ಫಾತಿಮಾ ಶೇಖಗೆ ಒಲಿದ ಸಿಐಐ ಆದರ್ಶ ಮಹಿಳೆ ರಾಷ್ಟ್ರೀಯ ಪುರಸ್ಕಾರ

ಫಾತಿಮಾ ಶೇಖಗೆ ಒಲಿದ ಸಿಐಐ ಆದರ್ಶ ಮಹಿಳೆ ರಾಷ್ಟ್ರೀಯ ಪುರಸ್ಕಾರ 

ಮುಂಬಯಿ ಬೀದಿ‌ ವ್ಯಾಪಾರಿಗಳ ಪಾಲಿನ ನಕ್ಷತ್ರ ಖ್ಯಾತಿಯ.....ಹೋರಾಟಗಾರ್ತಿ ಅನೀಸ್ ಫಾತಿಮಾ ಶೇಖಗೆ ಒಲಿದ ಸಿಐಐ ಆದರ್ಶ ಮಹಿಳೆ ರಾಷ್ಟ್ರೀಯ ಪುರಸ್ಕಾರ 

ಚಿಂಚೋಳಿ: ಮುಂಬಯಿಯಲ್ಲಿ‌ ಬೀದಿ ಬದಿ‌ ವ್ಯಾಪಾರಿಗಳ ಪರವಾಗಿ‌ ಹೋರಾಟ ನಡೆಸುತ್ತ ಸಹಸ್ರಾರು ಜನರ ಬದುಕಿಗೆ ಬೆಳಕಾದ ಮುಂಬಯಿಯ ಆಝಾದ್ ಹಾಕರ್ಸ್ ಯುನಿಯನ್ ನಾಯಕಿ ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಅನೀಸ್ ಫಾತಿಮಾ ಶೇಖ್ ಅವರಿಗೆ ಸಿಐಐ ಆದರ್ಶ ಮಹಿಳೆ ರಾಷ್ಟ್ರೀಯ ಪುರಸ್ಕಾರ ಸಂದಿದೆ. 

ಭಾರತ ದೇಶದ ಉದ್ಯಮ, ಸರ್ಕಾರ ಮತ್ತು ನಾಗರಿಕರೊಂದಿಗೆ ಸಂಬಂಧ ಹೊಂದಿರುವ ಭಾರತೀಯ ಉದ್ಯಮ ಒಕ್ಕೂಟ(ಸಿಐಐ)ದ ಪ್ರಸಕ್ತ ಸಾಲಿನ ಆದರ್ಶ ಮಹಿಳೆ ಪುರಸ್ಕಾರ‌ ಅನೀಸ್ ಫಾತಿಮಾ ಅವರಿಗೆ ಒಲಿದಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಪರ ಕೆಲಸ ಮಾಡಿ ಅವರ ಬದುಕಿಗೆ ನೆರವಾಗುವುದರ ಜತೆಗೆ ಅವರನ್ನು ಮುಖ್ಯವಾಹಿನಿಗೆ ತಂದು ಸಮಾಜದಲ್ಲಿ ಬದಲಾವಣೆಗೆ ಕಾರಣರಾದವರ ಸೇವೆಯನ್ನು ಗುರುತಿಸಿ ಸಿಐಐ ಆದರ್ಶ ಮಹಿಳೆ ಪ್ರಶಸ್ತಿ ಪ್ರದಾನ‌ ಮಾಡಲಾಗುತ್ತದೆ. 

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ ಅವರು ಅನಿಸ್ ಫಾತಿಮಾ ಶೇಖ್ ಸಹಿತ ಹಲವು‌ ಮಹಿಳೆಯರಿಗೆ ಈಚೆಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಅನೀಸ ಫಾತಿಮಾ ಶೇಖ ಅವರು ಪ್ರಸಕ್ತ ವರ್ಷದ ಆದರ್ಶ ಮಹಿಳೆ ಪುರಸ್ಕಾರ ಪಡೆದ ಕಲ್ಯಾಣ ಕರ್ನಾಟಕ ಏಕೈಕ‌ ಮಹಿಳೆ ಎಂಬುದು ಹೆಮ್ಮೆಯ ಸಂಗತಿ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ತಿಳಿಸಿದ್ದಾರೆ. 

ಮುಂಬಯಿ‌ ಮಹಾನಗರದಲ್ಲಿ ಆಝಾದ್ ಹಾಕರ್ಸ ಯುನಿಯನ ಮೂಲಕ 17 ಸಾವಿರ ಬೀದಿ ವ್ಯಾಪಾರಿಗಳಿಗೆ ಕಾನೂನು ಸಲಹೆ ಜತೆಗೆ ಆರ್ಥಿಕ ಬಲ ತುಂಬಿ ಘನತೆಯ ಬದುಕು ರೂಪಿಸಲು ಶ್ರಮಿಸಿದ ಶ್ರೇಯಸ್ಸು ಅನೀಸ್ ಫಾತಿಮಾ ಶೇಖ್ ಹೊಂದಿದ್ದಾರೆ. 

ಯುವಕ ಯುವತಿಯರ ಪಾಲಿಗೆ ಪ್ರೇರಣಾದಾಯಕ ವ್ಯಕ್ತಿತ್ವ ಹೊಂದಿರುವ ಅನೀಸ್ ಫಾತಿಮಾ ಶೇಖ್ ತಮ್ಮ‌ 17 ವರ್ಷದಿಂದಲೇ ಹೋರಾಟಕ್ಕೆ ಧುಮುಕಿ ಹಲವು‌ ಬಾರಿ ಜೈಲು ಸೇರಿದವರಾಗಿದ್ದಾರೆ. ಹೋರಾಟದಲ್ಲಿ ಹಲವು ಬಾರಿ ಹಲ್ಲೆಗೊಳಗಾಗಿ ಕಹಿ ಘಟನೆ ನಡೆದರೂ ಕುಗ್ಗದ ಅನೀಸ್ ಫಾತಿಮಾ ಹಿಡಿದ ಹಠ ಬಿಡದ ಛಲಗಾರ್ತಿ ಎಂದರೂ ತಪ್ಪಾಗದು. 

 ಅನೀಸ ಫಾತಿಮಾ ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಧಕಿಯಾಗಿದ್ದಾರೆ.