ಮೀಸಲಾತಿ ಜಾರಿಗಾಗಿ ಬ್ರಾಹ್ಮಣ ಮಹಾಸಂಘ ಒತ್ತಾಯ

ಮೀಸಲಾತಿ ಜಾರಿಗಾಗಿ ಬ್ರಾಹ್ಮಣ ಮಹಾಸಂಘ ಒತ್ತಾಯ

ಮೀಸಲಾತಿ ಜಾರಿಗಾಗಿ ಬ್ರಾಹ್ಮಣ ಮಹಾಸಂಘ ಒತ್ತಾಯ 

ಕಲಬುರಗಿ, ಫೆಬ್ರವರಿ 16, 2026: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ವತಿಯಿಂದ ಕರ್ನಾಟಕದಲ್ಲಿ ಇಡಬ್ಲ್ಯುಎಸ್ (EWS) ಮೀಸಲಾತಿಯ ಸಮರ್ಪಕ ಜಾರಿ, ಯುಜಿಸಿ ನಿಯಮಗಳ ಸ್ಪಷ್ಟತೆ ಹಾಗೂ ದೆಹಲಿಯಲ್ಲಿ ನಡೆದಿರುವುದಾಗಿ ಹೇಳಲಾಗಿರುವ ಜಾತಿ ಆಧಾರಿತ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ರಾಜ್ಯಮಟ್ಟದ ಪತ್ರಿಕಾ ಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಭೇದಭಾವ ತಡೆಯುವ ಉದ್ದೇಶವನ್ನು ನಾವು ಬೆಂಬಲಿಸುತ್ತೇವೆ. ಆದರೆ University Grants Commission (ಯುಜಿಸಿ) ಇತ್ತೀಚಿನ ಮಾರ್ಗಸೂಚಿಗಳ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಕೊರತೆ, ದೂರುಗಳ ಸ್ವೀಕೃತಿ ಮತ್ತು ಪರಿಶೀಲನಾ ಪ್ರಕ್ರಿಯೆಯ ಪಾರದರ್ಶಕತೆಯ ಅಭಾವ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಅನಿಶ್ಚಿತತೆ ಮೂಡಿಸಿದೆ ಎಂದು ಹೇಳಿದರು. ಯಾವುದೇ ನಿಯಮವು ಒಂದು ಸಮುದಾಯವನ್ನು ಗುರಿಯಾಗಿಸಬಾರದು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಪೂರ್ವಗ್ರಹರಹಿತ ನ್ಯಾಯಸಮ್ಮತ ವಿಚಾರಣೆ ಸಿಗುವ ಭರವಸೆ ಇರಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ University of Delhi ಉತ್ತರ ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪತ್ರಕರ್ತೆ ರುಚಿ ತಿವಾರಿ ಅವರ ಮೇಲೆ ಜಾತಿ ಆಧಾರಿತ ದೌರ್ಜನ್ಯ, ಅವಮಾನ ಹಾಗೂ ಹಿಂಸೆ ನಡೆದಿದೆ ಎಂಬ ಆರೋಪಗಳನ್ನು ಮಹಾಸಂಘ ತೀವ್ರವಾಗಿ ಖಂಡಿಸಿತು. ಮಾಧ್ಯಮ ಪ್ರತಿನಿಧಿಗಳ ಸುರಕ್ಷತೆ ಮತ್ತು ಗೌರವ ಕಾಪಾಡುವುದು ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದ್ದು, ಈ ಘಟನೆ ಕುರಿತು ನಿಷ್ಪಕ್ಷಪಾತ ಹಾಗೂ ವೇಗವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಇಡಬ್ಲ್ಯುಎಸ್ ಮೀಸಲಾತಿ ಕುರಿತು ಮಾತನಾಡಿದ ಪದಾಧಿಕಾರಿಗಳು, ಸಂವಿಧಾನದ 103ನೇ ತಿದ್ದುಪಡಿ ಮೂಲಕ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಇದರ ಸಮರ್ಪಕ ಜಾರಿ ಕಾಣದಿರುವುದು ವಿಷಾದನೀಯವಾಗಿದೆ ಎಂದು ಹೇಳಿದರು. ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬ, ಆಡಳಿತಾತ್ಮಕ ಗೊಂದಲಗಳು ಮತ್ತು ಸ್ಪಷ್ಟ ಮಾರ್ಗಸೂಚಿಗಳ ಕೊರತೆಯಿಂದ ಅನೇಕ ಅರ್ಹ ವಿದ್ಯಾರ್ಥಿಗಳು ಹಾಗೂ ಉದ್ಯೋಗಾರ್ಹರು ಲಾಭದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಸರ್ಕಾರವು ತಕ್ಷಣ 10% ಇಡಬ್ಲ್ಯುಎಸ್ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಬೇಕು, ಅರ್ಹ ಅಭ್ಯರ್ಥಿಗಳಿಗೆ ಪಾರದರ್ಶಕ ಹಾಗೂ ವೇಗವಾದ ಪ್ರಮಾಣಪತ್ರ ವಿತರಣೆ ಖಚಿತಪಡಿಸಬೇಕು ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮಹಾಸಂಘ ಒತ್ತಾಯಿಸಿದೆ.

ಜಿಲ್ಲಾ ಅಧ್ಯಕ್ಷ ಅವಿನಾಶ ಕುಲಕರ್ಣಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಗೋವಿಂದ್ ಅವರ ನೇತೃತ್ವದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಶಾಂತಿಯುತ ಹಾಗೂ ಕಾನೂನುಬದ್ಧ ಹೋರಾಟದ ಮಾರ್ಗವನ್ನು ಅನುಸರಿಸಲಾಗುವುದು ಎಂದು ತಿಳಿಸಲಾಯಿತು.