ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿವಾಣಿಜ್ಯ ವಿಭಾಗದ ಒಂದು ದಿನದ ಕಾರ್ಯಾಗಾರ
ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿವಾಣಿಜ್ಯ ವಿಭಾಗದ ಒಂದು ದಿನದ ಕಾರ್ಯಾಗಾರ
ಬೆಂಗಳೂರು: ಐಟಿಐ ಲೇಔಟ್, ಬನಶಂಕರಿ 3ನೇ ಹಂತದ ಶ್ರೀ ಕೃಷ್ಣ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಬೆಂಗಳೂರು ನಗರ ವಿಶ್ವವಿದ್ಯಾಲಯದ ಪಠ್ಯಕ್ರಮದ ಅನುಸಾರ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ ಪಠ್ಯಾಧಾರಿತ ಕಾರ್ಯಾಗಾರವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಬಿ. ರಮೇಶ್ ಅವರು ಭಾಗವಹಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಗಳಾಗಿ ವಾಣಿಜ್ಯ ವಿಭಾಗದ ಡೀನ್ ಹಾಗೂ ಅಧ್ಯಕ್ಷರಾದ ಪ್ರೊ. ಕೆ.ಆರ್. ಜಲಜ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು, ಸ್ನಾತಕೋತ್ತರ ಪದವಿ ಕೇಂದ್ರದ ನಿರ್ದೇಶಕರಾದ ಪ್ರೊ. ವೇಣುಗೋಪಾಲ್, ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಎಸ್.ಪಿ. ಮನೋಹರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಉಷಾ ಕುಮಾರಿ, ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ಸುರೇಶ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಮುನಿನಂಜಪ್ಪ, ಬಿಬಿಎ ವಿಭಾಗದ ಮುಖ್ಯಸ್ಥರಾದ ಡಾ. ದೀಪ ಕೆ. ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿವಿಧ ಕಾಲೇಜುಗಳಿಂದ ಆಗಮಿಸಿದ ಉಪನ್ಯಾಸಕರು ಉಪಸ್ಥಿತರಿದ್ದರು.
ಉಪಕುಲಪತಿಗಳಾದ ಪ್ರೊ. ಬಿ. ರಮೇಶ್ ಅವರು ಮಾತನಾಡಿ, ವಾಣಿಜ್ಯ ವಿಭಾಗವು ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯವಾಗಿದ್ದು, ಇದರಿಂದ ಪ್ರಾಧ್ಯಾಪಕರಿಗೆ ಬೋಧನಾ ವಿಷಯದಲ್ಲಿ ಹೆಚ್ಚಿನ ಜ್ಞಾನ ದೊರೆತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಅಧ್ಯಯನಕ್ಕೆ ಸೀಮಿತವಾಗದೆ ಎಂಎಸ್‌ಎಂಇ (MSME) ಹಾಗೂ ನವ್ಯೋದ್ಯಮಗಳ (Startups) ಕುರಿತು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ವಿಭಾಗದ ಡೀನ್ ಹಾಗೂ ಅಧ್ಯಕ್ಷರಾದ ಪ್ರೊ. ಕೆ.ಆರ್. ಜಲಜ ಅವರು ಮಾತನಾಡಿ, ತಂತ್ರಜ್ಞಾನ ಸಶಕ್ತಗೊಂಡ ಪಠ್ಯ ಹಾಗೂ ಸುಸಜ್ಜಿತ ತರಗತಿ ಕೊಠಡಿಗಳ ಬಳಕೆ ಬೋಧನೆ-ಅಧ್ಯಯನ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ಜ್ಞಾನ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳನ್ನು ಮುಂದಿನ ಅಧ್ಯಯನ, ಗುರಿ ಸಾಧನೆ ಹಾಗೂ ಕ್ರಿಯಾಶೀಲ ಚಿಂತನೆಗಳತ್ತ ಪ್ರೇರೇಪಿಸಬೇಕು. ಶಿಕ್ಷಕರು ತಮ್ಮ ನಿರಂತರ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂದು ಕರೆ ನೀಡಿದರು.
