ನರಿಬೋಳ-ಚಾಮನೂರು ಸೇತುವೆ ಕಾಮಗಾರಿ ತಕ್ಷಣ ಪ್ರಾರಂಭಿಸಲು ಆಗ್ರಹಿಸಿ ಸುವರ್ಣಸೌಧಕ್ಕೆ ಮುತ್ತಿಗೆ

ನರಿಬೋಳ-ಚಾಮನೂರು ಸೇತುವೆ ಕಾಮಗಾರಿ ತಕ್ಷಣ ಪ್ರಾರಂಭಿಸಲು ಆಗ್ರಹಿಸಿ ಸುವರ್ಣಸೌಧಕ್ಕೆ ಮುತ್ತಿಗೆ

ನರಿಬೋಳ-ಚಾಮನೂರು ಸೇತುವೆ ಕಾಮಗಾರಿ ತಕ್ಷಣ ಪ್ರಾರಂಭಿಸಲು ಆಗ್ರಹಿಸಿ ಸುವರ್ಣಸೌಧಕ್ಕೆ ಮುತ್ತಿಗೆ

ಬೆಳಗಾವಿ: ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಿತಾಪೂರ ತಾಲೂಕಿನ ಚಾಮನೂರು ಗ್ರಾಮಗಳ ನಡುವೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಆರು ವರ್ಷಗಳಿಂದ ಸ್ಥಗಿತಗೊಂಡಿರುವುದನ್ನು ಖಂಡಿಸಿ ಗ್ರಾಮಸ್ಥರು ಬೆಳಗಾವಿಯ ಸುವರ್ಣ ಸೌಧ ಎದುರು ಪ್ರತಿಭಟನೆ ನಡೆಸಿದರು.

ಸೇತುವೆ ಕಾಮಗಾರಿ ಸುಮಾರು ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ ಸ್ಥಗಿತಗೊಂಡಿದ್ದು, ಇನ್ನೂ ಒಂದೂವರೆ ಕಾಲಂ ಕೆಲಸ ಬಾಕಿ ಇರುವಾಗಲೇ ಕೆಲಸ ನಿಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇತ್ತೀಚೆಗೆ ಬಂದ ಪ್ರವಾಹದಿಂದ ಅಪೂರ್ಣ ಕಾಮಗಾರಿ ಹಾನಿಗೊಳಗಾಗಿರುವುದು ಕಳಪೆ ಕಾಮಗಾರಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಎಂವಿ ಕಂಪನಿಯ ವಿರುದ್ಧ ಭ್ರಷ್ಟಾಚಾರ ಹಾಗೂ ಲೂಟಿ ಆರೋಪಗಳನ್ನು ಮಾಡಿ, ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ತಕ್ಷಣ ಟೆಂಡರ್ ಕರೆಯುವ ಮೂಲಕ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಗ್ರಾಮಸ್ಥರು ಸುವರ್ಣಸೌಧದೊಳಗೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರ ನಿವಾಸದ ಮುಂದೆ ಮುಂದಿನ ಹಂತದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿತು.

ಈ ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ (ನರಿಬೋಳ), ಅಭಿವೃದ್ಧಿ ಹೋರಾಟ ಸಮಿತಿಯ ಗ್ರಾಮೀಣ ಅಧ್ಯಕ್ಷ ಶ್ರವಣಕುಮಾರ ನಾಯಕ, ಸಾಮಾಜಿಕ ಹೋರಾಟಗಾರ ಮಾರೆಪ್ಪ ನಾಯಕ ಮಗದಂಪೂರ, ಜೇವರ್ಗಿ ತಾಲೂಕು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ಕವಲ್ದಾರ ಸೇರಿದಂತೆ ನಿಂಗಣ್ಣ ಚಿಗರಹಳ್ಳಿ, ಮೌನೇಶ ಹಾಲಗಡ್ಲಾ, ಭೀಮು ಇಜೇರಿ, ಯಲ್ಲಪ್ಪ ದೊರೆ ಜನಿವಾರ, ಸಂಜು ದೇಸಾಯಿ, ಧರ್ಮರಾಜ ಚಿಗರಹಳ್ಳಿ, ಈರಣ್ಣ ಗುತ್ತೇದಾರ, ಬಸವರಾಜ ದೊರೆ, ರಾಜು ನಾಯ್ಕೋಡಿ, ರಾಜು ಮೆಲಗಿರಿ, ನಾಗು ಹಂಗರಗಿ ಸೇರಿದಂತೆ ನೂರಾರು ಹೋರಾಟಗಾರರು ಭಾಗವಹಿಸಿದ್ದರು.

ಗ್ರಾಮಸ್ಥರು ತಕ್ಷಣ ಕಾಮಗಾರಿ ಪ್ರಾರಂಭಿಸದಿದ್ದರೆ ಸಂಬಂಧಿತ ಕಚೇರಿಗಳಿಗೆ ಕೀಲಿಹಾಕುವ ಚಳುವಳಿ ಆರಂಭಿಸುವುದಾಗಿ ಎಚ್ಚರಿಸಿದರು.