ತೆಂಗಿಗೆ ಅಪಾರ ಬೇಡಿಕೆ -ವಿಶ್ವ ತೆಂಗು ದಿನ ಸಂದೇಶ

ತೆಂಗಿಗೆ ಅಪಾರ ಬೇಡಿಕೆ -ವಿಶ್ವ ತೆಂಗು ದಿನ ಸಂದೇಶ
ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನ ಆಚರಿಸಲಾಯಿತು. "ಕಲ್ಪವೃಕ್ಷ" ಅಥವಾ ಜೀವನದ ಮರ ಎಂದು ಕರೆಯಲ್ಪಡುವ ತೆಂಗಿನಕಾಯಿ, ನಮ್ಮ ದೇಶಗಳಲ್ಲಿ ಬೆಳೆಯುವ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಭಾರತದಲ್ಲಿ ಶೇಕಡಾ 90 ರಷ್ಟು ತೆಂಗನ್ನು ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಲಕ್ಷಾಂತರ ಜನರಿಗೆ ಜೀವನ ನೀಡುವ ಬೆಳೆ ತೆಂಗು. ತೆಂಗಿನ ಮರದಲ್ಲಿ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ. ಎಳನೀರು ದೇಹಕ್ಕೆ ಬೇಕಾಗುವ ಖನಿಜoಶಗಳಿಂದ ಶ್ರೀಮಂತವಾಗಿರುವ ನೈಸರ್ಗಿಕ ಪಾನೀಯವಾಗಿದೆ. ತೆಂಗಿನ ಹಾಲು, ಎಣ್ಣೆ ಮತ್ತು ಕೊಬ್ಬರಿ ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ ಮತ್ತು ವಿಶೇಷವಾದ ಖಾದ್ಯ ತಯಾರಿಸುವಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಅಡುಗೆ, ಸೌಂದರ್ಯವರ್ಧಕಗಳು ಮತ್ತು ಔಷಧಗಳಲ್ಲಿಯೂ ಬಳಸಲಾಗುತ್ತದೆ. ತೆಂಗಿನ ನಾರಿನ ಪುಡಿಯನ್ನು (ಕೋಕೋಪೀಟ್) ತರಕಾರಿ ಹಾಗು ಹೂವಿನ ಬೀಜಗಳನ್ನು ಮೊಳಕೆಯಾಗಿ ಸಸಿ ಮಾಡಲು, ತೆಂಗಿನ ಚಿಪ್ಪನ್ನು ಮತ್ತು ಎಲೆಗಳನ್ನು ಹಗ್ಗಗಳು, ಚಾಪೆಗಳು, ಕರಕುಶಲ ವಸ್ತುಗಳು, ಇಂಧನ ಮತ್ತು ಇತರ ಉಪಯುಕ್ತ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ತೆಂಗಿನಕಾಯಿ ಐಸ್ ಕ್ರೀಮ್, ಚಾಕೊಲೇಟ್‌ಗಳು, ಚಿಪ್ಸ್, ಪುಡಿ, ವಿನೆಗರ್ ಮತ್ತು ಸೌಂದರ್ಯವರ್ಧಕಗಳಂತಹ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ, ಇದು ವ್ಯಾಪಾರ ಮತ್ತು ಆದಾಯಕ್ಕೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ತೆಂಗಿನ ತೋಟಗಳು ಮಣ್ಣಿನ ಸವೆತವನ್ನು ತಡೆಗಟ್ಟುವ ಮೂಲಕ ಮಣ್ಣಿನ ಸಂರಕ್ಷಣೆಗೆ ಸಹಕಾರಿಯಾಗಿದೆ. ಹೀಗೆ ತೆಂಗು ಆರ್ಥಿಕತೆ, ಸಂಸ್ಕೃತಿ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತೋಟಗಾರಿಕೆ ವಿಜ್ಞಾನಿಗಳಾದ ಡಾ. ಸನ್ಮತಿ ನಾಯಕ್ ಎ ಟಿ ಎಸ್ ತೆಂಗಿನ ಬೆಳೆಯ ಪ್ರಾಮುಖ್ಯತೆ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು.
ಅಲ್ಲದೆ ಪಾರ್ಥೇನಿಯಂ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಸ್ಯರೋಗ ವಿಜ್ಞಾನಿಗಳಾದ ಡಾ. ಝಹೀರ್ ಅಹಮದ್ ರವರು ಕೈ ಕಸ ಕಳೆ ಹುಲ್ಲು ಎಂದೂ ಕರೆಯಲ್ಪಡುವ ಪಾರ್ಥೇನಿಯಮ್ ಅಪಾಯಕಾರಿ ಮತ್ತು ವೇಗವಾಗಿ ಹರಡುವ ಕಳೆ. ಇದು ಮನುಷ್ಯರಿಗೆ, ಪ್ರಾಣಿಗಳು ಮತ್ತು ಪರಿಸರಕ್ಕೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಸ್ಯವು ವಿಷಕಾರಿ ರಾಸಾಯನಿಕಗಳನ್ನು (ಪಾರ್ಥೆನಿನ್ ಮತ್ತು ಲ್ಯಾಕ್ಟೋನ್‌ಗಳು) ಹೊಂದಿದ್ದು ಬೆಳೆಗಳು ಚೆನ್ನಾಗಿ ಬೆಳೆಯುವುದನ್ನು ನಿಲ್ಲಿಸುತ್ತದೆ ಮತ್ತು ಇಳುವರಿಯನ್ನು ಕಡಿಮೆ ಮಾಡುತ್ತದೆ. ಇದರ ಪರಾಗವು ಆಸ್ತಮಾ, ಚರ್ಮದ ಕಿರಿಕಿರಿ, ಕೆಮ್ಮು ಮತ್ತು ಕಣ್ಣಿನ ಕಿರಿಕಿರಿಯನ್ನು ಉಂಟುಮಾಡಬಹುದು. ಇದು ಅನೇಕ ಬೀಜಗಳನ್ನು ಉತ್ಪಾದಿಸುತ್ತದೆ ಬೇಗನೆ ಹರಡುತ್ತದೆ ಮತ್ತು ಮಣ್ಣಿನಲ್ಲಿ ದೀರ್ಘಕಾಲ ಬದುಕುಳಿಯುವುದರಿಂದ ಪಾರ್ಥೇನಿಯಮ್ ಭಾರತದಲ್ಲಿ ಗಂಭೀರ ಸಮಸ್ಯೆಯಾಗಿದೆ. ಇದನ್ನು ರೈತರು ಹೊಲಗಳಲ್ಲಿ ಬೇರು ಸಮೇತ ತೆಗೆದು ನಿರ್ವಹಣೆ ಮಾಡಬೇಕೆಂದು ಮಾಹಿತಿ ನೀಡಿದರು.