ಎಲ್ ಪಿಜಿ ದರ ಏರಿಕೆಗೆ ಕರವೇ ಖಂಡನೆ
ಎಲ್ ಪಿಜಿ ದರ ಏರಿಕೆಗೆ ಕರವೇ ಖಂಡನೆ
ಕಲಬುರಗಿ: ಇತ್ತೀಚೆಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡಿ, ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹60 ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹115 ರಷ್ಟು ಹೆಚ್ಚಳ ಮಾಡಿರುವುದು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಭಾರೀ ಹೊರೆ ಹಾಕಿದಂತಾಗಿದೆ ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕ ಅಧ್ಯಕ್ಷ ವಿಜಯಕುಮಾರ ಅಂಕಲಗಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈಗಾಗಲೇ ದುಬಾರಿ ಬೆಲೆಯಿಂದ ಸಂಕಷ್ಟದಲ್ಲಿರುವ ಸಾಮಾನ್ಯ ಜನತೆಗೆ ಈ ನಿರ್ಧಾರ ದೊಡ್ಡ ಹೊಡೆತವಾಗಿದೆ.
ಚುನಾವಣೆಯ ಮುನ್ನ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಅವಶ್ಯಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿ ನಂತರ ಬೆಲೆ ಏರಿಕೆ ಮಾಡುವುದು ನರೇಂದ್ರ ಮೋದಿ ರವರ ತಂತ್ರಗಾರಿಕೆಯಾಗಿದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತೇವೆ ಮತ್ತು ದೇಶವನ್ನು ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರವು ಇಂದು ತನ್ನದೇ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2014ರಿಂದ 2025ರ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಸಂಭವಿಸಿರುವ ನಿರಂತರ ಏರಿಕೆ ಸಾಮಾನ್ಯ ಕುಟುಂಬಗಳ ಜೀವನವನ್ನು ದುಬಾರಿಯಾಗಿಸಿದ್ದು, ಸಬ್ಸಿಡಿ ವ್ಯವಸ್ಥೆಯನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸರ್ಕಾರ ಆರ್ಥಿಕ ಹೊರೆ ಹಾಕಿರುವುದು ಅತ್ಯಂತ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
