ಯಡ್ರಾಮಿ ಪತ್ರಕರ್ತ ಪ್ರಶಾಂತ ಚವ್ಹಾಣ ಮೇಲೆ ಹಲ್ಲೆ : ಪತ್ರಿಕಾ ವಲಯದಲ್ಲಿ ಆಕ್ರೋಶ

ಯಡ್ರಾಮಿ ಪತ್ರಕರ್ತ ಪ್ರಶಾಂತ ಚವ್ಹಾಣ ಮೇಲೆ ಹಲ್ಲೆ  : ಪತ್ರಿಕಾ ವಲಯದಲ್ಲಿ ಆಕ್ರೋಶ

ಯಡ್ರಾಮಿ ಪತ್ರಕರ್ತ ಪ್ರಶಾಂತ ಚವ್ಹಾಣ ಮೇಲೆ ಹಲ್ಲೆ : ಪತ್ರಿಕಾ ವಲಯದಲ್ಲಿ ಆಕ್ರೋಶ

ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದ್ದ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮತ್ತು ಶಾಲಾ ಶಿಕ್ಷಕರ ಕುರಿತು ವಿಷಯವನ್ನು ಧೈರ್ಯವಾಗಿ ಬಹಿರಂಗಪಡಿಸಿದ್ದಕ್ಕಾಗಿ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರ ಪ್ರಶಾಂತ ಚವ್ಹಾಣ ಅವರ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಪತ್ರಿಕಾ ವಲಯದೊಳಗೆ ತೀವ್ರ ಆಕ್ರೋಶ ಉಂಟುಮಾಡಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ಪ್ರಶಾಂತ ಚವ್ಹಾಣ ಅವರ ಮನೆಗೆ ನುಗ್ಗಿ, ಅವರ ಹಾಗೂ ಕುಟುಂಬ ಸದಸ್ಯರ ಮೇಲೂ ಹಲ್ಲೆ ನಡೆಸಿರುವುದು ಜಿಲ್ಲೆಯಲ್ಲೇ ಚರ್ಚೆಯ ವಿಷಯವಾಗಿದೆ. ಗ್ರಾಮೀಣ ಪತ್ರಕರ್ತನೊಬ್ಬ ವೃತ್ತಿಧರ್ಮ ಪಾಲಿಸಿದಕ್ಕಾಗಿ ಹಲ್ಲೆಗೆ ಒಳಗಾಗಿರುವುದು ನಾಗರಿಕ ಸಮಾಜವನ್ನೇ ಕಳವಳಕ್ಕೊಳಪಡಿಸಿದೆ.

ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಪತ್ರಕರ್ತ ಡಾ. ಅವಿನಾಶ ಎಸ್. ದೇವನೂರ ಅವರು, ಇದು ಕೇವಲ ಪ್ರಶಾಂತ ಚವ್ಹಾಣವರ ಮೇಲಿನ ದಾಳಿ ಮಾತ್ರವಲ್ಲದೆ, ಪತ್ರಿಕೋದ್ಯಮದ ಮೇಲಿನ ನೇರ ದಾಳಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಸರ್ಕಾರಕ್ಕೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿರಿಸಿದ್ದಾರೆ:

* ೨೪ ಗಂಟೆಗಳೊಳಗೆ ಹಲ್ಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು

* ಪ್ರಶಾಂತ ಚವ್ಹಾಣ ಮತ್ತು ಅವರ ಕುಟುಂಬಕ್ಕೆ ತಕ್ಷಣ ಪೊಲೀಸ್ ಭದ್ರತೆ ಒದಗಿಸಬೇಕು

* ಗ್ರಾಮೀಣ ಪತ್ರಕರ್ತರ ಸುರಕ್ಷತೆಗೆ ರಾಜ್ಯದಾದ್ಯಂತ ವಿಶೇಷ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು

* ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ಪ್ರತಿಕ್ರಿಯೆ ನೀಡಬೇಕು

“ಪತ್ರಕರ್ತ ಸೋತರೆ ಸತ್ಯ ಸೋಲುತ್ತದೆ, ಸತ್ಯ ಸೋತರೆ ಜನತಂತ್ರವೇ ಅಪಾಯಕ್ಕೆ ಸಿಲುಕುತ್ತದೆ,” ಎಂದು ಅವಿನಾಶ ದೇವನೂರ ಅವರು ಹೇಳಿದ್ದಾರೆ.

ಪ್ರಶಾಂತ ಚವ್ಹಾಣ ಅವರ ಪರವಾಗಿ ರಾಜ್ಯದ ಪತ್ರಿಕಾ ವಲಯ, ಪ್ರಜಾಪ್ರಭುತ್ವಪರರು ಒಗ್ಗೂಡಿ ನಿಲ್ಲಬೇಕಿರುವ ಸಮಯ ಇದು ಎಂದು ಅವರು ಕರೆ ನೀಡಿದ್ದಾರೆ.

ನಾಳೆ ಆಳಂದ ತಾಲೂಕಿನಲ್ಲಿ ಪತ್ರಕರ್ತರ ಸಭೆ ಕರೆದಿದ್ದಾರೆ

ಇಂದು ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಿಯೋಗ ಎಸ್ ಪಿ ಅವರನ್ನು ಭೇಟಿ ಮಾಡಿ ಆರೋಪಿ ಬಂಧನಕ್ಕೆ ಮನವಿ ಸಲ್ಲಿಸುತ್ತಾರೆ.

— ಡಾ. ಅವಿನಾಶ ಎಸ್. ದೇವನೂರ, ಪತ್ರಕರ್ತರು, ಆಳಂದ