ನಿಲ್ಲು ನಿಲ್ಲೇ ಪತಂಗ

ನಿಲ್ಲು ನಿಲ್ಲೇ ಪತಂಗ

ನಿಲ್ಲು ನಿಲ್ಲೇ ಪತಂಗ 

ಪುಸ್ತಕ: ನಿಲ್ಲು ನಿಲ್ಲೇ ಪತಂಗ (ಕಾದಂಬರಿ)

ಲೇಖಕರು:ಹರೀಶ ಕೇರ

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಬೆಲೆ: ₹೧೫೦ (ನೂರ ಐವತ್ತು ರೂಪಾಯಿ)

ಲೇಖಕರಾದ ಹರೀಶ ಕೇರ ಬರೆದ “ನಿಲ್ಲು ನಿಲ್ಲೇ ಪತಂಗ” ಕಾದಂಬರಿಯ ಶೀರ್ಷಿಕೆ, ‘ಎಡಕಲು ಗುಡ್ಡದ ಮೇಲೆ’ ಚಿತ್ರದ ಪ್ರಸಿದ್ಧ ಹಾಡಾದ “ನಿಲ್ಲು ನಿಲ್ಲೇ ಪತಂಗ ಬೇಡ ಬೆಂಕಿಯ ಸಂಗ” ಎಂಬ ಸಾಲನ್ನು ನೆನಪಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಲೆನಾಡಿನ ಸೊಗಡಿನವರು ಆಗಿರುವ ಹರೀಶ ಕೇರ ಅವರು ಸಿವಿಲ್ ಇಂಜಿನಿಯರ್ ಆಗಿ ವಿದ್ಯಾಭ್ಯಾಸ ಮುಗಿಸಿದರೂ, ವೃತ್ತಿಜೀವನದಲ್ಲಿ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ವಿಜಯ ಕರ್ನಾಟಕ,ಕನ್ನಡ ಪ್ರಭ,ವಿಜಯವಾಣಿ,ವಿಶ್ವವಾಣಿ, ಹೊಸ ದಿಗಂತ, ವಿಸ್ತಾರ ನ್ಯೂಸ್ ಸೇರಿದಂತೆ ಅನೇಕ ಕನ್ನಡ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಬರಹಗಾರರಾಗಿ ತಮ್ಮ ಗುರುತನ್ನು ಮೂಡಿಸಿಕೊಂಡಿರುವ ಹರೀಶ ಕೇರ ಅವರು

ಗಿಣಿ ಬಾಗಿಲು (ಅಂಕಣ ಸಂಕಲನ),

 ನಕ್ಷತ್ರ ನೆನೆಯುವ ಹಕ್ಕಿಗಳು (ಕವನ ಸಂಕಲನ) ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಈ ಕಾದಂಬರಿಯಲ್ಲಿ ಲೇಖಕರು ತಮ್ಮ ಕಾಡು ಸುತ್ತುವ ಹವ್ಯಾಸವನ್ನು ಸಾಹಿತ್ಯ ರೂಪದಲ್ಲಿ ಅಚ್ಚಳಿಯದಂತೆ ಬಿಂಬಿಸಿದ್ದಾರೆ. ಮಲೆನಾಡಿನ ಸೊಬಗು, ಕಾಡಿನ ನಿಗೂಢತೆ, ಅರಣ್ಯದ ನಿಸರ್ಗನಾದ—ಎಲ್ಲವೂ ಎದ್ದುಕಾಣುವ ಹಾಗೆ ನಿರೂಪಣೆಯಲ್ಲಿ ಸಂಯೋಜಿಸಲ್ಪಟ್ಟಿವೆ.

ಕಾದಂಬರಿಯ ಮುಖ್ಯ ಪಾತ್ರ ಫಣಿಕರ್, ಪೂರ್ಣಚಂದ್ರ ತೇಜಸ್ವಿ ಅವರ ನೆಲೆಯಾದ ಮಲೆನಾಡಿನ ನೆಲದಲ್ಲಿ ಕಾಡಿನ ರಹಸ್ಯ, ವಿಸ್ಮಯಕಾರಿ ಘಟನೆಗಳು ಮತ್ತು ಕಷ್ಟಗಳ ನಡುವಿನ ಅನುಭವದ ಮೂಲಕ ಓದುಗರಲ್ಲಿ ರೋಮಾಂಚನವನ್ನು ಉಂಟುಮಾಡುತ್ತಾನೆ.

ಚಾರ್ಮಾಡಿ ಪರ್ವತ ಪ್ರದೇಶದ ಚಿತ್ರಣ, ಅದರ ಸಸ್ಯಸಂಪತ್ತು, ಗಾಳಿ, ಮಳೆ—ಎಲ್ಲವೂ ಅಲ್ಲಿರುವ ಭಾವನೆಯನ್ನು ಹುಟ್ಟುಹಾಕುತ್ತವೆ

. ಕೆಲವು ಪದಗಳು ಕಷ್ಟವಾಗಿ ತೋರುವಂತಾದರೂ, ಮರುಓದಿನಲ್ಲಿ ಆಳವಾದ ಅರ್ಥ ಬಿಚ್ಚಿಕೊಳ್ಳುತ್ತದೆ.

ಒಟ್ಟಿನಲ್ಲಿ, ನಿಲ್ಲು ನಿಲ್ಲೇ ಪತಂಗ ಕಾದಂಬರಿಯು ನಿಸರ್ಗಪ್ರಿಯರು, ಚಾರಣಾಸಕ್ತರು ಮತ್ತು ಕಾಡಿನ ರಹಸ್ಯವನ್ನು ಅರಿಯುವವರ ಓದಿಗೆ ಪ್ರೇರಣೆ ನೀಡುವ ವಿಶಿಷ್ಟ ಕೃತಿಯಾಗಿದೆ.

ವಿಮರ್ಶಕ– ಓಂಕಾರ ಪಾಟೀಲ, ಕಾರ್ಯದರ್ಶಿ, ಜಿಲ್ಲಾ ಮಕ್ಕಳ, ಸಾಹಿತ್ಯ ಪರಿಷತ್, ಬೀದರ್