ಉಡಾನ್ ಯೋಜನೆ ಪುನರಾರಂಭಿಸಿ – ಕಲಬುರಗಿ ವಿಮಾನ ನಿಲ್ದಾಣ ಉಳಿಸಿ

ಉಡಾನ್ ಯೋಜನೆ ಆರಂಭಿಸಿ ಕಲಬುರಗಿ ವಿಮಾನ ನಿಲ್ದಾಣ ಉಳಿಸಿ
ರಾಜಕೀಯ ಪಕ್ಷ ~ ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಒಕ್ಕೊರಲ ಬೇಡಿಕೆ
ಕಲಬುರಗಿ : ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿಗೆ ಅಕ್ಟೋಬರ್ 15ರಿಂದ ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಪುನರಾರಂಭಕ್ಕೆ ಮುಂದಾಗಬೇಕು ಹಾಗೂ ಉಡನ್ ಯೋಜನೆ ಆರಂಭಿಸಿ ಕಲಬುರಗಿ ವಿಮಾನ ನಿಲ್ದಾಣವನ್ನು ಉಳಿಸಬೇಕು ಎಂದು ಸಾರ್ವಜನಿಕರ ಒತ್ತಾಯ ತೀವ್ರಗೊಂಡಿದೆ.
ಕಲಬರಗಿ ವಿಮಾನ ನಿಲ್ದಾಣದಿಂದ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ 2019 ರಿಂದ ವಿಮಾನ ಸಂಚಾರ ಪ್ರಾರಂಭಗೊಂಡು
ಕಳೆದ ಆರು ವರ್ಷಗಳಿಂದ ಕುಂಟುತ್ತ ಸಾಗಿ ಇದೀಗ ಪೂರ್ಣ ಸ್ಥಗಿತಗೊಂಡು ಈ ಭಾಗಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಉಡಾನ್ ಸ್ಕೀಮ್ ಅಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ, ನಿತ್ಯ ವಿಮಾನ ಸಂಚಾರ ಪ್ರಾರಂಭಗೊಳಿಸಬೇಕು ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯ ಮತ್ತು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಒತ್ತಾಯಿಸಿದ್ದಾರೆ.
*ಬಿಕೋ ಎನ್ನುತ್ತಿದೆ ವಿಮಾನ ನಿಲ್ದಾಣ*
ಬೆಂಗಳೂರಿನಿಂದ ಕಲಬುರಗಿಗೆ ನಿತ್ಯ ಸಂಚರಿಸುತ್ತಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಸ್ಥೆಯು ಇದೀಗ ಹೊಸದಾಗಿ ಬೆಂಗಳೂರಿನಿಂದ ಅದೇ ವಿಮಾನವನ್ನು ಅದೇ ವೇಳೆಗೆ ಸೋಲಾಪುರಕ್ಕೆ ಸಂಚಾರ ಪ್ರಾರಂಭಿಸಿರುವುದರಿಂದ ಕಲಬುರಗಿ ವಿಮಾನ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. 2019 ರಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ತಿರುಪತಿಗೆ ಸಂಚಾರ ಪ್ರಾರಂಭಿಸಿತ್ತು. 2022 ರ ವರೆಗೆ ದೆಹಲಿಯ ಹಿಂಡೋನ್ ಗೆ ವಿಮಾನಸೇವೆ ಲಭ್ಯವಿತ್ತು. ಮೂರು ವರ್ಷಗಳ ಕಾಲ ಉಡಾನ್ ಯೋಜನೆ ಅಡಿ ಸಬ್ಸಿಡಿಯಿಂದ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದ ವಿಮಾನ ಸಂಸ್ಥೆ ಈಗ ಉಡಾನ್ ಯೋಜನೆ ಸ್ಥಗಿತಗೊಂಡಿರುವ ಹೆಸರಿನಲ್ಲಿ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ ಎಂಬ ನೆಪ ಹೇಳಿ ಸ್ಟಾರ್ ಏರ್ ಲೈನ್ಸ್ ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿ ಕಲಬುರಗಿ ಬದಲಿಗೆ ಸೊಲ್ಲಾಪುರ, ಬೀದರ್ ಶಿವಮೊಗ್ಗ ಮತ್ತು ನಾಂದೇಡ್ ಮುಂತಾದಡೆಗಳಿಗೆ ಸಂಚಾರ ಪ್ರಾರಂಭಿಸಿ ಕಲಬುರಗಿ ವಿಮಾನ ಪ್ರಯಾಣಿಕರಿಗೆ ಮಂಕು ಬೂದಿ ಎರಚಿದೆ.
*ಸಮಸ್ಯೆಗೆ ಅಸಮರ್ಪಕ ನಿರ್ವಹಣೆ ಕಾರಣ*
ಸ್ಟಾರ್ ಏರ್ ಲೈನ್ಸ್ ಪ್ರಯಾಣಿಕರಿಗೆ ಸಮಯದ ಅನಾನುಕೂಲತೆ ಸೃಷ್ಟಿ ಮಾಡಿ ನಿಗದಿತ ಸಮಯಕ್ಕೆ ವಿಮಾನ ಹಾರಾಟವನ್ನು ಮಾಡದೆ ಕೊನೆಯ ಕ್ಷಣಕ್ಕೆ ರದ್ದು ಮಾಡಿ ಪ್ರಯಾಣಿಕರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿರುವುದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಹಿಂಜರಿಯುವಂತಾಯಿತು. ಜೊತೆಗೆ ಹೊಸ ನಿಲ್ದಾಣಗಳನ್ನು ಆಯ್ಕೆ ಮಾಡಿ ಕಲಬುರಗಿ ವಿಮಾನ ನಿಲ್ದಾಣದ ಟ್ರಿಪ್ ಗಳನ್ನು ರದ್ದು ಮಾಡುವ ಮೂಲಕ ಪ್ರಯಾಣಿಕರಿಗೆ ಪಂಗನಾಮ ಹಾಕಿ ಇದೀಗ ನೂತನವಾಗಿ ಆರಂಭಗೊಂಡ ಶಿವಮೊಗ್ಗ , ಸೊಲ್ಲಾಪುರಕ್ಕೆ ಹೊಸದಾಗಿ ಸೇವೆ ಆರಂಭಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಚಳ್ಳೆಹಣ್ಣು ತಿನ್ನಿಸಿದೆ. ಸೇವೆ ಸ್ಥಗಿತವನ್ನು ಪ್ರಶ್ನಿಸಿದರೆ ಪ್ರಯಾಣಿಕರ ಕೊರತೆ ಹಾಗೂ ಉಡಾನ್ ಸ್ಕೀಮ್ ರದ್ದತಿ ಎಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದು ಈಗ ವಿಮಾನ ನಿಲ್ದಾಣ ಕೇವಲ ತರಬೇತಿ ನೀಡುವ ವಿಮಾನ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ.
*ಕಲಬುರಗಿಯಿಂದ ಹೊಸ ನಿಲ್ದಾಣಗಳಿಗೆ ಸಂಪರ್ಕ ಸಾಧ್ಯತೆ*
ಕಲಬುರಗಿಯಿಂದ ಬೆಂಗಳೂರು ಒನ್ ಸ್ಟಾಪ್ ಮಾರ್ಗವಾಗಿ ಮಂಗಳೂರು, ಹೊಸದಾಗಿ ನಿರ್ಮಾಣಗೊಂಡ
ನವಿಮುಂಬಯಿ, ಪೂನಾ, ತಿರುಪತಿ, ದೆಹಲಿ ( ಹಿಂಡೋನ್) ಮುಂತಾದಡೆಗಳಿಗೆ ಸಂಚಾರ ಪ್ರಾರಂಭಿಸಲು ಉತ್ತಮ ಅವಕಾಶವಿದೆ. ಈಗಾಗಲೇ ಆಂಧ್ರ,ತೆಲಂಗಾಣದ ಸಣ್ಣಪುಟ್ಟ ನಗರಗಳ ವಿಮಾನ ನಿಲ್ದಾಣದಿಂದ ಮುಂಬಯಿ ಮತ್ತಿತರೆಡೆಗಳಿಗೆ ರಾಜಕೀಯ ಪ್ರತಿನಿಧಿಗಳ ಮುತುವರ್ಜಿಯಿಂದ ಸಂಚಾರ ಆರಂಭಗೊಳ್ಳುತ್ತಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಈ ವಿಮಾನ ನಿಲ್ದಾಣ ಮಾತ್ರ ತೀವ್ರ ಕಡೆಗಣನೆಗೆ ಒಳಗಾಗಿದೆ. ನವಿಮುಂಬಯಿ ವಿಮಾನ ನಿಲ್ದಾಣದಲ್ಲಿ ಹೆಚ್ಚು ವಿಮಾನಗಳಿಗೆ ಅವಕಾಶ ಸದ್ಯ ನೀಡುತ್ತಿರುವುದರಿಂದ ಕಲಬುರಗಿಗೆ ಈ ಅವಕಾಶವು ಕೈ ತಪ್ಪಿದಂತಾಗಿದೆ.
*ರಾಜಕಾರಣಿಗಳ ಇಚ್ಛಾ ಶಕ್ತಿ ಕೊರತೆ*
ಕಲ್ಯಾಣ ಕರ್ನಾಟಕ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಧುನಿಕ ಮಾದರಿಯ ಕಲಬುರಗಿ ವಿಮಾನ ನಿಲ್ದಾಣವು ಈಗ ಕೇಳುವವರಿಲ್ಲ ಎನ್ನುವಂತಾಗಿದೆ. ಸ್ಟಾರ್ ಏರ್ ಕಂಪನಿ ಈ ಭಾಗದ ಪ್ರಯಾಣಿಕರ ಜೊತೆ ಬೇಕಾಬಿಟ್ಟಿ ವರ್ತನೆ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಯು ಪ್ರಶ್ನಿಸದಿರುವುದು ಗಮನಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಜನರ ತಾಳ್ಮೆಯನ್ನು ಪರೀಕ್ಷಿಸಿದಂತಿದೆ. ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ಸಂಚಾರವನ್ನೇ ಸ್ಥಗಿತಗೊಳಿಸಿದರೂ ಯಾವೊಬ್ಬ ಜನಪ್ರತಿನಿಧಿಯು ಈವರೆಗೆ ಚಕಾರವೆತ್ತಲಿಲ್ಲ. ಇತ್ತೀಚೆಗಷ್ಟೇ ಪ್ರಾರಂಭಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ,ಸ್ಟಾರ್ ವಿಮಾನ ಸಂಸ್ಥೆಗಳು ಹೈದರಾಬಾದ್, ಚೆನ್ನೈ ಮುಂಬೈ ಗೋವಾ ತಿರುಪತಿ ಬೆಂಗಳೂರು ಮುಂತಾದಯ ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಆದರೆ ಆರು ವರ್ಷಗಳ ಹಿಂದೆ ಪ್ರಾರಂಭಗೊಂಡ ಕಲಬುರಗಿ ವಿಮಾನ ನಿಲ್ದಾಣ ಮಾತ್ರ ಸಂಪೂರ್ಣವಾಗಿ ಬಾಗಿಲು ಮುಚ್ಚಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಕೂಗನ್ನು ಕೇಳುವವರಿಲ್ಲ ಎಂಬಂತಾಗಿದೆ.
*ಸೂಕ್ತ ಸಮಯ ಪಾಲನೆ/ ಸಮರ್ಪಕ ನಿರ್ವಹಣೆ ಅಗತ್ಯ*
ಕಲಬರಗಿ ವಿಮಾನ ನಿಲ್ದಾಣದಿಂದ ಸೊಲ್ಲಾಪುರ, ನಾಂದೇಡ್ , ವಿಜಯಪುರ, ರಾಯಚೂರು, ಬೀದರ್ ಮುಂತಾದಡೆಗಳ ಪ್ರಯಾಣಿಕರು ಸಂಚರಿಸುತ್ತಿದ್ದು ಈಗ ಎಲ್ಲವೂ ಸ್ತಬ್ದಗೊಂಡಿದೆ. ಬೆಂಗಳೂರಿಂದ ಬೆಳಗ್ಗೆ 8 ಗಂಟೆಗೆ ಹೊರಟು ಕಲಬುರಗಿ ಹಾಗೂ ರಾತ್ರಿ 8 ಗಂಟೆಗೆ ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಳ್ಳುವುದರ ಜೊತೆಗೆ ಅನುಕೂಲ ಕಲ್ಪಿಸಿದಂತಾಗುವುದು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್ ರೈಲು ಟಿಕೆಟ್ ಕೂಡ ಅಲಭ್ಯವಾಗುತ್ತಿರುವುದರಿಂದ ಈ ವೇಳೆ ಹೆಚ್ಚು ಸೂಕ್ತವಾಗಲಿದೆ. ಸಮರ್ಪಕವಾದ ನಿರ್ವಹಣೆ ಮತ್ತು ಸಮಯ ಪಾಲನೆ ಮಾಡಿದರೆ ಮಾತ್ರ ಸಮಸ್ಯೆ ಉದ್ಭವಿಸದು.
*ಸಂಘ ಸಂಸ್ಥೆಗಳು ನಾಗರಿಕರು ದನಿಗೂಡಿಸಲಿ
ಮಾಜಿ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಶಂಕು ಸ್ಥಾಪನೆ ಮಾಡಿದ ಬಹು ನಿರೀಕ್ಷಿತ ವಿಮಾನ ನಿಲ್ದಾಣವು ಕುಂಟುತ್ತಾ ಸಾಗಿ ಕೊನೆಗೂ 2019 ರಿಂದ ಸಂಚಾರ ಸೇವೆ ಪ್ರಾರಂಭಿಸಿತು. ಈಗ ಏಕಾಏಕಿ ಸ್ಥಗಿತಗೊಂಡು ಕಲ್ಯಾಣ ಕರ್ನಾಟಕಕ್ಕೆ ಮಹಾ ಮೋಸ ಮಾಡಿದ್ದರೂ ಸಂಘ ಸಂಸ್ಥೆಗಳು,ನಾಗರಿಕರು ತಮ್ಮ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸದೆ ಇರುವುದು ಕೂಡ ಗಂಭೀರ ವಿಷಯವಾಗಿದೆ. ಪಕ್ಷಬೇಧ ಮರೆತು ಎಲ್ಲ ಸಂಘ ಸಂಸ್ಥೆಗಳು ನಾಗರಿಕರು ಈ ಭಾಗದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಪುನಶ್ಚೇತನ ಹಾಗೂ ಸಮರ್ಪಕ ನಿರ್ವಹಣೆಗೆ ಒತ್ತಾಯಿಸುವ ಕಾಲ ಕೂಡಿಬಂದಿದೆ ಎಂದು ಡಾ. ಸದಾನಂದ ಪೆರ್ಲ ಮತ್ತು ನರಸಿಂಹ ಮೆಂಡನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.