ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ*

ಬಸವಣ್ಣನೆಂಬ ಆಚಾರಲಿಂಗವ ಪಿಡಿದು
ಅನಿಮಿಷಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಗುರುಲಿಂಗವ ಪಿಡಿದು ಮಡಿವಾಳಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಶಿವಲಿಂಗವ ಪಿಡಿದು ಚೆನ್ನಬಸವಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಜಂಗಮಲಿಂಗವ ಪಿಡಿದು ಸಿದ್ಧರಾಮಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಪ್ರಸಾದಲಿಂಗವ ಪಿಡಿದು ಘಟ್ಟಿವಾಳಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಮಹಾಲಿಂಗವ ಪಿಡಿದು ಅಜಗಣ್ಣ ಬಸವಣ್ಣನಂತಾದ.
ಬಸವಣ್ಣನೆಂಬ ಗುಹೇಶ್ವರಲಿಂಗವ ಪಿಡಿದು
ಪ್ರಭುದೇವರು ಜ್ಯೋತಿರ್ಮಯನಾದ.
ಅಸಂಖ್ಯಾತ ಮಹಾಗಣಂಗಳೆಲ್ಲರೂ ಬಸವಣ್ಣನೆಂಬ ನಿರವಯಲಿಂಗವ ಪಿಡಿದು,
ಶರಣಸತಿ ಲಿಂಗಪತಿಯಾದರು.
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ,
ಬಸವಪ್ರಿಯ ಕೂಡಲಸಂಗಮದೇವಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮಃ ಎನುತಿರ್ದೆನು.
ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ*
ವಚನ ಅನುಸಂಧಾನ*
ಲಿಂಗಾಯತಕ್ಕೆ ಅಪ್ಪ ಬಸವಣ್ಣನವರೇ ಗುರು ಲಿಂಗ ಜಂಗಮ ಎಲ್ಲಾ. ಅವರ ಅಪಾರವಾದ ಚಿಂತನೆಯ ಕಾರಣದಿಂದಾಗಿಯೇ ಲಿಂಗಾಯತ ಎಂಬ ಪ್ರಜ್ಞಾವಂತ ಕಾಯಕ ಜೀವಿಗಳ ಸಂಕುಲ ಹುಟ್ಟಿಕೊಂಡಿತು. ಶತ ಶತಮಾನದ ಕಾಲದಿಂದಾ ಅಕ್ಷರ ವಂಚಿತರಾಗಿದ್ದು, ಊರು ನೀರು ದೇವರು ಈ ಎಲ್ಲಾ ಸಂಗತಿಗಳಿಂದಲೂ ದೂರ ನೂಕಲ್ಪಟ್ಟ ಜನಸಮುದಾಯದ ಶೋಚನೀಯ ಶೋಷಣೆಗೆ ಮರುಗಿ ಕೊರಗಿದ ಅಪ್ಪ ಬಸವಣ್ಣನವರು ಇವರ ಅಂಗೈಯಲ್ಲಿಗೇ (ಇಷ್ಟ)ಲಿಂಗವನ್ನು ತಂದಿತ್ತರು.
ತನ್ಮೂಲಕ ಅವರಲ್ಲಿಯೇ ಹುದುಗಿರುವ ಅಪಾರ ವಾದ ಜ್ಞಾನ ಭಂಡಾರವನ್ನ ಹಾಗೂ ಷಡ್ಲಿಂಗವನ್ನ ಇಷ್ಟಲಿಂಗ ಸಾಧನೆಯ ಮೂಲಕ ಕರುಣಿಸಿದರು.
ಈ ಕಾರಣದಿಂದಾಗಿ ಅನೇಕರು ಅರಿವು ಆಚಾರ ಅನುಭಾವದ ನೆಲೆಯಲ್ಲಿ ಇಷ್ಟಲಿಂಗ ಸಾಧನೆಯ ಮಾಡಿ ಶರಣರಾದರು ಎನ್ನುವುದು ಈಗೀಗಂತೂ ಬಹುತೇಕ ಜನರ ಅರಿವಿಗೆ ಬಂದಿರುವುದು ಖರೆ.
ಈ ಮೇಲಿನ ವಚನ ರಚಿಸಿದ ವಚನಕಾರ ಶರಣ ಆ ಕಾಲದಲ್ಲಿಯೂ ಅಪ್ಪ ಬಸವಣ್ಣನವರ ಘನತೆ ಎಂಥಾದ್ದು ಮತ್ತು ಅವರಿಂದಾಗಿ ಯಾರ್ಯಾರು
ಎಂಥೆಂಥ ಸ್ಥಲಗಳನ್ನ ಸಾಧಿಸಿದರು ಎನ್ನುವುದನ್ನ
ಹಾಗೂ ತನ್ಮೂಲಕವಾಗಿ ಅವರುಗಳು ಗಳಿಸಿದ ಸ್ಥಾನ ಮಾನಗಳೇನು ಎಂಬುದನ್ನ ಲಿಂಗಾಯತ ಧರ್ಮದ ಮೂಲಭೂತ ಪ್ರಮುಖ ತತ್ವಗಳಲ್ಲಿ ಒಂದಾಗಿರುವ ಷಟಸ್ಥಳದ ಸಾಂಗತ್ಯದೊಂದಿಗೆ ಸಮೀಕರಿಸಿ ಸಂಯೋಜನೆ ಮಾಡಿ ಅವರವರಿಗೆ ಸೂಕ್ತವಾದಂಥ ಸ್ಥಲಗಳಲ್ಲಿ ಅವರನ್ನು ಹೆಸರಿಸಿ ಗೌರವಿಸಿರುವುದರ ಜೊತೆ ಜೊತೆಗೇ ಬಸವಣ್ಣನ ವರನ್ನ ಆಯಾ ಲಿಂಗಗಳಲ್ಲಿ ಪರಿಭಾವಿಸಿದ್ದಕ್ಕಾಗಿ
ಆಯಾ ಸಾಧನೆಯ ಮಾಡಿದ ಸಾಧಕ ಶರಣರೆಲ್ಲ ಶರಣತತ್ವದ ಬಹು ಮುಖ್ಯವಾದ ಮತ್ತು ಅಷ್ಟೇ ಅರ್ಥಪೂರ್ಣ ನುಡಿಗಟ್ಟಾಗಿರುವಂಥ "ಶರಣಸತಿ ಲಿಂಗಪತಿ" ಎನ್ನುವ ಪರಿಕಲ್ಪನೆಯನ್ನು ಸಾಧಿಸಿದ ಸಾಹಸಮಯ ಸಾಧನೆಯ ಸುಂದರ ಚಿತ್ರಣವನ್ನ
ಪ್ರಸ್ತುತ ವಚನವು ಎತ್ತಿ ಹಿಡಿದು ತೋರುತ್ತಿದೆ.
ಈ ವಚನವು ಮೊದಲ ಸಲದ ಓದಿನಲ್ಲೇ ಕರಗಿ, ತನ್ನೊಡಲಲ್ಲಿ ಒಸರುವ ಅರ್ಥದ ರಸವನ್ನುಣಿಸಿ, ಸಹೃದಯಿಗಳನ್ನು ತಣಿಸುವ ಕಾರಣದಿಂದ ಮತ್ತೆ ಅದನ್ನು ಪೃಥಕ್ಕರಿಸಿ, ಇಲ್ಲಿ ಹಿಂಜಿ ಹಿಂಜಿ ಗುಂಜು ಗುಂಜಾದ ಅನುಭಾವದ ತೆಳು ಗಂಜಿಯನ್ನಿಲ್ಲಿ ತಮ್ಮಗಳ ಅರಿವಿಗಾಗಿ ಅರಳಿ ತೆರೆದಂಥ ಎದೆಗೆ ಎರೆಯಲು ಹೋಗಿಲ್ಲಾ! ಹಾಗಾಗಿ, ಪ್ರಸ್ತುತವಾದ ಈ ಮೇಲಿನ ವಚನವನ್ನು ಪುನಃ ಪುನಃ ಓದುತ್ತಾ ಸ್ವಾನುಭವದ ಆನಂದ ರಸವನ್ನು ಓದುಗ ಬಂಧು ಗಳು ಸ್ವತಃ ತಾವುಗಳೇ ಈ ವಚನದ ಎತಾರ್ಥವ ಎಥೇಶ್ಚವಾಗಿ ಅನುಭವಿಸುವಿರಾಗಿ ಆಶಿಸುತ್ತೇನೆ.
ಅಳಗುಂಡಿ ಅಂದಾನಯ್ಯ