ಕರ್ನಾಟಕ ಸಂಘಕ್ಕೆ ಉಗಾಂಡ ಕನ್ನಡ ಭವನ ನಿರ್ಮಿಸಲು ರಾಜ್ಯ ಸರ್ಕಾರದ ನೆರವು ಅಗತ್ಯ: ಡಾ. ಪ್ರಣವಾನಂದ ಶ್ರೀ
ಕರ್ನಾಟಕ ಸಂಘಕ್ಕೆ ಉಗಾಂಡ ಕನ್ನಡ ಭವನ ನಿರ್ಮಿಸಲು ರಾಜ್ಯ ಸರ್ಕಾರದ ನೆರವು ಅಗತ್ಯ: ಡಾ. ಪ್ರಣವಾನಂದ ಶ್ರೀ
ಉಗಾಂಡದ ಕಂಪಾಲಾದಲ್ಲಿ ದೀಪಾವಳಿ ಸಂಭ್ರಮಾಚರಣೆಯಲ್ಲಿ ಕನ್ನಡಿಗರ ಸಂಭ್ರಮ
ಕಲಬುರಗಿ : ಪೂರ್ವ ಆಫ್ರಿಕಾ ದೇಶದ ಉಗಾಂಡದ ರಾಜಧಾನಿ ಕಂಪಾಲಾದಲ್ಲಿರುವ ಕರ್ನಾಟಕ ಸಂಘದ ನೇತೃತ್ವದಲ್ಲಿ ದೀಪಗಳ ಹಬ್ಬ ದೀಪಾವಳಿ ಹಬ್ಬವನ್ನು ಅಲ್ಲಿನ ಕನ್ನಡಿಗರು ಸಂಭ್ರಮದಿಂದ ಆಚರಿಸಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪಸರಿಸುವ ಮಹೋನ್ನತ ಕಾರ್ಯ ನಡೆಸಿ ಪ್ರಶಂಸೆಗೆ ಪಾತ್ರರಾದರು.
ಇತ್ತೀಚೆಗೆ ಉಗಾಂಡದ ರಾಜಧಾನಿ ಕಂಪಾಲಾದಲ್ಲಿರುವ ಕನ್ನಡಿಗರ ಏಕೈಕ ಸಂಸ್ಥೆ ಕರ್ನಾಟಕ ಸಂಘದ ಆಶ್ರಯದಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ ಉಲ್ಲಾಸದಿಂದ ಆಚರಿಸಲಾಯಿತು. ಕನ್ನಡಿಗರು ಕೈಯಲ್ಲಿ ಹಣತೆಗಳನ್ನು ಹಿಡಿದು ಪ್ರೀತಿ ಮತ್ತು ಶಾಂತಿಯ ಸಂದೇಶ ಸಾರುವ, ಭಾರತದ ಅಸ್ಮಿತೆಯನ್ನು ಪಸರಿಸುವ ದೀಪಾವಳಿಯ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಾಲು ಸಾಲು ಹಣತೆ ಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸಿ ವಿದೇಶಿ ನೆಲದಲ್ಲಿ ಕನ್ನಡಿಗರು ಭಾರತೀಯ ಸಂಸ್ಕೃತಿಯ ಕಂಪನ್ನು ಬೀರಿದರು.
ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ಈ ಸಂದರ್ಭದಲ್ಲಿ ಮಾತನಾಡಿ ಉದ್ಯೋಗ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಕನ್ನಡಿಗರು ಕಾಂಪಾಲಾದಲ್ಲಿ 2004ರಲ್ಲಿ ಕರ್ನಾಟಕ ಸಂಘವನ್ನು ಹುಟ್ಟುಹಾಕಿದರು. ಆದರೆ ಈ ವರೆಗೆ ಕರ್ನಾಟಕ ಸರಕಾರದ ಯಾವೊಬ್ಬ ಸಚಿವರು ,ಅಧಿಕಾರಿಗಳು ಕಂಪಾಲಾಕ್ಕೆ ಭೇಟಿ ನೀಡಲಿಲ್ಲ. ಮಾತ್ರವಲ್ಲ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಘಕ್ಕೆ ಕನ್ನಡ ಭವನದ ಅಗತ್ಯವಿದ್ದು ರಾಜ್ಯ ಸರ್ಕಾರವು ಕೂಡಲೇ ಸ್ಪಂದನೆ ನೀಡುವುದು ಅಗತ್ಯ. ಭಾರತದ ಸಂಸ್ಕೃತಿ ಮತ್ತು ಕನ್ನಡ ನಾಡಿನ ಆಸ್ಮಿತೆಯನ್ನು ಪಸರಿಸುವ ಕರ್ನಾಟಕ ಸಂಘವು ದೀಪಾವಳಿ, ರಾಜ್ಯೋತ್ಸವ ಮುಂತಾದ ಕಾರ್ಯಕ್ರಮಗಳನ್ನು ನಡೆಸಿ ಕ್ರಿಯಾಶೀಲವಾಗಿ ಕಾರ್ಯವೆಸಗುತ್ತಿದ್ದು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸರಕಾರ ನೆರವಾಗುವಂತೆ ಕರ್ನಾಟಕ ಸಂಘದ ಬೇಡಿಕೆಗಳನ್ನು ರಾಜ್ಯ ಸರಕಾರಕ್ಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸಂಘದ ಅಧ್ಯಕ್ಷರಾದ ದೀಪಕ್ ಜಗದೀಶ್ ಮಾತನಾಡಿ 2025ನೇ ವರ್ಷದ ದೀಪಾವಳಿ ಹಬ್ಬ ಡಾ. ಪ್ರಣವಾನಂದ ಶ್ರೀಗಳ ಭೇಟಿಯಿಂದ ಅತ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಅರ್ಥಪೂರ್ಣವಾಗಿ ನೆರವೇರಿದೆ. ಕಂಪಾಲಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಸಂಘಕ್ಕೆ ಕನ್ನಡ ಭವನ ನಿರ್ಮಾಣ ಮಾಡಲು ಕರ್ನಾಟಕ ಸರಕಾರವು ನೆರವು ನೀಡಬೇಕಾಗಿದ್ದು ಸ್ವಾಮೀಜಿಯವರು ಸಚಿವರ ಜೊತೆ ಚರ್ಚಿಸಿ ನೆರವಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಂತೋಷ್ ರಾಥೋಡ್, ಕೋಶಾಧಿಕಾರಿ ಮುರಳಿ ಎನ್ ವಿ, ಸಹ ಕಾರ್ಯದರ್ಶಿ ಪುನೀತ್ ಬೇಂಗ್ರೆ ಮತ್ತಿತರ ಅನೇಕರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಹಿಮಾಂಶು ಉಪಾಧ್ಯಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ವತಿಯಿಂದ ಡಾ. ಪ್ರಣವಾನಂದ ಶ್ರೀಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
