ಕವನ ಕನ್ನಡದ ಸೊಗಸು:
ಕವನ ಕನ್ನಡದ ಸೊಗಸು:
ತೊಟ್ಟಿಲೊಳ್ ಅಳುವ ಕೂಸಿನ ತುಟಿಯಲಿ ವೀಣೆಯ ಸ್ವರದಂತೆ ಮೊಳಗುವ ನುಡಿ ಚಂದ,
ಅಪ್ಪಳಿಸುವ ಅನುಭವಕೆ ಕರಣ ಚಾಚುತ ಸಂಸ್ಕೃತಿಯನುಳಿಸುವ ಕರುನಾಡ ಕಲಿಗಳೇ ಜಗದ ಆನಂದ.
ಬೆಳೆಯುವ ಸಿರಿ ಹೃದಯದೊಳ್ ರಾರಾಜಿಸುತ್ತಿರಬೇಕು ರಾಜ್ಯ ಕಟ್ಟಿದವರ ಹಿರಿಮೆ,
ಸಹಬಾಳ್ವೆ ಸಂಬಂಧದ ಸವಿ ಎಲ್ಲೆಡೆ ಹರಡುತ್ತಿರಬೇಕು ಒಂದಾಗಿ ಮೆರೆದ ಕನ್ನಡಿಗರ ಶೌರ್ಯದ ಗರಿಮೆ.
ಬಹುಭಾಷೆಯೊಳ್ ಬೆರೆತ ಲಿಪಿಗಳ ರಾಣಿಗೆ,
ರಾಷ್ಟ್ರವೆ ಕರೆಯಿತು ಉನ್ನತ ಪೀಠಕೆ.
ಸಹಸ್ರಮಾನಗಳ ಚರಿತೆಯ ಹೊತ್ತು,
ರಾಜರ ಶಿಲೆಗಳು ಸಾರುತಿವೆ ರಾಜಮಾತೆಯ ಭವ್ಯತೆಯ.
ಕನ್ನಡ ಉಳಿಸಲು ನಿಲ್ಲದ ಲೇಖನಿ,
ಓದುಗರ ಸೆಳೆಯುತಿದೆ ಕವಿ-ಪುಂಗವರ ಸಾಹಿತ್ಯದ ಗಣಿ.
ಎಚ್ಚರಗೊಂಡ ಶೂರರ ತಂಡ, ರಚಿಸಿದರಂದೆ ಕರುನಾಡ,
ವಿಸ್ಮಿತನಾದ ವಿದೇಶಿ ನಂಟ,
ಪದಗಳ ಪೋಣಿಸಿ ಕೊಟ್ಟ ಕನ್ನಡ ನಿಗಂಟ.
ಕನ್ನಡ ಭಾಷೆಯ ತೃಷೆಯಿದ್ದರೆ,
ಸಮೃದ್ಧಿ ನುಡಿಯ ಕಲಿಸುವುದು ನಮ್ಮೀ ಧರೆ.
ವಿಶ್ವ ತಿಳಿಯಲು ಬೇಕು ವಿವಿಧ ಭಾಷೆ,
ಸಾವಿರದ ಸಿರಿಯಾಗಿ ಸರ್ವರೊಳ್ ಕನ್ನಡ ನೆಲೆಸಬೇಕೆಂಬಾಸೆ.
ಕಾಣದ ತೀರವ ಸೇರಲಿ ಕನ್ನಡದ ದೀಪ,
ಜುಳು-ಜುಳು ನಾದದಿ ಹೊಮ್ಮಲಿ ಕದಂಬರ ಪ್ರತಾಪ.
ಚೈತ್ರದ ಚಿಗುರಲಿ ಹೊಳೆಯುವ ನಿಸರ್ಗದಂತೆ,
ನುಡಿವ ನಾಲಿಗೆಗೆ ಸೊಗಸು ಕನ್ನಡದ ಕವಿತೆ.
ಪ್ರತಿಕ್ಷಣದ ಕಾಯಕವು ಸ್ತುತಿಸಿದರೆ ತಾಯ್ನಾಡ,
ಮೈದೊಳೆವುದು ಶಿಸ್ತು ಜಯದ ಹಾದಿಯ ಸಂಗಡ.
ಮರೆಯದಿರು ಮಮತೆಯಿಂ ಸಲಹಿದ ಗೂಡ,
ನಮ್ಮುಸಿರು ನಿಲ್ಲುವ ತನಕ ನಿಶಬ್ಧವಾಗದಿರಲಿ ಕನ್ನಡ.
ರಚನೆ ಶ್ರೀಮತಿ ನಾಗಮಣಿ h b.
ಸಹ ಶಿಕ್ಷಕಿ ಸ.ಹಿ.ಪ್ರ.ಶಾಲೆ ಧರ್ಮಾಪುರ. ಜಿಲ್ಲೆ ಕಲಬುರಗಿ.
