ಗಾವುದಿ ಮಾಚಯ್ಯ

ಗಾವುದಿ ಮಾಚಯ್ಯ

ಗಾವುದಿ ಮಾಚಯ್ಯ

ಮುನ್ನ ಗಳಿಸಿದವರೊಡವೆಯ ಈಗ ಕಂಡು 

ಮತ್ತೆ ಇನ್ನಾರಿಗೆ ಇರಿಸಿದೆ? ಅದಂದಿಗೆ 

ಮಳೆ ಬೆಳೆ ತಾನಿದ್ದಂದಿಗೂ ತಪ್ಪದು.

ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.

      ಗಾವುದಿ ಮಾಚಯ್ಯ

                 ವಚನ ಅನುಸಂಧಾನ

ಶರಣರನ್ನು ಮತ್ತು ಅವರ ವಚನಗಳನ್ನು ಕುರಿತು ಮಾತನಾಡುವ ಮೊದಲು ಆ ವಿಷಯಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡ ಬೇಕು. ತಮಗೆ ಬೇಕಾದಂತೆ ಅರ್ಥಾಂತರಗೊಳಿಸಿ ಹೇಳುವ ಅಥವಾ ಬರೆದು ಪ್ರಚಾರ ಮಾಡುವಲ್ಲಿ

ಸದ್ಭಾವನೆಯಂತೂ ಖಂಡಿತಾ ಕಾಣಬರುತ್ತಿಲ್ಲ.

ಶರಣರ ತತ್ವ ಸಿದ್ಧಾಂತಗಳಲ್ಲಿನ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಸರ್ವಕಾಲಿಕ ಸತ್ಯವ ನೇಪಥ್ಯಕ್ಕೆ ಸರಿಸಿ ಮೇಲ್ನೋಟದಲ್ಲಿ ಕಾಣಬರುವ ಧಾರ್ಮಿಕ ಅಂಶಗಳನ್ನ ತಮಗೆ ಸರಿ ಅನಿಸಿದಂತೆ

ಸತ್ಯವನ್ನು ತಿರುಚಿ ಹೇಳುವ ಅಥವಾ ಬರೆಯುವ ಕೆಲಸ ಯಾರು ಮಾಡಿದರೂ ಅದು ಖಂಡನೀಯ ವಾದುದು ಎಂದು ಹೇಳಬೇಕಾಗುತ್ತದೆ.

ಇಲ್ಲಿ ಈ ಮೇಲಿನ ಗಾವುದಿ ಮಾಚಯ್ಯ ಶರಣರ ವಚನದ ಅನುಸಂಧಾನವನ್ನು ತಾತ್ವಿಕ ನೆಲೆಯಲ್ಲಿ ಇಲ್ಲಿ ಪರಿಭಾವಿಸಿ ನೋಡೋಣ.

ಮುನ್ನ ಗಳಿಸಿದವರೊಡವೆಯ ಈಗ ಕಂಡು 

ಮತ್ತೆ ಇನ್ನಾರಿಗೆ ಇರಿಸಿದೆ? ಅದಂದಿಗೆ

ಮಳೆ ಬೆಳೆ ತಾನಿದ್ದಂದಿಗೂ ತಪ್ಪದು.

ವಚನದ ಈ ಸಾಲಿನಲ್ಲಿರುವುದು; ಶರಣರು ಪ್ರತಿ ಪಾದಿಸುವ ಅತಿಮುಖ್ಯವಾದ ಅಸಂಗ್ರಹದ ತತ್ವ 

ಆಗಿದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. ಹಾಗೆಯೇ ಶರಣರು ಗಳಿಸಿಟ್ಟಂಥ ಅನುಭಾವದ ವಚನ ಸಾಹಿತ್ಯದ ಶಬ್ದ ಸಂಪತ್ತನ್ನು ಸಹಿತ ಎಂಬ ಅಂಶವನ್ನು ಕೂಡಾ ಪರಿಗಣಿಸಿ ನೋಡಬೇಕಾಗು ತ್ತದೆ. ಯಾಕೆಂದರೆ ಇಲ್ಲಿ ಹಿಂದಿನವರು ಗಳಿಸಿದ ಲೌಕಿಕದ ದ್ರವ್ಯ ಸಂಪತ್ತಾಗಲಿ ಅಥವಾ ಶರಣರು ಗಳಿಸಿಟ್ಟ ಅನುಭಾವದ ಶಬ್ದಸಂಪತ್ತಾಗಲಿ ಅದು ಅಂದಿನವರ ತನುತ್ರಯಗಳ ಪರಿಶ್ರಮದ ಬೆವರ ಫಲದ ಪರಿಣಾಮ. ಹಾಗಾಗಿ ಅವುಗಳ ಮೇಲಿನ ಹಕ್ಕು ಅವರದೇ ಹೊರತು ನಮ್ಮದೇನಲ್ಲ. ಅದು ನಮಗೆ ನಮ್ಮ ಅರಿವು ಮತ್ತು ಕ್ರಿಯಾಶೀಲತೆಗಾಗಿ ಪ್ರೇರಣೆಯನ್ನು ಮಾತ್ರ ನೀಡುವಂತಹದ್ದಷ್ಟೆ. ಈ ನೆಲೆಯಲ್ಲಿ ಅಸಂಗ್ರಹ ತತ್ವದ ಜೊತೆಗೆ ದುಡಿದು ಉಣ್ಣುವ ಕಾಯಕ ತತ್ವವನ್ನು ವಚನದ ಈ ನುಡಿ ಸಾಲು ಪ್ರತಿಪಾದಿಸುತ್ತದೆ.

ವಚನದ ಮುಂದುವರಿದ ಸಾಲಲ್ಲಿ "ಅದಂದಿಗೆ ಮಳೆ ಬೆಳೆ ತಾನಿದ್ದಂದಿಗೂ ತಪ್ಪದು" ಎನ್ನುವಂಥ ಸುಂದರ ರೂಪಕದ ಚಿತ್ರಣದಲ್ಲಿ ಅಂದಂದಿನ ಆ ಬದುಕಿಗೆ ಅಗತ್ಯವಾದ ಅಂದಂದಿನ ಮಳೆ ಬೆಳೆ ಯನ್ನು ಪ್ರಕೃತಿ ಕರುಣಿಸುತ್ತದೆ. ಹಾಗಾಗಿ ನಾವು ಸ್ವತಃ ದುಡಿದು/ಕಾಯಕ ಮಾಡಿ ಗಳಿಸಿದ್ದರಲ್ಲಿನೇ ಅಗತ್ಯವಿದ್ದಷ್ಟನ್ನು ಮಾತ್ರ ಸ್ವಂತ ಉಪಭೋಗಕ್ಕೆ

ಇಟ್ಟುಕೊಂಡು ಉಳಿದದ್ದನ್ನು ದಾಸೋಹ ಮಾಡಿ ಜೀವನ ಸಾರ್ಥಕ ಮಾಡಿ ಕೊಳ್ಳಲು ಶರಣರ ಈ ಅಸಂಗ್ರಹ ತತ್ವ ಹೇಳುತ್ತದೆ. ಹಾಗೆಯೇ ಶರಣರ ಅನುಭಾವ ಸಂಪತ್ತಾಗಿರುವ ವಚನಗಳು ನಮಗೆ ಗಮ್ಯದ ಗುರಿ ಮತ್ತು ಅದರ ದಾರಿ ತೋರುವಂಥ ಗುರು ಮಾತ್ರ ಆಗಿರುವ ಕಾರಣದಿಂದ ಅವುಗಳ ಉಲ್ಲೇಖದ ಮೂಲಕ ಬಳಸಿಕೊಂಡು ಪದೇ ಪದೆ ಹೇಳುತ್ತಾ ಕೂಡ್ರದೇ ಆ ದಿಶೆಯಲ್ಲಿ ಸ್ವಾನುಭವದ ಮೂಲಕ ಅನುಭಾವ ಸಂಪತ್ತನ್ನು ಗಳಿಸಬೇಕು ಎನ್ನುವುದು ಗಾವುದಿ ಮಾಚಯ್ಯನವರು ಪ್ರಸ್ತುತ ವಚನದ ಮುಖ್ಯ ಆಶಯವಾಗಿದೆ.

ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ* *ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.

ಈ ಮೇಲಿನ ಸಾಲುಗಳ ಮೂಲಕ ಮಾಚಯ್ಯ ಶರಣರು ಅಪ್ಪ ಬಸವಾದಿ ಶರಣರು ಹೇಳಿದ ಆ ಅಸಂಗ್ರಹ ತತ್ವವನ್ನು ಸಮರ್ಥಿಸುತ್ತಾ ಕಾಣದ ಭವಿಷ್ಯದ ಬಗ್ಗೆ ಕುದಿಯದೇ ಸ್ವಕಾಯಕ ಮತ್ತು ಸ್ವಾನುಭವದ ಮೂಲಕ ಇಂದಿನ ಜೀವನ ನಡೆಸಿ ಇದೇ ಜನ್ಮ ಕಡೆಯದು ಮಾಡಿಕೊಳ್ಳಲು ಪ್ರಸ್ತುತ ವಚನದ ಈ ಸಾಲುಗಲ್ಲಿ ತಮ್ಮ ಇಷ್ಟಲಿಂಗ ರೂಪ ಆಗಿರುವ ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ ಎಂದು ಸಮಕಾಲೀನರನ್ನು ಸಾಕ್ಷೀಕರಿಸಿ ತಮ್ಮ ಆಶಯವನ್ನು ಇಲ್ಲಿ ಸಾದರಪಡಿಸಿದ್ದಾರೆ.

        ಅಳಗುಂಡಿ ಅಂದಾನಯ್ಯ