ಮನುಮುನಿ ಗುಮ್ಮಟದೇವ

ಮನುಮುನಿ ಗುಮ್ಮಟದೇವ

ಮನುಮುನಿ ಗುಮ್ಮಟ ದೇವಿ 

ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು.

ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷ ಕ್ಕೊಳಗು. ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು. ಇಂತೀ ಮೂರರಿಂದ ಕಂಡೆಹೆನೆಂದಡೆ ಮಾಯಾಪ್ರಪಂಚು.

ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ. ಇದ ಭೇದಿಸಲಾರೆ. ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ, ಎನ್ನ ಕಾಡುವುದಕ್ಕೆ ಏಕೆ ಅಡಗಿದೆ ?

  *ಮನುಮುನಿ ಗುಮ್ಮಟದೇವ*

ಹನ್ನೆರಡನೇ ಶತಮಾನದಷ್ಟೊತ್ತಿಗೆ ವೈದಿಕಶಾಹಿ ವ್ಯವಸ್ಥೆಯ ಕಬಂಧ ಬಾಹುವಿನಲ್ಲಿ ಶೋಷಣೆಗೆ ಈಡಾದಂಥ ಬಹುತೇಕ ಕೆಳವರ್ಗದ ಮನುಷ್ಯನ ಪ್ರಜ್ಞೆಯು ಜಡವಾಗಿ ಸ್ಥಾವರಗೊಂಡಲ್ಲದೆ ಶಿಥಿಲ ಸ್ಥಿತಿಗೂ ತಲುಪಿಹೋಗಿದ್ದರಿಂದಾಗಿ ಆತನ ಬುದ್ಧಿ ಮೌಢ್ಯದ ಗೂಡಾಗಿದ್ದನ್ನು ಕಂಡು ಮನಗಂಡಿದ್ದು ಅಲ್ಲದೇನೇ ಇದಕ್ಕೊಂದು ಸೂಕ್ತ ಪರಿಹಾರವನ್ನು ಅಪ್ಪ ಬಸವಾದಿ ಶರಣರು ಚಲನಶೀಲ ಜಂಗಮ ತತ್ವವನ್ನು ನಂಬಿ ನಡೆದವರಾದ ಕಾರಣದಿಂದಾಗಿ,

ಪ್ರಖರವಾದ ತಮ್ಮ ವೈಚಾರಿಕತೆಯ ಬಿಸಿಯನ್ನು ಮುಟ್ಟಿಸಿ, ತಮ್ಮ ಮನೋವೈಜ್ಞಾನಿಕವಾದ ಮತ್ತು ಸರ್ವಸಮಾನತೆಯ ಏಕ(ದೇವ)ನಿಷ್ಠೆ ನೆಲೆಯನ್ನ ಅವರಲ್ಲಿ ಅಳವಡಿಸಿ ವ್ಯಕ್ತಿಯ ಒಳಗಡೆಯಿರುವ ಅನನ್ಯವಾದ ಅಗೋಚರವಾದ ಚಿತ್ಕಳಾಶಕ್ತಿಯ ಮಹಾಲಿಂಗವೇ ಅಲ್ಲಿರುವಂಥಾ ಅತ್ಯದ್ಭುತವಾದ ಸತ್ಯವನ್ನು ಅವರು ತಮ್ಮ ಶರಣತತ್ವ ಸಿದ್ಧಾಂತದ ಗಹನವಾದ ಅರಿವು ನಡೆನುಡಿಗಳ ಆಚರಣೆಯ ಜೊತೆಗೆ ಇಷ್ಟಲಿಂಗದ ಅನುಸಂಧಾನ ಮಾಡುವ ಮೂಲಕ ಸ್ವಾನುಭವದ ಶಿವಯೋಗ ಸಾಧನೆಯ ಸತ್ಫಲವನ್ನು ತಂತಮ್ಮ ಬದುಕಿನಲ್ಲಿ ಅವರುಗಳು ಅಳವಡಿಸಿಕೊಂಡು ಸಾಧಿಸಿ ತೋರಿಸಿದ್ದನ್ನ ತಮ್ಮ ವಚನಗಳಲ್ಲಿ ಇಂಬಿಟ್ಟು ಕೊಟ್ಟಿದ್ದಾರೆ. ಇಷ್ಟೆಲ್ಲಾ ಅರಿವಿನ ಬೆಳಕಿನಲ್ಲಿ ಈ ಮೇಲಿನ ಮನುಮುನಿ ಗುಮ್ಮಟದೇವರ ಪ್ರಸ್ತುತ ವಚನವನ್ನು ಈಗ ಇಲ್ಲಿ ಅನುಸಂಧಾನ ಮಾಡಿ ನೋಡೋಣ. 

*#ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು.*

*ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷ ಕ್ಕೊಳಗು.* *ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು.* *ಇಂತೀ ಮೂರರಿಂದ ಕಂಡೆಹೆನೆಂದಡೆ #ಮಾಯಾಪ್ರಪಂಚು.*

ಮೊದಲ ಭಾಗದೀ ಸಾಲಿನಲ್ಲಿ; ತನುತ್ರಯಗಳಾದ ಸ್ಥೂಲ(ಅಂಗ) ಸೂಕ್ಷ್ಮ(ಮನಸ್ಸು) ಕಾರಣ(ಭಾವ)

ಇವುಗಳನ್ನ ವಚನಕಾರರು ಇಚ್ಛಾಶಕ್ತಿ ಕ್ರಿಯಾಶಕ್ತಿ

ಜ್ಞಾನಶಕ್ತಿ ರೂಪದಲ್ಲಿ ವಿಂಗಡಿಸಿ, ಅಂಗದೊಳಗೇ ಇರುವ ಆ ದೇವರ ಅನ್ವೇಷಣೆಗೆ ಅಪ್ಪ ಬಸವಣ್ಣ ಕರುಣಿಸಿಕೊಟ್ಟ ಇಷ್ಟಲಿಂಗವನ್ನು ಅಂಗೈಯಲ್ಲಿ ಇಟ್ಟುಕೊಂಡು ಲಿಂಗಾನುಸಂಧಾನಕ್ಕೆ ಅಣಿಯಾ ಗಿದ್ದಾರೆ. ಆದ್ರೆ ಅವರಿಗೆ ಈ ಶಕ್ತಿಗಳು ಕ್ರಮವಾಗಿ ಬ್ರಹ್ಮನ ವಿಷ್ಣುವಿನ ರುದ್ರನ ಹಂಗಿನ ಬಲೆಯ ಬಂಧನಕ್ಕೆ ಒಳಗಾಗಿ ಅವರ ಆ ನಿಯಂತ್ರಣದಲ್ಲಿ ಹುಟ್ಟು ಬದುಕು ಸಾವಿನ ರಾಟಾಳ ಚಕ್ರಕ್ಕೆ ತಮ್ಮ ಬದುಕನ್ನು ಒಡ್ಡಿಕೊಂಡಿದ್ದನ್ನು ಕಂಡು ನಿರಾಶೆ ಗೊಂಡಿದ್ದರೆ. ಈ ಮೂರು ಶಕ್ತಿಯ ಮೂಲಕ ದೇವರ ಕಂಡೇನೆಂದರೆ ಇವುಗಳದ್ದು ಮಾಯಾ ಪ್ರಪಂಚವೆಂದು ನಿಡುಸುಯ್ಯುತ್ತಾರೆ.

*#ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ.* *ಇದ ಭೇದಿಸಲಾರೆ.* *ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ,* *ಎನ್ನ ಕಾಡುವುದಕ್ಕೆ ಏಕೆ #ಅಡಗಿದೆ ?*

ಈ ಮಾಯಾ ಪ್ರಪಂಚದ ಹೊರಗಿದ್ದುಕೊಂಡು ಓದಿ ನೋಡಿ ಕಂಡೇನೆಂದರೆ, ದೇವರು ಸಾಹಿತ್ಯದ ನೆಲೆಯಲ್ಲಿ ಕಾಣುವುದಿಲ್ಲ ಯಾಕೆಂದರೆ ಶರಣರ ದೇವರು ಅಗೋಚರ.ಇದನ್ನ ಭೇದಿಸಿ ನೋಡಲು ತಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ನಿಲ್ಲುತ್ತಾರೆ. ತನ್ಮೂಲಕ ತಮ್ಮ ಇಷ್ಟಲಿಂಗವಾದಂಥಾ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗವೆ ಎನ್ನ ಕಾಡುವುದಕ್ಕೆ ಏಕೆ #ಅಡಗಿದೆ ? ಎನ್ನುವರು.

ಇದರಿಂದ ಗಮನಿಸಬೇಕಾದ ಸಂಗತಿ ಏನೆಂದರೆ; ಈ ವಚನಕಾರರು ಮೂಲತಃ ಜೈನಧರ್ಮದ ನೆಲೆ ಮೂಲದಿಂದ ಬಂದವರಾದ ಕಾರಣ ಇಷ್ಟಲಿಂಗ ಶಿವಯೋಗದಲ್ಲಿವರ ಮನವು ದೃಢವಾಗಿಲ್ಲದ್ದು ಇಲ್ಲಿ ಎದ್ದು ಕಾಣುತ್ತದೆ.

*#ಸಂಕ್ಷಿಪ್ತ #ಪರಿಚಯ*

ಸಾಂದರ್ಭಿಕ ಚಿತ್ರ, ಮಾಹಿತಿ ಅಂತರ್ಜಾಲ ಕೃಪೆ

೧೨ನೆಯ ಶತಮಾನದ ಮನುಮುನಿ ಗುಮ್ಮಟ ದೇವರ ಮೂಲತ: ಜೈನಧರ್ಮೀಯರಾಗಿದ್ದು, ಅನಂತರ ಶರಣಧರ್ಮ ಸ್ವೀಕರಿಸಿ ಶರಣರಾದರೆ ನ್ನಲಾಗುತ್ತದೆ. ‘ಗೂಡಿನ ಗುಮ್ಮಟನೊಡೆಯ ಆಗಮ್ಯೇಶ್ವರಲಿಂಗ’ ಅಂಕಿತದಲ್ಲಿವರು ರಚಿಸಿದ ೯೯ವಚನಗಳು ದೊರೆತಿವೆ. ಇವುಗಳನ್ನು ಎಲ್ಲಾ ಪುರಾನತರ ವಚನಕಟ್ಟುಗಳಲ್ಲಿ; ಆತ್ಮನ ಅರಿವು, ಭಾವಸ್ಥಲ, ಆತ್ಮನ ಐಕ್ಯಸ್ಥಲ, ಪಿಂಡಜ್ಞಾನ 

ಸಂಬಂಧ ಎಂಬ ಸ್ಥಲಗಳ ಅಡಿಯಲ್ಲಿ ಜೋಡಿಸಿ ಇಡಲಾಗಿದೆ. ಷಟ್ಸ್ಥಲ ತತ್ವ, ಏಕದೇವೋಪಾಸನೆ, ಪರಮತ ದೂಷಣೆ, ಜೀವ ದಯಾಭಾವ ಇವುಗ ಳಲ್ಲಿ ವಿಶೇಷವಾಗಿ ನಿರೂಪಿತವಾಗಿದೆ. ಬೆಡಗಿನ ಪರಿಭಾಷೆಯಿದ್ರೂ ಕೆಲ ವಚನ ಸುಂದರವಾಗಿವೆ.

ಬಿಜ್ಜಳನಿಗೆ ಧರ್ಮ ಬೋಧಿಸಿದ ಮೀಮಾಂಸಕ ನೆಂದೂ, ಜಿನನೇಮ ಗುಣನಾಮ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯನೆಂದೂ ತಮ್ಮನ್ನು ತಾವು ಕರೆದುಕೊಂಡಿರುದು ವಿಶೇಷ. ಇವರ ವಚನಗಳಲ್ಲಿ ಭಕ್ತಿಸ್ಥಲ ಐಕ್ಯಸ್ಥಲಗಳಿಗೆ ಸಂಬಂಧಿಸಿದ ವಿವೇಚನೆಯೇ ಹೆಚ್ಚಾಗಿ ಕಂಡು ಬರುತ್ತದೆ. ದಯವೇ ಧರ್ಮದಮೂಲ ಏಕದೇವ ಉಪಾಸನೆ, ಪರಮತ ದೂಷಣೆಯಂಥ ಸಂಗತಿ ಗಳನ್ನೂ ಇಲ್ಲಿ ವಿವರಿಸಲಾಗಿದೆ.

             ಅಳಗುಂಡಿ ಅಂದಾನಯ್ಯ*