ಉತ್ಖನನಕ್ಕೆ ಕಾಯುತ್ತಿರುವ "ಜೀವನಿಕಾಪುರ>ಜೀವನಿಗೆ>ಜೀವಣಗಿ"

ಉತ್ಖನನಕ್ಕೆ ಕಾಯುತ್ತಿರುವ "ಜೀವನಿಕಾಪುರ>ಜೀವನಿಗೆ>ಜೀವಣಗಿ"

ಉತ್ಖನನಕ್ಕೆ ಕಾಯುತ್ತಿರುವ "ಜೀವನಿಕಾಪುರ>ಜೀವನಿಗೆ>ಜೀವಣಗಿ"

ಪ್ರಸ್ತುತ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಕೇಂದ್ರದಿಂದ ಕಲಬುರ್ಗಿ ಹುಮನಾಬಾದ ಹೆದ್ದಾರಿಯಿಂದ ೮ ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. (ಕಮಲಾಪುರದಿಂದ ಕಲಬುರಗಿಗೆ ಬರುವಾಗ ಎಡಕ್ಕೆ) ಕಮಲಾಪುರ ಹೊಸ ತಾಲೂಕಿಗೆ ಒಳಪಡುವ ಜೀವಣಗಿ ಗ್ರಾಮದ ತುಂಬೆಲ್ಲ ಚರಿತ್ರೆಯ ಕುರುಹುಗಳು ಅನಾಥವಾಗಿ ಬಿದ್ದಿವೆ. ಇತ್ತಿಚೆಗೆ ಗ್ರಾಮದ ಪ್ರಜ್ಞಾವಂತ ಸಮಾಜ ಸ್ಥಳೀಯ ಆಡಳಿತದ ಸಹಾಯದಿಂದ ಐತಿಹಾಸಿಕ ಪುಷ್ಕರಣಿಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜೀರ್ಣೋದ್ಧಾರಗೊಳಿಸಿದ್ದು, ನವ ವಧುವಿನಂತೆ ಕಂಗೊಳಿಸುತ್ತಿದೆ. ಇದಕ್ಕೆ ಕಾರಣವಾದ ಎಲ್ಲ ಮನಸ್ಸುಗಳು ಅಭಿನಂದನಾರ್ಹರು. ಈ ಮಾದರಿಯ ಕೆಲಸ ಗ್ರಾಮದಲ್ಲಿ ಹರಡಿಕೊಂಡಿರುವ ಶಿಲ್ಪ-ಶಾಸನಗಳ ವಿಷಯದಲ್ಲೂ ಆಗಬೇಕಿದೆ.

ಜೀವಣಗಿ ಇಂದ ಈವರೆಗೂ ಒಟ್ಟು ೩ ಶಾಸನಗಳು ಪ್ರಕಟಗೊಂಡಿವೆ (೧ ಜೈನ, ೨ ಶೈವ). ಅವುಗಳ ಉಲ್ಲೇಖಗಳನ್ವಯ ಅಲ್ಲಿ ಬಿಬ್ಬೇಶ್ವರ, ನಖರೇಶ್ವರ ದೇವಾಲಯಗಳು ಹಾಗೂ ಒಂದು ಪಾರ್ಶ್ವನಾಥ ಬಸದಿ ಇದ್ದ ಬಗ್ಗೆ ತಿಳಿದು ಬರುತ್ತದೆ. ಇವುಗಳಲ್ಲಿ ಪ್ರಸ್ತುತ ಶಾಸನೋಕ್ತ ಬಿಬ್ಬೇಶ್ವರ ದೇವಾಲಯ>ಬಿಂಬಲಿಂಗೇಶ್ವರ ದೇವಾಲಯ ಮಾತ್ರ ನಮಗೆ ಕಾಣಸಿಗುತ್ತದೆ. ಉಳಿದೆರೆಡು ಸ್ಮಾರಕಗಳು ಎಲ್ಲಿದ್ದವು ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳು ನಮಗೆ ಸಿಗುವುದಿಲ್ಲ. ಅವುಗಳ ಅವಶೇಷಗಳು ಸಹ ನೆಲದಲ್ಲಿ ಹೂತುಹೋಗಿರುವ ಸಾಧ್ಯತೆಗಳಿವೆ.

ಡಾ. ಡಿ.ಎಂ.ನಾಗರಾಜು ಅವರ 'ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಪುಸ್ತಕದಲ್ಲಿ ಜೀವಣಗಿಯಲ್ಲಿ ಕ್ರಿ.ಶ.೧೧೨೪-೨೫ರ ಒಂದು ಶಾಸನದಲ್ಲಿ 'ನಖರೇಶ್ವರ' ಎಂಬ ದೇವಾಲಯದ ಉಲ್ಲೇಖವಿದ್ದು, ಅದರಲ್ಲಿ ಆಚಾರ್ಯ ಲಾಕುಳೇಶ್ವರ ಪಂಡಿತ, ಪೆರ್ಗಡೆಗಳು ಮತ್ತು ಗ್ರಾಮದ ಆಶೇಷ ನಖರುಗಳು, ಜೀವಣಿಗೆಯ ನಖರೇಶ್ವರ ದೇವರಿಗೆ ದಾನ ನೀಡಿದ ಮಾಹಿತಿಗಳನ್ನು ಅದು ಒದಗಿಸುತ್ತದೆ.

ಗ್ರಾಮದಲ್ಲಿ ಪ್ರಸ್ತುತ ಪ್ರಾಚೀನ ಕಾಲದ್ದು ಎನ್ನಬಹುದಾದ ಹೊಸದಾಗಿ ಜೀರ್ಣೋದ್ಧಾರಗೊಂಡ ಶಾಸನೋಕ್ತ ದೇಗುಲವಿದ್ದು, ಬಿಂಬಲಿಂಗೇಶ್ವರ ದೇವಾಲಯ ಎಂದು ಅದನ್ನು ಕರೆಯಲಾಗುತ್ತದೆ. ಈ ದೇಗುಲವನ್ನು ಬಿಬ್ಬರಸ ನಿರ್ಮಿಸಿರುವನು. ಇದರ ಮೂಲ ಹೆಸರು 'ಬಿಬ್ಬೇಶ್ವರ ದೇವಾಲಯ' ಎಂದಿದೆ. ಬಾಣ ವಂಶದವರನ್ನು 'ಬಿಬ್ಬೇಶ್ವರ ಪಾದಾರಾಧಕರು' ಎಂದು ಕರೆಯಲಾಗಿದ್ದನ್ನು ನಾವು ಗಮನಿಸಬೇಕಿದೆ. ಇವರ ಆಳ್ವಿಕೆಯ ಇತರೆ ಸ್ಥಳಗಳಲ್ಲಿಯೂ ಸಹ 'ಬಿಬ್ಬೇಶ್ವರ' ಹೆಸರಿನ ಅನೇಕ ದೇವಾಲಯಗಳಿರುವುದನ್ನು ನಾವು ನೋಡಬಹುದು. ಕಾಳಗಿ ಪಟ್ಟಣದಲ್ಲೂ ಈ ಹೆಸರಿನ ದೇವಾಲಯವಿದೆ ಎಂದು ಹೇಳಲಾಗುತ್ತದೆ. ಬಿಬ್ಬೇಶ್ವರ>ಬಿಂಬಲಿಂಗೇಶ್ವರ ಹಳೆಯ ಕಾಲದ ದೇವಾಲಯವು ಪ್ರಸ್ತುತ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಆನಂತರದ ರಚನೆಗಳು ಉಳಿದುಕೊಂಡಿವೆ. ಪ್ರಸ್ತುತ ಅದು ಉತ್ಪನ್ನವನ್ನು ಬಯಸುತ್ತದೆ. ಈಗ ಅಲ್ಪಸ್ವಲ್ಪವಾಗಿ ಕಂಡುಬರುವ ಜಗತಿಯ ಭಾಗವನ್ನು ಗಮನಿಸಿದರೆ ಹಿಂದೆ ಇದು ಈಗೀನ ಸಂರಚನೆಗಿಂತ ಭಿನ್ನವಾಗಿಯೂ, ದೊಡ್ಡದಾಗಿಯೂ ಇದ್ದಂತೆ ತೋರುತ್ತದೆ.

ಬಿಬ್ಬೇಶ್ವರ ದೇವಾಲಯವು ಎತ್ತರದ ಜಗಲಿಯ ಮೇಲೆ ನೆಲೆ ನಿಂತಂತಿದೆ. ಗರ್ಭಗೃಹ, ನವರಂಗ, ಅಂತರಾಳ ಮತ್ತು ಪ್ರದಕ್ಷಿಣಾ ಪಥವನ್ನು ಹೊಂದಿದೆ. ಈ ದೇವಾಲಯದ ಒಳಭಾಗಗಳಲ್ಲಿ ಹಾಗೂ ಹೊರ ಆವರಣದ ಕಾಂಪೌಂಡ್ ಗೋಡೆಯ ಮೇಲೆ ಅನೇಕ ಐತಿಹಾಸಿಕ ಶಿಲ್ಪಗಳನ್ನು ಅಂಟಿಸಿದಂತೆ ಕಟ್ಟಲಾಗಿದೆ. ಮಹಿಷಾಸುರ ಮರ್ದಿನಿ, ಗಣಪತಿ, ದ್ವಾರಪಾಲಕರು, ಹೆಸರಿಲ್ಲದ ಸ್ತ್ರೀ ಶಿಲ್ಪಗಳು ಅಲ್ಲಲ್ಲಿ ಕಂಡು ಬರುತ್ತವೆ. ಈ ದೇವಾಲಯದ ಎಡಕ್ಕೆ ಕಲ್ಯಾಣಿ (ಪುಷ್ಕರಣಿ) ಇದೆ. ಅದನ್ನು ಸ್ಥಳೀಯರು 'ಭಾರಂಬಾಯಿ(ವಿ)' ಎಂದು ಕರೆಯುತ್ತಾರೆ. ಕಲ್ಯಾಣಿಗೆ ನಾಲ್ಕು ದಿಕ್ಕಿನಿಂದ ಪ್ರವೇಶಿಸಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಶಾಂತಿಲಿಂಗೇಶ್ವರ ಸಂಸ್ಥಾನ ಮಠ, ಖೇಳಗಿ ಹೆಸರಿನ ಹಳೆಯದಾದ ಕಟ್ಟಡವುಳ್ಳ ಮಠವೊಂದಿದೆ. ಅದರ ಎದುರಿನ ಕಟ್ಟೆಯೊಂದರ ಮೇಲೆ ಭಗ್ನಸ್ಥಿತಿಯ ನಾಗಶಿಲ್ಪಗಳಿವೆ.

ಈ ದೇವಾಲಯದ ಪ್ರಾಂಗಣದಲ್ಲಿರುವ ಕ್ರಿ.ಶ.೧೨ನೇ ಶತಮಾನದ ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಗದೇಕಮಲ್ಲನ ಜೈನ ಶಾಸನದಲ್ಲಿ 'ಲಂದೆಯ' ಈಗಿನ ಆಳಂದದ ಶಾಂತಿನಾಥ ದೇವರಿಗೆ ಪ್ರತಿಬದ್ಧವಾದ ಪಾರ್ಶ್ವನಾಥ ದೇವರಿಗೆಂದು ಬಿಬ್ಬೇಶ್ವರ ದೇವರ ಆಚಾರ್ಯ ಕ್ರಿಯಾಶಕ್ತಿ ಪಂಡಿತರು ಊರಿನ ಪ್ರಭು ಹಾಗೂ ನಖರರು (ವ್ಯಾಪಾರಿಗಳು) ಭೂಮಿ ಹಾಗೂ ತೋಟಗಳನ್ನು ದಾನ ಬಿಟ್ಟ ಬಗ್ಗೆ ಅದು ತಿಳಿಸುತ್ತದೆ. ಶೈವ ಆಚಾರ್ಯರು ಜೈನ ಧರ್ಮಕ್ಕೆ ದಾನ ನೀಡಿದ್ದು ವಿಶೇಷವೆನಿಸುತ್ತದೆ. ಇಂತಹ ಧಾರ್ಮಿಕ ಸೌಹಾರ್ದತೆಯ ಉದಾಹರಣೆಗಳು ಜಿಲ್ಲೆಯ ಸೇಡಂ ಹಾಗೂ ಇತರೆ ಶಾಸನಗಳಲ್ಲಿಯೂ ನಮಗೆ ನೋಡಲು ಸಿಗುತ್ತವೆ. ಈ ಶಾಸನದಲ್ಲಿ ಹೇಳಿದ ಜೈನ ಬಸದಿಯು ಇಂದು ಊರಿನಲ್ಲಿ ಉಳಿದಿಲ್ಲ. ಆದರೆ ಜಿನ ತೀರ್ಥಂಕರರ ಮೂರ್ತಿಯೊಂದು ಊರಿನ ಶಾಲೆಯ ಆವರಣದಲ್ಲಿ ಇರಿಸಲಾಗಿದ್ದು, ಬಸದಿಯ ಬಗೆಗಿನ ಕುರುಹುಗಳು ನಮಗೆ ಸಿಗುವುದಿಲ್ಲ. ಅದಕ್ಕೆ ಉತ್ಖನನದ ಅವಶ್ಯಕತೆ ಇದೆ.

ಬಾಣರು ಕಲಬುರಗಿ ಜಿಲ್ಲೆಯಲ್ಲಿದ್ದ ಸಾವಿರ ಹಳ್ಳಿಗಳ 'ಮನ್ನೆದಡಿ ಸಾಸಿರ ನಾಡು' ಎಂಬ ಪ್ರಾಂತ್ಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಕಾಳಗಿ ಇವರ ರಾಜಧಾನಿಯಾಗಿತ್ತು. ಕಾಳಗಿಯ ಬಹುತೇಕ ಕಲಾತ್ಮಕ ರಚನೆಗಳು ಇವರ ಉಸ್ತುವಾರಿಯಲ್ಲಿಯೇ ರೂಪ ತಳೆದಿರುವ ಬಗ್ಗೆ ನಮಗೆ ಮಾಹಿತಿಗಳು ಸಿಗುತ್ತವೆ. ಇಲ್ಲಿಂದ ಮಹಾಮಂಡಳೇಶ್ವರರಾಗಿ ಬಿಬ್ಬರಸ, ಚಂದರಸ, ಗೊಂಕರಸ ಮತ್ತು ವೀರಗೊಂಕರಸ ಎಂಬುವವರು ಆಳಿ ಹೋಗಿದ್ದಾರೆ. (ಆಕರ: ಶ್ರೀ ತೀರ್ಥಕುಮಾರ ಬೆಳಕೋಟಾ ಅವರ ಪ್ರಜಾವಾಣಿಯ ಬರಹ)

ಜೀವಣಗಿಯಲ್ಲಿ ಸಿಕ್ಕ ಕ್ರಿ.ಶ.೧೧೦೬ರ ಶಾಸನವು ಬಾಣ ವಂಶದ ಬಿಬ್ಬರಸರು 'ಜೀವನಿಕಾಪುರ'ದಲ್ಲಿ ಸಾವಿರ ಶಿವಲಿಂಗಗಳು ಹಾಗೂ ನಂದಿಗಳನ್ನು ಸ್ಥಾಪಿಸಿರುವ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಎನ್ನಲಾಗಿದೆ. ಆದರೆ, ಆ ಸಾವಿರ ಲಿಂಗಗಳಾಗಲಿ ಅಥವಾ ನಂದಿ ಮೂರ್ತಿಗಳಾಗಲಿ ಪ್ರಸ್ತುತ ಗ್ರಾಮದಲ್ಲಿ ಕಂಡು ಬರುವುದಿಲ್ಲ. (ಆಕರ: ಮಿಥುನ್‌ ರೆಡ್ಡಿ ಅವರ ಬರಹ)

ದಿ:೩೧.೦೭.೨೦೨೪.

ಹಿರಿಯ ಸಂಶೋಧಕರಾದ ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ ಮತ್ತು ಡಾ.ಆನಂದ ಸಿದ್ಧಾಮಣಿ ಅವರೊಂದಿಗಿನ ಕ್ಷೇತ್ರಕಾರ್ಯ.

- ಡಾ. ವೀರಶೆಟ್ಟಿ ಬಿ.ಗಾರಂಪಳ್ಳಿ.