ಗೂಡ್ಸ್ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ಡಿಕ್ಕಿ : ಪ್ರಯಾಣಿಕರಿಗೆ ಗಾಯ
ಗೂಡ್ಸ್ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ಡಿಕ್ಕಿ : 19 ಪ್ರಯಾಣಿಕರಿಗೆ ಗಾಯ
ಚೆನ್ನೈ : ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಹತ್ತಿರ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು - ದರ್ಭಾಂಗ ಎಕ್ಸ್‌ಪ್ರೆಸ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ 19 ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಘಟನೆಯು ಪ್ರಯಾಣಿಕರಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ.
ಅಕ್ಟೋಬರ್ 11 ರ ರಾತ್ರಿ 8 ಗಂಟೆ 30 ನಿಮಿಷಕ್ಕೆ ಚೆನ್ನೈ-ಗುಡೂರು ವಿಭಾಗದ ಪೊನ್ನೇರಿ ಮತ್ತು ಕವರೈಪ್ಪೆಟ್ಟೈ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಪ್ಯಾಸೆಂಜರ್ ರೈಲಿನ 12 ರಿಂದ 13 ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.
ರೈಲ್ವೆ ಅಧಿಕಾರಿಗಳ ಹೇಳಿಕೆಯಂತೆ, ಪ್ರತಿ ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು, ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ತಪ್ಪಾಗಿ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ .ಇದರ ಪರಿಣಾಮ ಗೂಡ್ಸ್ ರೈಲಿನಲ್ಲಿದ್ದ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆಯೇ ದಕ್ಷಿಣ ರೈಲ್ವೆ ಮತ್ತು ಸ್ಥಳೀಯ ಅಧಿಕಾರಿಗಳ ರಕ್ಷಣಾ ತಂಡಗಳು ತಕ್ಷಣ ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಬೋಗಿಯಲ್ಲಿ ಇದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವರದಿ ಮಾಡಿದ್ದು ತಿಳಿಸಿದ್ದಾರೆ.
ಅಪಘಾತದಲ್ಲಿ 14 ಮಂದಿಗೆ ಹೆಚ್ಚಿನ ಗಾಯಗಳಾಗಿದ್ದು. ಅವರನ್ನು ನಗರದ ಸ್ಥಳೀಯ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಮೂಲಗಳು ಖಚಿತ ಪಡಿಸಿ ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು , “ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸರ್ಕಾರವು ತ್ವರಿತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಆಹಾರ ಮತ್ತು ಪರ್ಯಾಯ ಪ್ರಯಾಣ ಸೌಲಭ್ಯಗಳನ್ನು ಒದಗಿಸಲು ತಂಡವನ್ನು ರಚಿಸಲಾಗಿದೆ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಾಧ್ಯಮ ಮೂಲಕ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಇಂದ ಸಾಮಾಜಿಕ ಜಾಲತಾಣಗಳಲ್ಲಿ ,ಎಕ್ಸ್ ನಲ್ಲಿ ದುರ್ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು , “ರೈಲು ಅಪಘಾತದ ಕುರಿತು ಮಾಹಿತಿ ದೊರೆತ ಕೂಡಲೇ ಸಚಿವ ಎಸ್.ಎಂ ನಾಸರ್ ಜೊತೆ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ಘಟನಾ ಸ್ಥಳಕ್ಕೆ ತೆರಳಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಅಪಘಾತಕ್ಕೀಡಾದ ರೈಲು ಬೋಗಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರತವಾಗಿದ್ದು, ವಿವಿಧ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದೇನೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಈ ಘಟನೆಯ ಕುರಿತು ಪ್ರಕಟಣೆ ಹೊರಡಿಸಿರುವ ರೈಲ್ವೆ ಮಂಡಳಿ, “ರೈಲಿನ ಲೋಕೋ ಪೈಲಟ್ ಸಿಬ್ಬಂದಿ ಮತ್ತು ಗಾರ್ಡ್ ಸುರಕ್ಷಿತವಾಗಿದ್ದಾರೆ. ಸುಮಾರು 12-13 ಬೋಗಿಗಳು ಹಳಿ ತಪ್ಪಿವೆ. ಇಲ್ಲಿಯವರೆಗೆ, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಆದರೆ, ಕೆಲವರಿಗೆ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ತಿಳಿಸಿದ್ದಾರೆ.
ರೈಲು ಅಪಘಾತದ ಹಿನ್ನೆಲೆಯಲ್ಲಿ, ಆ ಮಾರ್ಗಗವಾಗಿ ಸಾಗುವ ಸುಮಾರು 8 ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ ಮತ್ತು 2 ರೈಲು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.