ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ

ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಇವನಾರವ ಇವನಾರವ
ಇವನಮ್ಮವ ಇವನಮ್ಮವ
ಎಂದು ಹೇಳಿ ಜಗತ್ತಿಗೆ ಸಾರಿದ
ಅಣ್ಣ ಬಸವಣ್ಣ
ಇಂದು ಇವನಾರವ ಇವನಾರವ
ಗೊತ್ತಿಲ್ಲವೆಂದು ಬಡಿದಾಡಿ
ಹೊಡೆದಾಡಿ ಸಾಯುತ್ತಿಹರಣ್ಣಾ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ನಾಮೇಲು ನೀ ಕೀಳು
ಇನ್ನು ಹೋಗಿಲ್ಲ ಅಣ್ಣಾ
ಮುಡಿಚಟ್ಟಿ ಮಡಿಚಟ್ಟಿ
ಮೂರಾಬಟ್ಟೆ ಆಗಿದೆ ಅಣ್ಣಾ
ಇನ್ನು ಇವರಿಗೆ ಬುದ್ದಿ
ಬರುವುದು ಯಾವಾಗ ಅಣ್ಣಾ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಜಗದೊಳು ಜ್ಯೋತಿ ಬೆಳಗಿದೆ ಅಣ್ಣಾ
ಜಗಕ್ಕೆಲ್ಲ ನಿನ್ನ ಶಕ್ತಿ ಈ ಜನರಿಗೆ
ಇನ್ನು ಯಾವಾಗ ಬರುತ್ತದೆ ಅಣ್ಣಾ
ಅಂಧಕಾರದಲ್ಲಿ ಮುಳುಗಿ ಸಾಯುತ್ತಿದ್ದಾರೆ ಅಣ್ಣಾ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ನೀ ಮಹಿಳಾ ಸಮಾನತೆ, ಜಾತ್ಯಾತೀತ ಮನೋಭಾವ
ಈ ಜಗದಲ್ಲಿ ಬಿತ್ತಿ ಹೋದರು ಬಿಡಲಿಲ್ಲಾ.
ಈ ಜನ ಸಮಾನತೆಗಾಗಿ ಹೋರಾಡುವುದು
ತಪ್ಪಲಿಲ್ಲಾ ಅಣ್ಣಾ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಜಗತ್ತಿಗೆ ಜಾಗೃತಿ ಮೂಡಿಸಿದ ಹರಿಕಾರ
ಜ್ಯೋತಿ ಬೆಳಗಿದ ಜಗಜ್ಯೋತಿ
ಸಾಮಾಜಿಕ ಭ್ರಾತೃತ್ವ ಮೂಡಿಸಿದ ಹರಿಕಾರ ನೀನು
ಈ ಜಗಕ್ಕೆ ಬೆಳಕಾಗಿ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಅಂತರಂಗಶುದ್ಧಿ ಬಹಿರಂಗಶುದ್ಧಿ
ಜಗದೊಳು ನೀ ಹೇಳಿದರೂ
ಆಚಾರ-ವಿಚಾರ ಜಗಕ್ಕೆಲ್ಲ
ನೀ ಹೇಳಿದರೂ ತಿಳಿಯಲಿಲ್ಲ ಈ ಜನಗಳಿಗೆ
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ನಾ ಹೆಚ್ಚು ನೀ ಹೆಚ್ಚು
ಬಡಿದಾಡುವ ಈ ಜನರಿಗೆ
ಬುದ್ಧಿ ಕಲಿಸುವ ಬಾ
ಗರ್ವ ಅಸೂಯೆಯಲ್ಲಿ ಹಾಳಾಗುವ
ಜನಕ್ಕೆ ನೀ ಪಾಠ ಕಲಿಸಲು
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಲೋಕ ಚಿಂತೆ ಮಾಡಿ
ಸಕಲ ಜೀವರಾಶಿಗಳಿಗೆ
ದಯೆ ತೋರಿದ ಪರಿಪಾಲಕ ನೀನು
ಸ್ವಾರ್ಥಪರ ಬದುಕಿನಲ್ಲಿ
ಬಡಿದಾಡುವ ಜನರಿಗೆ ಬುದ್ದಿಕಲಿಸಲು
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಜಗಕ್ಕೆ ಕ್ರಾಂತಿಯ ಕಹಳೆಯನ್ನು ಊದಿ
ಬಟ್ಟ ಬಯಲಾದೆ ಬಸವಣ್ಣ ನೀನು
ನಿನ್ನ ಶಕ್ತಿ ಯುಕ್ತಿ ಜಗಕ್ಕೆಲ್ಲಾ ಅರಿವಾದರೂ
ಅರ್ಥವಿಲ್ಲದ ಜನಕ್ಕೆ ಬುದ್ಧಿ ಕಲಿಸಲು
ನೀ ಮತ್ತೊಮ್ಮೆ ಹುಟ್ಟಿ ಬಾ ಬಸವಣ್ಣ
ಡಾ. ನಾಗಪ್ಪ ಟಿ ಗೋಗಿ