ಪದ್ಮಭೂಷಣ ಪುರಸ್ಕೃತ ಪತ್ರಕರ್ತ ಟಿಜೆಎಸ್ ಜಾರ್ಜ್ ಅಗಲಿಕೆ

ಪದ್ಮಭೂಷಣ ಪುರಸ್ಕೃತ ಪತ್ರಕರ್ತ ಟಿಜೆಎಸ್ ಜಾರ್ಜ್ ಅಗಲಿಕೆ

ಪದ್ಮಭೂಷಣ ಪುರಸ್ಕೃತ ಪತ್ರಕರ್ತ ಟಿಜೆಎಸ್ ಜಾರ್ಜ್ ಅಗಲಿಕೆ

ಪ್ರತಿಷ್ಠಿತ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನ

ಬೆಂಗಳೂರು: ಖ್ಯಾತ ಪತ್ರಕರ್ತ, ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕಾ ಸಮೂಹದ ಸಂಪಾದಕೀಯ ಸಲಹೆಗಾರ ಹಾಗೂ ನಿರ್ದೇಶಕರಾಗಿದ್ದ ಟಿಜೆಎಸ್ ಜಾರ್ಜ್ (97) ಅವರು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಪುತ್ರಿ ಶೀಬಾ ತಿಳಿಸಿದ್ದಾರೆ.

1928ರ ಮೇ 7ರಂದು ಕೇರಳದಲ್ಲಿ ಜನಿಸಿದ ಥಾಯಿಲ್ ಜಾಕೋಬ್ ಸೋನಿ ಜಾರ್ಜ್ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ 1950ರಲ್ಲಿ ಮುಂಬೈನ ಫ್ರೀ ಪ್ರೆಸ್ ಜರ್ನಲ್ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಬಳಿಕ ಪಟ್ನಾದ ಸರ್ಚ್‌ಲೈಟ್, ನ್ಯೂಯಾರ್ಕ್‌ನದ ಯುನೈಟೆಡ್ ನೇಷನ್ಸ್, ಹಾಂಗ್‌ಕಾಂಗ್‌ನ ಏಷಿಯಾವೀಕ್ ಸಂಸ್ಥಾಪಕ ಸಂಪಾದಕರಾಗಿಯೂ, ದ ಫಾರ್ ಈಸ್ಟರ್ನ್ ಎನಾಮಿಕ್ ರಿವ್ಯೂಯಲ್ಲೂ ಸೇವೆ ಸಲ್ಲಿಸಿದರು.

ಅವರು ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿ ಇಂಡಿಯನ್ ಎಕ್ಸ್‌ಪ್ರೆಸ್ ನೊಂದಿಗೆ ಕಾರ್ಯನಿರ್ವಹಿಸಿದರು. ಆ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ "ಪಾಯಿಂಟ್ ಆಫ್ ವ್ಯೂ" ಅಂಕಣ ಎರಡು ದಶಕಗಳಿಗೂ ಹೆಚ್ಚು ಕಾಲ ಜನಪ್ರಿಯವಾಗಿತ್ತು. ರಾಜಕೀಯ ಹಾಗೂ ಪ್ರಸಕ್ತ ವಿದ್ಯಮಾನಗಳ ಕುರಿತು ವಸ್ತುನಿಷ್ಠ ಬರಹಗಳಿಂದ ಅವರು ಹೆಸರಾಗಿದ್ದರು.

ಅವರ ಅನೇಕ ಕೃತಿಗಳು ಜನಪ್ರಿಯವಾಗಿದ್ದು, ವಿ.ಕೆ. ಕೃಷ್ಣ ಮೆನನ್, ನಟಿ ನರ್ಗೀಸ್, ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಚರಿತ್ರೆಗಳನ್ನು ಬರೆದಿದ್ದಾರೆ. 2007ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2011ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದರು. ಈ ವರ್ಷ ಆರಂಭದಲ್ಲಿ ಪತ್ನಿ ಅಮ್ಮು ಜಾರ್ಜ್ ನಿಧನರಾಗಿದ್ದರು. ಪುತ್ರ ಜೀತ್ ತಾಯಿಲ್ ಪತ್ರಕರ್ತ ಹಾಗೂ ಬರಹಗಾರರಾಗಿದ್ದಾರೆ.

“ಆರು ದಶಕಗಳ ಕಾಲ ತಮ್ಮ ಮೊನಚಾದ ಬರವಣಿಗೆ ಮೂಲಕ ಭಾರತೀಯ ಪತ್ರಿಕೋದ್ಯಮಕ್ಕೆ ಶಕ್ತಿ ತುಂಬಿದ ಜಾರ್ಜ್ ಓದುಗರಲ್ಲಿ ಮರುಚಿಂತನೆ ಮೂಡಿಸಿ, ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು.

ಜಾರ್ಜ್ ಅವರು ರಾಜಕೀಯ ವ್ಯವಸ್ಥೆಯನ್ನು ಜಾಗೃತಗೊಳಿಸುವ ಅಂಕಣಕಾರರಾಗಿದ್ದು, ಸಾಮಾಜಿಕ ಅಸಮಾನತೆ ಹಾಗೂ ಭ್ರಷ್ಟಾಚಾರದ ವಿರುದ್ಧ ಸದಾ ಧ್ವನಿ ಎತ್ತಿದರು” ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.