ಕಲಬುರಗಿಯಲ್ಲಿ ಶಾಂತಿಯುತ ಬಂದ್ ಯಶಸ್ವಿ – ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು: ಶಿವರಾಜ ಅಂಡಗಿ ಮನವಿ

ಕಲಬುರಗಿಯಲ್ಲಿ ಶಾಂತಿಯುತ ಬಂದ್ ಯಶಸ್ವಿ – ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು: ಶಿವರಾಜ ಅಂಡಗಿ ಮನವಿ
ಕಲಬುರಗಿ, ಅ.16 – ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂಬುದನ್ನು ಸೇರಿಸಿಕೊಂಡು, ವಿವಿಧ ಬೇಡಿಕೆಗಳೊಂದಿಗೆ ಜಿಲ್ಲೆಯ ರೈತ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಡೆದ ಕಲಬುರಗಿ ಶಾಂತಿಯುತ ಬಂದ್ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ, ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಮನವಿ ಪತ್ರವನ್ನು ಕರ್ನಾಟಕ ಕೃಷಿಕ ಸಮಾಜದ ಸದಸ್ಯರೂ, ಅಂಡಗಿ ಪ್ರತಿಷ್ಠಾನ ಟೆಂಗಳಿಯ ಅಧ್ಯಕ್ಷರೂ ಆದ ಶಿವರಾಜ ಅಂಡಗಿ ಅವರು ಸಲ್ಲಿಸಿದರು.
ಅವರು ಹೇಳಿದರು: “ಇಂದು ಅಕ್ಟೋಬರ್ 16 ವಿಶ್ವ ಆಹಾರ ದಿನದಂದು ನಮ್ಮ ಬದುಕಿಗೆ ಆಹಾರ ಬೆಳೆಯುವ ಅನ್ನದಾತ ರೈತನ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವ್ಯಾಪಾರಿಯೊಬ್ಬನು ನಷ್ಟವಾದರೆ ಬಂದ್ ಮಾಡುತ್ತಾನೆ, ಆದರೆ ರೈತನಿಗೆ ಬೆಳೆಗೂ ಬೆಲೆ ಸಿಗದೇ ಆತ್ಮಹತ್ಯೆಗೆ ತಳ್ಳಲ್ಪಡುತ್ತಿರುವುದು ಸಮಾಜದ ದುಃಖಕರ ವಾಸ್ತವ್ಯ. ಕಲಬುರಗಿ ಜಿಲ್ಲೆಯ ರೈತರು ತಾಳ್ಮೆಯಿಂದ, ಶಾಂತಿಯುತವಾಗಿ ಬಂದ್ ಮೂಲಕ ತಮ್ಮ ಧ್ವನಿಯನ್ನು ಸರ್ಕಾರದವರೆಗೆ ತಲುಪಿಸಿದ್ದಾರೆ” ಎಂದರು.
ಅವರು ಸರ್ಕಾರದ ಭಾಗ್ಯ ಯೋಜನೆಗಳ ಅಸಮತೋಲನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, “ಬಡ ರೈತರ ಖಾತೆಗೆ ಹಣ ಹಾಕುವುದರಲ್ಲಿ ದೋಷವಿಲ್ಲ, ಆದರೆ ನೂರಾರು ಎಕರೆ ಭೂಮಿಯುಳ್ಳ ಶ್ರೀಮಂತರಿಗೂ ಅದೇ ಅನುಕೂಲ ಸಿಗುವುದು ನ್ಯಾಯವಲ್ಲ. ಸರ್ಕಾರಿ ಸಂಬಳ ಪಡೆಯುತ್ತಿರುವ ಕೆಲವರು ಉಚಿತ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಅರ್ಥವಿಲ್ಲದ ಯೋಜನೆಗಳನ್ನು ಮರುಪರಿಶೀಲಿಸಿ, ರೈತರ ನಿಜವಾದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು” ಎಂದು ಮನವಿ ಮಾಡಿದರು.
ಕಲಬುರಗಿ ಬಂದ್ ಯಶಸ್ವಿಗೊಳಿಸಲು ಶ್ರಮಿಸಿದ 25ಕ್ಕೂ ಹೆಚ್ಚು ರೈತ ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಗೆ, ಸಹಕರಿಸಿದ ವ್ಯಾಪಾರಸ್ಥರು, ದಿನಗೂಲಿ ಕಾರ್ಮಿಕರು, ಪತ್ರಕರ್ತರಿಗು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿದ ಪೋಲಿಸ್ ಇಲಾಖೆಗೆ ಶಿವರಾಜ ಅಂಡಗಿಯವರು ಕೃತಜ್ಞತೆಗಳು ಸಲ್ಲಿಸಿದರು.