ನವರಾತ್ರಿಯ ದಿನಗಳು
ನವರಾತ್ರಿಯ ದಿನಗಳು
ಸೂತ ಪೌರಾಣಿಕ ಮಹರ್ಷಿಗಳಿಂದ ನಿರ್ಮಿತವಾದ ಆದಿಶಕ್ತಿಯ ಮಹಿಮೆ. ಇದೊಂದು ಹಿಂದೂ ತಾತ್ವಿಕ ಗ್ರಂಥದ ಸಾಲವಾಗಿದ್ದು, ದುರ್ಗಾ, ಸಪ್ತಶತಿ, ಶತಚಂಡಿ, ಚಂಡಿಪಥ, ಚಾಮುಂಡಿಗೆ ಚರಿತೆ ಎಂದು ಕರೆಯುವ ದೇವಿ ಮಹಾತ್ಮೆಯು ದುರ್ಗಿಯ ಅವತಾರಗಳ, ಪಾರ್ವತಿಯ ಮಹತಿ, ದೇವಾನುದೇವತೆಗಳೇ ಪರಮಾತ್ಮನನ್ನು ಮೊರೆಹೋಗಿ ಬೇಡಿಕೊಂಡು ಹೇಳಿಸಿಕೊಂಡ ಪುರಾಣ ಕಥೆಯಿದು. ದೇವಿ ಭಾಗವತ ಪುರಾಣ ಮತ್ತು ದೇವಿ ಉಪನಿಷತ್ ಜೊತೆಗೆ ಶಕ್ತಿ ವಾದದ ಪ್ರಮುಖ ಪಠ್ಯಗಳಲ್ಲಿ ಒಂದಾಗಿದೆ.
ದೇವಿ ಮಹಾತ್ಮೆಯು ಸಿಷ್ಠರ ರಕ್ಷಣೆ ,ದುಷ್ಪರ ಸಂಹಾರದ ವೃತ್ತಾಂತವಾಗಿದೆ .ಇದನ್ನು ನೈಮಿಶಾರಣ್ಯದಲ್ಲಿ ವ್ಯರ್ಥ ಕಾಲಹರಣ ಮಾಡದೆ ದೇವಿಯ ಚರಿತೆ ಪಠಣ ಮಾಡುವುದು., ದುರ್ಗಾ ಪೂಜೆಯಿಂದ ಕಷ್ಟ ಕಳೆದು ಸಂತೃಪ್ತಿಯ ಬದುಕು ನಮ್ಮದಾಗುವುದೆಂಬ ಬಯಕೆಯಿಂದ, ನಂಬಿಕೆಯಿಂದ ಎಲ್ಲರೂ ದೇವಿ ಮಹಾತ್ಮೆಯನ್ನು ಪಾರಾಯಣ ಮಾಡುವರು. ಇದು 7ನೇ ಶತಮಾನಕ್ಕಿಂತ ಮೊದಲೇ ರಚಿಸಲ್ಪಟ್ಟಿದೆ.ಎಂದು ಹೇಳುತ್ತಾರೆ .ಆಧ್ಯಾತ್ಮದ ಅಡಿಪಾಯದಲ್ಲಿ ಸ್ತ್ರೀ ಕೇಂದ್ರೀಕರಿಸಿದ ಸಾಹಿತ್ಯವಾಗಿದೆ .ದೇವಿ ಮಹಾತ್ಮೆಯು ಭಕ್ತಿಯ ಗ್ರಂಥವಾಗಿದೆ. ಇದರ ಗುರಿ ದೈವಿಕ ರೂಪಗಳ ಅನಾವರಣ..
ದೇವಿ ಪುರಾಣದ ಮಹಿಮೆಯನ್ನು ಪ್ರತಿ ಹಳ್ಳಿ ,ನಗರ, ಎಲ್ಲಡೆಯಲ್ಲಿ ,ಗುಡಿ ಗುಂಡಾರಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಮನೆಗಳಲ್ಲಿಯೂ ದೇವಿ ಪ್ರತಿಷ್ಠಾಪಿಸಿ ೯ ದಿನಗಳ ಕಾಲ ನಂದಾದೀಪದ ಎದುರಿಗೆ ಸತ್ಯ ಸಾಕ್ಷಾತ್ಕಾರದ ಕುರುಹಾಗಿ, ದುಷ್ಟರ ಧಮನದ ಪ್ರತೀಕವಾಗಿ, ಸೃಷ್ಟಿಕರ್ತೆಯ ಮಹಾತ್ಮೆಯನ್ನು ಸೋಡಶೋಪಚಾರಗಳಿಂದ ಪೂಜಿಸಿ, ಭಜಿಸಿ ,ಆರಾಧಿಸುವರು.
ದೇವಿಯ ಮಹಿಮೆ ರಕ್ಕಸರ ಸಂಹಾರದ ಕಥನವಾಗಿದೆ .ದೇವತೆಗಳನ್ನು ಓಡಿಸಿ ದೇವಲೋಕವನ್ನು ಆಳಬೇಕೆಂದು ಹರಸಾಹಸಪಟ್ಟ ಶುಭ ನಿಶುಂಬರನ್ನೂ, ಅವರ ಪರಮ ಶಿಷ್ಯರೆಲ್ಲರಾಧಿಯಾಗಿ ಸಂಹರಿಸಿದ ದೇವಿಯ ಕಥೆ ಇದು. ಚಂಡ ಮುಂಡರನ್ನು ಸಂಹರಿಸಿ ಚಾಮುಂಡಿಯಂತಲೂ, ರಕ್ತಬೀಜನನ್ನು ಸಂಹರಿಸಿ ರಕ್ತದಂತೆ ಎಂತಲೂ, ಮಹೀಶನನ್ನು ಸಂಹರಿಸಿ ಮಹೀಷಮರ್ದಿನಿ ಅಂತಲೂ, ಹೀಗೆ ಚಂಡಿ, ಚಾಮುಂಡಿ, ದುರ್ಗಿ, ರಕ್ತದಂತೆ ಮುಂತಾದ ನೂರೆಂಟು ನಾಮಗಳಿಂದ ಹೆಸರಾದ ಮಹಾತಾಯಿ ಲೋಕಮಾತೆ, ಲೋಕಸಂರಕ್ಷಕಿ ದೇವಿಯ ಮಹಾತ್ಮೆಯನ್ನು ನವರಾತ್ರಿಯಲ್ಲಿ ನವನವ ರೂಪಗಳಿಂದ ಅಲಂಕರಿಸಿ ಪೂಜಿಸುವ ಪೂಜೆ ತುಂಬಾ ಮಹತ್ವದ್ದು ಮತ್ತು ಶ್ರೇಷ್ಠವಾದದ್ದು. ಒಂಬತ್ತು ದಿನಗಳು ವಿವಿಧ ನಾಮಗಳಿಂದ ಶೈಲಾಪುತ್ರಿ, ಬ್ರಹ್ಮಚಾರಿನೇ, ಚಂದ್ರಗಂಟಾ, ಕುಷ್ಕಾಂಡಾ , ಸ್ಕಂದಮಾತಾ , ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಎಂದೂ. ನವ ಬಣ್ಣಗಳಿಂದ ಹಳದಿ ,ಹಸಿರು, ಬೂದು, ಕಿತ್ತಳೆ, ಬಿಳಿ ,ಕೆಂಪು, ರಾಯಲ್ ನೀಲಿ, ಗುಲಾಬಿ ಮತ್ತು ನೇರಳೆ ಬಣ್ಣಗಳಿಂದ ವಿರಾಜಿತಳಾದ ದೇವಿ. ಇವಳಂತೆ ಎಲ್ಲ ಸ್ತ್ರೀಯರು ಆ ದಿನದ ಬಣ್ಣದ ಸೀರೆಗಳನ್ನುಟ್ಟು ಭಯ, ಭಕ್ತಿಯಿಂದ ದೇವಿ ಸ್ತುತಿ ಮಾಡುವುದು. ಮನಮೋಹಕ, ಅಷ್ಟೇ ಭಕ್ತಿಪೂರ್ವಕವಾದದ್ದಾಗಿದೆ. ನಮ್ಮ ಭಾರತೀಯರ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ದಸರಾ .ಈ ನವರಾತ್ರಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುವ ನವರಾತ್ರಿ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಮುಗಿದ ನಂತರದ ದಿನದಂದೇ ಆರಂಭವಾಗುವ ನವರಾತ್ರಿ ನವ ಭರವಸೆಗಳ ಹೊತ್ತು ಬರುವ ರಾತ್ರಿ . ನವರಾತ್ರಿ ಅಂದರೆ ೯ ರಾತ್ರಿ ದೇವಿಯ ಪೂಜೆ, ಪಾರಾಯಣ, ಕೆಡುಕಿನ ಮೇಲೆ ಒಳಿತಿನ ಗೆಲುವಿನ ಸಂಕೇತವಾಗಿ ಪೂಜಿಸುವ ಪೂಜೆ. ದುರ್ಗಾ ಮಾತೆಯಿಂದ ವ್ಯಕ್ತವಾಗುವ ಎಲ್ಲಾ ರೂಪಗಳು ಶಕ್ತಿ ,ಶೌರ್ಯ, ಜ್ಞಾನ ,ಸೌಂದರ್ಯ, ಅನುಗ್ರಹ ಮತ್ತು ಮಂಗಳಕರತೆಯನ್ನು ಸೂಚಿಸುತ್ತವೆ .ಪ್ರಾರಂಭದ ದಿನವೇ ಘಟಸ್ತಾಪನೆ. ನಂತರ ಪ್ರತಿದಿನ ವಿಧವಿಧ ರೂಪದ ದೇವಿಯ ಪೂಜೆ, ಆರಾಧನೆ, ಇಷ್ಟಾರ್ಥಗಳ ಸಿದ್ಧಿಸುವವೆಂಬ ನಂಬಿಕೆಯಿಂದ ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಂದು ಒಂಬತ್ತು ದಿನಗಳ ನವರಾತ್ರಿ ಹಬ್ಬ ದೇಶದಾದ್ಯಂತ ದಾಂಡಿಯ ,ಗರ್ಭಾದಂತಹ ಸಾಂಪ್ರದಾಯಿಕ ನೃತ್ಯಗಳು ಭಕ್ತಿ ,ಶ್ರದ್ಧೆಯಿಂದ ಮತ್ತು ಸಂತೋಷದಿಂದ ಜರುಗುತ್ತವೆ .ಹಿಂದೂಗಳ ಹಬ್ಬವಾದ ಮಹತ್ವದ ದಿನವಿದು .ಶಾರದೀಯ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ .ಮನೆಯಲ್ಲಿ ಉಪಯೋಗಿಸುವ ಚೂರಿ ಚಾಕುವಿನಿಂದ ಹಿಡಿದು ಎಲ್ಲ ವಸ್ತುಗಳ ಆಯುಧಗಳ, ಪುಸ್ತಕ, ಪರಿಕರಗಳ ಪೂಜೆ. ರೈತನ ನೇಗಿಲು ,ಬಂದೂಕು ,ಫಿರಂಗಿ, ಯುದ್ಧ ಟ್ಯಾಂಕರ್ ,ವಿಮಾನ ,ಎಲ್ಲ ವಾಹನಗಳು, ಕಚೇರಿಯ ಎಲ್ಲ ವಸ್ತುಗಳ ಪೂಜೆ ನಡೆಯುತ್ತದೆ .ಇದಕ್ಕೊಂದು ಕಥೆ, ಮಹಾಭಾರತದ ಪಾಂಡವರು ೧೨ ವರ್ಷಗಳ ಕಾಲ ವನವಾಸ ಕಳೆದು ಒಂದು ವರ್ಷದ ಅಜ್ಞಾತವಾಸದ ಆ ವರ್ಷದಲ್ಲಿ ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿಟ್ಟು ಹೋಗುವರು .ಈ ಅಜ್ಞಾತವಾಸದ ಮುಗಿಸಿದ ದಿನವೇ ವಿಜಯದಶಮಿ. ವಿಜಯದ ಸಂಕೇತ .ವಿಜಯದ ಕುರುಹು. ವಿಜಯ ಸಾಧಿಸಿದ ಈ ದಿನದಂದು ಆಯುಧ ಪೂಜೆ ಆಚರಿಸಲಾಗುತ್ತದೆ. ನಮ್ಮ ರಕ್ಷಿಸುವ ಆಯುಧಗಳಿಗೆ ಎಲ್ಲ ಕೃತಜ್ಞತೆ ಅರ್ಪಿಸಲು ಈ ಆಯುಧ ಪೂಜೆ. ಹಿಂದೂ ಸಂಸ್ಕೃತಿಯ ಪ್ರಕಾರ ಎಲ್ಲಾ ಯಂತ್ರಗಳಿಗೂ ದೈವಿಕ ಶಕ್ತಿ ಇದೆ ಎಂಬ ನಂಬಿಕೆ ಕಾರಣ ಯಾವುದೇ ಸಮಸ್ಯೆ ಉಂಟಾಗದಿರಲೆಂದು ನಂಬಿ ಪೂಜೆ ಮಾಡುವುದು ವಾಡಿಕೆ.
ಈ ಕೊನೆಯ ದಿನದಂದು ಬನ್ನಿ ಮರಕ್ಕೆ ಉದಿಸುತ್ತಾ ,ಬಾರಿಸುತ್ತಾ, ಭಜನೆ ಮಾಡುತ್ತಾ ಬನ್ನಿ ಮರದ ಹತ್ತಿರ ಹೋಗಿ, ಬನ್ನಿ ಮರಕ್ಕೆ ಪೂಜೆ ಮಾಡಿ ಬನ್ನಿ ತಂದು ಆಯುಧಗಳಿಗೆ ಏರಿಸಿ ,”ನಾವು ನೀವು ಬನ್ನಿ ಬಂಗಾರವಾಗೋಣ” ಎಂದು ಎಲ್ಲರೂ ಸಹೃದಯತೆಯಿಂದ, ಶಾಂತಿ, ಸಮೃದ್ಧಿ ,ಸಹಬಾಳ್ವೆ ಬಯಸಿ, ಬನ್ನಿ ಹಂಚಿಕೊಂಡು, ಸಿಹಿತಿಂದು ಸಂಭ್ರಮಿಸುವ ಹಬ್ಬವೇ ಈ ಬನ್ನಿ ಹಬ್ಬ ,ವಿಜಯದಶಮಿ ಹಬ್ಬ.
ಅಂತೆಯೇ ಹುಟ್ಟಿನಿಂದ ನಾ ಕಂಡ ಶ್ರೇಷ್ಠವಾದ ,ನಿಯಮ ಬದ್ಧವಾದ ಪೂಜೆಯನ್ನು ನಮ್ಮ ತಂದೆ ಮಾಡುವುದನ್ನು ಕಂಡಿದ್ದೇನೆ .ಪೂಜೆ ಪುನಸ್ಕಾರ ೧೮ ಅಧ್ಯಾಯದ ದೇವಿ ಪುರಾಣವನ್ನು ಪ್ರತಿದಿನ ಬೆಳಗ್ಗೆ ಬೆಳಕು ಹರಿಯುವುದರೊಳಗೆ ಪೂಜೆ ಮಾಡಿ ಮುಗಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ,ತಯಾರಿ ,ಅಂದರೆ ಪತ್ರಿ, ಪುಷ್ಪ,ಗಂಧ, ನೈವೇದ್ಯ ಶ್ರೇಷ್ಠವಾದ ಕನಗಲ ಹೂ, ಹೀಗೆ ಎಲ್ಲವನ್ನು ತಾವೇ ಸಿದ್ಧ ಮಾಡಿಕೊಂಡು ದೇವರ ಮನೆ ಸಾರಿಸಿಕೊಂಡು ,ಹಳ್ಳದಿಂದ ನೀರು ತಂದು ಹೀಗೆ ಎಲ್ಲಾ ತಾವೇ ಮಾಡಬೇಕು. ಹೀಗೆ ವರ್ಷಪರ್ಯಂತ ಆ ದೇವಿಯ ಪೂಜಾ ವಿಧಿ ವಿಧಾನದಿಂದ ಮಾಡಿದರೆ ಅದರಿಂದ ಫಲ ದೊರಕುವುದೆಂದು ನಂಬಿಕೆ. ಕುಟುಂಬದವರೆಲ್ಲ ಕ್ಷೇಮವಾಗಿರಲೆಂಬ ಬಯಕೆ,, ಸತಿಪತಿ ,ಬಂಧು- ಬಳಗ ,ಮಂದಿ ಮಕ್ಕಳೆಲ್ಲ ನೆಮ್ಮದಿಯಿಂದ ಬದುಕಬೇಕೆಂಬ ಸದುದ್ದೇಶದಿಂದ ಈ ದೇವಿ ಮಹಾತ್ಮೆಯನ್ನು ಪಠಿಸಿ ಕೃತಾರ್ಥರಾಗುವರು.ದೇವಿ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಮಹಾದಾಸೆಯಿಂದ ನೆನೆವವರ ಚಿಂತಾಮಣಿ ಚಿಂತೆಹಾರಿ ,ಮಹಾತಾಯಿ, ಜಗದೊಡತಿ ,ಹರಿಹರ ಬ್ರಹ್ಮಾದಿಗಳಿಗೆ ತಾಯಿ, ಇಂತಹ ಜಗದಂಬೆಯ ಸ್ಮರಣೆ ಮಂತ್ರದಿಂದಲೇ ಬೇಡಿದೆಲ್ಲ ದೊರೆಯುವುದೆಂಬ ನಂಬಿಕೆ. ತಂದೆ ಹೇಳಿದ ನಿಯಮದಂತೆ ನಾನೂ ದೇವಿ ವರ್ಷದ ಪೂಜೆ ಮಾಡಿ ಮುಗಿಸಿದ್ದೇನೆ .ನಾನು ೧೧ ವರ್ಷದವಳಿದ್ದಾಗ ದೇವಿಯ ಸ್ಮರಣೆ ನಾಮಸ್ಮರಣೆಯೊಂದೇ ಉಸಿರಾಗಿಸಿಕೊಂಡು ಮಾಡಿದ್ದೆ. ದೇವಿಯ ಕಂಡ ಅನುಭವ, ನನ್ನ ತಂಗಿಯೂ ಕೂಡ ನನ್ನ ಅನುಸರಿಸಿ ಅವಳೂ ಪೂಜಗೈದಳು ೯ ವರ್ಷದವಳಿದ್ದಾಗ ,ಆದ ಅನುಭವಗಳು ಸಾಮ್ಯತೆ ಹೊಂದಿರುವವೆ. ಅದೇ ದೇವಿ ಕಣ್ಮುಂದೆ ಬಂದಂತೆ, ಸದಾ ನಮ್ಮೊಂದಿಗೆ ಅವಳು ಇದ್ದಂತೆ, ಎಲ್ಲೆಲ್ಲೂ ಹಿಂದೆ ಬಂದಂತೆ ,ನಕ್ಕಂತೆ ,ನಮ್ಮೊಂದಿಗೆ ಹಾಡಿ ನಲಿದಂತೆ ಎಲ್ಲಾ ಅನುಭವಗಳು ಇಂದಿಗೂ ಹಚ್ಚಹಸಿರು. ನನ್ನ ತಂದೆ ಈ ವರ್ಷದ ಪೂಜೆ ಮಾಡುವಾಗ ಇನ್ನೂ ಅನೇಕ ವಿಭಿನ್ನ ಅನುಭವಗಳು ನಮ್ಮ ತಾಯಿಗೆ ಆಗಿವೆ .ಅನೇಕ ವಿಚಿತ್ರ ಅನುಭವಗಳು ಆದದ್ದು ಹೇಳಿದ್ದಾರೆ .ದೇವಿ ದುಬ್ಬದ ಮೇಲೆ ಗುದ್ದಿದಂತೆ, ಬಡಿದೆಬ್ಬಿಸಿದಂತೆ ,ಕಣ್ಣೆದುರಿಗೆ ಬಂದಂತೆ ,ಅಟ್ಟದ ಮೇಲೆ ಹಲ್ಲುಕಿರಿದು ನಿಂತಂತೆ ,ಜೊತೆ ಕುಳಿತಂತೆ ,ಏನನ್ನು ಹೇಳಿದಂತೆ ಹೀಗೆ ಅನೇಕ ಅನುಭವಗಳು.
ಈ ನವರಾತ್ರಿಯಲ್ಲಿ ನಮ್ಮ ಮನೆಯ ಕಟ್ಟೆಯ ಮೇಲೆ ದೇವಿ ಮೂರ್ತಿ ಸ್ಥಾಪಿಸಿ, ಪ್ರತಿದಿನ ಊರ ಎಲ್ಲ ಜನ ಸೇರಿ ಪೂಜೆ ,ಪ್ರಾರ್ಥನೆ ,ಪಾರಾಯಣ ,ದೇವಿ ಪೂಜಾ ,ಸ್ಮರಣೆ ಮತ್ತು ಕೇಳುವುದು ,ಮಂಗಳಾರತಿ ನಮ್ಮ ಚಿಕ್ಕಪ್ಪ ಹೇಳುವ ಮಂಗಳಾರತಿ ತುಂಬಾ ಜ್ಞಾಪಕಕ್ಕೆ ಬರುತ್ತದೆ. “ ಮಂಗಳಾರುತಿ ಬೆಳಗು ಬನ್ನಿರೇ ಮಮ್ಮಾಯಿ ದೇವಿಗೆ ನಿತ್ಯ ಮುನಿಕುಲ ಜ್ಞಾನಶಕ್ತಿಗೆ” ಎಂಬ ಮಂಗಳಾರತಿ. ಎಲ್ಲವನ್ನೂ ಮುಗಿಸಿ ಎಲ್ಲರೂ ತಂದ ತೆಂಗಿನ ಕಾಯಿಗಳನ್ನು ಒಡೆದು ಪ್ರಸಾದ ಮಾಡುವುದು. ಮಡಿಯಿಂದ ಎಲ್ಲರೂ ಶುಭ್ರ ಬಟ್ಟೆ ಧರಿಸಿ ,ಸಂಜೆ ಮುಂಜಾನೆ ಎರಡೂ ವೇಳೆ ಸ್ನಾನ ಮಾಡಿ, ಉಪವಾಸ ಇದ್ದು, ಹಣೆಗೆ ವಿಭೂತಿ ಹಚ್ಚಿಕೊಂಡು ಶಿಸ್ತಿನಿಂದ ಕುಳಿತುಕೊಂಡು ಪೂಜೆ ಮಾಡುವ ಅನುಭವ ಸ್ಮರಣೀಯ. ನಾವು ಚಿಕ್ಕವರಿರುವಾಗ ಇದರ ಅನುಭವ ಎಷ್ಟೊಂದು ಹಿತವೆನಿಸುತ್ತಿತ್ತು ಎಂದರೆ ಅದನ್ನು ಬಣ್ಣಿಸಲಾಗದು. ೯ ದಿನಗಳ ದೇವಿಯ ಅವತಾರಗಳನ್ನು, ದೇವಿ ರಾಕ್ಷಸರನ್ನು ಸಂಹರಿಸಿದ ಮಹಿಮೆಯನ್ನು ಓದಿ, ಕೇಳಿ ,ತಿಳಿದುಕೊಂಡು, ಭಕ್ತಿಪರವಶತೆಯಲ್ಲಿ ಕಳೆದ ಆ ದಿನಗಳು ಮೈ ನವಿರೋಳಿಸುತ್ತವೆ. ಅಂದು ಕೊನೆಯ ದಿನ ಮನೆ ಮಂದಿಯೆಲ್ಲ ,ಊರ ಜನ ಎಲ್ಲ ಹೊಸ ಬಟ್ಟೆ ತೊಟ್ಟು ಬನ್ನಿ ಮರಕ್ಕೆ ಹೋಗಿ ಪೂಜೆ ಮಾಡಿ ಬನ್ನಿ ತಂದು ಮನೆ ಮನೆಗೆ, ದೇವಮಂದಿರಗಳಿಗೆ ಬನ್ನಿ ಅರ್ಪಿಸಿ, ಸಮೃದ್ಧಿ ಸಂತಸ ಬಯಸುತ್ತಾ, ಎಲ್ಲರೂ ನಗುನಗುತ್ತಾ, ಸಂತಸ ಹಂಚಿಕೊಳ್ಳುತ್ತಾ “ “ ನಾವು ನೀವು ಬಂಗಾರದಂಗ ಇರೋಣ” ಎಂದು ಕೈ ಮುಗಿದು, ಅಂದದ್ದೇ ಅಂದದ್ದು, ಹಿರಿಯರಿಗೆಲ್ಲ ವಿಶೇಷ ಗೌರವ, ಎಲ್ಲರೂ ಹಿರಿಯರ ಕಾಲಿಗೆ ಬಿದ್ದು ಬನ್ನಿ ಕೊಟ್ಟು ಆಯುಷ್ಯ, ಆರೋಗ್ಯ ,ಸಮೃದ್ಧಿ ಬಯಸುವ ದಿನ .ನಾವು ಸ್ವಾಮಿಗಳವರೆಂದು ನಮಗೆ ಎಲ್ಲರೂ ಬನ್ನಿಯೊಂದಿಗೆ ಚಿಲ್ಲರೆ ಹಣ ಕೊಡುತ್ತಿದ್ದರು ಎಂತಹ ಸಂಭ್ರಮ ಅದು ಬಣ್ಣಿಸಲಾದೀತೇ ?ಮರೆಯಲಾಗಿದ ಆ ದಿನ . ಕೊಟ್ಟ ಚಿಲ್ಲರೆ ಹಣವನ್ನು ಸಪ್ಪಳ ಮಾಡುತ್ತಾ ಉಡಿಯ ತುಂಬಾ ಮನೆಗೆ ತಂದು ಎನಿಸಿದ್ದೆ. ಸಂಭ್ರಮ, ಸಂತಸ, ಮುಜುಗರ ಏನೋ ಆನಂದ. ಒಟ್ಟಾರೆಯಾಗಿ ನವ ದಿನಗಳು ನವ ಅನುಭವ ರೋಮಾಂಚನವನ್ನು ನೀಡಿ ಹೋಗುತ್ತವೆ ಎನ್ನುವುದು ಸತ್ಯ. ಪ್ರತಿವರ್ಷ ಹೊಸದನ್ನೇ ಹೊತ್ತು ತರುತ್ತವೆ. ನಮ್ಮ ಸಂಸ್ಕೃತಿಯ ಉಳಿಸಿ ಬೆಳೆಸುವಲ್ಲಿ ಇಂತಹ ಹಬ್ಬಗಳು ಬಹಳ ಮಹತ್ವವನ್ನು ಹೊಂದಿವೆ. ದೈವಿಭಾವ ನಮ್ಮಲ್ಲಿ ಬೆಳೆಸಿ, ಭಕ್ತಿ ಭಾವವನ್ನು ಮೆರೆಸುವ ಕಾರ್ಯವನ್ನು ಇಂತಹ ಹಬ್ಬಗಳು ಮಾಡುತ್ತವೆ.
ಡಾ ಅನ್ನಪೂರ್ಣ ಹಿರೇಮಠ