ಶಹಾಬಾದ್‌ನಲ್ಲಿ ಮಾತಾ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿ ಕಳಸಾರೋಹಣ

ಶಹಾಬಾದ್‌ನಲ್ಲಿ ಮಾತಾ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿ ಕಳಸಾರೋಹಣ

ಶಹಾಬಾದ್‌ನಲ್ಲಿ ಮಾತಾ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿ ಕಳಸಾರೋಹಣ

ಶಹಾಬಾದ್ ನಗರದ ಅಪ್ಪರ ಮಡ್ಡಿ, ವಾರ್ಡ್ 25 ರಲ್ಲಿರುವ ಮಾತಾ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕಳಸಾರೋಹಣ ಮತ್ತು ಶಿವಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಲಿಂಗೈಕ್ಯ ಯಲ್ಲಪ್ಪ ಚಿಂತಾಮಣಿ ಅವರ ಆಶಯದಂತೆ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀಮತಿ ಯಂಕಮ್ಮ ಚಿಂತಾಮಣಿ ಅವರು ಅಮೃತ ಹಸ್ತದಿಂದ ಚಾಲನೆ ನೀಡಿದರು. ಮಹಾಧಾನದ ರೂಪದಲ್ಲಿ ಬೆಳ್ಳಿ ವಸ್ತ್ರ ಅಲಂಕಾರಗಳನ್ನು ಶುದ್ಧಗೊಳಿಸಿ ಹಾಗೂ ಭಕ್ತರ ಕಾಣಿಕೆಯಾಗಿ ನೀಡಿದ ಕಳಸವನ್ನು ಪೂಜೆ ಸಲ್ಲಿಸಿ, ಡೊಳ್ಳು ಹಾಗೂ ಸಂಗೀತ ವಾದ್ಯಗಳ ನಾದದೊಂದಿಗೆ ಭವ್ಯ ಮೆರೆವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಸಂಜೆ ಗೋಧೂಳಿ ಸಮಯದಲ್ಲಿ ದೇವಸ್ಥಾನ ತಲುಪಿದ ಕಳಸಕ್ಕೆ ಶಿಖರ ಪೂಜೆ ಸಲ್ಲಿಸಿ ಕಳಸಾರೋಹಣ ನೆರವೇರಿಸಲಾಯಿತು.

ಸಂಜೆ 7 ಗಂಟೆಗೆ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ದೇವಸ್ಥಾನದ ಕಾರ್ಯದರ್ಶಿ ಶ್ರೀಮತಿ ಗಂಗಾ ಅವರು ಭಕ್ತರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀಮತಿ ದುರ್ಗಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರ ಆಶಯದಂತೆ ದೇವಸ್ಥಾನದ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದರು.

ದೇವಸ್ಥಾನದ ಮುಖ್ಯ ಅರ್ಚಕ ಹಾಗೂ ಅಧ್ಯಕ್ಷ ಬಲಭೀಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದೇವಸ್ಥಾನಕ್ಕೆ ಕಾನೂನಾತ್ಮಕವಾಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲು ಹೋರಾಟ ನಡೆಸಿದ ಹಿರಿಯ ವಕೀಲ ಶಿವಲಿಂಗಪ್ಪ ಅಷ್ಟಗಿ ಅವರಿಗೆ ಸನ್ಮಾನಿಸಲಾಯಿತು. ಜೊತೆಗೆ ಸಂಘ ಮತ್ತು ಸಂಸ್ಥೆಗೆ “ಶಿವಶಕ್ತಿ” ರೂಪದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಜೆ. ವಿನೋದಕುಮಾರ ಅವರನ್ನೂ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಹಿರಿಯ ವಕೀಲ ಶಿವಲಿಂಗಪ್ಪ ಅಷ್ಟಗಿ ಅವರು ಮಾತನಾಡಿ, “ಎಲ್ಲರೂ ಶಿವಶಕ್ತಿ ಆರಾಧಕರು. ಭಕ್ತಿಗೆ ಜಾತಿ, ಮತ, ಧರ್ಮಗಳ ಬೇಧವಿಲ್ಲ; ದೇವರ ಮುಂದೆ ಎಲ್ಲರೂ ಒಂದೇ” ಎಂದು ಹೇಳಿದರು.

ದೇವಸ್ಥಾನದ ಖಜಾಂಚಿ ನೀಲಮ್ಮ ಚಿಂತಾಮಣಿ ಅವರು ವಂದನಾರ್ಪಣೆ ಸಲ್ಲಿಸಿ, ಮಹಾಶಕ್ತಿ ದೇವತೆಗಳ ಜೊತೆ ಮೌಲಾಅಲಿ ದೇವಸ್ಥಾನಕ್ಕೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ ರಾಷ್ಟ್ರೀಯ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ರಾತ್ರಿ 8 ಗಂಟೆಯಿಂದ ಸಂಗೀತೋತ್ಸವ ಜರುಗಿತು. ನಂತರ ರಾತ್ರಿ 10 ಗಂಟೆಯಿಂದ ಶಿವರಾತ್ರಿ ಜಾಗರಣೆ ನಿಮಿತ್ಯ ಭಜನೆ ಕಾರ್ಯಕ್ರಮ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಿತು. 16-02-2026 ರಂದು ಬೆಳಿಗ್ಗೆ ಪೂಜೆ ಬಳಿಕ 11 ರಿಂದ 3 ಗಂಟೆಯವರೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.