ಕೂಗಿನ ಮಾರಯ್ಯ

ಕೂಗಿನ ಮಾರಯ್ಯ

 ಕೂಗಿರ ಮಾರಯ್ಯ. ಶರಣ 

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ 

ಶರ ಚರಿಸುವುದಕ್ಕೆಡೆಯಾಯಿತ್ತು.

ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ

ವಸ್ತುವನರಿವುದಕ್ಕೆ ಒಡಲಾಯಿತ್ತು.

ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ 

ತ್ರಿಗುಣ ನಷ್ಟ. ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ, ಸಪ್ತಧಾತು ವಿಸರ್ಜನ, 

ಅಷ್ಟಮದ ಹುಟ್ಟುಗೆಟ್ಟಿತ್ತು,

ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ 

ಬಟ್ಟೆ ಕೆಟ್ಟಿತ್ತು, ಸದ್ಭಾವದ ನಿಷ್ಠೆ ನಷ್ಟವಾಯಿತ್ತು.

ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು.

ನಾನಾರೆಂಬುದ ತಿಳಿದಲ್ಲಿ

ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ.

      *ಕೂಗಿನ ಮಾರಯ್ಯ*

                 **  *ವಚನ ಅನುಸಂಧಾನ*

ಅಪ್ಪ ಬಸವಾದಿ ಶರಣರ ವಚನಗಳು; ದೃಷ್ಟಾಂತ ಮತ್ತು ರೂಪಕದ ಪರಿಭಾಷೆಯಲ್ಲಿ ಅರಳಿ ಲೌಕಿಕ ಹಾಗೂ ಆಧ್ಯಾತ್ಮಿಕ ಪರಿಸರದಲ್ಲಿ ಪರಿಮಳಿಸುವ ಪುಷ್ಪಗಳಿದ್ದಂತೆ. ಅವುಗಳ ಚೆಲುವನ್ನು ಸೂಸುವ ಸುಗಂಧದ ಆನಂದವನ್ನು ಆಗ ಅನುಭವಿಸಿಯೇ ಹೇಳಬೇಕು. ಇಲ್ಲಿ ಕೂಗಿನ ಮಾರಯ್ಯ ಶರಣರ ಈ ಮೇಲಿನ ವಚನವನ್ನು ಹಲವು ಸಲ ಓದಿದ ಮೇಲೆ, ಅದನ್ನು ಅನುಭವಿಸಿ, ಆನಂದ ಹೊಂದಿ ನಂತರ ಮರಳಿ ಚಿಂತನೆ ಮಾಡಿ ನೋಡೋಣ.

*#ನಾರಿಯೂ ಮರನೂ *ಕೂಡಿ ಬಾಗಲಿಕ್ಕಾಗಿ* 

*ಶರ* *ಚರಿಸುವುದಕ್ಕೆಡೆಯಾಯಿತ್ತು.*

*ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ*

*ವಸ್ತುವನರಿವುದಕ್ಕೆ #ಒಡಲಾಯಿತ್ತು.*

ಇಲ್ಲಿ, ನಾರಿಯು ಅಂದರೆ ನಾರಿನಿಂದ ನಿರ್ಮಿಸಿದ

ದಾರ. ಮರನು ಅಂದರೆ ಮರದಿಂದಲೇ ಮಾಡಿದ ಬಿಲ್ಲಿನ ಕೋದಂಡ. ಇವುಗಳು ಕೂಡಿ ಬಾಗಿದಾಗ ಲೇ ಅಲ್ಲಿಂದಲೇ ಶರ(ಬಾಣ)ವು ಚರಿಸಲು ಹೇಗೆ ಸಾಧ್ಯವಾಗುವುದೋ ಹಾಗೆಯೇ ಅದರಂತೆ ಭಕ್ತಿ ಮತ್ತು ವಿರಕ್ತಿ ಕೂಡಿದಾಗಲೇನೇ ವಸ್ತು(ಮೂಲ ಚೈತನ್ಯ)ವನ್ನು ಅರಿಯಲು ಅದಕ್ಕೊಂದು ವೇದಿಕೆ ಸಜ್ಜಾಗಿ ಭಕ್ತಿಗೆ ಶಿವ ಸಾನ್ನಿಧ್ಯ ಸಾಧ್ಯವಾಗುತ್ತದೆ. ವಿರಕ್ತಿಗೆ; ಭಕ್ತಿಯಿಂದ ಅರಿವು ಮೂಡಿ ಬದುಕಿನ ಘನತೆ ಮತ್ತು ನಶ್ವರತೆ ಎರಡೂ ಅರಿವಿಗೆ ಬಂದು ಹುಟ್ಟು ಸಾವಿನ ನಟ್ಟನಡುವಿನ ಬದುಕು ಭವಿತನ ಹೊದ್ದು, ಮರೆವಿನ ಮರೆಯಲ್ಲಿ ಪುನರಪಿ ಜನನ ಮರಣದ ಸರಪಳಿಯಲ್ಲಿ ಬಂಧಿಯಾಗುವುದನ್ನು ತಪ್ಪಿಸಿಕೊಳ್ಳಲು ವಿರಕ್ತಿಗೆ ಒಳಗಾಗಿ ಭಕ್ತಿ ವಿರಕ್ತಿ ಎರಡೂ ಸೇರಿ ಶರಣ ಮಾರ್ಗವನ್ನು ಹಿಡಿದು, ಶಿವ ಕಾರುಣ್ಯ ಪಡೆಯಲು ಒಡಲಾಯಿತೆಂದು ವಚನದ ಈ ಸಾಲುಗಳು ಸಾರುತ್ತವೆ.

*ಆ ವಸ್ತು ತ್ರಿಕರಣವ *ವೇದಿಸಿದ ಮತ್ತೆ* 

*ತ್ರಿಗುಣ ನಷ್ಟ*. *ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ,* *ಸಪ್ತಧಾತು ವಿಸರ್ಜನ,*

*ಅಷ್ಟಮದ #ಹುಟ್ಟುಗೆಟ್ಟಿತ್ತು,*

ಆ ವಸ್ತು (ಮೂಲಚೈತನ್ಯ)ವು ತ್ರಿಕರಣಗಳಾದ ( ಮಾತು, ಮನಸು ಬುದ್ಧಿ)ಗಳನ್ನು ಬೇಧಿಸಿದಾಗ ತ್ರಿಗುಣ (ಸಾತ್ವಿಕ, ರಜಸ್ಸು, ಮತ್ತು ತಾಮಸ)ಗಳ ನಷ್ಟ ಉಂಟಾಗುತ್ತದೆ. ಆ ನಷ್ಟದಲ್ಲಿ ಪಂಚೇಂದ್ರಿ ಯ ನಾಶವಾಗಿ; ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರ ದೇಹದಲ್ಲಿನ ಈ ಸಪ್ತಧಾತು ಗಳ ವಿಸರ್ಜನೆಯೂ ಆದ ಕಾರಣಕ್ಕೆ ಅಷ್ಟಮದ ಹುಟ್ಟುಗೆಟ್ಟಿತು ಅಂದ್ರೆ ನಷ್ಟವಾಯಿತು ಎಂದರ್ಥ

*#ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು*, *ಸದ್ಭಾವದ ನಿಷ್ಠೆ ನಷ್ಟವಾಯಿತ್ತು.*

*ಇಂತಿವರೊಳಗಾದ ಕುಲವಾಸನೆ #ಹೊಲಬುಗೆಟ್ಟಿತ್ತು.*

ಹುಟ್ಟಿನಿಂದ ಸಾವಿನ ವರೆಗಿನ ಒಟ್ಟು ಹದಿನಾರು (ಷೋಡಷ) ಸಂಸ್ಕಾರಗಳಿಂದ ಶರೀರದ ಭೌತಿಕ ವಿಕಾಸ ಕ್ರಮವನ್ನ ಶುದ್ಧೀಕರಣ ಮಾಡಿಸಿಕೊಂಡ ಹಂತಗಳ ದಾಟಿಬರುವ ಶರೀರದಲ್ಲಿ ಇಪ್ಪತ್ತೈದು ತತ್ವಗಳು ಹೊಲಬುಗೆಟ್ಟು ಅಂದ್ರೆ ಬಟ್ಟೆ (ದಾರಿ) ಕೆಟ್ಟು, ತನು ಮನ ಭಾವಗಳ ಈ ತಾತ್ವಿಕ, ಭೌತಿಕ ಮತ್ತು ಪಾರ ಮಾರ್ಥಿಕ ಸೂಕ್ಷ್ಮಗಳ ಸಂಯುಕ್ತ ಶರೀರದಲ್ಲಿನ ಕರಣಂಗಳಲ್ಲಿರುವ ರಾಗ ದ್ವೇಷಗ ಳು ನಷ್ಟವಾಗಿ, ಪಂಚಭೂತಗಳ ಮೂಲ ಭೂತ ಗುಣ ಸ್ವಭಾವದ ಕುಲವಾಸನೆ ದಿಕ್ಕೆಟ್ಟು ಹೋಯಿ ತೆಂದು ವಚನದ ಈ ಸಾಲುಗಳು ಹೇಳುತ್ತವೆ.

*#ನಾನಾರೆಂಬುದ ತಿಳಿದಲ್ಲಿ*

*ಕೂಗಿನ ಕುಲಕ್ಕೆ* *ಹೊರಗಾಯಿತ್ತು* *ಮಹಾಮಹಿಮ #ಮಾರೇಶ್ವರನನರಿಯಲಾಗಿ.*

ಹೀಗಿರುವಾಗ, ನಾನಾರು ಎಂಬುದನ್ನು ಅರಿತಲ್ಲಿ; ಕೂಗಿನ ಕುಲಕ್ಕೆ ಹೊರಗಾಗಿತ್ತು ಅಂದರೆ ಇಲ್ಲಿ ಈ ಮಾರೇಶ್ವರನನ್ನು ತಿಳಿದಲ್ಲಿ, ಈ ಎಲ್ಲಾ ಜೀವನದ ರಾಡಿಯಿಂದ ನಿಜಮುಕ್ತಿಯ ಹೊಂದುತ್ತೀ ಎಂದು ಪ್ರಸ್ತುತ ವಚನವು ತನ್ಮೂಲಕ 'ತನ್ನ ತಾನಾರೆಂದು ಅರಿತು ಆಚರಿಸಲು' ವಿವರಿಸುತ್ತದೆ.

*ಸಂಕ್ಷಿಪ್ತ #ಪರಿಚಯ

ಕೂಗಿನ ಮಾರಯ್ಯಗಳ ಕಾಯಕ, ಕಷ್ಟಕಾಲದಲ್ಲಿ ಕೂಗುಹಾಕಿ ಎಚ್ಚರಿಸುವುದು. ಬಿಜ್ಜಳನ ಸೈನ್ಯವು ಬಂದಾಗ ಉಚ್ಚಧ್ವನಿಯಲ್ಲಿ ಕೂಗುಹಾಕಿ ಶರಣರ ನ್ನು "ಎಚ್ಚರಿಸುವ ಕಾಯಕ" ಮಾಡುತ್ತಿದ್ದರೆನ್ನಲಾ ಗಿದೆ. ಅನುಭವ ಮಂಟಪದ ೭೭೦ ಅಮರಗಣಂ ಗಳಲ್ಲೊಬ್ಬ ವಚನಕಾರ ಶರಣರಾಗಿದ್ದು ಇವರು 'ಮಹಾಮಹಿಮ ಮಾರೇಶ್ವರ' ಎಂಬ ವಚನಾಂಕಿ ತದಲ್ಲಿ ವಚನಗಳನ್ನು ರಚಿಸಿದ್ದು,೧೧ ವಚನಗಳು ಮಾತ್ರ ಸಧ್ಯಕ್ಕೆ ದೊರೆತಿವೆ. ಅಲ್ಲಿ; ಆಧ್ಯಾತ್ಮಿಕದ ಸಂಗತಿಗಳು ಅನನ್ಯವಾಗಿ ಬಿಂಬಿತವಾಗಿವೆ. ಜೊತೆಗೆ ಷಡುಸ್ಥಲಗಳ ಸ್ವರೂಪ, ನಿಜಭಕ್ತನ ನಿಲುವುಗಳ ಬಗ್ಗೆ ಪ್ರತಿಪಾದನೆಗಳನ್ನ ಅರ್ಥಪೂ ರ್ಣವಾಗಿ ಮಾಡಲಾಗಿದೆ. ಕಲ್ಯಾಣ ಕ್ರಾಂತಿ ಸಂದ

ರ್ಭದಲ್ಲಿ; ಉಳವಿಕಡೆ ಹೊರಟ ಶರಣರ ತಂಡದ ಲ್ಲಿದ್ದ ಇವರು, ಬಿಜ್ಜಳನ ಸೈನ್ಯ ಮತ್ತು ಶರಣರ ಸಂಗಡ ಬೈಲಹೊಂಗಲ ಹತ್ತಿರದ 'ಮುರಗೋಡ' ಬಳಿಆದ ಭೀಕರ ಕದನದಲ್ಲಿ ಕೂಗಿನ ಮಾರಯ್ಯ ಶರಣ ವೀರ ಮರಣ ಹೊಂದುತ್ತಾರೆ. 

                   *ಅಳಗುಂಡಿ ಅಂದಾನಯ್ಯ*