ಸಾಮಾಜಿಕ ನ್ಯಾಯವೇ ಸಮಾಜದ ಬುನಾದಿ: ನ್ಯಾಯಾಧೀಶೆ ಚಿತ್ತರಗಿ

ಸಾಮಾಜಿಕ ನ್ಯಾಯವೇ ಸಮಾಜದ ಬುನಾದಿ: ನ್ಯಾಯಾಧೀಶೆ ಚಿತ್ತರಗಿ

ಸಾಮಾಜಿಕ ನ್ಯಾಯವೇ ಸಮಾಜದ ಬುನಾದಿ: ನ್ಯಾಯಾಧೀಶೆ ಚಿತ್ತರಗಿ

ಆಳಂದ: ಸಾಮಾಜಿಕ ನ್ಯಾಯವೇ ಸಮಾಜದ ಬುನಾದಿಯಾಗಿದೆ ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವಾಗಿದೆ ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಅವರು ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಸಾಮಾಜಿಕ ನ್ಯಾಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಸಾಮಾಜಿಕ ನ್ಯಾಯವು ಕೇವಲ ಕಾನೂನಿನ ಪುಸ್ತಕಗಳಲ್ಲಿ ಉಳಿಯುವುದಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರತಿಫಲಿಸಬೇಕು. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ‘ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ’ ಎಂದು ಘೋಷಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ನಾವು ನೆನಪಿಸಿಕೊಳ್ಳಬೇಕು. ಆರ್ಟಿಕಲ್ ೧೪, ೧೫, ೧೬ ಮತ್ತು ೩೯ರಂತಹ ನಿಬಂಧನೆಗಳು ಸಮಾನತೆಯನ್ನು ಖಚಿತಪಡಿಸುತ್ತವೆ. ಆದರೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರಲ್ಲಿ, ದಲಿತ-ಪರಿಶಿಷ್ಟ ವರ್ಗಗಳಲ್ಲಿ ನ್ಯಾಯದ ಪ್ರವೇಶಕ್ಕೆ ಅಡೆತಡೆಗಳಿವೆ. ನ್ಯಾಯಾಲಯಗಳು ಕೇವಲ ವಿವಾದಗಳನ್ನು ತೀರಿಸುವ ಸ್ಥಳಗಳಲ್ಲ, ಸಾಮಾಜಿಕ ಬದಲಾವಣೆಯ ಎಂಜಿನ್‌ಗಳಾಗಬೇಕು ಲೀಗಲ್ ಎಯ್ಡ್, ಲೋಕಾದಲತ್‌ಗಳು, ಜನಜಾಗೃತಿ ಕಾರ್ಯಕ್ರಮಗಳ ಮೂಲಕ ನಾವು ಈ ಗುರಿಯನ್ನು ಸಾಧಿಸಬೇಕಾಗಿದೆ ಎಂದು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಡಿವೈಡ್ ಸಹ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತಿದೆ. ಆದ್ದರಿಂದ ನ್ಯಾಯವ್ಯವಸ್ಥೆಯು ತಂತ್ರಜ್ಞಾನವನ್ನು ಬಳಸಿ ಸುಲಭ, ವೇಗದ ಮತ್ತು ಪಾರದರ್ಶಕ ನ್ಯಾಯವನ್ನು ಒದಗಿಸಬೇಕು” ಸರ್ಕಾರದ ವಿವಿಧ ಯೋಜನೆಗಳು ಸಾಮಾಜಿಕ ನ್ಯಾಯವನ್ನು ಗುರಿಯಾಗಿಟ್ಟುಕೊಂಡಿವೆ. ಆದರೆ ಅವುಗಳ ಸರಿಯಾದ ಅನುಷ್ಠಾನಕ್ಕೆ ನ್ಯಾಯವ್ಯವಸ್ಥೆಯ ಬೆಂಬಲ ಅತ್ಯಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ ವಿ. ರಾಠೋಡ್ ಅವರು, “ವಕೀಲರ ಸಮುದಾಯವು ಸಾಮಾಜಿಕ ನ್ಯಾಯದ ರಕ್ಷಕರಾಗಬೇಕು. ಬಡವರು, ಅಸಹಾಯಕರು ನ್ಯಾಯಾಲಯದ ಬಾಗಿಲು ತಟ್ಟುವಾಗ ಅವರಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಸಹಾಯ ನೀಡುವುದು ನಮ್ಮ ಧರ್ಮ. ಆಳಂದ ನ್ಯಾಯವಾದಿಗಳ ಸಂಘವು ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಯೋಜಿಸಿದೆ” ಎಂದು ಹೇಳಿ, ವಕೀಲರ ಪಾತ್ರವನ್ನು ಒತ್ತಿ ಹೇಳಿದರು.

ಉಪನ್ಯಾಸ ನೀಡಿದ ವಕೀಲ ದೇವಾನಂದ ಹೊದಲೂರಕರ್ ಮಾತನಾಡಿ “೨೦೦೭ರಲ್ಲಿ ಐಕ್ಯರಾಷ್ಟ್ರ ಸಂಘವು ಫೆಬ್ರವರಿ ೨೦ ಅನ್ನು ವಿಶ್ವ ಸಾಮಾಜಿಕ ನ್ಯಾಯ ದಿನವಾಗಿ ಘೋಷಿಸಿತು. ೨೦೦೯ರಿಂದ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಣೆಗೆ ಬಂದಿದೆ. ಭಾರತದಲ್ಲಿ ಬಡತನ, ಲಿಂಗ ಅಸಮಾನತೆ, ಜಾತಿ ತಾರತಮ್ಯ, ನಿರುದ್ಯೋಗ ಇವುಗಳ ವಿರುದ್ಧ ನ್ಯಾಯಾಲಯಗಳು ತೀರ್ಪುಗಳ ಮೂಲಕ ಹೋರಾಡುತ್ತಿವೆ. ಉದಾಹರಣೆಗೆ, ರಾಜೀವ್ ಗಾಂಧಿ ಲೀಗಲ್ ಎಯ್ಡ್ ಅಕ್ಟ್, ಪೊಕ್ಸೋ ಆಕ್ಟ್, ದಲಿತ ಅತ್ಯಾಚಾರ ಕಾನೂನುಗಳು ಇವುಗಳು ಸಾಮಾಜಿಕ ನ್ಯಾಯದ ಮೈಲುಗಲ್ಲುಗಳು. ಆದರೆ ಇನ್ನೂ ನ್ಯಾಯದಲ್ಲಿ ವಿಳಂಬವಿದೆ. ಆದ್ದರಿಂದ ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಉಪನ್ಯಾಸ ನೀಡಿದರು.

ಸಹಾಯಕ ಸರಕಾರಿ ಅಭಿಯೋಜಕ ಇಸ್ಮಾಯಿಲ್ ಪಟೇಲ್, ಸಂಘದ ಕಾರ್ಯದರ್ಶಿ ಬಿ.ಟಿ. ಸಿಂಧೆ ಸೇರಿ ಇನ್ನಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಶಿವಲಿಂಗಪ್ಪ ಉಡಗಿ ನಿರೂಪಿಸಿದರು.  ನಾಗರಾಜ ದೇಕುನ ವಂದಿಸಿದರು.

ವರದಿ ಡಾ. ಅವಿನಾಶ .ಎಸ್. ದೇವನೂರ