ಹದಿಹರೆಯದವರ ತುಮುಲಗಳು
ಹದಿಹರೆಯದವರ ತುಮುಲಗಳು
ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಒಬ್ಬ ಪ್ರಾಣಿ, ಆದರೆ ಬುದ್ಧಿಯಿದೆ ಎನ್ನುವುದಕ್ಕೆ ಇವನು ಭಿನ್ನವಾಗಿದ್ದಾನೆ. ಸಾಮಾನ್ಯ ಬಯಕೆಗಳಾದ ಹಸಿವು ,ತೃಷೆ, ಆಶ್ರಯ ,ಬಯಕೆಯೊಂದಿಗೆ ಎಲ್ಲ ಪ್ರಾಣಿಗಳ ಹಾಗೆ ಹುಡುಕಾಟ, ತಡಕಾಟ, ಅಲೆತ, ಉಲಿತ ಎಲ್ಲವೂ ದೈವ ನಿರ್ಮಿತ ಸೃಷ್ಟಿಯಲ್ಲಿ ಎಲ್ಲ ಇದೆ .ಅಲ್ಲಲ್ಲಿ ಎಲ್ಲವನ್ನು ಇಟ್ಟು ಸಲಹುತಿಹನು ಜೀವಸಂಕುಲವನ್ನೆಲ್ಲ ಆ ದೇವನು.
ಮನುಕುಲ ಹುಟ್ಟುತ್ತ ಬೆಳವಣಿಗೆಯಾದ ಬಗೆ ಗೊತ್ತು ನಮಗೆ. ಮರ ಮಟ್ಟು ಆಶ್ರಯಿಸಿ ಹಣ್ಣು, ಹಂಪಲ, ಗೆಡ್ಡೆ, ಗೆಣಸು ತಿಂದು ಬದುಕುತ್ತಿದ್ದ ಮಾನವ ಈ ಮಟ್ಟದವರೆಗೆ ಬೆಳೆಯಲು ಕಾರಣ ಅವನ ಹಂಬಲ, ಆಸೆಗಳ ಅಬ್ಬರದಿಂದ. ಅನಂತ ಪ್ರಯತ್ನಗಳ ಫಲದಿಂದ ಗೂಡು- ಮಾಡು, ಮನೆ -ಮಾಲು ಹೀಗೆ ಬೆಳೆಯಿತು. ಆಸೆ ಆಕಾಂಕ್ಷೆಗಳು ಹೆಚ್ಚಿದಂತೆ ಅವನ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಯಿತು.
ಅವಶ್ಯಕತೆಗಳಿಗೆ ತಕ್ಕಂತೆ ವರ್ತನೆ, ಪ್ರತಿಕ್ರಿಯೆಗಳು ಬೆಳೆಯುತ್ತಾ ಬಂದವು.
ತಾಯೊಡಲಲ್ಲಿ ಒಂಬತ್ತು ತಿಂಗಳು ಇದ್ದು ಸವಿಯನೆಲ್ಲ ಮೆದ್ದು ಮೌನದಿಂದಿದ್ದು ನವಮಾಸ ಕಳೆದು ಹುಟ್ಟುತ್ತಲೇ ಅಳುವಿನೊಂದಿಗೆ ಜೀವನ ಪ್ರಾರಂಭ. ಅಲ್ಲಿಂದ ಆಸೆ, ದುಃಖ ,ಹಂಬಲ, ಅಳು- ನಗು ಎಲ್ಲವೂ ಒಂದೊಂದಾಗಿ ಅರಿವಿನ ಕದ ತಟ್ಟುತ್ತವೆ .ಮಗುವಾಗಿದ್ದಾಗ ಅಳುವಿನಿಂದ ತನ್ನೆಲ್ಲ ಅಪೇಕ್ಷೆ ಬೇಡಿಕೆಗಳನ್ನು ತೋರ್ಪಡಿಸುತ್ತಾ ಹಸಿವಿನ ಹಂಬಲ, ತೃಷೆಯಂಬಲ,ತಾಯಿಯಂಬಲ ಅನುಭವಿಸುತ್ತಾ ಬದಲಾವಣೆಗಳ ಅರಿವಿಲ್ಲದ ಬೆಳವಣಿಗೆ ಸಾಗುತ್ತಾ ರಟ್ಟು ,ರಾಡಿಯಲ್ಲಿ ಬಿದ್ದು ಹೊರಳಾಡಿ ,ತೆವಳಿ ,ಅಂಬೆಗಾಲಿಟ್ಟು ಎಡವುತ್ತಾ ಮೂಗು, ಮುಖ ತುಟಿ ಒಡೆದುಕೊಂಡು, ಅತ್ತು -ಕರೆದು, ಸಹಿಸಿಕೊಳ್ಳುತ್ತಲೇ ಸಾಗುವ ಜೀವನ ಇದು. ಜಡ್ಡು- ಜಾಪತ್ರೆ, ಮದ್ದು- ಮಸಿ ಏತಕ್ಕೆ? ಹೋರಾಟ ಯಾಕೆ ಬೇಕು ?ಈ ಬದುಕು ಯಾಕೆ? ದುಡಿಯಬೇಕು ಯಾಕೆ? ಶ್ರಮ ಪಡಬೇಕು ಏಕೆ? ಎಲ್ಲಾ ಸಹಿಸಬೇಕು. ಗೊತ್ತಿಲ್ಲ ಗುರಿಯಿಲ್ಲ .ಅಜ್ಜ ಅಜ್ಜಿ ಹಿರಿಯರು ನಡೆದಂತೆ ನಡೆ ನುಡಿ ,ಮಾತು ಕಲಿತುಕೊಳ್ಳುತ್ತಾ, ತಂದೆ ತಾಯಿಯಿಂದ ಕೈ ತುತ್ತು ಉಂಡು, ಅವರ ಕೈಹಿಡಿದು ಬೆಳೆದು, ಎಲ್ಲ ಬಂಧಗಳ ಜೊತೆ ನಗುನಗುತ್ತಾ ಕಲಿಕೆ ,ಓದು- ಬರಹ, ನೀತಿ -ನಿಯಮ ಎಲ್ಲವನ್ನೂ ಕಲಿಯುತ್ತಾ, ಅನುಸರಿಸುತ್ತಾ ಬಾಲ್ಯವನ್ನು ಸುಂದರವಾಗಿ ಕಳೆದು ಹತ್ತು ಹನ್ನೊಂದು ವರ್ಷ ಕಳೆದದ್ದೆ ಗೊತ್ತಾಗುವುದಿಲ್ಲ. ಈ ೧೧ರ ನಂತರ ಮತ್ತು ,೨೦ ರ ಒಳಗಿನ ಇರುವ ವಯಸ್ಸದು ಹದಿಹರೆಯದ ವಯಸ್ಸು. ಸಂಧ್ಯಾಕಾಲ, ಮಧ್ಯಾಹ್ನದ ಬಿಸಿಲು ಇದ್ದಂತೆ, ಹೀಗೆ ಆ ವಯಸ್ಸಿನಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳು ತೀವ್ರಗೊಳ್ಳುತ್ತವೆ.
ತನ್ನತನ ತಿಳಿಯುವ ಹಂತಕ್ಕೆ ಬರುವ ವಯಸ್ಸು ಎಲ್ಲಾ ಹೊಸದೆಂಬಂತೆ ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ,ಎಲ್ಲ ಸತ್ಯಗಳ ತಿಳಿಯುವ ತವಕ .ಎಲ್ಲ ಗೂಡಾರ್ಥಗಳ ಬಿಡಿಸುವ ಹಂಬಲ .ನಾನೇನನ್ನು ತಿಳಿದಿದ್ದೇನೆ ಇದೇ ಸತ್ಯ ಎನ್ನುವ ಮನೋಭಾವ ಬೆಳೆಯುತ್ತಾ ಹೋಗುವ ವಯಸ್ಸು. ಅಂದ ಚಂದದ ಕಡೆಗೆ ಗಮನ. ನಾನು ಸುಂದರವಾಗಿ ಕಾಣಬೇಕು ,ದೃಢಕಾಯನಾಗಿ ಇರಬೇಕು ಎನ್ನುವ ಪ್ರಯತ್ನಗಳು ಸದಾ ನಡಿಯುತ್ತವೆ. ಅದಕ್ಕೆ ನನಗೆ ಇಲ್ಲಿ ಒಂದು ಕವಿತೆ ನೆನಪಾಗುತ್ತದೆ.
“ಹುಚ್ಚು ಕೋಡಿ ಮನಸು, ಅದು ಹದಿನಾರರ ವಯಸ್ಸು ಮಾತು ಮಾತಿಗೆಕೋ ನಗು ಮರುಗಳಿಗೆ ಮೌನ, ಕನ್ನಡಿ ಮುಂದಿಷ್ಟು ಹೊತ್ತು” ಹೀಗೆ ಹದಿಹರೆಯದ ವಯಸ್ಸಿನವರನ್ನು ನೋಡಿ ಅವಲೋಕಿಸಿ ಕವಿ ಬರೆದಿದ್ದಾರೆ .ಅದೊಂದು ವಿಚಿತ್ರ ಮನೋಭಾವ .ನನ್ನದೆಲ್ಲಾ ಸರಿ ಎಂಬ ನಿಲುವು ಅವರದು ಅವರ ನೇರಕ್ಕೆ ಅದು ಸರಿನೇ.ನಾವು ಆ ವಯಸ್ಸನ್ನು ದಾಟಿಯೇ ಬಂದಿದ್ದೆವಲ್ಲವೇ?
ಕುತೂಹಲ, ಬಯಕೆ, ಉತ್ಸಾಹ, ಆಸಕ್ತಿ ,ಹಂಬಲ ಒಟ್ಟೊಟ್ಟಿಗೆ ಚಿಮ್ಮುವ ಕಾಲವದು .ಎಲ್ಲವನ್ನೂ ಮಾಡಬಲ್ಲೆ ಎಂಬ ಜಂಬ, ಎಲ್ಲಾ ಅನುಭವಿಸುವ ತವಕ, ಸಂದಿಗ್ದ ಪರಿಸ್ಥಿತಿ, ಯಾರಿಗೆ ಹೇಳಬೇಕು? ಏನು ಹೇಳಬೇಕು? ತನ್ನ ಮನದ ತುಮುಲಗಳು ತನಗೆ ಗೊತ್ತಾಗದೆ ಮೌನ. ಒಮ್ಮೊಮ್ಮೆ ನೋವು, ಕಿರಿಕಿರಿ ,ಒಮ್ಮೆ ಸಂಕಟ ಹೀಗೆ ಅವರ ತೊಳಲಾಟ, ಅವರಿಗೆ ಗೊತ್ತು. ವಾರಿಗೆಯವರೊಂದಿಗೆ ಓಡಾಡುವ ತವಕ ,ಬಯಕೆಗಳ ತೀರಿಸಿಕೊಳ್ಳುವ ಹಂಬಲ, ತಮಗೆ ಆದರ್ಶ ಎನಿಸಿದವರು ಏನು ಮಾಡುತ್ತಾರೆ? ಅದನ್ನೇ ಮಾಡಬೇಕೆಂಬ ತವಕ, ಸಮಾಜದಲ್ಲಿ ಮುಂಚೂಣಿಯಲ್ಲಿರುವವರ ಅನುಕರಣೆ ಮಾಡುವುದು ,ಅವರಾಡಿದಂತೆ ಆಡಬೇಕು, ಅವರು ಮಾಡಿದ್ದನ್ನೇ ಮಾಡಬೇಕು ,ಅವರು ಅವರಿಗೆ ಹೀರೋ ಹೀರೋಯಿನ್ ಆಗಿ ಕಾಣುತ್ತಾರೆ. ಆಕರ್ಷಕವಾದದ್ದೆಲ್ಲವನ್ನು ಮಾಡಬೇಕೆಂಬ ಬಯಕೆ ಅವರದ್ದಾಗಿರುತ್ತದೆ. ಎಲ್ಲಾ ಪಡೆಯಬೇಕು ಎನ್ನುವ ಮನಸ್ಥಿತಿ ಅವರನ್ನು ವಿಚಲಿತರನ್ನಾಗಿಸಿ, ಕೆಲವು ತಪ್ಪುಗಳಿಗೆ ಸೆಳೆಯುವುದು ಸಹಜ. ಬೌದ್ಧಿಕ ಬೆಳವಣಿಗೆಯಿಂದ ನನಗೆಲ್ಲ ತಿಳಿಯುತ್ತಿದೆ, ನಾನು ಮಾಡಿದ್ದು ಸರಿ ಎಂಬ ಭಾವನೆ ಅವರದು.ಮಾನಸಿಕವಾಗಿ ಎಲ್ಲ ಸಂಬಂಧಗಳ ಜೊತೆಗೆ ಸಲುಗೆಯಿಂದ, ಅವರ ಪ್ರೀತಿ ,ಆತ್ಮೀಯತೆ ಗಳಿಸುವ ಬಯಕೆಯ ತವಕ. ಇನ್ನು ದೈಹಿಕವಾಗಿ ಹಲವು ಬದಲಾವಣೆಗಳು. ಗಂಡು, ಹೆಣ್ಣು ಮಕ್ಕಳಲ್ಲಿ ತೀವ್ರತರ ಬದಲಾವಣೆಗಳು ತಮಗರಿವಿಲ್ಲದೆ ಅದಾವುದೋ ಸೆಳೆತ, ಹೊಳೆತ, ಏನೇನನ್ನು ಪಡೆಯುವ ತವಕ. ಜೊತೆಗೆ ತಪ್ಪು ಸರಿ ತಿಳಿಯದೆ ಪಾಲಕ, ಪೋಷಕರ ,ಸಮಾಜದ ,ನೆರೆಹೊರೆಯವರ ಭಯ ಹೆದರಿಕೆ. ಹೀಗಾಗಿ ಮನಬಿಚ್ಚಿ ಮಾತಾಡಲು ಹಿಂಜರಿಕೆ .ಯಾರ ಮುಂದೂ ಹೇಳಿಕೊಳ್ಳಲು ಹೆದರಿಕೆ. ಇವೆಲ್ಲಾ ಸೇರಿ ಹದಿಹರೆಯದವರ ಮನಸ್ಥಿತಿಯನ್ನು ಗೊಂದಲಮಯವಾಗಿಸುವುದರಲ್ಲಿ ಸಂಶಯವಿಲ್ಲ.
ಕಾರಣ ಇವರ ಗೊಂದಲ ,ಭಯ ,ಹೆದರಿಕೆ , ತುಮುಲಗಳನ್ನು ಬಿಡಿಸುವ ಕೆಲಸ ಪಾಲಕ ಪೋಷಕ ,ಸಮಾಜ, ಶಿಕ್ಷಕ ಸಮುದಾಯದವರ, ,ನೆರೆಹೊರೆಯವರ ಎಲ್ಲರಿಂದ ಆಗಬೇಕಾದ ಅನಿವಾರ್ಯತೆ ಈ ಸಮಾಜ ಸದೃಢತೆಗೆ ಬೇಕಾಗಿದೆ. ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರ ಮನಸ್ಥಿತಿ ಅರಿತು ಅವರನ್ನು ದಂಡಿಸದೆ ಬೈಯದೆ ಹೀಯಾಳಿಸದೆ ಅವರ ಮನಸ್ಸಿಗೆ ಹತ್ತಿರವಾಗಿ ಗೆಳೆಯರಂತೆ, ಹಿತೈಷಿಯಂತೆ ವರ್ತಿಸುತ್ತಾ ಅವರೊಳಗಿರುವುದನ್ನೆಲ್ಲ ತಿಳಿದುಕೊಂಡು ಹೆಜ್ಜೆ ಹೆಜ್ಜೆಗೆ ಪ್ರೀತಿಯಿಂದ, ಆತ್ಮೀಯತೆಯಿಂದ ಸಲಹೆ ಸೂಚನೆಗಳನ್ನು ನೀಡುತ್ತಾ, ನಗುನಗುತ್ತಾ ತಿದ್ದುವ ಪ್ರಯತ್ನ ಎಲ್ಲರದಾಗಿರಬೇಕು. ಅವರ ಮೇಲೆ ಸದಾ ಕಣ್ಣಿಟ್ಟು ಅವರ ಚಟುವಟಿಕೆ, ಕಾರ್ಯಖಲಾಪಗಳ,ಓಡಾಟ ,
ಎಂತವರೊಂದಿಗೆ ಗೆಳೆತನ ಮಾಡುತ್ತಿದ್ದಾರೆ? ಮನೆಗೆ ಯಾವಾಗ ಬರುತ್ತಾನೆ? ಏನೆಲ್ಲಾ ಅವರಿಗೆ ತಿಳಿಯದಂತೆ ನಾವು ತಿಳಿದುಕೊಳ್ಳಬೇಕು.
ಇನ್ನು ತಂದೆ ,ತಾಯಿ, ಪೋಷಕರು ಅವರಿಗೆ ಚಿಕ್ಕ ಮಕ್ಕಳಿದ್ದಾಗ ತೋರುವ ಪ್ರೀತಿಯನ್ನೇ ತೋರಬೇಕು. ಇವರು ಬೆಳೆದು ನಿಂತಿದ್ದಾರೆ. ಏನೇನೊ ತಪ್ಪು, ತಡೆಗಳನ್ನು ಮಾಡುತ್ತಿದ್ದಾರೆಂದು ಅವರನ್ನು ದಂಡಿಸುವ ಅವಶ್ಯಕತೆ ಇಲ್ಲ. ಅದನ್ನು ಬಿಟ್ಟು ಸೂಕ್ಷ್ಮವಾಗಿ ಅವಲೋಕಿಸುತ್ತ ತಿದ್ದುವ ಕಾರ್ಯ ಜರುಗಬೇಕು. ಹೇಗಂದರೆ ಸೀರೆ ಮುಳ್ಳು ಕಂಟಿ ಮೇಲೆ ಬಿದ್ದರೆ ಸೀರೆ ಹರಿಯದಂತೆ ಹೇಗೆ ತೆಗೆಯಬೇಕು ?ಬೆನ್ನಿಯೊಳಗಿನ ಕೂದಲವನ್ನು ಹೇಗೆ ತೆಗೆಯಬೇಕು ?ಹಾಗಿರಬೇಕು. ಸೂಕ್ಷ್ಮ, ಸೂಕ್ತ ಉಪಾಯವನ್ನು ಬಳಸಿ ಆ ಕೆಲಸ ಮಾಡಬೇಕು .ಸೂಕ್ತ ಕೈ ಕೆಲಸ ಕೊಡಬೇಕು. ಸಲಹೆ ನೀಡುತ್ತಲೇ ಇರಬೇಕು. ಅವರಿಗೆಂದೂ ಮನೆ ಎಂದರೆ ಬೇಸರ ಎಣಿಸದಂತೆ ,ಪ್ರೀತಿಗೆ ಕೊರತೆಯಾಗದಂತೆ, ಮನೆಯ ಎಲ್ಲರ ಬಗ್ಗೆ ಎಂದೂ ಬೇಧ ಭಾವ ಬರದಂತೆ ನೋಡಿಕೊಳ್ಳಬೇಕು. ಅವರೊಂದಿಗೆ ಗೆಳೆಯರಂತೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಇವರು ದೊಡ್ಡವರು ಎಂಬ ಭಯದಿಂದ ಏನೂ ಹೇಳಬಾರದು ಎಂಬ ಮನಸ್ಥಿತಿ ಅವರಲ್ಲಿ ಬರದಂತೆ ನೋಡಿಕೊಳ್ಳಬೇಕು. ಅವರು ಮನೆಯಲ್ಲಿದ್ದಾಗ ಏನೇನು ಕೆಲಸ ಮಾಡುತ್ತಾರೆ ?ಎಷ್ಟು ವೇಳೆ ಓದಿಕೊಳ್ಳುತ್ತಾರೆ ?ಹೇಗೆ ಸಮಯ ಕಳೆಯುತ್ತಾರೆ ?ಮೊಬೈಲ್ ಎಷ್ಟು ಹೊತ್ತು ನೋಡುತ್ತಾರೆ? ಮೊಬೈಲ್ನಲ್ಲಿ ಏನು ನೋಡುತ್ತಿರುತ್ತಾರೆ? ಇದೆಲ್ಲವನ್ನು ಕೂಡ ಅವಲೋಕಿಸುವುದು ಪಾಲಕರ ಆದ್ಯ ಕರ್ತವ್ಯ.
ಇತ್ತ ಶಾಲೆಯಲ್ಲಿಯೂ ಹಾಗೆ ವಯಸ್ಸಿನ ಬದಲಾವಣೆಯಿಂದ ಏನೆಲ್ಲಾ ತೊಂದರೆಗೆ ಹದಿಹರೆಯದವರು ಸಿಲುಕುತ್ತಾರೆ? .ಅವರ ಭಾವನೆಗಳು ಎಂತಹವು? ಹೇಗೆ ಅವರನ್ನು ನಾವು ನಿಭಾಯಿಸಬೇಕು? ಎಂಬರಿವು ಶಿಕ್ಷಕರಿಗೆ ಇರಬೇಕು. ಆ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿಯ ತಿಳುವಳಿಕೆ ಮೊದಲು ನೀಡಬೇಕು .ಇದು ಹೆಚ್ಚಾಗಿ ಪ್ರೌಢಶಾಲಾ ಹಂತದಲ್ಲಿ ಜರುಗುವ ವಿಷಯವಾಗಿದೆ .ಮತ್ತು ಶಾಲೆಯಲ್ಲಿ ಕಡ್ಡಾಯವಾಗಿ ಮೌಲ್ಯಶಿಕ್ಷಣ ಇರಲೇಬೇಕು. ಶಿಕ್ಷಕರು ಮಕ್ಕಳಿಗೆ ಹೀಗೆಲ್ಲ ಅನ್ನಬಾರದು, ಬೇರೆನೇ ಇದ್ರೂ ಒಮ್ಮಿಂದೊಮ್ಮೆಲೇ ಏನ ದಾಡಿ ಆತು ?ಕೆಟ್ಟು ಹೋಗಿದಾವ ನಮ್ಮ ಮಕ್ಕಳ ಇವಾ?ಅಭ್ಯಾಸದ ಕಡೆ ಗಮನ ಇಲ್ಲ, ಏನೇನು ಹುಚ್ಚುಚ್ಚಾಗಿ ಮಾಡ್ತವೆ. ಈಗಿನ ಹುಡುಗರಿಗೆ ಬುದ್ಧಿನೇ ಇಲ್ಲ. ಇವೇನ ಕಲಿತಾವ? ಹರಿಗ್ಯಾಡಿಕೊಂತ ಹೊಕ್ಕವಾ. ನಮ್ಮ ಮಾತ ಲೆಕ್ಕಕ ಇಲ್ಲ. ಬುದ್ಧಿವಾದ ಹೇಳಿರ, ತಿಳ್ಕೊಳ್ಳು ಮಟ್ಟ ಇವರಿಗೆ ಇಲ್ಲ .ಮನೆಯಾಗ ಅವ್ವ ಅಪ್ಪ ಇವಕ ಬುದ್ದಿನ ಕಲಿಸಿಲ್ಲ. ಮನೆ ಒಳಗಿನ ಸಂಸ್ಕೃತಿನ ಸರಿ ಇಲ್ಲ .ಈ ಊರಾಗ ಎಲ್ಲಾ ಹಿಂತಾವ ಅದಾವ. ಈ ಸಾಲಿಯೊಳಗೆ ಎಲ್ಲಾ ಕಾಲ್ ಬಿಟ್ಟ ಕತ್ತಿಗೋಳ , ಈ ರೀತಿ ಶಿಕ್ಷಕರ ಮಕ್ಕಳಿಗೆ ಅಂದರೆ, ಮಕ್ಕಳಲ್ಲಿ ಎಂದು ಬದಲಾವಣೆ ಆಗ್ಬೇಕು? ಕಾರಣ ಶಿಕ್ಷಕರು ಎಂದೂ ಮಕ್ಕಳನ್ನು ಈ ರೀತಿ ಬಯ್ಯುವುದು ಅಪರಾಧ .ಶಾಲಾ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಮನಸ್ಥಿತಿಯವರು ಶಿಕ್ಷಕರಾಗಬೇಕು. ಅದಕ್ಕೆಂದೆ ,”ಮನೆ ಮೊದಲ ಪಾಠಶಾಲೆ ,ತಾಯಿ ಮೊದಲ ಶಿಕ್ಷಕಿ” ಶಿಕ್ಷಕರು ಎರಡನೇ ತಂದೆ ತಾಯಿ ಎಂದು ಎನ್ನುತ್ತಾರೆ. ಅದೇ ರೀತಿ ಶಿಕ್ಷಕರು ಅವರು ಮಾಡುವ ಕೆಲಸ ಯಾವುದು ಮುಖ್ಯ ಎಂದು ಮನವರಿಕೆ ಮಾಡಿಕೊಂಡು ಮಕ್ಕಳಿಗೆ ಪ್ರೀತಿಯಿಂದ ಮುದ್ದು ಮಾಡಿ, ಅವರನ್ನು ತಮ್ಮ ಒಲುಮೆಗೆ ತೆಗೆದುಕೊಂಡು ಮನವರಿಕೆ ಮಾಡಿಸಬೇಕು.
ಬದುಕಿನ ಸಂಪೂರ್ಣ ಪರಿಕಲ್ಪನೆ ,ಚಿತ್ರಣ ಅವರ ಮುಂದೆ ಬಿಚ್ಚಿಡುವ ಕಾರ್ಯ ನಡೆಯಬೇಕು. ಜೀವನವೆಂದರೆ ಬರಿ ಹುಡುಗಾಟವಲ್ಲ, ಆಟ- ಪಾಠ ,ಕಲಿಕೆ- ಕರ್ತವ್ಯ, ಸಂಬಂಧಗಳ ಸಲುಗೆ, ಜವಾಬ್ದಾರಿಗಳು ಎಲ್ಲ ಇವೆ ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಮೂಡಿಸಬೇಕು. ಚಟ -ವ್ಯಸನಗಳಿಗೆ ಬಲಿಯಾಗದಂತೆ ಶಿಕ್ಷಕರು ಪಾಲಕರು ನೋಡಿಕೊಳ್ಳಬೇಕು .ಪ್ರಾರಂಭದ ಹಂತದಲ್ಲಿ ಅವುಗಳಿಂದ ದೂರಿರಿಸುವ ಪ್ರಯತ್ನ ಮಾಡಬೇಕು. ಮಾದರಿಯಾಗಬಲ್ಲ ಶಿಕ್ಷಕರು ಮತ್ತು ಪಾಲಕರು ಎಂದೂ ತಾವು ಚಟ ವ್ಯಸನಗಳನ್ನು ಮಾಡಬಾರದು. ಅನುಕರಣಶೀಲವಾದಂತಹ ಮಕ್ಕಳು ಹಿರಿಯರ ಮಾಡಿದ್ದನ್ನು ಅನುಸರಿಸುತ್ತಾ ಹೋಗುತ್ತಾರೆ. ಕಾರಣ “ಮನೆ ಮೊದಲ ಪಾಠಶಾಲೆ ತಂದೆ ತಾಯಿ ಮೊದಲ ಗುರು “ಎಂಬುದನ್ನು ಅರಿತುಕೊಳ್ಳಬೇಕು. ಶಾಲೆ ಎಂದರೆ ಸುಂದರ ಹೂದೋಟ .ಅಲ್ಲಿ ಮಕ್ಕಳ ನಲಿವಿನ ಬೆಳವಣಿಗೆ ಆಗಬೇಕು ಎಂಬ ಪ್ರಜ್ಞೆ ಶಿಕ್ಷಕರಿಗೆ ಇರಬೇಕು. ಶಿಕ್ಷಣವೆಂದರೆ ದಂಡಿಸಿ ವಿಷಯ ಹೇರುವುದಲ್ಲ, ವಿಷಯ ತುರುಕುವುದೂ ಅಲ್ಲ, ವಿಷಯ ಅರಹುವುದು. ಮಕ್ಕಳಲ್ಲಿ ಇರುವಂತಹ, ಸೂಪ್ತವಾಗಿ ಅಡಗಿದ ಜ್ಞಾನವನ್ನು ಹೊರಗೆ ಎಳೆಯುವ ಕಾರ್ಯ ಜರುಗಬೇಕು. ವಿವೇಕಾನಂದರು ಹೇಳಿದಂತೆ” ಪ್ರತಿಯೊಬ್ಬರಲ್ಲಿಯೂ ಅದ್ಭುತವಾದದ್ದು ಅಡಗಿದೆ, ಅದನ್ನು ಹೊರಗೆ ಎಳೆಯುವ ಕೆಲಸ ಮಾತ್ರ ಮಾಡಬೇಕಾಗಿದೆ ಶಿಕ್ಷಕರು” ಎಂದಿದ್ದಾರೆ. ಮಕ್ಕಳಲ್ಲಿ ಮೇಲು- ಕೀಳು ,ಬಡವ- ಬಲ್ಲಿದ, ದನಿಕ- ಶ್ರೀಮಂತ, ಶಕ್ತಿವಂತ -ಬುದ್ಧಿವಂತ, ಅವನು ಹಾಗೆ, ಇವನು ಹೀಗೆ, ಅವನಂತೆ ನೀನೆಂದಾಗಬೇಕು ಎಂಬೆಲ್ಲಾ ಹೀಯಾಳಿಸುವ ಮಾತುಗಳು ಎಂದೂ ಬರಬಾರದು. ಅವರ ಸಾಮರ್ಥ್ಯದ ಅರಿವು ಅವರಿಗೆ ಆಗುವಂತೆ ಮಾಡಬೇಕು. ಅವರಲ್ಲಿರುವಂಥ ಅತ್ಯುತ್ತಮವಾದದನ್ನು ಹೊರಗೆ ತರುವ ಕೆಲಸ ಮಾತ್ರ ಶಿಕ್ಷಕರು ಮಾಡಬೇಕು. ಒಬ್ಬ ರೈತ ತನ್ನ ಹೊಲ ಗದ್ದೆ ಹಸನುಮಾಡಿ,ಹದಮಾಡಿ ,ಬೀಜ ಬಿತ್ತಿ, ಸಾಕಿ,- ಸಲುಹಿ, ಕಾಲಕಾಲಕ್ಕೆ ಕಸ ಕಡ್ಡಿ ತೆಗೆದು ಹಸನಾಗಿಸುತ್ತಾ ಉತ್ತಮ ಗೊಬ್ಬರ ಹಾಕಿ ಒಳ್ಳೆಯ ಫಸಲು ತೆಗೆಯುವಂತೆ ಇರಬೇಕು. ಶಿಕ್ಷಕರಿಗೂ ತಿಳಿದಿರಬೇಕು ರೈತನಂತಹ ಜಾಣ್ಮೆ, ತಾಳ್ಮೆ ಕುಶಲತೆ, ಕುಂಬಾರನಂತನ ಕೌಶಲ ,ಕಲಾಕಾರನಂತೆ ಏಕಾಗ್ರತೆ, ಚಿನಿವಾಲನಂತೆ ಕೈಚಳಕ ಬೇಕೇಬೇಕು.
ಸರಿ ತಪ್ಪುಗಳ ಬಗ್ಗೆ ಆಪ್ತಸಮಾಲೋಚನೆಯಿಂದ, ನಗುನಗುತ್ತಾ ತಿಳಿಸಬೇಕು .ಅವರಲ್ಲಾಗುವ ಬದಲಾವಣೆಗಳು ಪ್ರಕೃತಿ ಸಹಜ ಬದಲಾವಣೆಗಳು, ನಾವೂ ಈ ಹಂತ ದಾಟಿಯೇ ಬಂದಿದ್ದೇವೆ. ಎಲ್ಲವನ್ನು ಸಂಯಮದಿಂದ ವಿಚಾರಿಸಿ, ಯಾವ ಮಗು ಹೇಗೆ? ಅದರ ಆಸೆ ಬಯಕೆಗಳೇನು? ಹೇಗೆ ಹೇಳಿದರೆ ನಮ್ಮ ಮಾತು ಕೇಳಬಹುದು? ಯಾವ ರೀತಿಯಾಗಿ ಇವರಿಗೆ ತಿಳಿಸಿದರೆ ತಿಳಿಯುತ್ತದೆ? ಇವರನ್ನು ಹೇಗೆ ತಿದ್ದಬೇಕು? ನಮ್ಮ ಒಲುಮೆಗೆ ಹೇಗೆ ತೆಗೆದುಕೊಳ್ಳಬೇಕು ?ಇವರೊಂದಿಗೆ ನಮ್ಮ ಒಡನಾಟ ಹೇಗಿರಬೇಕು ಎಂಬ ತಿಳುವಳಿಕೆಯನ್ನು ತಿಳಿದುಕೊಂಡು ಹದವರಿತು ಅವರ ಮನಸ್ಥಿತಿಗೆ ತಕ್ಕಂತೆ , ಅವರ ಮನಸ್ಥಿತಿ ನೋಡಿಕೊಂಡು, ತಿಳಿದುಕೊಂಡು ಬುದ್ದಿ ಹೇಳಬೇಕಾಗುತ್ತದೆ. ಅವರ ಗೊಂದಲಗಳ ಬಿಡಿಸಿ ,ಇದು ಹೀಗೆ. ಇದು ಹೀಗೆ ಇರುತ್ತದೆ ಎಂದು ಸಮಾಧಾನದಿಂದ ಇದೇ ಸತ್ಯ ಮಕ್ಕಳೆ ಎಂಬ ಅರಿವು ಮೂಡಿಸಬೇಕಾದದ್ದು ಶಿಕ್ಷಕರ ಆಧ್ಯ ಕರ್ತವ್ಯ. ಮತ್ತು ಅವರು ಇಡುವ ಹೆಜ್ಜೆ,ಅದರ ಸಾಫಲ್ಯತೆ ಹೇಗಿದ್ದರೆ ನೀ ಗುರಿಯನ್ನು ಸಾಧಿಸಬಲ್ಲೆ, ನಿನ್ನ ನೇರ ನಡೆ ,ನೇರ ನುಡಿ ಹೇಗಿರಬೇಕು? ನಾವು ಹೇಗಿದ್ದರೆ ನಮ್ಮ ಗುರಿಯನ್ನು ತಲುಪುತ್ತೇವೆ? ಸಾಧನ ಎಂದರೆ ಏನು? ಸಾಧನೆ ಶಿಖರ ಏರಿದವರು ಯಾವ ರೀತಿ ಬಾಳಿ ಬದುಕಿದ್ದಾರೆ? ಅವರ ದಿನಚರಿ, ಅವರ ಮಾತು ,ಅವರ ಇರುವಿಕೆ ,ಎಲ್ಲದರ ಬಗ್ಗೆ ತಿಳಿಸಿ ಹೇಳಲೇಬೇಕು .ಯಾವ ಯಾವ ವಯಸ್ಸಿನಲ್ಲಿ ಹೇಗಿರಬೇಕು? ಯಾವ ವಯಸ್ಸಿನಲ್ಲಿ ಏನು ಮಾಡಬೇಕು? ಎಂಬ ತಿಳುವಳಿಕೆಯನ್ನು ನೀಡಬೇಕಾದ ಅವಶ್ಯಕತೆ ಇದೆ. ತಮ್ಮ ಮನಸ್ಸಿನ ಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಬಗೆ,
ಹೇಗೆ ಏಕಾಗ್ರತೆ ತಂದುಕೊಳ್ಳುವುದು? ಏಕಾಗ್ರತೆ ಎಂದರೇನು? ಏಕಾಗ್ರತೆಯಿಂದ ಕಲಿಕೆ ಹೇಗೆ ಸಫಲವಾಗುತ್ತದೆ ?ಅದರಿಂದಾಗುವ ಲಾಭಗಳೇನು? ಸಂಯಮ ನಮಗೆ ಎಷ್ಟು ಮುಖ್ಯ? ವಿಚಲಿತರಾಗದಂತೆ ಹೇಗಿರಬೇಕು? ಎಂಬುದನ್ನು ಅವರಿಗೆ ತಿಳಿಯುವಂತೆ ನಮ್ರರವಾಗಿ, ಒಲುಮೆಯಿಂದ ,ಆತ್ಮೀಯತೆಯಿಂದ ,ಅನೇಕ ಉದಾರಣೆಗಳಿಂದ ಅವರಿಗೆ ತಿಳಿ ಹೇಳಬೇಕು .ಹೇಳುತ್ತಲೇ ಇರಬೇಕು. ಶಾಲೆ ಎಂದರೆ ಅವರಿಗೆ ಅಪ್ಯಾಯಮಾನವಾಗುವಂತೆ ಶಾಲಾ ಪರಿಸರ ಇಟ್ಟುಕೊಳ್ಳಬೇಕು. ಶಿಕ್ಷಕರೆಂದರೆ ಅವರಲ್ಲಿ ಗೌರವವನ್ನು ಇಟ್ಟು, ಪ್ರೀತಿ ಆಧರ ಹುಟ್ಟುವಂತೆ ಶಿಕ್ಷಕರ ನಡೆ-ನುಡಿ ,ಇರುವಿಕೆ, ಮಾತುಗಾರಿಕೆ ವ್ಯಕ್ತಿತ್ವ ,ಅವರ ಎಲ್ಲಾ ಚಟುವಟಿಕೆಗಳು ಮಾದರಿಯಾಗುವಂತೆ ,ಅನುಸರಿಸುವಂತೆ, ಅನುಕರಣೀಯವಾಗಿರಬೇಕು .ಅವರ ಮನೆಯವರನ್ನು ಆಗಾಗ ಭೇಟಿಯಾಗುವುದು, ಅವರ ಬದಲಾವಣೆ ಚಟುವಟಿಕೆಗಳ ಬಗ್ಗೆ ಚರ್ಚಿಸಿ ,ಹೇಗೆ ನೋಡಿಕೊಂಡರೆ ನಮ್ಮ ಕೈ ತಪ್ಪದೇ ನಮ್ಮೊಂದಿಗೆ ಇರುವರು ?ನಾಜೂಕಾಗಿ ಇವರನ್ನು ಯಾವ ರೀತಿ ಅಭ್ಯಾಸದ ಪ್ರಕ್ರಿಯೆಗೆ ತಂದು ಇರಿಸಬೇಕು ?ಇವರ ಗುರಿ ಸಾಧನೆ ಆಗಬೇಕಾದರೆ ನಮ್ಮ ಪಾತ್ರವೆಷ್ಟಿದೆ ?ಅನ್ನುವುದನ್ನು ತಿಳಿದುಕೊಂಡರೆ ಒಳ್ಳೆಯದು.
ಒಂದು ಸಸಿಯನ್ನು ಹೇಗೆ ಬೆಳೆಸುತ್ತೇವೆ ?ಅದಕ್ಕೆ ಆಧಾರ ಕಟ್ಟಿ ಅಲುಗಾಡದಂತೆ, ಇನ್ನೊಂದು ಕಟ್ಟಿಗೆಯನ್ನು ಆಧಾರವಾಗಿ ಕಟ್ಟಿ ಗಾಳಿ ಮಳೆಗೆ ಬಿದ್ದು ಮುರಿದು ಹೋಗದಂತೆ ಹೇಗೆ ಕಾಪಾಡಿ ದೃಢವಾಗಿ ನಿಲ್ಲುವವರೆಗೆ ನಮ್ಮ ಪ್ರಯತ್ನ ಸಾಗುತ್ತಲೇ ಇರುತ್ತದೆ. ಅದೇ ರೀತಿ ಅದು ಎಂದೂ ಬೀಳದ, ಅಲುಗಾಡದ ಸ್ಥಿತಿಗೆ ಬರುವವರಿಗೆ ನಾವು ಅದರ ಮೇಲೆ ನಿಗಾ ಇಟ್ಟಿರುತ್ತೇವೆ. ಹಾಗೆಯೇ ಮಗು ಕೂಡ. ಎಲ್ಲಾ ಹಂತಗಳನ್ನು ದಾಟಿ ಅಚಲತೆ ಕಲಿತು ತನ್ನ ಕಾಲ ಮೇಲೆ ತಾ ನಿಲುವಂತಾಗುವವರೆಗೆ ಶಿಕ್ಷಕರ, ಮನೆ ಮಂದಿಯ ಸಂಪೂರ್ಣ ಕಾಳಜಿ, ಆರೈಕೆ, ಸಲಹೆ- ಸೂಚನೆಗಳು, ಪ್ರೀತಿ ಎಲ್ಲಾ ಇರಲೇಬೇಕು. ಅಡಿಪಾಯ ಭದ್ರವಾದರೆ ಎಂದೂ ಅದು ಚಿದ್ರವಾಗದು, ಕೆಟ್ಟು ಹೋಗದು. ಹಾಗೆ ಶಿಕ್ಷಕರು ಮತ್ತು ಪಾಲಕರು ತಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಅರಿತು ಹದಿಹರೆಯದ ಮಕ್ಕಳನ್ನು ನೋಡಿಕೊಂಡರೆ ಕುಟುಂಬ, ಶಾಲೆ, ಸಮಾಜ ಎಲ್ಲವೂ ಸುಭಿಕ್ಷವಾಗಿರುತ್ತದೆ.ಸುಂದರ ಸಮಾಜಕ್ಕೆ ಸದೃಢ ನಾಗರಿಕರ ಕೊಡುಗೆ ನೀಡುವ ಪಾಲಕರು, ಶಿಕ್ಷಕರು ಬುದ್ಧಿವಂತರೂ ಸಂಯಮ, ಪ್ರಜ್ಞೆ ಉಳ್ಳವರೂ, ಅರಿವು ಆಚಾರವಂತಿಕೆ, ಪ್ರೀತಿ ಭಾವ ಎಲ್ಲಾವನ್ನೂ ಉಳ್ಳವರಾಗಿ ತಮ್ಮ ಕರ್ತವ್ಯ ಪಾಲನೆಯಲ್ಲಿ ತೊಡಗಿದಾಗ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ ನೀಡಬಲ್ಲರು. ಮೌಲ್ಯಯುತವಾದ ಜೀವನವೆಂದರೆ ಹೇಗಿರಬೇಕು ?ಎಂಬುದು ಕಲಿಕೆಯೊಂದಿಗೆ ಅವರಿಗೆ ತಿಳಿಯಲೇಬೇಕಾದಂತಹ ಪರಿಸರ ನಿರ್ಮಿಸಬೇಕು.
“ಯಥಾ ರಾಜ ತಥ ಪ್ರಜಾ “, ,”ತಾಯಿಯಂತೆ ಮಗಳು, ನೂಲಿನಂತೆ ಸೀರೆ “,”ನಾವು ಒಳ್ಳೆಯವರಾದರೆ ನಾಡೆಲ್ಲ ಒಳ್ಳೆಯದು “.ಹದವರಿತು ಬಿತ್ತು, ಮನವರಿತು ಬುದ್ಧಿ ಹೇಳು”,” ನಿನ್ನ ವ್ಯಕ್ತಿತ್ವದ ನೆರಳು, ಆಗದಿಂತಿರು ಯಾರಿಗೂ ಉರುಳು” ಹೀಗೆಲ್ಲಾ ತಿಳುವಳಿಕೆಯನ್ನು ಹಂತ ಹಂತವಾಗಿ ಸುರಳಿಗಳ ಬಿಚ್ಚಿಟ್ಟಂತೆ, ಅವರ ಕಣ್ಮುಂದೆ ಪ್ರಸಂಗಗಳು . ಸಮಾಜದ ಓರೆ ಕೋರೆಗಳನ್ನು ತಿದ್ದುತ ಸಮಾಜ ಸುಭೀಕ್ಷಣದ ಗುರಿ ಎಲ್ಲರದಾಗಿರಲಿ.
ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ ಶಿಕ್ಷಕಿ ಸಾಹಿತಿ