ಅಂತ:ಕರಣದ ಅರಿವಿನ ಪ್ರಜ್ಞೆ: ಶಿವಾನಂದ ಖಜುರ್ಗಿ
ಅಂತ:ಕರಣದ ಅರಿವಿನ ಪ್ರಜ್ಞೆ: ಶಿವಾನಂದ ಖಜುರ್ಗಿ
ಇವರು ಮೂಲತಃ ಆಳಂದ ತಾಲೂಕಿನ ಜಾವಳಿ(ಡಿ) ಗ್ರಾಮದಲ್ಲಿ ಶಿಕ್ಷಕರಾದ ಸಿದ್ರಾಮಪ್ಪ ಹಾಗೂ ಆದರ್ಶ ಗೃಹಿಣಿ ಶ್ರೀಮತಿ ಜಗದೇವಿಯವರ ಮಗನಾಗಿ ೦೫.೦೨.೧೯೭೩ ರಲ್ಲಿ ಜನಿಸಿದರು. ತಂದೆಯು ಶಿಕ್ಷಕ ವೃತ್ತಿಯನ್ನು ಮಾಡುವ ಕಾರಣಕ್ಕೆ ಮೊದಲಿನಿಂದಲೂ ಶಿಕ್ಷಣ ಕ್ಷೇತ್ರದ ಕುರಿತು ಆಸಕ್ತಿ ಮತ್ತು ಹಲವಾರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದನ್ನು ರೂಢಿಸಿಕೊಳ್ಳಲು ಸಹಾಯಕವಾಯಿತು. ತದನಂತರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಗಾಣಗಾಪೂರದಲ್ಲಿ ಮುಗಿಸಿದ್ದಾರೆ. ನಂತರದ ಶಿಕ್ಷಣವನ್ನು ಕಲಬುರಗಿ ಶ್ರೀ ಶರಣಬಸವೇಶ್ವರ ಪ್ರಾಥಮಿಕ, ಪ್ರೌಢ, ಸಂಯುಕ್ತ ಪದವಿಪೂರ್ವ ಕಾಲೇಜು, ಪದವಿ ಶಿಕ್ಷಣ ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿ. ಸ್ನಾತಕೋತ್ತರ ಪದವಿ (ಎಂ.ಎಸ್ಸಿ ಗಣಿತ ) ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಪಡೆದಿದ್ದಾರೆ.
ಇಪ್ಪತೈದು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಸಂಪೂರ್ಣ ಭಾವದಿಂದ ನಿಭಾಯಿಸಿರುವ ಹೆಮ್ಮೆ ಇವರದ್ದಾಗಿದೆ. ಗಣಿತ ಕಲಿಸುವ ಉಪನ್ಯಾಸಕರೆಂದು ಕಲಬುರಗಿಯಲ್ಲಿ ಜನಜನಿತವಾದ ಹೆಸರು ಆಗಿದೆ. ಸಂಕಲ್ಪ ಫೌಂಡೇಷನದ ಮೂಲಕ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶಿವಾನಂದ ಸಿದ್ರಾಮಪ್ಪ ಖಜುರ್ಗಿ ಅವರ ಕೊಡುಗೆಯು ಅಪಾರವಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಪ್ರಭಾವ ಬೀರಿ ದಿಶಾ ಪದವಿ ಪೂರ್ವ ಕಾಲೇಜಿನ ಮೂಲಕ ಹಲವಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ. ಮಕ್ಕಳಿಗೆ ತರಬೇತಿ ನೀಡುವುದರ ಮೂಲಕ ಅವರ ಸಾಧನೆ ಹಿಂದೆ ಶ್ರೀ ಶಿವಾನಂದ ಖಜುರ್ಗಿ ಅವರ ಶ್ರಮ ಎದ್ದು ಕಾಣುತ್ತದೆ. ಇವರಿಗೆ ಯುವ ಚೇತನ, ಶಂಕರಶ್ರೀ, ವಿದ್ಯಾಧರ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಹಲವು ವ್ಯಕ್ತಿಗಳ ಹುಟ್ಟು ಅವರ ಹುಟ್ಟಿದ ದಿನಕ್ಕೆ ಹೆಸರು ಮತ್ತು ಮೆರಗು ಬರುವಂತೆ ಮಾಡುತ್ತದೆ. ಅವನ ಸಾಧನೆ ಮತ್ತು ಸಾಮಾಜಿಕ ಕಳಕಳಿಯನ್ನು ಅವಲಂಬಿಸಿರುತ್ತದೆ..
ಮನುಷ್ಯ ಶ್ರೀಮಂತನಾಗಿ ಬದುಕುವುದು ಬಹಳ ಸರಳ ಆದರೆ ಸರಳವಾಗಿ ಬದುಕುವುದು ಬಹಳ ಕಷ್ಟ ಅಂತವರ ಮಧ್ಯ ಶ್ರೀಮಂತನಾಗಿದ್ದು ಸರಳ ಸಜ್ಜನಿಕೆಗೆ ಸಾಕ್ಷಿ ಇವರು ಪ್ರಜ್ಞೆಯಾಗಿದ್ದಾರೆ. ಮನುಷ್ಯನ ಮಾಗುವಿಕೆಯು ಯಾವುದೇ ವ್ಯಕ್ತಿಯ ಬೌದ್ಧಿಕ ಮತ್ತು ಅಪಾರ ಅನ್ಯಜ್ಞಾನಶಿಸ್ತುಗಳ ತಿಳುವಳಿಕೆಯನ್ನು ಬಯಸುತ್ತದೆ. ಇಂತಹ ಬಹುಮುಖಿ ಪ್ರತಿಭೆಯು ತನ್ನದೆಯಾದ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವುದರ ಮೂಲಕ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಿಲ್ಲೆಯಾದ್ಯಂತ ಕಾಣುವಂತೆ ಮಾಡುವುದರ ಮೂಲಕ ಮಾದರಿ ವ್ಯಕ್ತಿಯಾಗಿದ್ದಾರೆ. ಯಾವುದೇ ವ್ಯಕ್ತಿಯು ಶಾಶ್ವತ ಸ್ಮರಣೆಯಾಗಿ ಉಳಿಯುವುದು ಅವನ ಕಾರ್ಯ ಮತ್ತು ಸಾಧನೆಯಿಂದ, ಅಂತಹ ಕಾರ್ಯ ಮತ್ತು ಸಾಧನೆಯು ತಮ್ಮ ಮುಂದಾಲೋಚನೆಯ ಶಕ್ತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಮಾಡಿದ್ದಾರೆ. ಹಲವಾರು ಬಡ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಸುತ್ತಿದ್ದಾರೆ.
ತನಗಿಂತ ಇನ್ನೊಬ್ಬರ ಸಂತೋಷ ಮುಖ್ಯ, ಆ ಸಂತೋಷ ಶಿಕ್ಷಣದ ಮೂಲಕ ಮಾತ್ರ ಪಡೆದುಕೊಳ್ಳಲು ಸಾಧ್ಯವೆಂದು ಅರಿತಿರುವ ಇವರು ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಅವಿರತ ಶ್ರಮಿಸುವ ಕಾಯಕ ಜೀವಿಯಾಗಿದ್ದಾರೆ. ಜ್ಞಾನದ ಬೆಳಕಿನಿಂದ ಮಾತ್ರ ವಿದ್ಯಾರ್ಥಿಗಳ ಬದುಕು ಬದಲಾಯಿಸಬಹುದೆಂಬುದು ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಮಾಡಿತೋರಿಸಿದ್ದಾರೆ. ಅವರ ದೂರದೃಷ್ಟಿಕೋನವೇ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಣದ ಮೂಲಕ ಬಡವರ ಮಕ್ಕಳು ಬೆಳೆಯಬೇಕು, ಆ ಮೂಲಕ ಬಡವರ ಮುಖದಲ್ಲಿ ಶಾಶ್ವತವಾದ ಮಂದಹಾಸ ಕಾಣಬೇಕೆಂಬ ಹಂಬಲವನ್ನು ಹೊಂದಿರುವ ಅಂತಃಕರಣದ ಜೀವಿಯಾಗಿದ್ದಾರೆ. ಆ ಅಂತಃಕರಣವೇ ಅವರನ್ನು ವಿದ್ಯಾರ್ಥಿಗಳ ಬದುಕಿಗಾಗಿ ಹಗಲಿರುಳು ಮಕ್ಕಳೊಂದಿಗೆ ಮಕ್ಕಳಾಗಿ ಅವರ ಬದುಕಿಗಾಗಿ ಬೆಸರಗೊಳ್ಳದೆ ಶ್ರಮಿಸುವುದರ ಮೂಲಕ ಅನೇಕ ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ.
‘ಹಸಿದವನಿಗೆ ಮೀನು ತಿನ್ನಲು ಕೊಡಬೇಡಿ ಮೀನು ಹಿಡಿಯುವುದು ಕಲಿಸಿ’ ಎಂಬ ಗಾದೆ ಅರ್ಥವೇ ವ್ಯಕ್ತಿಯು ತನ್ನ ಸ್ವಂತ ಶಕ್ತಿಯಿಂದ ಬದುಕುವಂತೆ ಮಾಡುವುದೇ ಆಗಿದೆ. ಯಾವುದೆ ಒಬ್ಬ ವ್ಯಕ್ತಿಯಾಗಲಿ ಸ್ವಾವಲಂಬಿ ಬದುಕನ್ನು ನಡೆಸಲು ಅವನಿಗೆ ಇಂದು ಉದ್ಯೋಗ ಅವಶ್ಯಕ. ಒಳ್ಳೆಯ ಉದ್ಯೋಗ ಪಡೆಯಲು ಉತ್ತಮ ಶಿಕ್ಷಣ ಅನಿವಾರ್ಯವೆಂಬ ದೃಷ್ಟಿಕೋನದಿಂದ ಶಿಕ್ಷಣ ಸಂಸ್ಥೆಯನ್ನು ತೆಗೆವುದರ ಮೂಲಕ ಬಹುತೇಕ ವಿದ್ಯಾರ್ಥಿಗಳ ಬದುಕಿಗೆ ದಿಶಾದ ಮೂಲಕ ದಿಕ್ಕು ತೋರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಪ್ರಯತ್ನ ಎರಡು ಬಹಳ ಮುಖ್ಯ ಇವುಗಳಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲವೆಂಬ ಮಾತುಗಳನ್ನು ಹೇಳುತ್ತಲೇ ವಿದ್ಯಾರ್ಥಿಗಳ ಓದಿನ ಹಸಿವನ್ನು ಹೆಚ್ಚಿಸುವ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಮಾಡುವ ವಿದ್ಯಾರ್ಥಿಗಳ ಪಾಲಿನ ಪ್ರೋತ್ಸಾಹಿ ಆಗಿದ್ದಾರೆ. ಮಕ್ಕಳ ಮನಸ್ಸನ್ನು ಓದುವ ಮನೋವಿಜ್ಞಾನಿಯಂತೆ ಕಂಡು ಬರುತ್ತಾರೆ. ವಿದ್ಯಾರ್ಥಿಗಳ ಮನಸ್ಸಿನ ಆತಂಕ, ಭಯ, ಸಂತೋಷ, ತಲ್ಲಣ ಎಲ್ಲವೂ ಗ್ರಹಿಸುವ ಸೂಕ್ಷ್ಮಗ್ರಹಿಕೆಯ ವ್ಯಕ್ತಿಯಾಗಿದ್ದಾರೆ. ಶಿವಾನಂದ ಖಜುರ್ಗಿಯವರ ಸಂಕಲ್ಪವೇ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಮಾಡುವುದೇ ಆಗಿದೇ ಅದು ಅವರನ್ನು ಸದಾ ತುಡಿತ, ಮಿಡಿತದ ವ್ಯಕ್ತಿಯಾಗಿಸಿದೆ. ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇವರು ಜಿಲ್ಲೆಯಾದ್ಯಂತ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ಪರೋಕ್ಷವಾಗಿ ಕಾರಣಿಕರ್ತರಾಗಿದ್ದಾರೆ.
ಹಲವಾರು ಒತ್ತಡಗಳ ಮಧ್ಯ ಶಾಲಾ ಕಾಲೇಜುಗಳು ಮತ್ತು ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಶಿವಾನಂದ ಖಜುರ್ಗಿಯವರು ನೈತಿಕ ಪ್ರಜ್ಞೆಯ ಪ್ರತೀಕರಾಗಿದ್ದಾರೆ. ಶಿಕ್ಷಣದ ಮೂಲಕ ಬೌದ್ಧಿಕ ಬೆಳವಣಿಯ ಜೊತೆಗೆ ಶಿಸ್ತು ಮತ್ತು ಸಂಯಮ ಕಲಿಸಬೇಕಾಗುವುದು ಮುಖ್ಯವೆಂದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದರ ಮೂಲಕ ಶಿಸ್ತಿಗೆ ಶಿವಾನಂದ ಖಜುರ್ಗಿಯವರು ಸಾಕ್ಷಿಯಾಗಿದ್ದಾರೆ. ವ್ಯಕ್ತಿಗೆ ವ್ಯಕ್ತಿತ್ವದಿಂದಲೇ ಮೆರಗು ಇದನ್ನು ಕಳೆದುಕೊಂಡವನು ಎಲ್ಲಾವನ್ನು ಕಳೆದುಕೊಂಡಂತೆ. ಅಂತವರು ಜನರ ಮನಸ್ಸಿನಿಂದಲೂ ಬೇಗ ಮರೆಯಾಗುತ್ತಾರೆ. ಬದುಕಿನಲ್ಲಿ ವ್ಯಕ್ತಿತ್ವ ಮತ್ತು ಒಳ್ಳೆತನ ಬಹಳ ಮುಖ್ಯ ಅಂತಹ ಶ್ರೇಷ್ಠ ವ್ಯಕ್ತಿತ್ವದಿಂದ ಮುಖ್ಯವಾಗಿ ತಮ್ಮ ಒಳ್ಳೆತನದ ಮೂಲಕವೆ ಜನರ ಮನಸ್ಸಿನಲ್ಲಿ ಮನೆಮಾಡಿದ್ದಾರೆ. ಎಲ್ಲರನ್ನು ಒಳಗೊಳ್ಳುವ ಇವರ ವ್ಯಕ್ತಿತ್ವ, ಜನರ ಜೊತೆ ನಂಬಿಕೆ ಮತ್ತು ವಿಶ್ವಾಸದಿಂದ ಇರುವುದರಿಂದಲೇ ಕಳೆದ ತಿಂಗಳು ಅವಿರೋಧವಾಗಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅತೀವ ಸಂತಸವನ್ನು ತಂದಿದೆ. ಹಾರೈಸುವ ನಮ್ಮಂತಹ ಮನಸ್ಸುಗಳು ಇರುವರೆಗೂ ನಿಮ್ಮೆಲ್ಲಾ ಹುಟ್ಟು ಹಬ್ಬಗಳು ಮಧುರವಾದ ಕ್ಷಣಗಳೇ. ಇವತ್ತಿನ ಈ ಸುದಿನ ನಿಮ್ಮ ಜನುಮದಿನ. ಗೆಲುವು ನಿಮ್ಮದಾಗಲಿ, ಸುಖ ನೆಮ್ಮದಿ ನಿಮ್ಮ ಮನೆ, ಮನ ತುಂಬಲಿ ನೀವು ನಡೆಯುವ ಹಾದಿ ಸದಾ ಹಸಿರಾಗಿರಲಿ. ನಿಮ್ಮ ಬದುಕಿನ ಪ್ರತಿ ಘಳಿಗೆಯಲ್ಲಿ ಸಂತೋಷ ತುಂಬಿರಲಿ, ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ, ಮತ್ತೊಮ್ಮೆ ಜನುಮದಿನದ ಶುಭಾಶಯಗಳು.
- ಡಾ. ವಿದ್ಯಾಸಾಗರ ದಣ್ಣೂರ, ಕನ್ನಡ ಉಪನ್ಯಾಸಕರು, ಕಲಬುರಗಿ.
