ಅನುಭಾವತ ಸಾಹಿತ್ಯ ಚಿಂತಕರು : ಪೂಜ್ಯಶ್ರೀ ಚನ್ನವೀರ ಶಿವಾಚಾರ್ಯರು
ಅನುಭಾವದ ಸಾಹಿತ್ಯ ಚಿಂತನಕಾರರು:
ಪೂಜ್ಯಶ್ರೀ ಡಾ.ಚನ್ನವೀರ ಶಿವಾಚಾರ್ಯರು
ಕನ್ನಡದ ಮಠದಲ್ಲಿ ಅನೇಕರು ಇಂದು ಧರ್ಮ, ದಾಸೋಹ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಕಾರ್ಯಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಅವಿರತವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅಂತವರ ಸಾಲಿನಲ್ಲಿ ಕಂಡುಬರುವ ಡಾ.ಜ.ಚ.ನಿ. ಡಾ.ಮೂಜಗಂ,ನಾಚೆ,ಸಿಹಿ,ಡಾ.ಶರಣಬಸವಪ್ಪ ಅಪ್ಪ, ಡಾ.ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ,ಭಾತಾಂಬ್ರಾ ಶ್ರೀಗಳು,ಡಾ.ಬಸವಲಿಂಗ ಪಟ್ಟದ್ದೇವರು,ಮೊದಲಾದ ಪೂಜ್ಯರು ತಮ್ಮ ತ್ರಿವಿಧ ದಾಸೋಹ ಜೊತೆಗೆ ಸಾಹಿತ್ಯ ಕೊಡುಗೆ ನೀಡುತ್ತಾ ಬಂದವರು.ಅವರಲ್ಲಿ ನಮ್ಮ ಕನ್ನಡ ಪೀಠಾಧಿಪತಿ ಎಂದೇ ಪ್ರಖ್ಯಾತರಾದ, ಜಾತ್ಯಾತೀತ ನಿಲುವಿನ,ಸಾಹಿತಿ,ಎಂದರೆ ಡಾ.ಚನ್ನವೀರ ಶಿವಾಚಾರ್ಯ ರು ಒಬ್ಬರು.
ಇವರು ಮೂಲತಃ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಶೆಡೋಳಾ ಗ್ರಾಮದ ಲಿಂ.ಶ್ರೀ ವೇ.ಮೂರ್ತಿ ಕರಬಸಯ್ಯ ಮತ್ತು ಮಾತೋಶ್ರೀ ಸುಭದ್ರಾತಾಯಿಯವರ ಮಗನಾಗಿ ದೀಪಾವಳಿ ತುಳಸಿ ವಿವಾಹದಂದು ೧೯೬೩ ರಲ್ಲಿ ಜನಿಸಿದರು.ರೇವಣಸಿದ್ಧಯ್ಯ ಎಂದು ನಾಮಕರಣ ಮಾಡಲಾಯಿತು. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ತಂದೆ ಶ್ರೀ ಕರಬಸಯ್ಯನ ವರು ಸಂಗೀತ,ನಾಟಕ,ಪುರಾಣ ಪ್ತವಚನದಲ್ಲಿ ಹೆಸರಾಗಿದ್ದವರು.ಆಗಲೇ ಮಗನ ಬುದ್ದಿವಂತಿಕೆ,ಚೂಟಿತನ
ಕಂಡು ಮನೆಯಲ್ಲಿ ಸಂಸ್ಕೃತ ಪಾಠ,ಅಮರಕೋಶ ಶ್ಲೋಕ ಹೇಳಿಕೊಟ್ಟಾಗ ಅವನ್ನು ಕೇಳಿ ಹೇಳುವ ರೂಢಿತನವಿತ್ತು.
ಇದನ್ನು ಗಮನಿಸಿದ ಹಾರಕೂಡದ ಪೀಠಾಧಿಪತಿ ಷ.ಬ್ರ.ಶ್ರೀ ಗುರುಲಿಂಗ ಶಿವಾಚಾರ್ಯರು ಮತ್ತು ಊರಿನ ಭಕ್ತರು ಸೇರಿ ಮಠಕ್ಕೆ ಉತ್ತರಾಧಿಕಾರಿ ಮಾಡಲು ಹೇಳಿದಾಗಲೇ ತಂದೆಯವರು ಭಕ್ತರ ಇಚ್ಛೆಯೇ; ನಮ್ಮ ಇಚ್ಛೇ ಎಂದರು. ಹಿಂದೆ ಆಗಲೇ ಕರಬಸಯ್ಯನವರು ಪೂಜ್ಯಶ್ರೀ .ಚನ್ನ ಬಸವ ಶಿವಯೋಗಿಗಳವರ ಮತ್ತು .ಪೂಜ್ಯಶ್ರೀ ಗುರುಲಿಂಗ ಶಿವಾಚಾರ್ಯರರ ಸೇವೆ ಮಾಡಿದ್ದರು.ಮಠದ ಆಗುಹೋ ಗುಗಳನ್ನು ಅರಿತವರು.ಒಪ್ಪಿ ಮುಂದೇ ಇವರೇ ಸೂಕ್ತವೆಂ ದು ಭಾವಿಸಿದರು.ಅದರಂತೆ ಹುಡುಗಿಯ ಶ್ರೀಗಳ ನೇತೃತ್ವದಲ್ಲಿ ಲಿಂಗ ದೀಕ್ಷೆ (ಅಯ್ಯಾಚಾರ) ಮಾಡಿದರು.
ಶ್ರೀಗಳು ತಮ್ಮ ಪ್ರಾಥಮಿಕ ಶಾಲೆಯನ್ನು ಹಾರಕೂಡದಲ್ಲಿ, ಹೈಸ್ಕೂಲ್ ನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ,ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಉಳಿದುಕೊಂಡು ಬಿ.ಎ.ಪದವಿಯನ್ನು ಕೆ.ಎಲ್.ಇ.ಯ ಶ್ರೀಕಾಡಸಿದ್ದೇಶ್ವರ ಕಾಲೇಜಿನಿಂದ ಪಡೆದ ರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿ ಪ್ರಥಮ ವರ್ಗದಲ್ಲಿ ಪಾಸಾದರು.ಶಿವಯೋಗ ಮಂದಿರದಲ್ಲಿ ಇದ್ದು ಮಠದ ಸ್ವಾಮಿಯಾಗುವ ತರಬೇತಿ ಪಡೆದರು.ಹಾನಗಲ್ಲ ಕುಮಾರೇಶ್ವರರು,ಡಾ.ಮೂಜಂಗ,ಡಾ.ಶರಣನಸಪ್ಪ ಅಪ್ಪ ಅವರನ್ನು ಗುರುಗಳೆಂದು ಪ್ರೀತಿಯಿಂದ ಕಂಡವರು.
ಪಟ್ಟಾಧಿಕಾರ ಮಹೋತ್ಸವವನ್ನು ೨೫-೦೪-೧೯೯೬ ರಂದು ನಾಡಿನ ಪ್ರಸಿದ್ಧ ಜಗದ್ಗುರುಗಳು, ಸ್ವಾಮೀಜಿಗಳು,ಹರಗುರು,ಚರಮೂರ್ತಿಗಳು,ಕವಿ,ಸಾಹಿತಿ,ಕಲಾವಿದರು,ಲಕ್ಷಾಂತರ ಜನ ಭಕ್ತರು ಸೇರಿಕೊಂಡು ಮೂರು ದಿವಸಗಳ ಕಾಲ ಅದ್ದೂರಿಯಾಗಿ ನಡೆಯಿತು. ಪೂರ್ವಾಶ್ರಮದ ಹೆಸರು ರೇವಣಸಿದ್ಧರೆಂಬುದನ್ನು ಚೆನ್ನವೀರ ಎಂದು ಹೆಸರಿಸಿದರು.ಘಟದಿಂದ ಮಠವನ್ನು ಉನ್ನತ ಸ್ಥಾನಕ್ಕೇರಿಸಿದರು.ಸಣ್ಣ ಮನೆಯನ್ನೇ ಮಠವನ್ನಾಗಿಸಿಕೊಂಡು,ಹಂತ ಹಂತವಾಗಿ ಮಹಾಮಠ, ದಾಸೋಹ ಮಠ,ಸಾಹಿತ್ಯ, ಸಾಂಸ್ಕೃತಿಕ ಮಠವನ್ನಾಗಿ ಪರಿ ವರ್ತಿಸಿದ ಕಾರ್ಯ ಅಭೂತಪೂರ್ವ!.
ಜಾತಿ,ಮತ,ಪಂಥ,ಮೇಲು,ಕೀಳು,ಬಡವ,ಬಲ್ಲಿದ,
ವರ್ಗ,ವರ್ಣ,ಲಿಂಗ ಭೇದಭಾವ ದೂರ ಸರಿಸಿ ಮಾನವಕುಲಕ್ಕೆ ಜಯವಾಗಲಿ ಎಂಬ ತತ್ವ ಹೇಳಿ ಭಕ್ತರನ್ನು ಅಪ್ಪಿಕೊಂಡು ಅವರಿಗೆ ಹಣ,ವಸ್ತ್ರ,ಬಂಗಾರ, ಬೇಡದ ಜಂಗಮರು.ನಿಮ್ಮ ನಿಮ್ಮಲ್ಲಿರುವ ದುಶ್ಚಟಗಳನ್ನು ಬಿಟ್ಟು ಬಂದರೆ ಸಾಕು ಅದೇ ನೀವು ಕೊಡುವ ಕಾಣಿಕೆ ಎಂದವರು ರೈತರು,ಕೂಲಿ ಕಾರ್ಮಿಕರು, ಸೈನಿಕರು,ಕಲಾವಿದರು, ಸಾಹಿತಿಗಳು,ಭಕ್ತರೆಂದರೆ ಪಂಚ ಪ್ರಾಣ!.ಇಂತಹ ಸ್ವಾಮೀಜಿ ಸಿಗುವುದೇ ಅಪರೂಪ.ನಡೆದಾಡುವ ದೇವರು. ಅವರೊಬ್ಬ ನಾಡಿಗೆ ಕಾಮಧೇನು ಕಲ್ಪವೃಕ್ಷವಾದವರು.
ಪೂಜ್ಯರು ಈಗಾಗಲೇ ಶ್ರೀ ಚನ್ನರೇಣುಕ ಬಸವ ಪ್ರಶಸ್ತಿ ಹದಿಮೂರು ಜನ ವಿದ್ವಾಂಸರು,ಸಾಹಿತ್ಯ,ಸಂಗೀತ,ಧರ್ಮ, ಕಲೆಗಳಿಗೆನೀಡಿದ್ದಾತೆ.೨೮೨ ಶ್ರೀ ಚನ್ನರತ್ನ ಪ್ರಶಸ್ತಿ, ೨೫ ಜನರಿಗೆ ಭಜನಾ ಸೇವಾ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ,೧೦, ಸಂಗೀತ ರತ್ನ ಪ್ರಶಸ್ತಿ ೩೫, ಚನ್ನಶ್ರೀ ಪ್ರಶಸ್ತಿ ೪೯,ಶಿವ ಪೂಜಾ ಸೇವಾ ರತ್ನ ಪ್ರಶಸ್ತಿ ೫೩,ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ೩,ತಬಲಾ ವಾದ್ಯ ವಾರಧಿ ಪ್ರಶಸ್ತಿ ೧,ದಾಸೋಹ ಸೇವಾ ರತ್ನ ಪ್ರಶಸ್ತಿ ೮೫,ಶ್ರೀ ಚನ್ನಬಸವ ಕಾಯಕ ಪ್ರಶಸ್ತಿ ೫,ಶ್ರೀಗುರು ಸೇವಾ ರತ್ನ ೧೫೩, ಬಸವ ಭಾನು ಪ್ರಶಸ್ತಿ ೩, ವಿದ್ಯಾಭೂಷಣ ಪ್ರಶಸ್ತಿ ಸೇರಿದಂತೆ ೮೦೦ ಜನರಿಗೆ ಪ್ರದಾನ ಮಾಡಿದ್ದಾರೆ. ೧೦೭ ಮೌಲಿಕ ಗ್ರಂಥಗಳನ್ನು ಮಠದಿಂದ ಪ್ರಕಟಿಸಿದ್ದಾರೆ.
ಪೂಜ್ಯರ ಸಾಧನೆಗಳನ್ನು ಕಂಡು ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲ್ಯಾಣ ಕರ್ನಾಟಕ ದ್ವಿತೀಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ,ಮತ್ತು ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಪಡೆದವರು.ನಾಡಿನ ಹಲವು ಸಂಘ,ಸಂಸ್ಥೆ ಗಳು ಶ್ರೀಗಳಿಗೆ ಪ್ರಶಸ್ತಿ ಗೌರವ ನೀಡಿದ್ದಾರೆ.ಮಠದಲ್ಲಿ ಸ್ವತಃ ಸಂಗೀತ ಸಮ್ಮೇಳನ,ಸಂಗೀತೋತ್ಸವ,ಎರಡು ತಾಲೂಕು ಮತ್ತು ಒಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ವರು.ಅನೇಕ ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡವರು.ಪೂಜ್ಯಶ್ರೀ ಗಳ
ಕಾರ್ಯ ಕಂಡು ೯೦೦ ತುಲಾ ಭಾರ ಏರ್ಪಡಿಸಿ ಭಕ್ತರು ಧನ್ಯರಾಗಿದ್ದಾರೆ.
ಸಾಹಿತ್ಯ: ಪೂಜ್ಯ ಶ್ರೀಗಳು ಸಾಹಿತ್ಯ ಆರಾಧನೆಯನ್ನು ಮಾಡುತ್ತಾ ಬಂದವರು.ಹುಬ್ಬಳ್ಳಿಯ ಮೂರು ಸಾವಿರ ಮಠದ ಸಾಹಿತ್ಯ ಕಾರ್ಯಕ್ರಮ ಡಾ.ಮೂಜಗಂ ಮಾಡುವಾಗ ಪೂಜ್ಯರು ನೋಡುತ್ತಾ,ತಯಾರಿ ಮಾಡಿದ ಅನುಭವ ತಮ್ಮ ಮಠದಲ್ಲಿ ಕಾರ್ಯಗತಗೊಳಿಸಿದರು.
ಪೂಜ್ಯಶ್ರೀ ಗಳು
೧.ಹಡದಪದ ಅಪ್ಪಣ್ಣನ ನೂರೊಂದು ವಚನಗಳು
೨.ಚನ್ನ ಚಿಂತನ (೨೦೧೯ ಮತ್ತು ೨೦೨೦)
೩.ಚನ್ನ ಚಂದ್ರ ಹಾರ (೨೦೨೦)
೪.ಚನ್ನಕಾಂತ ವಿಚಾರ ಬಿಂದುಗಳು(೨೦೨೧)
೫.ಚನ್ನಶ್ರೀ ವಾಣಿ (೨೦೨೪)
೬.ಚನ್ನದೀಪ್ತಿ(೨೦೨೫)
ಹಡದಪದ ಅಪ್ಪಣ್ಣನ ನೂರೊಂದು ವಚನಗಳು:
ಈ ಕೃತಿ ಯಲ್ಲಿ ಅಪ್ಪಣ್ಣನವರ ಕಾಯಕ,ದಾಸೋಹ, ಸಾಮಾಜಿಕ ಚಿಂತನೆಯ ವಚನಗಳನ್ನು ಸಂಗ್ರಹಿಸಿ,ವರ್ಗೀಕರಣ ಮಾಡಿ ಪ್ರಸ್ತಾವನೆ ಬರೆದು ಸಂಪಾದಿಸಿದ ಕೃತಿ.
ಚನ್ನ ಚಿಂತನ:
ಈ ಕೃತಿ ಪ್ರಜಾವಾಣಿಯಲ್ಲಿ ಪ್ರಕಟವಾದ ಅಮೃತವಾಣಿ ಅಂಕಣದಲ್ಲಿ ಐವತ್ತು ನಾಲ್ಕು ಚಿಂತನ ಬರಹಗಳು ಇಲ್ಲಿವೆ.ಒಂದೊಂದು ಅಮೃತವಾಣಿಯಂತೆ ಅರಳಿವೆ.ಶ್ರಾವಣ,ಭಾವೈಕ್ಯತೆ,ಸಮಾಜ,ಧಾರ್ಮಿಕ, ಸಾಂಸ್ಕೃತಿಕ ಚಿಂತನ ಬರಹಗಳು ಓದುಗರ ಮನ ಸೆಳೆಯುತ್ತವೆ.ಒಂದೊಂದು ಚಿಂತನ ಓದುವುದು ಬೇರೆ, ಅದೇ ಪುಸ್ತಕ ರೂಪದಲ್ಲಿ ಬಂದಾಗ ಇಡೀ ಬರಹಗಳ ವೈಶಿಷ್ಟ್ಯ ಗುರುತಿಸಲು ಸಾಧ್ಯವಾಗುತ್ತದೆ.ಅಯಾ ತಿಂಗಳ ಮಹತ್ವ, ಹಬ್ಬ ಹರಿದಿನಗಳಲ್ಲಿ ಆಗುವ ಚಿಂತನಗಳು ಇವಕ್ಕೆ ತಮ್ಮದೇ ಆದ ಭಾವ ತುಂಬಿದ್ದಾರೆ.ಹಾಗೇ ವೇದ,ಆಗಮ ಸಂಸ್ಕೃತ ಸುಭಾಷಿತ,ಗಾದೆ,ಒಗಟು,ಶರಣರ ವಚನ ಸಾಲು ಬಳಸಿಕೊಂಡು ಆಯಾ ವಸ್ತು, ಸನ್ನಿವೇಶ ತಕ್ಕ ಹಾಗೇ ಬರೆದು ಓದುಗರ ಎದೆಯನ್ನು ಅರಳಿಸುವ ಚನ್ನ ಚಿಂತನ ಬರಹ ಖುಷಿ ಕೊಡುತ್ತವೆ.
ಚನ್ನ ಚಂದ್ರಹಾರ:
ಮೂರನೆಯ ಕೃತಿ.ಮೊದಲ ಕವನ ಸಂಕಲನ,ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ವಿದ್ಯಾರ್ಥಿ ಆದಾಗಲೇ ಹಲವಾರು ಕವನ ಬರೆದವರು.ನಂತರ ಪ್ರಕಟಣೆಗೆ ಹೋಗಲಿಲ್ಲ.ಅವರ ನಿರಂತರ ಕಾರ್ಯಕ್ರಮ, ದಾಸೋಹ, ಪ್ರಯಾಣ,ಪ್ರವಚನ, ಆಶೀರ್ವಚನ ಇದರಲ್ಲಿ ಸಮಯ ಕಳೆದಾಗ ಬರೆಯಲು ಸಾಧ್ಯವಾಗಲಿಲ್ಲ.ಕರೋನಾದ ಹೊತ್ತಿಗೆ ಆ ಎಲ್ಲಾ ಕವಿ ಮನಸ್ಸಿಗೆ ಸಮಯ,ಧ್ಯಾಮಸ್ಥ ಮನಸ್ಸು ಉಂಟಾದಾಗ ಕವಿತ್ವ ಶಕ್ತಿ ಅರಳಿವೆ.ಹೀಗಾಗಿ ಐವತ್ತೊಂದು ಕವನ ರಚಿಸಿದವರು.ಇದೊಂದು ಉತ್ತಮ ಕಾವ್ಯವಾಗಿದೆ.ಮೊದಲಿಗೆ ತಮ್ಮ ಪೂಜ್ಯರನ್ನು ನೆನಪಿಸಿ ಕೊಂಡಿದ್ದಾರೆ.ರೇಣುಕಾಚಾರ್ಯರು,ಚನ್ನಬಸವ ಶಿವಯೋ ಗಿಗಳು,ಹಾನಗಲ್ಲ ಕುಮಾರ ಸ್ವಾಮಿಗಳು,ಪಂ.ಪುಟ್ಟರಾಜ ಗವಾಯಿಗಳು,ಜಗತ್ತಿನ ಬಸವೇಶ್ವರರು,ರೈತರು,ಸೈನಿಕರು, ಕರೋನಾ,ಪರಿಸರ, ಸುಧಸರಕರು,ಸಂತರು ಹೀಗೆ ವಸ್ತು ವೈವಿಧ್ಯಮಯವಾದ ನವೋದಯ ಮಾದರಿಯ ಕವನಗಳಂತೆ ಇವು ಕಂಡಿವೆ. ಕಾವ್ಯದ ಅಂತರಾಳ ತಳಮಳಗಳು ಹಾಸು ಹೊಕ್ಕಾಗಿ ನಿಂತಿವೆ.ಪ್ರತಿ ಕವನವೂ ಹೃದಯಂಗಮವಾಗಿ ಮೂಡಿ ಬದಿವೆ.ಸಮತೆ, ಸೌಹಾರ್ದ,ಸಾಮರಸ್ಯವನ್ನು ಬೆಸೆಯುತ್ತವೆ.ಇಷ್ಟೆಲ್ಲಾ ಕಾವ್ಯದ ತಾಯ್ತನದ ಗುಣ ಅವರಲ್ಲಿರುವುದರಿಂದ ಇವು ಚಂದ್ರಹಾರವಾಗಿ ಹೊರ ಹೊಮ್ಮಿವೆ. ಪೂಜ್ಯರೇ ಹೇಳಿಕೊಂಡ ಶ್ರೀವಾಣಿ "ತಮ್ಮದೇ ಆದ “ನಮ್ಮ ಮಾತು” ಎಂದು ತಮ್ಮ ನುಡಿಯಲ್ಲಿ ಹೀಗೆ ಹೇಳಿರುವರು.
“ವ್ಯಕ್ತಿಯು ಸಮಾಜದಲ್ಲಿ, ಲೋಕದಲ್ಲಿ, ಪರಿಸರದಲ್ಲಿ ಕಂಡುಂಡ ಅನುಭವಗಳನ್ನು ಪದ್ಯರೂಪದಲ್ಲಿ ಬರೆದಾಗ ಕವನಗಳಾಗಿ ಹೊರ ಹೊಮ್ಮುತ್ತವೆ. ಅಂತರಂಗದ ದಿವ್ಯಾನುಭಾವದ ಲಿಖಿತರೂಪವೇ ಕವನಗಳು” ಎಂದು ಹೇಳಿಕೊಂಡಿದ್ದಾರೆ.
ಚನ್ನಕಾಂತ ವಿಚಾರ ಬಿಂದುಗಳು: ಇದೊಂದು ವಿಶಿಷ್ಟ ವಾದ ಕೃತಿ.ಕ ಕಾರದಿಂದ ಕೂಡಿದ ಪದಗಳನ್ನು ಇಟ್ಟುಕೊಂ ಡು ಆಲೋಚಿಸಿದರ ಫಲ ಇದಾಗಿದೆ. ಐವತ್ತು ಬರಹಗಳು ವಿಚಾರ ಚಿಂತನೆಗೆ ತೊಡಗುತ್ತವೆ.ಕೊನೆಯ ಅಕ್ಷರವೇ ನಮಗೆ ಪರಿಣಾಮ ಬೀರುತ್ತವೆ. ಶಿಕ್ಷಕ,ರಕ್ಷಕ,ಆರಕ್ಷಕ,ಭಕ್ಷಕ
ಸೈನಿಕ, ನಿರ್ದೇಶಕ, ಸ್ಥಾಪಕ,ಪಾಲಕ ಚಾಲಕ,ಮಾಲಿಕ, ಬಾಲಕ,ನಿರೂಪಕ,ನಾಟಕ, ಮೊದಲಾದ ಪದಗಳು ಎಷ್ಟು ಅರ್ಥವಂತಿಕೆನೀಡುತ್ತವೆ.ಅವುಗಳ ಸಂಪೂರ್ಣ ಮಾಹಿತಿ ಅದರ ವಿಚಾರಗಳು ಬಹು ಸ್ವಾರಸ್ಯವಾಗಿ,ಅರ್ಥಪೂರ್ಣ ವಾಗಿ,ಸರಳ,ಎಲ್ಲರಿಗೂ ತಿಳಿಯುವ ಹಾಗೇ ಅಕ್ಷರ ರೂಪ ನೀಡಿ ಅಭಿವ್ಯಕ್ತಿ ಪಡಿಸಿದ್ದಾರೆ.ಬಾಲಕ ಆತನ ಹಿನ್ನೆಲೆ, ಅವನ ಸಂಪೂರ್ಣ ಮಾಹಿತಿ ಒದಗುವದು.ಶಿಕ್ಷಕ ಇರದಿದ್ದರೆ, ಎಷ್ಟು ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರೇರಕ,ಅನಾಹುತಗಳು ಆಗದಂತೆ ಚಾಲಕ ತನ್ನು ಬಸ್ಸಿನ ಜನರನ್ನು ಮುಟ್ಟಿಸುವ ಬಗೆ ಕುತೂಹಲ ಉಂಟು ಮಾಡು ವರು.ಇಲ್ಲಿಯಪ್ರತಿಯೊಂದು ಬರಹ ಅಮೃತವಾಣಿ ಇದ್ದಂತೆ.ಓದುಗರ,ಸಾಹಿತಿಗಳ ಮನ ಮೆಚ್ವುತ್ತವೆ.
ಚನ್ನಶ್ರೀ ವಾಣಿ:
ಹೆಸರೇ ಸೂಚಿಸುವಂತೆ ಪೂಜ್ಯರ ಶ್ರೀ ವಾಣಿಗಳೇ ಆಗಿವೆ.ಅತವತ್ತೊಂದು ಲೇಖನಗಳಿವೆ. ಇವುಗಳೆಲ್ಲವೂ ಅ ಕಾರದಿಂದ ಪ್ರಾರಂಭವಾಗುವ ವಿಶೇಷ ತೆಯನ್ನು ಹೊಂದಿವೆ. ಇಲ್ಲಿಯ ಧಾರ್ಮಿಕ, ಸಾಮಾಜಿಕ ವಿಚಾರಗಳ ಮೇಲೆ ಪ್ರತಿಬಿಂಬಿತವಾದರೂ ಇವು ಸಾಹಿತ್ಯ ದಲ್ಲಿ ಸಹ ಇಂತಹ ವಿಚಾರ ಕೊಡ ಬಹುದೆಂದು ಈ ಲೇಖನ ಓದಿದರೆ ಅನಿಸದೇ ಇರದು.ಗಂಭೀರತೆ,ಸ್ಪಷ್ಟವಾಗಿ ಹೇಳುವರು.'ಅಂಗದೊಳಗಡೆ ಲಿಂಗ' ಎಂದು ಹೇಳಿ ಅಂಗ ಶರೀರ. ಭಾತಿಕ ಶರೀರ ಅದನ್ನು ಮನಸ್ಸನ್ನು ಶುದ್ಧ ಚಿತ್ತಿಗೆ ಒಳಗೊಳ್ಳುತ್ತದೆ.ಅಂಗ - ಲಿಂಗದ ಗೆರೆ ತೆಗೆದರೆ ಸಾಕು ಶುದ್ಧ ವಾಗುವುದೆಂದು ಹೇಳುತ್ತಾರೆ.
ಇಲ್ಲಿಯ ಪ್ರತಿಯೊಂದು
ಅಂಗರಕ್ಷಕ,ತಾಯಿ,ಅಂತರಂಗ,ಅಂತಃಕಲಹ,ಅಂಕಣ, ಅಕ್ಕಜದಿಂದ ಸಹವಾಸ,ಅಗಲಿಕೆ,ಅಗುರು,ಅಂತಿಮ ಸತ್ಯ ಇಂತಹ ಅರವತ್ತು ಬರಹಗಳಲ್ಲಿ ಒಂದು ವೈವಿಧ್ಯತೆ,ಅಷ್ಟೇ ಸತ್ಯವಾದ ನುಡಿಗಳಿವೆ.ಮನುಷ್ಯಪರ ಚಿಂತನೆ,ಕಾಳಜಿ, ಕಕ್ಕುಲಾತಿ ಇವು ಪೂಜ್ಯರಲ್ಲಿ ಎದ್ದು ಕಾಣುತ್ತವೆ.ಇವುಗಳ ಹೇಳುವಾಗ ಬಸವಣ್ಣ,ಶರಣರ,ಜನಪದ ಹಾಡುಗಳು ಬಳಕೆ ಮಾಎಇಕೊಂಡು ತಮ್ಮ ಅನುಭವದ ಅನುಭಾವ ಇಲ್ಲಿ ಹೆಕ್ಕಿ ತಗೆದಿದ್ದಾರೆ.ಪ್ರತಿಯೊಂದು ಪೂಜ್ಯರ ಚನ್ನ ಶ್ರೀ ವಾಣಿಗಳಾಗಿ ನಮಗೆ ಕಂಡು ಬರುತ್ತವೆ.ಇದೇ ಕೃತಿಯ ಜೀವನ ಮೌಲ್ಯ ಸಾರುವ, ಮನುಷ್ಯ ವಿಚಲಿತನಾದಾಗ, ಅವಸರದ ನಡೆಯಲ್ಲಿದ್ದಾಗ,ಮನಸ್ಸು ಅತ್ತಿಂದಿಂತ ಓಡುವಾಗ ಇವುಗಳನ್ನು ಓದಿದಾಗ ಬದುಕಿನ ಹಲವು ಆಯಾಮಗಳಿಂದ ಗಟ್ಟಿಯಾಗಿ ಜೀವನ ಸಾಗಿಸಲು ದಿವ್ಯ ಔಷಧಿಯಾಗಿವೆ.ಇಂತಹ ಕೃತಿಗೆ ಅವ್ವ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ.
ಚನ್ನದೀಪ್ತಿ: ಪೂಜ್ಯರ ಆರನೆಯ ಪುಷ್ಪ. ಐವತ್ತೊಂದು ಬರಹಗಳಿವೆ.ಇಲ್ಲಿಯ ಸಂದೇಶ,ಆಶೀರ್ವಚನ ಇಂದು- ಮುಂದು ಪ್ರಸ್ತುವಾಗಿ ನಮಗೆ ಪ್ರೇರಣೆ ನೀಡುತ್ತವೆ.ಅವರ ನುಡಿಗಳ ಹಿಂದೆ ಒಂದೊಂದು ಅರ್ಥಗರ್ಭಿತವಾದ ವಿಚಾರ ಚಿಂತನೆಗಳಿವೆ..ಮನುಷ್ಯನ ಸ್ವಾಸ್ಥ್ಯ ಕೆಡಿಸದೇ; ಮನುಷ್ಯನ ವ್ಯಕ್ತಿತ್ವ ವಿಕಸನಗೊಂಡು ಶಾಂತಿಯ ಮಾರ್ಗದ ಕಡ ಎ ಕೊಂಡೊಯ್ಯುವ ಕಾರ್ಯ ಸಾಹಿತ್ಯದ ಮೂಲಕ ಶಾಶ್ವತವಾಗಿ ಮಾಡಿದ್ದಾರೆ.ಸಮಾಜ ಇಂದು ಕೆಡುತ್ತದೆ,ಜನ ಹಾಳಾಗುತ್ತಿದ್ದಾರೆ .ಯುವ ಸಮುದಾಯ ಚಟಗಳ ದಾಸರಾಗಿದ್ದಾರೆ,ರೈತರ ಪರಿಸ್ಥಿತಿ ಗಂಭೀರತೆ,ಆತ್ಮಹತ್ಯೆದ ಕಡೆ ಮುಖಮಾಡದಿರಿ,ನಿಮ್ಮನೆಯಲ್ಲಿ ಜಗಳವಾದರೆ ಕಲಹ ಬಿಟ್ಡು ಮಠದಲ್ಲಿ ಉಳಿಯಿರಿ,ಅವಸರದ ಕೈ ಗೆ ಬಲಿ ಯಾಗದಿರಿ,ಹೆತ್ತವರು ದೇವರಿಗಿಂತ ಶ್ರೇಷ್ಠ ತಂದೆ- ತಾಯಿ ಯರನ್ನುನೋಎಇಕೊಳ್ಳಿರೆಂದು ಪದೇ ಪದೇ ಹೇಳುತ್ತಾರೆ. ಕಾರಣವಿಷ್ಟೇ ನಮ್ಮ ಪರಿಸರ ಹಾಳಾಗಬಾರದು,ಮನುಷ್ಯ ಜೀವನ ಇತರರಿಗೆ ಆದರ್ಶವಾಗಬೇಕೆಂಬ ಬಯಕೆ ಇದೆ. ಇಂತಹ ಶ್ರೇಷ್ಠ ವಿಚಾರ,ಆಚಾರ,ಪ್ರಚಾರ,ಪ್ರಸಾರ, ಮಾಡು ತ್ತಲೇ ನಾಡಿಗೆ ಒಳ್ಳೆಯದನ್ನು ಬಯಸುವ ಮನುಕುಲದ ಉದ್ಧಾರಕರು ಪೂಜ್ಯರಾಗಿದ್ದಾರೆ.ಅಂತಹ ಎಲ್ಲಾ ಅಂಶಗಳನ್ನು ಬರಹದಲ್ಲಿ ತಂದಿದ್ದಾರೆ.
ಪ್ರತಿಯೊಂದು ಜೀವಕ್ಕೂ ಮಹತ್ವವಿದೆ ಎಂನ ಚಿಂತನದಲ್ಲಿ
ಹುಲ್ಲು ಗರಿಕೆ- ಆಲದ ಮರಕ್ಕೆ ಹೋಲಿಕೆ ಮಾಡಿ ಮನುಷ್ಯ ಎಷ್ಟೇ ಎತ್ತರಕ್ಕೆ ಹೋದರು ವಿನೀತ ಭಾವ ಇರಬೇಕು. ಎಲ್ಲವೂ ಅಳಿದು ಹೋಗುವವು ಅದಕ್ಕೆ ವಾಸ್ತವಿಕ ಸತ್ಯ ಅರಿತರೆ ಅದೇ ಪೂರ್ಣಿಮೆ ಎನ್ನುತ್ತಾರೆ.ಧರ್ಮ ಪಥಿಕನಾಗಿ ಬಾಳು,ಭಕ್ತಿಯಿಂದ ಕೂಡಿದ ಪ್ರೀತಿಯೇ ದಾರಿದೀಪ, ನಿಷ್ಕಲ್ಮಶ ಪ್ರೀತಿಯೇ ದೇವರು,ದೇವರನ್ನು ಹೊರಗೆ ಹುಡು ಕುವವನೆ ಮೂರ್ಖ,ಗುರುವಾಣಿಯೇ ಎಲ್ಲಕ್ಕೂ ದಿವ್ಯೌಷಧ
ಧರ್ಮವೆಂಬುದು ನೀಲಾಂಬರ,ಸಂತ ಮಹಾಂತರ ಮಾರ್ಗ ದಲ್ಲಿ ನಡೆಯಿರಿ,ಆಧ್ಯಾತ್ಮ ಎನ್ನುವುದು ಅಂತರಂಗದ ಪ್ರತಿ ಬಿಂಬ,ಇಂತಹ ಧರ್ಮ,ಆಧ್ಯಾತ್ಮ, ದೇವರು ಇವುಗಳನ್ನು ಎಷ್ಟು ಸರಳೀಕರಣ ಅನುಭವದಿಂದ ಹೇಳುತ್ತಾರೆ.ಮೂಢ ನಂಬಿಕೆ ಇಲ್ಲ ವಾಸ್ತವ ಚಿತ್ರಣದ ಮೂಲಕ ಅನೇಕ ಉದಾ ಹರಣೆ ಕೊಡುವರು.ಎಲ್ಲಾ ಮತ,ಧರ್ಮ ಪ್ರೀತಿಸಿ ನಾಮ ಹಲವು ದೇವನೊಬ್ಬನೇ ಎಂಬ ನಿಲುವು ಎದ್ದು ಕಾಣುವುತ್ತದೆ.
ದೇವಾಲಯಗಳು ಸಾಮರಸ್ಯದ ಧರ್ಮ ಕ್ಷೇತ್ರಗಳಾಗಬೇಕು ಇಂತಹ ಅರಿವು ಎಲ್ಲ ಪೂಜ್ಯರಲ್ಲಿ ಬಂದಾಗ ಜಾತಿ,ಮತಗಳು ಓಡಿ ಹೋಗುತ್ತವೆ. ಹಾರಕೂಡ ಚನ್ನಬಸವ ಶಿವಯೋಗಿಗಳು ಜ್ಞಾನದ ದೀವಿಗೆ ಎಂದು ಕರೆದಿರುವುದರಲ್ಲಿ ಔಚಿತ್ಯವಿದೆ.ದಲಿತ ಭಕ್ತನಿಗೆ ತಾವೇ ಹೋಗಿ ಹಾರ ಹಾಕಿ ಆಶೀರ್ವದಿಸಿ ಬಂದವರು. ಅದಕ್ಕೆ ಇದ್ಧಾಗ ಬರದೇ ಇರದಾಗ ಕೈ ಎತ್ತಿ ಎಬ್ಬಿಸುವವನೇ ಗುರು ಇಂತಹ ಮಾತುಗಳು ಭಕ್ತರು, ನಮಗೆಲ್ಲಾ ಮಾದರಿಯಾಗಿವೆ.ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಜ್ಞಾನ ಭಾಸ್ಕರ ಎಂದುಕರೆದಿರುವುದೇ ಸಂವಿಧಾನ ಮೌಲ್ಯ ಎತ್ತಿಹಿಡಿದಂತೆ.ಸಂವಿಧಾನ ಭಾರತೀಯನ ಉದ್ಧಾರದ ಮೂಲಾಧರ,ಪ್ರತಿಯೊಬ್ಬರು ಸಾಂವಿಧಾನಿಕ ಮೌಲ್ಯಗಳನ್ನು ಧಾರಣ ಮಾಡಿಕೊಳ್ಳ ಬೇಕೆಂಬ ನೆಲ್ಸನ್ ಮಂಡೇಲಾ ಅವರ ಮಾತು ಎತ್ತಿ ಹಿಡಿದವರು ಪೂಜ್ಯರು.
ವಚನ ಸಾಹಿತ್ಯ, ರೈತರು, ರಾಜಕಾರಣಿಗಳು ನೀತಿ ಧರ್ಮ ನಿಷ್ಠ ರಾಗಲು ಕರೆ,ಮಹಿಳೆ,ಭಾರತ ದೇಶವನ್ನು ಪ್ರೀತಿಸಿ, ಸತಿ ಪತಿ ಒಂದಾದಾಗ ಕಲ್ಲು ಸಕ್ಕರೆಯಾಗಿ ನಡೆನುಡಿ ಇರಬೇಕೆಂದು ಈ ಜನರಿಗೆ,ದೇಶಕ್ಕೆ ತಮ್ಮ ಅಮೃತವಾಣಿ ಮೂಲಕ ಜಗತ್ತು ಕಲ್ಯಾಣ ಬಯಸಿದವರು.ಬರೆದಂತೆ ಬಾಳಿ ನಡೆದು,ನುಡಿದು ಸನ್ಮಾರ್ಗದ ಕಡೆ ಒಯ್ಯುವ ಈ ಬರಹಗಳು ನಮ್ಮ ಜೀವನದ ಅಕ್ಷರ ಮಣಿಹಗಳಾಗಿ ದಾರಿ ದೀಪವಾಗಿವೆ.
ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉತ್ತಮ ವಾಗ್ಮಿ ಗಳು,ತಮ್ಮ ಅಸ್ಖಲಿತ ಕಂಠದಿಂದ ಜನ ಮನ ತಲುಪಿದವರು.ಬಹುಶ್ರತ ವಿದ್ವಾಂಸರು,ಕವಿಗಳು,ಚಿಂತನ ಕಾರರು,ಸಾಹಿತಿಗಳು,ಕನ್ನಡ ಸಾಹಿತ್ಯ ಪರಿಚಾರಕರು, ಮಾನಪರ ಚಿಂತಕರು,ಕರ್ನಾಟಕದ ದಾಸೋಹ, ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ.ಅವರ ಬರಹಗಳುಪೂಜ್ಯರ ಅಂತಃಶಕ್ತಿಯ ಪ್ರತಿಬಿಂಬಗಳು.
ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ
ಸಾಹಿತಿ,ಕಲಬುರಗಿ
