"ಗುಬ್ಬಿಕಟ್ಟಿದ ಗೂಡು"

"ಗುಬ್ಬಿಕಟ್ಟಿದ ಗೂಡು"

 "ಗುಬ್ಬಿಕಟ್ಟಿದ ಗೂಡು"

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಹೋದರಿ ಶ್ರೀಮತಿ ಮಲ್ಲಮ್ಮ ಎಸ್. ಕಾಳಗಿ ಕಾವ್ಯ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಾವ್ಯದ ಹದ, ಸಾಮಾಜಿಕ ಸಂವೇದನೆಗಳನ್ನು ಸರಿಯಾಗಿ ಗುರುತಿಸಿದ್ದಾರೆ. ಅವರ ಎಂಬತ್ತೂರು ಕವಿತೆಗಳಲ್ಲಿ ಸಾಮಾಜಿಕ, ರಾಜಕೀಯ, ವ್ಯಕ್ತಿಚಿತ್ರಣ, ನಾಡು-ನುಡಿ, ಪರಿಸರ ಕಾಳಜಿ, ಹಬ್ಬ-ಹರಿದಿನಗಳು, ಯೋಗಕ್ಕೆ ಸಂಬಂಧಿಸಿದ ಚಿಂತನೆಗಳು ಪ್ರಸ್ತುತ ಸಂಕಲನಕ್ಕೆ ಮೆರಗು ನೀಡಿವೆ. ನಿಸರ್ಗ ಪ್ರೇಮ, ದೇಶ ಚಿಂತನೆ, ರೈತನ ಬಗೆಗಿನ ಭಾವನೆ, ಮಹಾ ಪುರುಷರು, ಧರ್ಮವೀರರ ಬಗೆಗೆ ಮೆಚ್ಚುಗೆ, ಮಾತೃಭೂಮಿಯ ಶ್ರೇಷ್ಠತೆ, ವ್ಯಕ್ತಿ ಉನ್ನತಿಯ ವಿಚಾರಗಳು ಈ ಕವನ ಸಂಕಲನದಲ್ಲಿವೆ. ಆರಂಭದ ಕವಿತೆಯಲ್ಲೇ ಸ್ತ್ರೀವಾದಿ ಚಿಂತನೆ, ಶುದ್ಧ ರಾಜಕೀಯದ ಆಲೋಚನೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರಗಳನ್ನು ಕವಿತೆಗಳ ಮೂಲಕ ಕಂಡರಿಸಿದ್ದಾರೆ. 'ಮಹಿಳೆ ಸ್ವತಂತ್ರಳೇ' ಎಂಬ ಕವಿತೆಯಲ್ಲಿ ವ್ಯವಸ್ಥೆಯ ಕುರಿತ ಕ್ರೋಧವಿದೆ. ನಿಮ್ಮ ಮತ ಯಾರಿಗೆ ಹಿತ' ಎಂಬ ಕವಿತೆಯಲ್ಲಿ ಸಮಾಜ ಪರಿಶೋಧನೆಯ ಕಕ್ಕುಲತೆಯಿದೆ. ಏನಿದ್ದರೇನು ಶಾಂತಿ, ನೆಮ್ಮದಿಯಿಲ್ಲದನ್ನಕ್ಕ ಎಂಬ ಅವರ ಕಾವ್ಯ ಧೋರಣೆ ಸೂಕ್ಷ್ಮಸಂವೇದನೆಗಳನ್ನು ಕಟ್ಟಿಕೊಡುತ್ತದೆ. ಮಾನವನ ಕುಸುರಿ ಕಲೆಗಿಂತ ಗುಬ್ಬಚ್ಚಿ ಗೂಡಿನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುವ ಮಲ್ಲಮ್ಮನವರು ಕವಿತೆಯ ದನಿ, ಬನಿ, ಪ್ರಾಸಪದ ಗುರುತಿಸುವಲ್ಲಿ ತುಡಿದರೆ ಕಲಾತ್ಮಕ ಕಾವ್ಯ ಬರೆಯಬಲ್ಲರು. ಮಲ್ಲಮ್ಮನವರ ಮತದಾನ ಎಂಬ ಕವಿತೆಯಲ್ಲಿ-

'ಪ್ರಜಾಪ್ರಭುತ್ವಕೆ ಬೆಲೆ ಬಂದು ಮತ ಕಟ್ಟೆಗೆ ಕಳೆ ತಂದು ಮತದಾನದ ದಿನ ಬಂತು'

ಎಂಬ ಕವಿತೆಯಲ್ಲಿ ಮಲ್ಲಮ್ಮನವರು ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾದ ಮತದಾನದ ಗಳಿಗೆಯ ಬಗೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ವಾಧಿಕಾರಿ ದೇಶಗಳಿಗಿಂತ ಪ್ರಜಾಪ್ರಭುತ್ವ ರಾಷ್ಟ್ರಗಳು ಹೊಂದುವ ಸ್ವಾತಂತ್ರ್ಯ ಹಾಗೂ ಸಮಾನತೆಯ ಸಂದೇಶವನ್ನು ಈ ಕವಿತೆ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಅಂಬರದ ಅಜರಾಮರ ದಿಂದ ಪರೋಪಕಾರ ಪಯಣದ ವರೆಗೆ ಇಲ್ಲಿ ಸಂಚಯಗೊಂಡ ವೈವಿಧ್ಯಮಯ ಕವಿತೆಗಳು ಕವಯತ್ನಿಯ ಸಮಾಜಗ್ರಹಿಕೆ ಹಾಗೂ ಲೋಕ ತಿಳುವಳಿಕೆಗಳಿಗೆಕನ್ನಡಿ ಹಿಡಿಯುತ್ತವೆ. ಅರಣ್ಯದ ಐಸಿರಿ, ನಮ್ಮ ದೇಶದ ಯೋಧರು, ತೊಗರಿಯ ತೊಟ್ಟಿಲು, ಪುಸ್ತಕದ ಹುಮ್ಮಸ್ಸು, ಯೋಗ, ಸೀತಾರಾಮ, ಪುಟ್ಟರಾಜ, ಬದುಕು, ಹೋಳಿಹಬ್ಬ, ಸುಗ್ಗಿ ಸಂಭ್ರಮ, ಹುಟ್ಟು-ಸಾವು, ಕನ್ನಡದ ಕಂಪು, ಗುರು ದೇವೋ ಭವ, ಸಂಕ್ರಾಂತಿ ಸಡಗರ, ಅಪಶಕುನದ ಅವಾಂತರಗಳು, ಕೊಡುಗೈ ಪ್ರಕೃತಿ, ಹಾಡು ಹಗಲಿನ ಕೊಲೆಗಳು, ಭವ್ಯ ಭಾರತ, ಆರೋಗ್ಯವಂತರು, ಕಾಯಕದಲ್ಲಿ ಕೈಲಾಸ, ಮೂಲ ಹುಡುಕಬಾರದು, ಖದೀಮರು ಯಾರು, ಶ್ರಾವಣಮಾಸ ದೇವತೆಗಳ ವಾಸ, ಹೈಕುಗಳು, ಕಾಡು ಬೆಳಸಿ ಉಸಿರು ಉಳಿಸಿ, ಗುರಿ (ಟಂಕಾ), ಬದುಕೆಂಬ ಬಯಲಾಟ, ವಿಶ್ವದ ವಿಸ್ಮಯ, ಮತ್ತೆ ಬರಲಿ ಯುಗಾದಿ ಹೀಗೆ ಕವಯತ್ರಿ ಕವಿತೆಗಳಿಗೆ ಇಟ್ಟ ಶೀರ್ಷಿಕೆ ಹಾಗೂ ಬಿನ್ನವಿಸಿದ ವಿಷಯಗಳು ಸಮಾಜೋಪಯೋಗಿಯಾಗಿವೆ. ಕಾವ್ಯ ಮೀಮಾಂಸೆಯ ಪ್ರಕಾರ ಕವಿತೆ ಶಬ್ದ-ಅರ್ಥ ಹಾಗೂ ವಕ್ರಕ ವ್ಯಾಪಾರದಿಂದ ಕೂಡಿದ್ದು ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ಘಟನೆಗಳಿಗೆ ಕನ್ನಡಿ ಹಿಡಿಯುತ್ತದೆ. ಆದರೆ, ಕಾವ್ಯ ದೊಡ್ಡ ರಂಗೇಗೌಡರು ಹೇಳುವ ಹಾಗೆ 'ಅಕ್ಕಸಾಲಿಗನ ಆಭರಣ ತಯ್ಯಾರಿಕೆಯ ಕುಸುರಿ ಕಲೆಯಂತಿದ್ದು' ಅಲ್ಲಿ ಪದಬಳಕೆ, ವಸ್ತುವಿನ ಆಯ್ಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ತಿಳುವಳಿಕೆಗಳನ್ನು ಕವಿತೆಯ ಮೂಲಕ ಹೊರಹಾಕುವಲ್ಲಿ ರಸ, ಧ್ವನಿ ಹಾಗೂ ಔಚಿತ್ಯಗಳು ಕೆಲಸ ಮಾಡಬೇಕಾಗುತ್ತದೆ. ಶ್ರೀಮತಿ ಮಲ್ಲಮ್ಮ ಎಸ್. ಕಾಳಗಿ ಕನ್ನಡ ಕಾವ್ಯ ಪರಂಪರೆಯ ಜಾಡು ಹಿಡಿದು, ಸಮಾಜ ಮುಖಿ ಚಿಂತನೆ ಹಾಗೂ ಸಂವೇದನೆಗಳನ್ನು ವ್ಯಕ್ತಪಡಿಸಲು ಕಾವ್ಯ ಕ್ಷೇತ್ರ ಸೂಕ್ತವಾಗಿದೆ. ಅವರಿಂದ ಇನ್ನೂ ಅರ್ಥಗರ್ಭಿತ ಕವನ ಸಂಕಲನಗಳು ಬರಲಿ ಎಂದು ಹಾರೈಸುವೆ..

ಡಾ.ಶರಣಬಸಪ್ಪ ವಡ್ಡನಕೇರಿ