ಸೋಮನಾಥ ಮೂಲ ಜ್ಯೋತಿರ್ಲಿಂಗ ಭಾಗಗಳ ಪುನಃ ಪ್ರತಿಷ್ಠಾಪನೆ – ಮಹಾಶಿವರಾತ್ರಿಯಂದು ಸಾರ್ವಜನಿಕ ದರ್ಶನಕ್ಕೆ ಮುಕ್ತ

ಸೋಮನಾಥ ಮೂಲ ಜ್ಯೋತಿರ್ಲಿಂಗ ಭಾಗಗಳ ಪುನಃ ಪ್ರತಿಷ್ಠಾಪನೆ – ಮಹಾಶಿವರಾತ್ರಿಯಂದು ಸಾರ್ವಜನಿಕ ದರ್ಶನಕ್ಕೆ ಮುಕ್ತ

ಸೋಮನಾಥ ಮೂಲ ಜ್ಯೋತಿರ್ಲಿಂಗ ಭಾಗಗಳ ಪುನಃ ಪ್ರತಿಷ್ಠಾಪನೆ – ಮಹಾಶಿವರಾತ್ರಿಯಂದು ಸಾರ್ವಜನಿಕ ದರ್ಶನಕ್ಕೆ ಮುಕ್ತ

ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯಕ್ಕೆ ಸಂಬಂಧಿಸಿದ ಮೂಲ ಜ್ಯೋತಿರ್ಲಿಂಗದ ಭಾಗಗಳನ್ನು ಗುರುದೇವ ಶ್ರೀ ಶ್ರೀ ರವಿ ಶಂಕರ ಪುನಃ ಪ್ರತಿಷ್ಠಾಪಿಸಿರುವುದಾಗಿ ತಿಳಿದುಬಂದಿದೆ. ಈ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಘಟನೆ ಮಹಾಶಿವರಾತ್ರಿಯಂದು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ಪೌರಾಣಿಕ ನಂಬಿಕೆಗಳ ಪ್ರಕಾರ ಸತ್ಯಯುಗದಲ್ಲಿ ಸೋಮ (ಚಂದ್ರ) ದೇವರು ಈ ಜ್ಯೋತಿರ್ಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬ ಪ್ರಸಿದ್ಧಿ ಇದೆ. ಅಲ್ಲದೇ ಶ್ರೀಕೃಷ್ಣನು ಇಲ್ಲಿ ತಪಸ್ಸು ಮಾಡಿದನೆಂಬ ಪ್ರತೀತಿಯೂ ಇದೆ. ಪ್ರಾಚೀನ ಗ್ರಂಥಗಳಲ್ಲಿ ಈ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂಬ ಉಲ್ಲೇಖಗಳೂ ಕಂಡುಬರುತ್ತವೆ.

ಇತಿಹಾಸದ ಓಲೆಗಳಲ್ಲಿ, ಮೊಗಲ್ ಆಕ್ರಮಣಗಳ ಸಮಯದಲ್ಲಿ ದೇವಾಲಯ ಧ್ವಂಸಗೊಂಡು ಮೂಲ ಜ್ಯೋತಿರ್ಲಿಂಗವು ನಾಶವಾಗಿದೆ ಎಂದು ತಿಳಿಯಲಾಗಿತ್ತು. ಆದರೆ ಅದರ ಕೆಲವು ಭಾಗಗಳನ್ನು ಅಗ್ನಿಹೋತ್ರ ಪುರೋಹಿತರು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ತಲೆಮಾರುಗಳಿಂದ ಅವುಗಳನ್ನು ಕಾಪಾಡಿಕೊಂಡು ಬಂದ ಅವರು, ಆ ಭಾಗಗಳಿಗೆ ಶಿವಲಿಂಗದ ಆಕಾರ ನೀಡಿ ಪೂಜಿಸುತ್ತಿದ್ದರು.

ಪೂಜಾ ಸಂದರ್ಭಗಳಲ್ಲಿ ಈ ಶಿಲೆಗಳಲ್ಲಿರುವ ವಿಶಿಷ್ಟ ಕಾಂತೀಯ ಗುಣಗಳನ್ನು ಅಗ್ನಿಹೋತ್ರರು ಗಮನಿಸಿದ್ದಾಗಿ ಹೇಳಲಾಗಿದೆ. ಸಾಮಾನ್ಯವಾಗಿ ವಸ್ತುಗಳ ಧ್ರುವಗಳಲ್ಲಿ ಕಂಡುಬರುವ ಕಾಂತೀಯತೆ, ಈ ಶಿಲೆಯ ಕೇಂದ್ರ ಭಾಗದಲ್ಲೇ ಅತ್ಯಂತ ಪ್ರಬಲವಾಗಿರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭೂ ವಿಜ್ಞಾನಿಗಳಿಗೂ ಇದು ಅಪರೂಪದ ಘಟನೆಯಾಗಿ ಪರಿಣಮಿಸಿದೆ.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಶಿವಲಿಂಗ ಭಾಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸಿ, ಭವಿಷ್ಯದಲ್ಲಿ ಯೋಗ್ಯ ವ್ಯಕ್ತಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದರೆಂದು ತಿಳಿದುಬಂದಿದೆ. ಆ ನಿರ್ದೇಶನದಂತೆ ಜನವರಿ 2025ರಲ್ಲಿ ಅಗ್ನಿಹೋತ್ರರು ಈ ಶಿವಲಿಂಗ ಭಾಗಗಳನ್ನು ಗುರುದೇವ ಶ್ರೀ ಶ್ರೀ ರವಿ ಶಂಕರರಿಗೆ ಹಸ್ತಾಂತರಿಸಿದರು.

ಮಹಾಶಿವರಾತ್ರಿಯ ಪವಿತ್ರ ದಿನದಂದು, ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಈ ಜ್ಯೋತಿರ್ಲಿಂಗದ ಭಾಗಗಳನ್ನು ಸುಮಾರು ಸಾವಿರ ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆ ಮತ್ತು ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಈ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಭಕ್ತರಲ್ಲಿ ಅಪಾರ ಭಕ್ತಿ-ಭಾವನೆ ಉಂಟುಮಾಡಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಈ ಘಟನೆಗೆ ವಿಶೇಷ ಮಹತ್ವ ನೀಡಲಾಗುತ್ತಿದೆ.