೆ ಶ್ರೀ ಮಹಾದೇವಪ್ಪ ಹಾಗೂ ತಾಯಿ ಶ್ರೀಮತಿ ರತ್ನಮ್ಮ ಅವರ ಪುತ್ರರಾಗಿದ್ದಾರೆ. ಶಿಕ್ಷಣವಾಗಿ ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದರೂ, ವ್ಯಕ್ತಿತ್ವದಲ್ಲಿ ಅಪಾರ ಪ್ರಾಮಾಣಿಕತೆ ಮತ್ತು ದೃಢನಿಶ್ಚಯ ಹೊಂದಿದವರು.
ಮೂವತ್ತು ವರ್ಷಗಳ ಹಿಂದೆ ಕಲಬುರಗಿ ನಗರಕ್ಕೆ ಬಂದು, ಎಂ.ಆರ್. ಮೆಡಿಕಲ್ ಕಾಲೇಜು ಎದುರು ವಾಸ್ತವ್ಯ ಹೂಡಿ ಜೀವನ ಆರಂಭಿಸಿದರು. ಅವಿಭಕ್ತ ಕುಟುಂಬದಲ್ಲಿ ಹದಿಮೂರು ಮಂದಿ ಸೇರಿ ಬದುಕಿದ ಅನುಭವ ಇವರಿಗೆ ಒಗ್ಗಟ್ಟಿನ ಮೌಲ್ಯ ಕಲಿಸಿತು. ಮನೆ ಗೆದ್ದು, ಮಾರ್ಗ ಗೆದ್ದವರು ಎಂಬ ಹೆಗ್ಗಳಿಕೆ ಪಡೆದರು.
“ಕಾಯಕವೇ ಕೈಲಾಸ” ಎಂಬ ತತ್ವವನ್ನು ನಂಬಿದ ಅವರು, ಎರಡು ದಶಕಗಳ ಹಿಂದೆ “ಪಾಟೀಲ ಟೂರ್ಸ್ ಅಂಡ್ ಟ್ರಾವೆಲ್ಸ್” ಪ್ರಾರಂಭಿಸಿದರು. ಸಣ್ಣ ಮಟ್ಟಿನಲ್ಲಿ ಆರಂಭವಾದ ಈ ಉದ್ಯಮ ಇಂದು ಮೂವತ್ತೈದು ಕಾರು ಮತ್ತು ಲಾರಿಗಳೊಂದಿಗೆ ಬೆಳವಣಿಗೆ ಕಂಡಿದೆ. ಪೂನಾ, ಶಿರಡಿ, ಅಹಮದಾಬಾದ್, ಕೊಪ್ಪಳ, ಯಲಬುರ್ಗಾ ಮೊದಲಾದ ಕಡೆಗಳಲ್ಲಿ ಇವರ ವಾಹನಗಳು ಸಂಚರಿಸುತ್ತಿವೆ.
ಡ್ರೈವರ್‌ಗಳೊಂದಿಗೆ ನಂಬಿಕೆ, ಪ್ರೀತಿ ಮತ್ತು ವಿಶ್ವಾಸದ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರ ದೃಢ ನಂಬಿಕೆ, ಪರಿಶ್ರಮ ಮತ್ತು ಪ್ರಾಮಾಣಿಕತೆ ಇವರನ್ನು ಯಶಸ್ಸಿನ ದಾರಿಯಲ್ಲಿ ನಡೆಸಿವೆ.
ಕಳೆದ ಹದಿನೈದು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರು, ದಲಿತರು, ದುಡಿಯುವ ವರ್ಗದವರು, ದೇವಸ್ಥಾನ ಪೂಜಾರಿಗಳು, ಭಜನಾ ಮಂಡಳಿಯವರು ಮುಂತಾದವರನ್ನು ಉಚಿತವಾಗಿ ಕಾಶಿ, ರಾಮೇಶ್ವರಂ ಮುಂತಾದ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಪ್ರತಿ ವರ್ಷ 30 ರಿಂದ 50 ಜನರಿಗೆ ರೈಲು ಟಿಕೆಟ್, ಊಟ, ವಸತಿ ಎಲ್ಲವನ್ನೂ ತಮ್ಮ ಖರ್ಚಿನಲ್ಲಿ ವ್ಯವಸ್ಥೆ ಮಾಡುತ್ತಾರೆ. ಅಲ್ಲಲ್ಲಿ ದಾಸೋಹದ ಸೌಲಭ್ಯ ಇದ್ದರೆ ಬಳಸಿಕೊಂಡರೂ, ಇಲ್ಲದಿದ್ದರೆ ಲಾಡ್ಜ್ ವ್ಯವಸ್ಥೆ ಮಾಡುತ್ತಾರೆ. ಎಲ್ಲರೂ ಒಂದೇ ಮನಸ್ಸಿನಿಂದ, ಸಾಮರಸ್ಯದಿಂದ ಯಾತ್ರೆ ಅನುಭವಿಸುವಂತೆ ನೋಡಿಕೊಳ್ಳುತ್ತಾರೆ.
ಉತ್ತರಪ್ರದೇಶದ ಪ್ರಯಾಗರಾಜ ಕುಂಭಮೇಳಕ್ಕೂ ತಮ್ಮ ತಂಡವನ್ನು ಕರೆದುಕೊಂಡು ಹೋಗಿ ಸುಸೂತ್ರವಾಗಿ ಯಾತ್ರೆ ನೆರವೇರಿಸಿದ್ದಾರೆ. ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡಿರುವುದು ಅವರ ಸಂಘಟನಾ ಸಾಮರ್ಥ್ಯವನ್ನು ತೋರಿಸುತ್ತದೆ.
ಅಂಗವಿಕಲರು, ಬಡವರು, ಅಶಕ್ತರು – ಎಲ್ಲರಿಗೂ ಸಮಾನ ಅವಕಾಶ ನೀಡಿ, ದಾನ ಮಾಡುವ ಗುಣ ಇವರದು. “ಕೊಡುವುದು ಗೊತ್ತಾಗಬಾರದು” ಎಂಬ ಮನೋಭಾವ ಇವರ ವೈಶಿಷ್ಟ್ಯ.
ಶಿಕ್ಷಣದ ಮಹತ್ವ ಅರಿತ ಅವರು, ಕಲಬುರಗಿಯ ರಾಮನಗರದಲ್ಲಿ ಸ್ಥಾಪಿತವಾದ ಎಸ್.ಜಿ.ಎಸ್. (ಶ್ರೀ ಗುರು ಸಂಗಮೇಶ್ವರ ಶಾಲೆ) ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್.ಕೆ.ಜಿ.ಯಿಂದ ಹತ್ತನೇ ತರಗತಿವರೆಗೆ ಶಾಲೆ ಬೆಳೆಯಲು ಸಹಕಾರ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಮೌನವಾಗಿ ಶ್ರಮಿಸುತ್ತಿದ್ದಾರೆ.
ದಾಂಪತ್ಯ ಜೀವನ 19ನೇ ವಯಸ್ಸಿನಲ್ಲಿ ಆಳಂದ ತಾಲೂಕಿನ ನೆಲ್ಲೂರು ಗ್ರಾಮದ ಕಲ್ಪನಾ ಅವರೊಂದಿಗೆ ದಿನಾಂಕ 25-02-2000 ರಂದು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಷ್ಟ–ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಪರಸ್ಪರ ಗೌರವದಿಂದ ಸಂಸಾರ ನಡೆಸುತ್ತಿದ್ದಾರೆ.
ಇವರಿಗೆ ಒಬ್ಬ ಪುತ್ರ ಮಹಾದೇವ (ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ) ಹಾಗೂ ಪುತ್ರಿ ಸೌಮ್ಯ (ಬಿ.ಎಸ್‌ಸಿ., ಬಿ.ಎಡ್.) ಇದ್ದಾರೆ. ಸಂಸ್ಕಾರ, ಸರಳತೆ, ಪರೋಪಕಾರ ಮನೋಭಾವ ಇವರ ಕುಟುಂಬದ ಮೂಲಧನವಾಗಿದೆ.
ಶ್ರೀ ಸಂತೋಷಕುಮಾರ ಪಾಟೀಲ ಹಾಗೂ ಶ್ರೀಮತಿ ಕಲ್ಪನಾ ಪಾಟೀಲ ದಂಪತಿಗಳು ಕಾಯಕನಿಷ್ಠೆ, ದಾನಶೀಲತೆ, ಸರಳತೆ ಮತ್ತು ಸೌಹಾರ್ದತೆಯ ಜೀವಂತ ಉದಾಹರಣೆ. ತಮ್ಮ 26ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ದಂಪತಿಗಳು ಸಮಾಜಕ್ಕೆ ಆದರ್ಶ ದಾಂಪತ್ಯದ ಮಾದರಿಯಾಗಿದ್ದಾರೆ.
