ದಯೆ ತೋರು ದೇವ

ದಯೆ ತೋರು ದೇವ

ದಯೆ ತೋರು ದೇವ

ನಿನ್ನ ನಾಡಿನಲೆ ನೀನೇ ಮುನಿದೇಕೆ ಪ್ರಭುವೆ

ಯಾವ ಪಾಪಕ್ಕಾಗಿ ಈ ಶಿಕ್ಷೆ ಕೊಟ್ಟಿರುವೆ?

ದೇವರ ನಾಡೆಂದು ಪ್ರಖ್ಯಾತಿ ಪಡೆದಿತ್ತು

ಜನರ ಜೀವನದಲ್ಲಿ ಸುಖ ಶಾಂತಿ ನೆಲೆಸಿತ್ತು 

ಕಾಡು ಮೇಡುಗಳಿಂದ, ಹಿನ್ನೀರ ತೊರೆಯಿಂದ

ಚೆಲುವಾದ ನಾಡೆಂದು ಜಗದಿ ಹೆಸರಾಗಿತ್ತು! 

ಮಾಯವಾಗಿದೆ ಇಂದು ಆ ಎಲ್ಲ ಐಸಿರಿಯು

ಪ್ರಳಯ ಮಳೆ ಹೊಡೆತಕ್ಕೆ ನಲುಗಿ ನಲುಗಿ!

ಕನಸಲ್ಲೂ ನೆನೆಸದಿಹ ಅವಘಡಗಳೆಸಗಿಹವು 

ಗುಡ್ಡಗಳು ಕುಸಿಯುತ್ತ ಹಳ್ಳಿಗಳ ನುಂಗಿಹವು

ಮನೆಮಾರು ಹರಿದೋಗಿ ಇದ್ದವರು ಬಿದ್ದವರು

ಕಂಡಂತೆ ಮರೆಯಾಗಿ, ಎಲ್ಲೆಡೆಗೆ ಬರಿ ಕೂಗು

ಆರ್ತ ಆಕ್ರಂದನ, ನಿರ್ಬಯಲ ಬಸಿರಲ್ಲಿ

ಬರಿಯ ಮೌನ!

ಎಲ್ಲಿ ನೋಡಿದರಲ್ಲಿ ಸತ್ತ ಹೆಣಗಳ ರಾಶಿ,

ಕೆಸರಲ್ಲಿ ಹೂತಂತೆ, ಮಣ್ಣಿನಡಿ ಸಿಕ್ಕಂತೆ,

ಪಶುಪ್ರಾಣಿ ಜನರೆಲ್ಲ ಜಲಸಮಾಧಿಗೆ ಸರಿದು

ಮುಳುಗಿ ಹೋಗಿಹ ಮುಗ್ಧ ಜೀವಿಗಳ ಪರಿಷೆ!

ಊರಿಗೂರೇ ಖಾಲಿ, ನರಪಿಳ್ಳೆ ಸುಳಿವಿಲ್ಲ,

ಸಹಬಾಳು ಸವೆಸುತ್ತಾ, ಏನೆಲ್ಲಾ ಬಯಸುತ್ತಾ,

ನಾಳೆಗಳ ಕನಸಿನಲಿ ಕನವರಿಸಿ ಬಾಳಿದ 

ಜನಸಂಕುಲವಿಂದು ಜಲಧಾರೆಯಲಿ ಹರಿದು ಹೋಗಿರುವುದಲ್ಲ!

ಅಳಿದುಳಿದ ಜನಕಿಲ್ಲ ಯಾವ ಆಸರೆ ಇಂದು

ಬಂಧು ಬಾಂಧವರನ್ನು, ಮನೆ ಮಾರು ಮಕ್ಕಳನು

ಕಳೆದು ಕೊಂಡಿಹ ಜನರು ಯಾವ ಸಾಂತ್ವನ ಹೊಂದಿ

ಬಾಳ ಬೇಕಿಂದು!

ಸಾಕಿನ್ನು ಈ ಶೀಕ್ಷೆ ದಯತೋರು ದೇವ

ಕರುಣೆಯಲಿ ಕಾಯಿನ್ನು ಉಳಿದವರ ವಿಭವ!

                              ನರಸಿಂಗರಾವ ಹೇಮನೂರ