ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ

ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ
ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ

ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ

ಶ್ರೀ ಮಂದಾರ ಪುಷ್ಪ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ರಂಗಿತರಂಗ ವೈಭವ’ ವಿಜೃಂಭಣೆಯಿಂದ ನೆರವೇರಿತು

ಕಲಬುರಗಿ ಫೆ.20: “ಮಕ್ಕಳು ಕೊಡುವವರಾಗಬೇಕು, ಬೇಡುವವರಾಗಬಾರದು. ಸಮಾಜಕ್ಕೆ ದಾನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಆಕಾಶದಲ್ಲಿ ಹಾರುವ ಹಕ್ಕಿಗಳಂತೆ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಬದುಕಲು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಅವಕಾಶ ಕಲ್ಪಿಸಬೇಕು,” ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

 ನಗರದ ರಾಮತೀರ್ಥ ದೇವಸ್ಥಾನದ ಸಮೀಪದ ಕಲ್ಯಾಣ ಮಂಟಪದಲ್ಲಿ ಶ್ರೀ ಮಂದಾರ ಪುಷ್ಪ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಲಕ್ಷ್ಮೀಬಾಯಿ ಸಾತಲಿಂಗಪ್ಪ ಮೇತ್ರೆ ಪ್ರಾಥಮಿಕ ಶಾಲೆ ಹಾಗೂ ಶ್ರೀ ಮಂದಾರ ಪುಷ್ಪ ಶಾಲೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ರಂಗಿತರಂಗ ವೈಭವ’ ಕಾರ್ಯಕ್ರಮವು ಭಾನುವಾರ ಅದ್ದೂರಿಯಾಗಿ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.

 ಇಂದಿನ ಸ್ಪರ್ಧಾತ್ಮಕ ಹಾಗೂ ಕಲಬೆರಿಕೆಯ ಯುಗದಲ್ಲಿ ಮಕ್ಕಳಿಗೆ ಕೇವಲ ಪಾಠ್ಯ ಶಿಕ್ಷಣವಷ್ಟೇ ಅಲ್ಲ, ಉತ್ತಮ ಆರೋಗ್ಯ, ಸಮತೋಲನ ಆಹಾರ ಪದ್ಧತಿ ಮತ್ತು ನೈತಿಕ ಮೌಲ್ಯಗಳೂ ಅತಿ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು. “ಮಕ್ಕಳು ತಮ್ಮ ಕಾಲಿನ ಮೇಲೆ ತಾವೇ ನಿಂತು ಹತ್ತು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ,” ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, “ಮಕ್ಕಳಿಗೆ ಪ್ರೀತಿ ಮತ್ತು ಶಿಸ್ತು ಎರಡೂ ಅಗತ್ಯ. ಶಿಕ್ಷಕರು ಮಕ್ಕಳನ್ನು ತಿದ್ದಿದಾಗ ಪಾಲಕರು ಪ್ರಶ್ನಿಸುವ ಬದಲು ಸಹಕರಿಸಬೇಕು. ಆಗ ಮಾತ್ರ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವೂ ಬೆಳೆಯುತ್ತದೆ. ಇಲ್ಲವಾದರೆ ತಪ್ಪು ದಾರಿಯಲ್ಲಿ ಹೋಗಿ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ,” ಎಂದು ಎಚ್ಚರಿಸಿದರು.

ನಿವೃತ್ತ ತಹಶೀಲ್ದಾರ್ ಜಿ.ಎಲ್. ಮೇತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಬಿಐಇಆರ್‌ಟಿ ಮಲ್ಲಮ್ಮ ಆಲ್ಗೂಡ, ಸಿಆರ್‌ಪಿ ಅಶ್ವಿನಿ ಕುಲಕರ್ಣಿ, ಕಲ್ಲನಗೌಡ ಎಸ್., ಶಿಕ್ಷಕ ಸೂರ್ಯಕಾಂತ್ ಯಲ್ದೆ ಹಾಗೂ ಉದ್ಯಮಿ ಬಸವರಾಜ ಪಾಟೀಲ, ಸಾಯಬಣ್ಣಾ ಹೂಗಾರ ನೀಲೂರ ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ ನೀಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್ ಕುಮಾರ್ ನೀಲೂರ, ಸಂಯೋಗಿತ ಲೋಹಿತ್, ಮಲ್ಲಿನಾಥ ಅಷ್ಟಗಿ, ಮಹದೇವಪ್ಪ ಪಗಡೆ, ಗುರುನಾಥ ಶಿವಪೂರೆ ಸೇರಿದಂತೆ ಅನೇಕ ಗಣ್ಯರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಕ್ಷಕ ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಸಭಿಕರ ಮನಗೆದ್ದರು. ನೃತ್ಯ, ನಾಟಕ, ಗಾನ ಹಾಗೂ ದೇಶಭಕ್ತಿ ಆಧಾರಿತ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು. ಕಾರ್ಯಕ್ರಮವು ಶಿಸ್ತಿನಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.