ಕಡಲಾಚೆ ಕುದ್ರೋಳಿ ಗಣೇಶ್ ಮೈಂಡ್ ಮ್ಯಾಜಿಕ್ ಗೆ ಜನ ಫುಲ್ ಖುಷ್

ಕಡಲಾಚೆ ಕುದ್ರೋಳಿ ಗಣೇಶ್ ಮೈಂಡ್ ಮ್ಯಾಜಿಕ್ ಗೆ ಜನ ಫುಲ್ ಖುಷ್
ಮಂಗಳೂರು : ಜಾದೂ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳ ಸರದಾರನಾಗಿ ಕೀರ್ತಿ ಪಡೆದ ಅಂತರಾಷ್ಟ್ರೀಯ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಕಡಲಾಚೆಯ ಕೊಲ್ಲಿ ರಾಷ್ಟ್ರದ ಬಹರೈನ್ ನಲ್ಲಿ ಮೈಂಡ್ ಮಿಸ್ಟರಿ ಮ್ಯಾಜಿಕ್ ಪ್ರದರ್ಶಿಸಿ ಕೊಲ್ಲಿ ರಾಷ್ಟ್ರದ ಜನರನ್ನು ಫುಲ್ ಖುಷ್ ಮಾಡಿದರು.
ಸೆಪ್ಟೆಂಬರ್ 8 ರಂದು ಅರಬ್ ರಾಷ್ಟ್ರದ ಬಹರೈನ್ ನಲ್ಲಿ ಮನಾಮ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆದ ಬಹರೈನ್ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮ್ಯಾಜಿಕ್ ಮೈಂಡ್ ಮಿಸ್ಟರಿ ಕಾರ್ಯಕ್ರಮ ಪ್ರಸ್ತುತಪಡಿಸಿ ಜಾದೂ ವಿಸ್ಮಯದೊಂದಿಗೆ ವಿಭಿನ್ನ ಮನರಂಜನೆ ನೀಡಿ ಕೊಲ್ಲಿ ರಾಷ್ಟ್ರದ ಕನ್ನಡಿಗರನ್ನು ಸೇರಿದಂತೆ ಸ್ಥಳೀಯರಿಗೆ ಖುಷಿ ನೀಡಿದರು.
ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಆನಿವಾಸಿ ಭಾರತೀಯ ವೇದಿಕೆ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಜಾದು ವಿಸ್ಮಯದ ಮೋಡಿಗೆ ಆಶ್ಚರ್ಯ ಚಕಿತರಾದರು.
ಸಭಾಂಗಣದಲ್ಲಿ ತುಂಬಿದ ಜನಸ್ತೋಮದ ಮಧ್ಯೆ ಕುದ್ರಳ್ಳಿ ಗಣೇಶ್ ರವರ ಮೈಂಡ್ ಮ್ಯಾಜಿಕ್ ಸಮ್ಮೋಹಿನಿಗೆ ಎಲ್ಲರೂ ಬೆರಗಾದರು ಮನಸ್ಸಿನ ಭಾವನೆಗಳನ್ನು ಓದುವ ಚಮತ್ಕಾರವನ್ನು ಕಂಡು ಹುಬ್ಬೇರಿಸಿದರು. ಸುಪ್ತ ಮನಸ್ಸಿನ ಗ್ರಹಿಕೆ ಗುರುತಿಸುವ ಜಾದೂ ಮೂಲಕ ಅದ್ಭುತ ನೆನಪಿನ ಸುರುಳಿಯನ್ನು ಬೆಚ್ಚಿಕೊಡುವ ಮತ್ತು ಪ್ರೇಕ್ಷಕರು ಪಾಲ್ಗೊಳ್ಳುವ ಪ್ರದರ್ಶನಗಳು ಜನಮನ ಸೂರೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿ ನನ್ನ ಬದುಕಿನ ಮೊದಲನೆಯ ವಿದೇಶದ ಪ್ರಯಾಣ ಬಹರೈನ್ ರಾಷ್ಟ್ರವಾಗಿದ್ದು 1997ರಲ್ಲಿ ನೀಡಿದ ಪ್ರದರ್ಶನವು ಸೇರಿದಂತೆ ಒಟ್ಟು ಮೂರನೇ ಬಾರಿ ಬಹರೈನ್ ಗೆ ಆಗಮಿಸಿ ಕನ್ನಡ ಮನಸ್ಸುಗಳೊಂದಿಗೆ ಬೆರೆಯುವ ಅವಕಾಶ ಸಿಕ್ಕಿದೆ. ಕೊಲ್ಲಿ ರಾಷ್ಟ್ರದ ಕನ್ನಡ ಸಂಘಗಳಲ್ಲಿ ಬಹರೈನ್ ಕನ್ನಡ ಸಂಘವು ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಬೆಸೆಯುವ ಮಹತ್ತರವಾದ ಕೆಲಸವನ್ನು ನಿರ್ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಜಾದು ಪ್ರದರ್ಶನ ಅದರಲ್ಲೂ ಇತ್ತೀಚಿನ ವಿಶಿಷ್ಟ ಪ್ರಯೋಗ ಮೈಂಡ್ ಮಿಸ್ಟರಿ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದಕ್ಕೆ ಧನ್ಯ ಎಂದು ಕುದ್ರೋಳಿ ಗಣೇಶ್ ಹೇಳಿದರು .ಬಹರೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾದ ಅಜಿತ್ ಬಂಗೇರ ಅವರು ಕುದ್ರೋಳಿ ಗಣೇಶ್ ಅವರಿಗೆ ಕನ್ನಡ ಸಂಘದ ಪರವಾಗಿ ವಿಶೇಷ ಸನ್ಮಾನ ಮಾಡಿ ಸ್ಮರಣಕೆಯನ್ನಿತ್ತು ಗೌರವಿಸಿದರು