ಛಾಯಾ ಭಗವತಿ – ಪ್ರತಿಭೆಯ ಪ್ರಕಾಶಮಯ ಛಾಯೆ

ಛಾಯಾ ಭಗವತಿ – ಪ್ರತಿಭೆಯ ಪ್ರಕಾಶಮಯ ಛಾಯೆ
ಕಲೆಯ ವಿವಿಧ ಕ್ಷೇತ್ರಗಳಲ್ಲಿ ತಮಗೊಂದು ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿರುವ ಛಾಯಾ ಭಗವತಿ, ಪ್ರತಿಭೆ, ಪರಿಶ್ರಮ, ಶಿಸ್ತು, ಸಂಯಮ ಮತ್ತು ಸಂವೇದನೆಗಳ ಸಂಧಿ ಬಿಂದುವಾಗಿದ್ದಾರೆ. ಅಕ್ಟೋಬರ್ 7ರಂದು ಅವರ ಜನ್ಮದಿನ, ಛಾಯಾ ಭಗವತಿ ಅವರ ಬದುಕು ಕೇವಲ ಸಾಧನೆಯ ಕಥೆಯಲ್ಲ, ಅದು ಸೃಜನಾತ್ಮಕತೆಯ, ಶ್ರಮದ ಮತ್ತು ಸಂವೇದನೆಯ ಪಯಣವೂ ಆಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಎಂಬ ಸುಂದರ ಗ್ರಾಮದವರು ಆದ ಛಾಯಾ ಭಗವತಿ ಅವರಿಗೆ ಅವರ ತಾಯ್ತಂದೆಗಳು ಊರಿನ ದೇವತೆಯಾದ ಳಛಾಯಾ ಭಗವತಿ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ. ಕೃಷ್ಣಾ ನದಿಯ ತೀರದ ಆ ಶಾಂತ ಪರಿಸರದಲ್ಲಿ ಹುಟ್ಟಿದ ಈ ಪ್ರತಿಭೆ ತಮ್ಮ ಬದುಕಿನ ಹಾದಿಯಲ್ಲಿ ನೂರಾರು ಕಿರಣಗಳನ್ನು ಚೆಲ್ಲಿದವರು.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆಯುವ ವೇಳೆ ಚಿನ್ನದ ಪದಕ ಮತ್ತು ಪ್ರಥಮ ರ್ಯಾಂಕ್ ಗಳಿಸುವ ಮೂಲಕ ಶೈಕ್ಷಣಿಕ ಸಾಧನೆಯಲ್ಲಿ ಶ್ರೇಷ್ಠತೆ ತೋರಿದರು. ವೃತ್ತಿ ಜೀವನದಲ್ಲಿ ಶಿಕ್ಷಕಿಯಾಗಿ, ಬಳಿಕ ಐಟಿ ಕ್ಷೇತ್ರದಲ್ಲಿ ತಾಂತ್ರಿಕ ದಾಖಲೆಗಾರ್ತಿಯಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಅವರು, ಬಳಿಕ ತಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳತ್ತ ಮುಖ ಮಾಡಿದರು.
ಬರಹ, ಅನುವಾದ, ರಂಗಭೂಮಿ, ಸಂಗೀತ, ಛಾಯಾಗ್ರಹಣ, ಪ್ರವಾಸ – ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಯಾ ಭಗವತಿ ತಮ್ಮ ಗುರುತು ಮೂಡಿಸಿದ್ದಾರೆ. ಅವರ ಕಥೆಗಳು ಮತ್ತು ಕವಿತೆಗಳು ಅನೇಕ ಪತ್ರಿಕೆಗಳಲ್ಲಿ, ಸಂಕಲನಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಪಡೆದಿವೆ. ಅವರು ಕನ್ನಡಕ್ಕೆ ಅನುವಾದಿಸಿದ ವೈಕಂ,ರಸ್ಕಿನ್ ಬಾಂಡ್, ಥಾಮಸ್ ಹಾರ್ಡಿ ಅವರ ಕತೆಗಳು ಸಾಹಿತ್ಯ ವಲಯದಲ್ಲಿ ಗಮನಾರ್ಹವಾದ ಕೊಡುಗೆಯಾಗಿ ಪರಿಣಮಿಸಿವೆ.
ಅವರ ಕೃತಿಗಳಲ್ಲಿ ಪುಟಾಣಿ ಕೆಂಪು ಶೂ, ಚಂದ್ರನಿಗೆ ಟ್ಯಾಟೂ (ಕವನ ಸಂಕಲನಗಳು), ಹಿಮಗಿರಿಯಾನ (ಪ್ರವಾಸಕಥನ), ನೀನಿಲ್ಲದೆ ನನಗೇನಿದೆ (ಪ್ರಬಂಧಸಂಕಲನ) ಪ್ರಮುಖವಾದವು. ಈ ಕೃತಿಗಳ ಮೂಲಕ ಅವರು ಭಾವನೆ ಮತ್ತು ವಾಸ್ತವದ ನಡುವಿನ ನವೀನ ಸಂವಾದವನ್ನು ಕಟ್ಟಿಕೊಟ್ಟಿದ್ದಾರೆ.
ಸಾಹಿತ್ಯದ ಹೊರತಾಗಿ, ಛಾಯಾ ಭಗವತಿ ಅವರು ಬೆಂಗಳೂರು ಆಕಾಶವಾಣಿಯ ಎಫ್.ಎಂ. ರೈನ್‌ಬೋ ವಾಹಿನಿಯಲ್ಲಿ ಆರ್‌ಜೆ ಆಗಿ ಜನಪ್ರಿಯ ಧ್ವನಿಯಾಗಿ ಗುರುತಿಸಿಕೊಂಡರು. ಕೆಲವು ವರ್ಷಗಳ ಕಾಲ ಪ್ರಿಸಂ ಬುಕ್ಸ್ ಸಂಸ್ಥೆಯಲ್ಲಿ ಸಂಪಾದಕಿ ಮತ್ತು ಅನುವಾದಕಿಯಾಗಿ ಸೇವೆ ಸಲ್ಲಿಸಿದರು. ಬಿಂಬ ರಂಗಶಿಕ್ಷಣ ಕೇಂದ್ರದಿಂದ ರಂಗಭೂಮಿಯಲ್ಲಿ ಡಿಪ್ಲೊಮಾ ಪಡೆದ ಅವರು, ಅನೇಕ ನಾಟಕಗಳಲ್ಲಿ ರಾಜ್ಯದಾದ್ಯಂತ ಅಭಿನಯಿಸಿ ಪ್ರಶಂಸೆ ಗಳಿಸಿದ್ದಾರೆ.
ಸಾಹಿತ್ಯ ಮತ್ತು ಸಂಸ್ಕೃತಿ ವಲಯದಲ್ಲಿ ಸಕ್ರಿಯರಾಗಿರುವ ಛಾಯಾ ಭಗವತಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯದ ಅಭಿವೃದ್ದಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ರಾಜ್ಯಮಟ್ಟದ ಅನೇಕ ಬಹುಮಾನಗಳು ಮತ್ತು ಗೌರವಗಳು ಅವರ ಪ್ರತಿಭೆಯನ್ನು ಮತ್ತಷ್ಟು ಪ್ರಕಾಶಮಾನಗೊಳಿಸಿವೆ.
ಸಂಯಮ, ಸಂವೇದನೆ, ಪರಿಶ್ರಮ ಮತ್ತು ಕಲಾತ್ಮಕ ದೃಷ್ಟಿಕೋನಗಳಿಂದ ಓದುಗರ ಹೃದಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಛಾಯಾ ಭಗವತಿ ಅವರ ಸಾಹಿತ್ಯಯಾನ ಮುಂದಿನ ಪೀಳಿಗೆಯವರಿಗೆ ಪ್ರೇರಣೆಯ ಶಿಖರವಂತಾಗಿದೆ.
(ಕೃಪೆ ಕನ್ನಡ ಸಂಪದ)
-ಶರಣಗೌಡ ಪಾಟೀಲ ಪಾಳಾ