ಖಾಲಿ ಆಗ್ಯಾದ ಬದುಕು

ಖಾಲಿ ಆಗ್ಯಾದ ಬದುಕು
ಏನಂತ ಹೇಳಬೇಕ ನಮ್ಮ ಹಣೆಬರ
ಎಂಥ ಹೊತ್ತು ಬಂತ!
ಮನಿಮಾರ ಕಳಕೊಂಡು ಬಯಲೀಗಿ ನಿಂತೀವಿ,
ಮುಗಿಲಿಗಿ ಕೈ ಹೊತ್ತ!
ಒಂದೇ ಸವನ ಮಳಿ ಸುರದೇ ಸುರ್ದಾದ
ಬಿಟ್ಟೂ ಬಿಡಧಂಗ
ಇದ್ದದೊಂದು ಮನಿ ಬಿದ್ದು ಹೋಗ್ಯಾದ
ಇನ್ನೆಲ್ಲಿ ನೆಲಿ ನಮಗ!
ಹೊಳಿ ಹಳ್ಳ ಮಿತಿಮೀರಿ ಹರದಾವ
ಸಿಕ್ಕಾಂಗ ಉಕ್ಯಾವ,
ಬಿತ್ತಿದಂಥ ಬೆಳಿ ದಕ್ಕಲಿಲ್ಲ,
ಹೊಲ ನೀರಾಗ ಮುಳಗ್ಯಾವ !
ಮಾಡೀದ ಸಂಸಾರ ಹಾಳಾಗಿ ಹೋಗ್ಯಾದ
ಯಾರಿಗೇಳಬೇಕ,
ಇದ್ದಬಿದ್ದ ಸಾಮಾನ ಹರಕೊಂಡು ಹೋಗ್ಯಾವ
ಹೆಂಗ ಬಾಳಬೇಕ!
ಕಟ್ಟಿದ ಕನಸೆಲ್ಲ ಕುಸಿದು ಬಿದ್ದಾವ
ಖಾಲಿ ಆಗ್ಯಾದ ಬದುಕ,
ತುತ್ತು ಕೂಳಿಗೂ ಗತಿ ಇಲ್ಲ ಈಗ
ಇನ್ಯಾಕ ಇರಬೇಕ!
....ನರಸಿಂಗರಾವ ಹೇಮನೂರ
(ಪ್ರಸಕ್ತ ಪ್ರವಾಹ ಪರಿಸ್ಥಿತಿಯನ್ನು ಕಂಡು ಬರೆದ ಕವನ)