"ಅಪ್ಪ " ಕೃತಿ ಗುಂಡುರಾವ್ ಕಡಣಿ

"ಅಪ್ಪ" ಕೃತಿ
"ಅಪ್ಪ" ಗುಂಡುರಾವ್ ಕಡಣಿ ಅವರು ರಚಿಸಿದ ಕೃತಿ, ನೂರು ಪುಟವುಳ್ಳ ಈ ಪುಸ್ತಕದಲ್ಲಿ ತಂದೆಯ ಜೊತೆಗಿರುವ ಒಡನಾಟ ಮೆಲುಕು ಹಾಕಿದ್ದಾರೆ . ಜೀವನದ ಪ್ರತಿ ಕ್ಷಣವು ಯಥಾವತ್ತಾಗಿ ಓದುಗರಿಗೆ ಕೊಡಲು ಅಣಿ ಗೊಳಿಸಿದ್ದಾರೆ .
`ವಾಗರ್ಥವಿವ ಸಂಪ್ರೌಕ್ತೊ, ವಾಗರ್ಥವಿವ ಪ್ರತಿ ಪತ್ತಯೇ ಜಗದೌಂ ಪಿತರೌ ವಂದೆ ಪಾರ್ವತಿ ಪರಮೇಶ್ವರೌ’
`ಕವಿರತ್ನ ಕಾಳಿದಾಸ’ ಈ ಶ್ಲೋಕವನ್ನು ಹೇಳಿದ್ದಾನೆ.
ಈ ಶ್ಲೋಕದ ಅರ್ಥವು ಜಗದ ತಂದೆ-ತಾಯಿಯೆಂದರೆ ಕೈಲಾಸದ ಶಿವ-ಪಾರ್ವತಿಯರು. ಇವರು ಸರ್ವಕ್ಕೂ ಕಾರಣ ಕರ್ತರಿದ್ದಾರೆ. ವೇದಾಗಮ, ಪುರಾಣ, ಶಾಸ್ತ್ರಗಳು ಅದನ್ನೆ ಹೇಳಿವೆ. ಅದಕ್ಕಾಗಿ ಹರಿವಿರಂಚಿಗಳು ಲೋಕ ಸೃಷ್ಟಿ, ರಕ್ಷಣೆಯನ್ನು ಮಾಡಿದರೆ, ಶಿವನು ಲಯ ಕರ್ತನಾಗಿದ್ದಾನೆ. ಅದರಂತೆ ನಮ್ಮ ಅವನಿಯಲ್ಲಿ ಮನುವಿನಿಂದ ಹುಟ್ಟಿದ ಮಾನವನು ಮೇಲಿನ ಶ್ಲೋಕವನ್ನು ಭಾರತದಲ್ಲಿ ಆಚರಣೆಗೆ ತಂದಿದ್ದಾನೆ. ಈ ದೇಶದಲ್ಲಿ ನಾವು ನೀವೆಲ್ಲರು ಇದ್ದೇವೆ. ಇದೊಂದು ಪ್ರಪಂಚದಲ್ಲಿ ಧರ್ಮ-ಸಂಸ್ಕೃತಿಯ ರಾಯಭಾರಿ. ಪರದೇಶದಲ್ಲಿ ಮಗುವಿಗೆ ಜನ್ಮ ಕೊಟ್ಟರೆ ತಂದೆ-ತಾಯಿಗಳು ಅವನನ್ನು ನೋಡಬೇಕೆಂದಿಲ್ಲ ಯಾರು ಬೇಕಾದರು ಪ್ರೀತಿಯಿಂದ ಪಾಲನೆ ಮಾಡಿ ಮಗುವಿನ ಹದಿನಾರು ವರ್ಷಕ್ಕೆ ಅವನಿಗೆ ಬಿಟ್ಟು ಬಿಡುತ್ತಾರೆ. ಏಕೆಂದರೆ ಅವನು ಸ್ವತಂತ್ರವಾಗಿ ಜೀವನ ನಿರ್ವಹಣೆ ಮಾಡಿಕೊಂಡು ಹೋಗಲು. ನಮ್ಮ ದೇಶದಲ್ಲಿ ಹಾಗಲ್ಲ ಒಂದು ಮಗುವಿಗೆ ಅಪ್ಪ-ಅಮ್ಮ ಜನ್ಮ ಕೊಟ್ಟರೆ ತಮ್ಮ ಜೀವಿತಾವಧಿಯವರೆಗೆ ತಮ್ಮ ಕರುಣೆಯ, ಧರ್ಮ ಸಂಸ್ಕಾರದ, ಹಾಲನ್ನೆರೆದು ಅವನೊಂದಿಗೆ ಬದುಕಿನ ಬಂಡಿ ಸಾಗಿಸುತ್ತಾರೆ. ಅಂದರೆ ಇದರರ್ಥವೆಂದರೆ ಜಗಕ್ಕೆ ಶಿವ-ಪಾರ್ವತಿ ದೊಡ್ಡವರಾದರೆ, ಜನ್ಮ ಕೊಟ್ಟ ಮಗನಿಗೆ ಜನ್ಮದಾತರು ಅರಿವು ಕೊಡುತ್ತಾರೆ. ಜಗದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಡುತ್ತಾರೆ. ಇದನ್ನು ನಾವು ತಿಳಿಯಬೇಕಾಗಿದೆ. ಅದಕ್ಕಾಗಿಯೇ ಕಾಳಿದಾಸನು ಜಗದಃ ಪಿತರೌ ವಂದೆ ಪಾರ್ವತಿ ಪರಮೇಶ್ವರವೆಂದು ಹೇಳಿರಬೇಕು.
ನಮ್ಮ ಕನ್ನಡ ನಾಡಿನಲ್ಲಿ ಒಂದು ಗಾದೆ ಮಾತಿದೆ. `ಹತ್ತು ದೇವರನ್ನು ಪೂಜಿಸುವದಕ್ಕಿಂತ, ಹೆತ್ತ ದೇವರನ್ನು ಪೂಜಿಸು’ ಜೀವ ಜಗತ್ತಿಗೆ ಜನ್ಮ ಕೊಟ್ಟವರು ಶಿವ-ಪಾರ್ವತಿಯರಾದರೆ ನಮಗೆಲ್ಲ ಜೀವ-ಜನ್ಮ ಕೊಟ್ಟವರು ಅಪ್ಪ-ಅಮ್ಮವೆಂತಲೇ ಹೇಳಬೇಕು. ಬರೀ ಜನ್ಮ ಕೊಟ್ಟಿಲ್ಲ ತಮ್ಮ ಜನ್ಮದ ಸರ್ವವು ನಮಗೆ ಧಾರೆಯರಿದಿರುತ್ತಾರೆ. ಇದೆಂತಹ ಶಕ್ತಿ-ಯುಕ್ತಿ-ನಮ್ಮ ಮುಕ್ತಿ. ಶಿವ-ಪಾರ್ವತಿಯರು ಶಾಶ್ವತ ಆದರೆ.... ನಮ್ಮ ಜೀವನ ಅಶಾಶ್ವತ. ಈಶ್ವರದತ್ತವಾದ ಈ ಪ್ರಪಂಚದಲ್ಲಿ ನಶ್ವರವಾಗಿ ನಾವು ನೀವು ಬದುಕು ಮಾಡುತಿದ್ದೇವೆ. ಇಲ್ಲಿ ಯಾರೂ ಉಳಿಯುವಂತಿಲ್ಲ. `ಕಟ್ಟಿದ್ದು ಬೀಳಲೇ ಬೇಕು. ಹುಟ್ಟಿದ್ದು ಸಾಯಲೇಬೇಕು’ ಎಂಬ ಗಾದೆಯ ಮಾತಿದೆ. ತಂದೆ-ತಾಯಿ, ಬಂಧು-ಬಳಗ, ಸಹೋದರ-ಸಹೋದರಿ... ಹೀಗೆ ಎಲ್ಲವೂ ಇದ್ದು ಹಿಂದೆ-ಮುಂದೆ ಇವರನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ. ಇಲ್ಲವೆ ನಾವೇ ಅವರನ್ನು ಬಿಟ್ಟು ಹೋಗುತ್ತೇವೆ ಎನ್ನವುದು ನಾವುಗಳು ಅರಿಯಬೇಕು.
`ಅಪ್ಪ’ ಕೃತಿಯ ಬಗ್ಗೆ ನಾವು-ನೀವು ಚಿಂತನ ಮಾಡಿದರೆ, ಇದರ ಮಂಥನವು ಬಹು ಅಪರೂಪವಾಗಿ ಸ್ವಾನುಭಾವದಿಂದ ಮೂಡಿ ಬಂದಿದೆ. ಅಮ್ಮ ಮೊದಲು ಗುರುವಾದರೆ, ಅಪ್ಪ ಎರಡನೇ ಗುರುವಾಗುತ್ತಾನೆ. ಇದು ಲೌಕಿಕವಾದರೆ, ಅಲೌಕಿಕದ ರೀತಿಯಿಂದ ನೋಡಿದರೆ ಶಿವ ತಂದೆಯಾದರೆ ಪಾರ್ವತಿ ತಾಯಿಯಾಗುತ್ತಾಳೆ. ಶಿವನೆಂಬ ತಂದೆಯ ಹತ್ತಿರ ಹೋಗಬೇಕಾದರೆ ತಾಯಿಯೆಂಬ ಗುರುವಿನ ಹತ್ತಿರ ಹೋಗಿ, ನಮ್ಮಲ್ಲಿರುವ ಮಲತ್ರಯವನ್ನು ಕಳೆದುಕೊಂಡಾಗ ಮಾತ್ರ ಶಿವನೆಂಬ ತಂದೆಯನ್ನು ನಾವು ನೀವುಗಳೆಲ್ಲ ಕಾಣಬೇಕಾಗುತ್ತದೆ. ಆದರೆ ಈ ಕೃತಿಯಲ್ಲಿ ಅಮ್ಮ ಸಂಸ್ಕಾರ ಕೊಡುವ, ಪಾಲನೆ-ಪೋಷಣೆ ಮಾಡುವ ಬದಲು ತಂದೆಯು ಮಾಡಿದ್ದಾನೆ. ಈ ಕೃತಿಯ ಕರ್ತೃಗಳಾದ ಶ್ರೀ ಗುಂಡೂರಾವರವರು ಹುಟ್ಟುವಾಗಲೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಪ್ಪನ ಅಪ್ಪುಗೆಯಲ್ಲಿ ಬೆಳೆದಿದ್ದಾರೆ. ಮಾತೃ-ವಾತ್ಸಲ್ಯವನ್ನು ಕಳೆದುಕೊಂಡಿದ್ದಾರೆ. ಇವರಿಗೆ ಅಪ್ಪನೆ ಎಲ್ಲವು-ಎಲ್ಲವು ಆಗಿದ್ಧಾರೆ. ಇವರಿಗೆ ಬಂದ ನಿಂದೆ-ನೋವು, ಪರ್ವತ ಶ್ರೇಣಿಗಳಂತೆ ಬಂದ ಕಷ್ಟಗಳ ಪರಂಪರೆಯು ಎದುರಿಸುವ ರೀತಿಯು ಬಹುವಾಗಿ ಕಠೋರವಾಗಿದೆ. ಬಾಲ್ಯಾವಸ್ಥೆ, ಯೌವನಾವಸ್ಥೆಯಲ್ಲಿ ಅನುಭವಸಿದ ಕಷ್ಟವು-ದುಃಖವು ಇಲ್ಲಿ ಆಳವು ನಿಲುಕದಾಗಿದೆ. ಅಪ್ಪ ತನ್ನ ಜೀವನನ್ನು ತನ್ನ ಮಗನಿಗಾಗಿ ತ್ಯಾಗ ಮಾಡಿದ್ದಾರೆ. ತನ್ನ ಸುಖವನ್ನು ಬಲಿ ಕೊಟ್ಟಿದ್ದಾರೆ. ಒಂದು ವೇಳೆ ಅಪ್ಪನು ಬೆಪ್ಪನಾಗಿ ಇನ್ನೊಂದು ಮದುವೆಯಾಗಿದ್ದರೆ ಗುಂಡೂರಾವ ಕಡಣಿಯವರ ಬದುಕು ಹೇಗಿರುತ್ತಿತ್ತು ? ಇವರು ಬದುಕು ಪ್ರಶ್ನೆಯಾಗಿ ಉಳಿಯಬಾರದೆಂದು (ತಂದೆ) ಅಪ್ಪ ಶಿಕ್ಷಣ ಕೊಟ್ಟು, ತಾಯಿಯಾಗಿ ಸಂಸ್ಕಾರ ಕೊಟ್ಟು, ತನ್ನ ಜೀವನವನ್ನೇ ಮಗನಿಗಾಗಿ ಮೀಸಲಿಟ್ಟ. ಇಲ್ಲದೆ ಹೋಗಿದ್ದರೆ, ನಮಗೆಲ್ಲಿ ಒಬ್ಬ ಸಾಹಿತಿ ಸಿಗುತ್ತಿದ್ದ, ಪತ್ರಕರ್ತ ಸಿಗುತ್ತಿದ್ದ ಎಂಬ ವಿಚಾರ ನಮ್ಮ ಸ್ಮೃತಿಯ ಮೇಲೆ ಬಂದು ಹೋಗುತ್ತದೆ.
ಕೃತಿಯ ಕರ್ತೃವೆಂದರೆ `ಅಪ್ಪ’ನೊಂದಿಗೆ ಇದ್ದು ಅವ್ವನನ್ನು ಕಳೆದುಕೊಂಡು ಅರವತ್ತರ ಆಸು-ಪಾಸಿನಲ್ಲಿರುವ ಶ್ರೀ ಗುಂಡೂರಾವ ಕಡಣಿಯವರು, ಸದಾ ಕಾಲದಲ್ಲಿ ಒಂದೇ ತೆರನಾಗಿ ಇದ್ದವರು. ದುಡ್ಡಿದ್ದರು ಅಷ್ಟೆ ಇಲ್ಲದಿದ್ದರೂ ಅಷ್ಟೆ. ನನಗೂ ಇವರಿಗೂ ಸುಮಾರು ಮೂವತ್ತು ವರ್ಷದ ಗೆಳೆತನ. ನಾವಿಬ್ಬರು ಕೂಡಿ ಸಾರಸ್ವತ ಲೋಕದಲ್ಲಿ ಬಂದವರು. ಯಾವಾಗಲೂ ಅವರ ಮಾತುಗಳು ಅರ್ಥವತ್ತಾಗಿರುತ್ತವೆ. ಆ ಮಾತು ತಿಳಿಯಲು ಬಹಳ ಕಷ್ಟಪಡಬೇಕು. ಇವರ ಬರವಣಿಗೆ ತಿಳಿಯಲು ಬಹಳ-ಬಹಳ ಕಷ್ಟ ಪಡಬೇಕು. ಕಡಣಿಯವರು ಬರೆಯುವದಕ್ಕಾಗಿ ಹುಟ್ಟಿದವರು. ಬರವಣಿಗೆಯನ್ನು ದುಡಿಸಿಕೊಂಡವರು. `ಮಾತು ಅಂಗಾರ ಮೌನ ಬಂಗಾರ’ ಅಂತೆಯೆ `ಸಂಜೆವಾಣಿ’ ಪತ್ರಿಕೆಯಿಂದ ಸಾಗಿ ಬಂದ ದಾರಿ ಸುಲಭದೇನಲ್ಲ. ಇಲ್ಲಿ ಗಣನೀಯವಾಗಿ ಸೇವೆ. ಮುಂದೆ ಸ್ವತಃ ಪತ್ರಿಕೆ ತೆಗೆಯಲು ಮುಂದಾಗಿ ನಿಂತರು. ರೈತನ ಬದುಕನ್ನು `ವ್ಯವಸಾಯ’ ಪತ್ರಿಕೆಯಲ್ಲಿ ನದಿಯ ನೀರಂತೆ ಸುರಿದು `ನೇಗಿಲ ಯೋಗಿ’ಯ ಚಿತ್ರಣ ಸುಂದರವಾಗಿ ಬಿಡಿಸಿ ನಮ್ಮ ನಾಡಿನಲ್ಲಿ ಸಾವಯವ ಕೃಷಿಕರನ್ನು ಪರಿಚಯಿಸಿರುವದು ಸಣ್ಣದಲ್ಲ. ನಾವು ಏನೇಲ್ಲವೂ ಇದ್ದೆವೆಂದರೆ ಕೃಷಿಯ ಖುಷಿಯಿಂದಲೇ ಎಂಬುದು ಸಾಬೀತು ಮಾಡಿದ್ದಾರೆ. `ವ್ಯವಸಾಯ’ ಪತ್ರಿಕೆಯು ಇಂದಿಗೂ ಜನ ಕೇಳುತ್ತಾರೆ. ಅದನ್ನು ನಿಲ್ಲಿಸಿ `ಗುರು ಉಪದೇಶ’ ಪತ್ರಿಕೆಯು ನಡೆಸುತ್ತಿದ್ಧಾರೆ. ಕಡಣಿಯವರ ಕೃತಿಗಳು ಕಡಿಮೆಯಿರಬಹುದು ! ಬರಹ ನಿರಂತರವಾಗಿದೆ. ಅವರು ಬರೆಯಲು ಕುಳಿತರೆ ಐವತ್ತು (50) ಪುಸ್ತಕಗಳಾಗುತ್ತಿದ್ದವು. ಇಂತಹ ಬರಹಗಾರ ನಮ್ಮೊಂದಿಗಿದ್ಧಾರೆ ನನಗೆ ಸಂತೋಷವಾಗಿದೆ. ಇವರ ಕೃತಿಗಳೆಂದರೆ `ಬಸವ ನೆಲದಲ್ಲಿ ರೈತ ಚಳುವಳಿ’, `ಆರಾಧ್ಯ ದೈವ ಈರ ಮುತ್ಯಾ’, `ಪತ್ರಿ ಪರಿಮಳ’ `ಪವಾಡ ಪುರುಷ ಶ್ರೀ ವಿಶ್ವಾರಾಧ್ಯ ಲೀಲೆ’, `ಗುರುಪಾದ’, `ಶಿವಕವಿ ಹಿರೇಮಠರ ಬದುಕು-ಬರಹ’ ಈ ಕೃತಿಯು `ಅಪ್ಪ’ ಬಹಳ ಸುಂದರವಾಗಿ ಮತ್ತೊಬ್ಬರಿಗೆ ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಬಲ್ಲದು. ಇವುಗಳು ಪುಸ್ತಕಗಳಾದರೆ ಇವರು ಬರೆದ ಸುದ್ಧಿಗಳು ಎಷ್ಟೋ ಸಂಪುಟಗಳಾಗುತ್ತವೆ.
ಗುಂಡೂರಾವ ಕಡಣಿಯವರ ಬಗ್ಗೆ ನಮ್ಮ ಜಿಲ್ಲೆಯ ಸಾಹಿತ್ಯ ಬಳಗದಲ್ಲಿ ಅರಿಯದವರಿಲ್ಲ. ಮುದ್ರಣ ಮಾದ್ಯಮದಲ್ಲಿ ಹೆಚ್ಚು ಹೆಸರು ಮಾಡಿದವರು. ನಿರಾಳ, ನಿರ್ಮಲ, ನಿಶ್ಚಿಂತ, ನಿರ್ಲಪ್ತತೆಯಿಂದ ತಮ್ಮ ಬದುಕಿನ ಬಂಡಿಯನ್ನು ತನ್ನ ಸಂಸಾರದೊಂದಿಗೆ ಎಳೆದುಕೊಂಡು ಬಂದಿದ್ಧಾರೆ. ಇವರು ನಮ್ಮ ಭಾಗದ `ಲಂಕೇಶ’, `ರವಿ ಬೆಳೆಗೆರೆ’ಯೆಂತಲೆ ನಾವು ಹೇಳಬೇಕಾಗುತ್ತದೆ. ಇವರಿಬ್ಬರೂ ಉತ್ತರ ಕರ್ನಾಟಕದವರೇಯಾದರೂ, ಬೆಂಗಳೂರಿನ ತಂಪು ನೆಲದಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡಿದರೆ, ಗುಂಡೂರಾವ ಅವರು ಬಿಸಿಲುನಾಡಿನಲ್ಲಿ ಕುಳಿತು ಪತ್ರಿಕೆಯ ಮೂಲಕ ಕೃಷಿ ಮಾಡಿದ್ದಾರೆ. ಮುದ್ರಣ ಮಾದ್ಯಮದಲ್ಲಿ ಎಡವಿ ಬಿದ್ದಿದ್ದು, ಕಷ್ಟ ಎದುರಿಸಿದ್ದು ಬಹಳ. ಈ ಎಲ್ಲದಕ್ಕೂ ಸದ್ಯ ನಡೆಯುವ `ಗುರು ಉಪದೇಶ’ ಪತ್ರಿಕೆಯ ಸಂಪಾದಕರಾಗಿ ಶ್ರೀ ಸಿದ್ಧಣಗೌಡ ಮಾಲಿ ಪಾಟೀಲ, ಗೌರವ ಸಂಪಾದಕ ಗುಂಡುರಾವ್ ಕಡಣಿ. ಧರ್ಮ, ಸಾಹಿತ್ಯ, ಸಂಸ್ಕೃತಿ, ಜೊತೆಯಲ್ಲಿ ಪರಿಚಯಿಸಿ ವ್ಯವಸಾಯ ಹೇಳುವುದನ್ನು ಬಿಟ್ಟಿಲ್ಲ. `ಅಪ್ಪ’ ಪುಸ್ತಕವು ಸುಮಾರು 100 ಪುಟ ಒಳಗೊಂಡಿದೆ , ಕಡಣಿಯ ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ, ಪ್ರಕಾಶಿಸಿದೆ .
ಶಿವಕವಿ ಹಿರೇಮಠ ಜೋಗೂರ ಕಲಬುರಗಿ 21-11-2020