ಮಾಧ್ಯಮ ಲೋಕದ ಧ್ರುವತಾರೆ – ಸದಾನಂದ ಜೋಶಿ

ಮಾಧ್ಯಮ ಲೋಕದ ಧ್ರುವತಾರೆ – ಸದಾನಂದ ಜೋಶಿ
ಬೀದರ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಚಟುವಟಿಕೆಗಳ ಪ್ರತಿಬಿಂಬವನ್ನು ಜನಸಾಮಾನ್ಯರ ಮುಂದೆ ತಲುಪಿಸುವಲ್ಲಿ ಹಿರಿಯ ಪತ್ರಕರ್ತರಾದ ಶ್ರೀಯುತ ಸದಾನಂದ ಜೋಶಿ ಅವರು ತಮ್ಮದೇ ಆದ ವಿಭಿನ್ನ ಗುರುತನ್ನು ಮೂಡಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು “ಸಂಯುಕ್ತ ಕರ್ನಾಟಕ” ಪತ್ರಿಕೆಯ ಬೀದರ ಜಿಲ್ಲಾ ಹಿರಿಯ ವಿಶೇಷ ವರದಿಗಾರರಾಗಿ ಕಾರ್ಯಭಾರ ವಹಿಸಿಕೊಂಡಿರುವುದು ಜಿಲ್ಲೆಯ ಪತ್ರಿಕಾ ಲೋಕದ ಮಟ್ಟಿಗೆ ಮಹತ್ವದ ಬೆಳವಣಿಗೆಯಾಗಿದೆ.
ಮೂರು ದಶಕಗಳಿಗೂ ಹೆಚ್ಚುಕಾಲ ಮಾಧ್ಯಮ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿರುವ ಜೋಶಿಜಿ, “ಉತ್ತರ ಕರ್ನಾಟಕ”, “ವಿಜಯ ಕರ್ನಾಟಕ”, “ವಿಜಯವಾಣಿ” ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ತಮ್ಮ ಸುದ್ದಿಯ ನೈಪುಣ್ಯವನ್ನು ತೋರಿಸಿದ್ದಾರೆ. ವಿಶೇಷವಾಗಿ “ವಿಜಯವಾಣಿ” ಕಲಬುರಗಿ ಆವೃತ್ತಿಯ ಬ್ಯೂರೋ ಚೀಫ್ ಆಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಪ್ರಾದೇಶಿಕ ಸಮಸ್ಯೆಗಳನ್ನು ಬೆಳಕಿಗೆ ತಂದು, ಸಾಮಾನ್ಯರ ಧ್ವನಿಯನ್ನು ಸರ್ಕಾರದವರೆಗೂ ತಲುಪಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.
ಜೋಶಿ ಅವರಲ್ಲಿ ಸುದ್ದಿಯತ್ತ ಇರುವ ಚುರುಕು ಗಮನ, ನೇರ-ನಿಖರ ವರದಿ ಶೈಲಿ ಹಾಗೂ ತೀಕ್ಷ್ಣ ರಾಜಕೀಯ ವಿಶ್ಲೇಷಣೆ ವಿಶೇಷವಾಗಿವೆ. ಇವರ ಹರಿತವಾದ ಲೇಖನಿಗಳು ಜನಮನದಲ್ಲಿ ಬಿತ್ತಿರುವ ಪ್ರಭಾವ ವಿಶಿಷ್ಟ. ಜನಪರ ದೃಷ್ಟಿಕೋನದಿಂದ ಅವರು ಬರೆದ ಸುದ್ದಿ-ಲೇಖನಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾದವು. ಪ್ರಖರ ರಾಷ್ಟ್ರವಾದಿ ಪತ್ರಕರ್ತರಾಗಿ ಗುರುತಿಸಿಕೊಂಡಿರುವುದು ಅವರ ಇನ್ನೊಂದು ವೈಶಿಷ್ಟ್ಯ.
ಮಾತ್ರವಲ್ಲದೆ, ಹಲವಾರು ಯುವ ಪತ್ರಕರ್ತರನ್ನು ಮಾರ್ಗದರ್ಶನ ಮಾಡಿ ಬೆಳೆಸಿದ ಶ್ರೇಯಸ್ಸು ಸಹ ಇವರಿಗೆ ಸಲ್ಲುತ್ತದೆ. ಅವರ ಕೈಯಲ್ಲಿ ಕಲಿತು ಬೆಳೆದ ಅನೇಕರು ಇಂದು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಾಮುಖ್ಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರಳ ವ್ಯಕ್ತಿತ್ವ, ಆತ್ಮೀಯ ಒಡನಾಟ, ಎಲ್ಲರನ್ನೂ ಗೌರವದಿಂದ ಎದುರಿಸುವ ನೈಜ ಗುಣಗಳಿಂದ ಜೋಶಿಜಿ, ಬೀದರ ಜಿಲ್ಲೆಯ ಮಾಧ್ಯಮ ಕ್ಷೇತ್ರದ “ಧ್ರುವತಾರೆ”ಯಾಗಿ ಗುರುತಿಸಿಕೊಂಡಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶ್ವಾಸಾರ್ಹ ವೇದಿಕೆಗೆ ಅವರು ಮರಳಿ ಸೇರ್ಪಡೆಗೊಂಡಿರುವುದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಧ್ಯಮದ ಮೂಲಕ ನಿಸ್ಸಂದೇಹವಾಗಿ ಹೊಸ ಶಕ್ತಿಯನ್ನು ತುಂಬಲಿದೆ.
-ಶರಣಗೌಡ ಪಾಟೀಲ ಪಾಳಾ