ಶಿಕ್ಷಣದ ಮೂಲಕ ಬದುಕಿಗೆ ದಿಕ್ಕು ತೋರಿಸಿದ ಶಿವಾನಂದ ಖಜುರ್ಗಿ

ಶಿಕ್ಷಣದ ಮೂಲಕ ಬದುಕಿಗೆ ದಿಕ್ಕು ತೋರಿಸಿದ ಶಿವಾನಂದ ಖಜುರ್ಗಿ

ಶಿಕ್ಷಣದ ಮೂಲಕ ಬದುಕಿಗೆ ದಿಕ್ಕು ತೋರಿಸಿದ ಶಿವಾನಂದ ಖಜುರ್ಗಿ

ಮಾನವ ಬದುಕಿನ ಶ್ರೇಷ್ಠತೆ ಅವನ ಹುದ್ದೆ, ಸಂಪತ್ತು ಅಥವಾ ಪ್ರಚಾರದಲ್ಲಿಲ್ಲ; ಅವನ ಅಂತಃಕರಣ, ಕಾರ್ಯನಿಷ್ಠೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಲ್ಲಿ ಅಡಗಿದೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಒಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವವರು ಶಿವಾನಂದ ಖಜುರ್ಗಿ.

ಮೂಲತಃ ಆಳಂದ ತಾಲೂಕಿನ ಜಾವಳಿ (ಡಿ) ಗ್ರಾಮದವರಾದ ಶಿವಾನಂದ ಖಜುರ್ಗಿಯವರು, ಶಿಕ್ಷಕರಾದ ಸಿದ್ರಾಮಪ್ಪ ಮತ್ತು ಜಗದೇವಿ ದಂಪತಿಗಳ ಪುತ್ರರಾಗಿ ದಿನಾಂಕ 05-02-1973 ರಂದು ಜನಿಸಿದರು. ಶಿಕ್ಷಕ ಕುಟುಂಬದ ವಾತಾವರಣವೇ ಇವರಲ್ಲಿ ಬಾಲ್ಯದಿಂದಲೇ ಶಿಕ್ಷಣದ ಮೇಲಿನ ಗೌರವ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಬಿತ್ತಿತು. ತಂದೆಯ ವೃತ್ತಿಯ ಪ್ರಭಾವದಿಂದಲೇ “ಶಿಕ್ಷಣವೇ ಬದುಕನ್ನು ರೂಪಿಸುವ ಶಕ್ತಿ” ಎಂಬ ಅರಿವು ಅವರ ಮನಸ್ಸಿನಲ್ಲಿ ಆಳವಾಗಿ ನೆಲೆಸಿತು.

ಶಿಕ್ಷಣ ಪಥ ಮತ್ತು ಬೌದ್ಧಿಕ ಸಾಧನೆ

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಾಣಗಾಪೂರದಲ್ಲಿ ಪಡೆದು, ನಂತರ ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರಾಥಮಿಕ, ಪ್ರೌಢ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಪದವಿ ಶಿಕ್ಷಣವನ್ನು ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿಯಲ್ಲಿ ಪೂರ್ಣಗೊಳಿಸಿ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಯಿಂದ ಎಂ.ಎಸ್ಸಿ (ಗಣಿತ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಗಣಿತ ವಿಷಯದ ಮೇಲಿನ ಆಳವಾದ ಪಾಂಡಿತ್ಯ, ಸರಳ ವಿವರಣೆ ಶೈಲಿ ಮತ್ತು ವಿದ್ಯಾರ್ಥಿಗಳನ್ನು ವಿಷಯದೊಂದಿಗೆ ಪ್ರೀತಿಸುವಂತೆ ಮಾಡುವ ಅಪೂರ್ವ ಗುಣಗಳಿಂದಾಗಿ ಅವರು “ಗಣಿತ ಕಲಿಸುವ ಉಪನ್ಯಾಸಕ”ರೆಂದು ವ್ಯಾಪಕವಾಗಿ ಪರಿಚಿತರಾಗಿದ್ದಾರೆ. ಸುಮಾರು ಇಪ್ಪತ್ತೈದು ವರ್ಷಗಳಿಗೂ ಅಧಿಕ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ, ಸಾವಿರಾರು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ.

 ಸಂಕಲ್ಪದಿಂದ ದಿಶೆಯವರೆಗೆ

ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತಗೊಳಿಸದೇ, ಬದುಕು ಕಟ್ಟಿಕೊಳ್ಳುವ ಸಾಧನವೆಂದು ಕಂಡ ಶಿವಾನಂದ ಖಜುರ್ಗಿಯವರು, ತಮ್ಮ ಕನಸಿಗೆ ರೂಪಕೊಟ್ಟು ಸಂಕಲ್ಪ ಫೌಂಡೇಷನ್ ಮೂಲಕ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜುವನ್ನು ಸ್ಥಾಪಿಸಿ, ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಸಿದವನಿಗೆ ಮೀನು ಕೊಡಬೇಡಿ, ಮೀನು ಹಿಡಿಯುವುದನ್ನು ಕಲಿಸಿ” ಎಂಬ ತತ್ವವನ್ನು ಶಿಕ್ಷಣ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತಂದಿರುವವರು ಅವರು. ದಿಶಾ ಕಾಲೇಜು ಅನೇಕ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವಲ್ಲ, ಆತ್ಮವಿಶ್ವಾಸ, ಧೈರ್ಯ ಮತ್ತು ಬದುಕಿನ ದಿಕ್ಕು ನೀಡಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅನೇಕ ಸಾಧಕರನ್ನು ರೂಪಿಸಿದ್ದಾರೆ.

 ವಿದ್ಯಾರ್ಥಿಗಳ ಮನಸ್ಸನ್ನು ಓದುವ ಶಿಕ್ಷಕ

ಶಿವಾನಂದ ಖಜುರ್ಗಿಯವರು ಕೇವಲ ಶಿಕ್ಷಕರಲ್ಲ; ಅವರು ಮನೋವಿಜ್ಞಾನಿಯಂತೆ ಮಕ್ಕಳ ಮನಸ್ಸನ್ನು ಓದುವ ಗುರು. ವಿದ್ಯಾರ್ಥಿಗಳ ಭಯ, ಆತಂಕ, ತಲ್ಲಣ, ಸಂತೋಷ – ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಅವರ ಮಟ್ಟಕ್ಕೆ ಇಳಿದು ಮಾತನಾಡುವ ಅಪೂರ್ವ ಗುಣ ಅವರದ್ದು. “ಧೈರ್ಯ ಮತ್ತು ಪ್ರಯತ್ನವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ” ಎಂಬ ಮಾತುಗಳನ್ನು ಹೇಳುತ್ತಲೇ, ವಿದ್ಯಾರ್ಥಿಗಳಲ್ಲಿ ಓದಿನ ಹಸಿವು ಹೆಚ್ಚಿಸುವ ಪ್ರೇರಣಾಸ್ರೋತವಾಗಿದ್ದಾರೆ.

ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ ಮತ್ತು ನೈತಿಕ ಮೌಲ್ಯಗಳು ಅತ್ಯವಶ್ಯಕವೆಂದು ನಂಬುವ ಅವರು, ಬೌದ್ಧಿಕ ಬೆಳವಣಿಗೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಮಹತ್ವ ನೀಡುತ್ತಾರೆ. ಅವರ ಶಿಕ್ಷಣ ಸಂಸ್ಥೆಯೇ ಈ ತತ್ವಕ್ಕೆ ಸಾಕ್ಷಿಯಾಗಿದೆ.

 ಸಮಾಜಮುಖಿ ಚಿಂತನೆ ಮತ್ತು ನಾಯಕತ್ವ

ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಶಿವಾನಂದ ಖಜುರ್ಗಿಯವರು, ಜಿಲ್ಲೆಯಾದ್ಯಂತ ನಡೆಯುವ ಅನೇಕ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪರೋಕ್ಷವಾಗಿ ಕಾರಣಿಕರ್ತರಾಗಿದ್ದಾರೆ. ಹಲವಾರು ಒತ್ತಡಗಳ ನಡುವೆಯೂ ಸಮಾಜದ ನೈತಿಕ ಮೌಲ್ಯಗಳನ್ನು ಉಳಿಸುವ ಪ್ರಯತ್ನದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ.

ಎಲ್ಲರನ್ನು ಒಳಗೊಳ್ಳುವ ಗುಣ, ನಂಬಿಕೆ, ವಿಶ್ವಾಸ ಮತ್ತು ಸರಳ ವ್ಯಕ್ತಿತ್ವದ ಫಲವಾಗಿ, ಇತ್ತೀಚೆಗೆ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಮೇಲಿನ ಗೌರವ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ.

ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿನ ಅಪಾರ ಕೊಡುಗೆಗಾಗಿ ಇವರಿಗೆ ಯುವ ಚೇತನ,ಶಂಕರಶ್ರೀ, ವಿದ್ಯಾಧರ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿರುವುದು ಅವರ ಸಾಧನೆಯ ಸಾರ್ಥಕತೆ.

        ವ್ಯಕ್ತಿ ತನ್ನ ವ್ಯಕ್ತಿತ್ವ ಮತ್ತು ಒಳ್ಳೆತನದಿಂದಲೇ ಶಾಶ್ವತವಾಗಿ ಉಳಿಯುತ್ತಾನೆ. ಶಿವಾನಂದ ಖಜುರ್ಗಿಯವರು ತಮ್ಮ ಕಾರ್ಯ, ಸೇವೆ ಮತ್ತು ಅಂತಃಕರಣದ ಶುದ್ಧತೆಯಿಂದ ಜನರ ಮನಸ್ಸಿನಲ್ಲಿ ಮನೆಮಾಡಿದ್ದಾರೆ. ಶಿಕ್ಷಣದ ಬೆಳಕಿನಿಂದ ಬಡವರ ಮಕ್ಕಳ ಬದುಕಿನಲ್ಲಿ ಮಂದಹಾಸ ಮೂಡಿಸಬೇಕೆಂಬ ಅವರ ಕನಸು, ಇಂದು ಸಾವಿರಾರು ಕುಟುಂಬಗಳ ಆಶಾಕಿರಣವಾಗಿದೆ.

ಇವತ್ತಿನ ಈ ಶುಭ ದಿನ – ನಿಮ್ಮ ಜನ್ಮದಿನದಂದುನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯೂ ಯಶಸ್ಸಿನ ದಾರಿಯಾಗಲಿ,ನೀವು ನಡೆಯುವ ಹಾದಿ ಸದಾ ಹಸಿರಾಗಿರಲಿ,ಸುಖ-ಶಾಂತಿ-ಸಂತೋಷ ನಿಮ್ಮ ಮನೆಮನ ತುಂಬಲಿ.ಮತ್ತೊಮ್ಮೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು.

-ಶರಣಗೌಡ ಪಾಟೀಲ ಪಾಳಾ