"ನೆನಹು" ಕೃತಿಯ ಅವಲೋಕನ
"ನೆನಹು"ಕೃತಿಯ ಅವಲೋಕನ
-ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ*
"ನೆನಹು" ಕೃತಿಯ ಲೇಖಕರು ಪ್ರೊ.ಬಿ.ರಾಮರೆಡ್ಡಿ ಸರ್ ಅವರು. ಶ್ರೀ ಶರಣ ಬಸವೇಶ್ವರ ವಿದ್ಯಾ ವರ್ಧಕ ಸಂಘ ಕಲಬುರಗಿಯ ಪದವಿ ಮಹಾವಿದ್ಯಾಲಯಗಳಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಎಂಭತ್ತೊಂದನೆ ವಯಸ್ಸಿನಲ್ಲಿ ತಮ್ಮ ತಂದೆ ಶ್ರೀ ಸಂಗಣ್ಣಗೌಡ ಪಾಟೀಲರ ಉದಾತ್ತ ಜೀವನ ಕಥನ ಹಾಗೂ ತಮ್ಮ ಅನುಭವ ಕಥನವನ್ನು *ನೆನಹು* ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು 2025 ರಲ್ಲಿ ಸ್ವಾಭಿಮಾನ ಗ್ರಾಮ್ಯ ಪ್ರಕಾಶನ ಸಂಕನೂರು,ತಾಲೂಕು ಚಿತ್ತಾಪೂರ,ಜಿಲ್ಲೆ ಕಲಬುರಗಿಯಿಂದ ಪ್ರಕಾಶಿತಗೊಂಡಿದೆ. ಈ ಕೃತಿಯು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗಕ್ಕೆ *ಅಪ್ಪ :ಮರೆಯಲಾಗದ ಮಾಣಿಕ್ಯ* ವೆಂತಲೂ,ಎರಡನೆಯ ಭಾಗಕ್ಕೆ *ನನಗೆ ನಾನೇ ಸಾಕ್ಷಿ* ಎಂಬುದಾಗಿ ಹೆಸರಿಸಿದ್ದಾರೆ. ಸಂಗಣ್ಣಗೌಡ ಪಾಟೀಲರ ಜೀವನ ಕಥನವನ್ನು 28 ಅಧ್ಯಾಯಗಳಲ್ಲಿ ಹಿಡಿದಿರಿಸಿದ್ದಾರೆ . ಅವರ ಮನೆತನದ ವಂಶಾವಳಿಯನ್ನು ದಾಖಲಿಸಿದ್ದು ಓದುಗರ ಗಮನವನ್ನು ಸೆಳೆಯುತ್ತದೆ.
ಸಂಗಣ್ಣಗೌಡ ಪಾಟೀಲರು ಶಿವಾಧೀನರಾಗಿ 23 ವರ್ಷ ಕಳೆದಿದ್ದು ಇದೀಗ ಅವರ ಹಿರಿಯ ಮಗ ಪ್ರೊ.ರಾಮರೆಡ್ಡಿಯವರು *ನೆನಹು* ಕೃತಿಯಲ್ಲಿ ತಮ್ಮ ತಂದೆಯ ಸಾರ್ಥಕ ಬದುಕಿನ ಚಿತ್ರಣವನ್ನು ನೀಡಿದ್ದಾರೆ. ಲೇಖಕರ ಹುಟ್ಟೂರಾದ ಸಂಕನೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನರು ಸಂಗಣ್ಣಗೌಡರ ಸಮಾಜೋಧಾರ್ಮಿಕ ಕಾರ್ಯಗಳನ್ನು ಇಂದಿಗೂ ನೆನೆಯುವುದನ್ನು ಲೇಖಕರು ಈ ಕೃತಿಯಲ್ಲಿ ನಮೂದಿಸಿದ್ದಾರೆ.ಶಿಕ್ಷಣಪ್ರೇಮಿಗಳಾಗಿದ್ದ ಸಂಗಣ್ಣಗೌಡರು 1940 ರ ಸುಮಾರಿಗೆ ಖಾಸಗಿ ಶಾಲೆಯೊಂದು ತೆರೆದು ಸಂಕನೂರಿನ ಎಲ್ಲ ಸಮಾಜದ ಮಕ್ಕಳಿಗೆ ಶಿಕ್ಷಣಿಕ ಅವಕಾಶ ಕಲ್ಪಿಸಿಕೊಟ್ಟದ್ದು ಸ್ತುತ್ಯಾರ್ಹವಾದ ಸಂಗತಿಯಾಗಿದೆ.
ಸರಳಜೀವಿಗಳು, ದಾಸೋಹಿಗಳು, ಸಕಾರಾತ್ಮಕ ಚಿಂತನೆಯುಳ್ಳವರು, ಸಾಮಾಜಿಕ ಕಳಕಳಿ ಹಾಗೂ ಮಾನವಾನುಕಂಪ ವುಳ್ಳ ಸಂಗನಗೌಡ ಪಾಟೀಲರ ಸಾರ್ಥಕ ಬದುಕು ಹಾಗೂ ಅವರ ಕಾರ್ಯವೈಖರಿ ಇಂದಿನ ಪೀಳಿಗೆ ಓದುವಂತಾಗಬೇಕು. ಅವರ ಜೀವನ ಚರಿತ್ರೆ ದಾರಿದೀಪವಾಗಬೇಕು ಎಂಬ ಸದುದ್ದೇಶದಿಂದ ತಮ್ಮ ತಂದೆಯವರ ಚರಿತ್ರೆಯನ್ನು ಪ್ರೊ.ರಾಮರೆಡ್ಡಿಯವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಶ್ರೀ ಸಂಗಣ್ಣಗೌಡ ಪಾಟೀಲರು ಒಬ್ಬ ಪ್ರಗತಿಪರ ಕೃಷಿಕರಾಗಿದ್ದು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡು ಇತರರಿಗೆ ಪ್ರೇರಣಾದಾಯಿಯಾಗಿದ್ದಾರೆ. ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ನಿರಂತರ ಪ್ರಯತ್ನ, ಪರೋಪಕಾರ, ಮಾನಸಿಕ ಸ್ಥಿರತೆ ಮುಂತಾದ ಗುಣಗಳಿಂದಾಗಿ ಅನ್ಯರಿಗೆ ಮಾದರಿಯಾಗಿದ್ದರು. ಅಹಂಕಾರ, ದರ್ಪ ಅವರಿಂದ ಹರದಾರಿ ದೂರ ಇದ್ದವು. ಊರಲ್ಲಿ ಯಾರೂ ಉಪವಾಸ ಮಲಗಬಾರದು ಎಂಬುದು ಅವರ ಆಶಯವಾಗಿತ್ತು. ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯಹಸ್ತ ಚಾಚುತ್ತಿದ್ದರು.
ಸಂಗಣ್ಣಗೌಡರ ಪತ್ನಿ ಚನ್ನಮ್ಮ ಕ್ಷಯರೋಗಕ್ಕೆ ತುತ್ತಾಗಿ ರಾಮರೆಡ್ಡಿ ಹಾಗೂ ವಿಶ್ವನಾಥರೆಡ್ಡಿ ಎಂಬ ಇಬ್ಬರು ಗಂಡುಮಕ್ಕಳನ್ನು ಬಿಟ್ಟು ಅಸುನೀಗಿದರು. ತಾಯಿ ತೀರಿದ ತಿಂಗಳೊಪ್ಪತ್ತಿನಲ್ಲಿ ಹಸುಗೂಸು ವಿಶ್ವನಾಥರೆಡ್ಡಿ ತೀರಿಕೊಂಡಿತು. ಹಿರಿಯರ ಒತ್ತಾಯಕ್ಕೆ ಮಣಿದು ಸಂಗಣ್ಣಗೌಡರು ರತ್ನಮ್ಮಳೊಂದಿಗೆ ವಿವಾಹವಾಗುತ್ತಾರೆ. ಇವರ ದಾಂಪತ್ಯದ ಫಲವಾಗಿ ಆರು ಜನ ಗಂಡು ಮಕ್ಕಳು ಜನಿಸುತ್ತಾರೆ. ಚೊಚ್ಚಿಲ ಮಗ ರಾಮರೆಡ್ಡಿಯವರನ್ನೊಳಗೊಂಡಂತೆ ತಮ್ಮ ಏಳೂ ಜನ ಗಂಡು ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಸಂಸ್ಕಾರವನ್ನು ಕೊಟ್ಟು ಬೆಳಸಿದರು. ಸಮಾಜಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡುವ ವ್ಯಕ್ತಿಗಳನ್ನಾಗಿ ರೂಪಿಸಿದ ಕೀರ್ತಿ ಸಂಗಣ್ಣಗೌಡ ಪಾಟೀಲರದಾಗಿದೆ.
ಸಂಗಣ್ಣಗೌಡರು ಅಹಿಂಸೆಯ ಆರಾಧಕರಾಗಿದ್ದರು. ಕೃಷಿಕರಾದ ಅವರು ಪ್ರಾಣಿಗಳಿಗೆ ಹಿಂಸೆ ಕೊಡುವುದನ್ನು ವಿರೋಧಿಸುತ್ತಿದ್ದರು. ಎತ್ತುಗಳಿಗೆ ಹೊಡೆಯುವುದು,ಬಾಲಮುರಿಯುವುದು ಮಾಡಬಾರದೆಂದು ಆಳು ಮಕ್ಕಳಿಗೆ ತಾಕೀತು ಮಾಡಿದ್ದರು. ಊರಲ್ಲಿ ಯಾರೇ ಆಗಲಿ ಅನಾರೋಗ್ಯದಿಂದ ಬಳಲಿದಾಗ ಅವರನ್ನು ಪಟ್ಟಣಕ್ಕೆ ಕರೆದೊಯ್ದು ಚಿಕಿತ್ಸೆಕೊಡಿಸುತ್ತಿದ್ದರು. ಕಲಾಸಂಸ್ಕೃತಿಯ ಆರಾಧಕರಾದ ಸಂಗಣ್ಣಗೌಡರು ತಮ್ಮದೇ ನಿರ್ದೇಶನದ *ಹೇಮರೆಡ್ಡಿ ಮಲ್ಲಮ್ಮ* ನ ನಾಟಕದಲ್ಲಿ ಸ್ವತ: ತಾವೇ ಹೇಮರೆಡ್ಡಿ ಮಲ್ಲಮ್ಮನ ಪಾತ್ರ ವಹಿಸಿ ಭೇಶ್ ಎನಿಸಿಕೊಂಡರು.
ಸಂಗಣ್ಣಗೌಡ ಪಾಟೀಲರು ಊರಲ್ಲಿ ಎಷ್ಟೇ ದೊಡ್ಡ ಕೆಲಸ ಮಾಡಿದ್ದರೂ ನಾನೇ ಮಾಡಿದೆ ನನ್ನಿಂದಲೇ ಆಯಿತು ಎಂದು ಜಂಬ ಪಡುತ್ತಿರಲಿಲ್ಲ. ದೇಶ ಸುತ್ತು ಕೋಶ ಓದು ಎಂಬ ಗಾದೆಯಂತೆ ಪ್ರವಾಸದ ಅನುಭವವನ್ನು ಪಡೆಯುತ್ತಿದ್ದರು.ಊರಿನ ಜನರನ್ನು ಕರೆದುಕೊಂಡು ಪ್ರವಾಸ ಮಾಡುವುದು ಅವರಿಗೆ ಖುಷಿಕೊಡುವ ಸಂಗತಿಯಾಗಿತ್ತು. ಇವರು ಪುಸ್ತಕ ಪ್ರೇಮಿಗಳು,ಇಷ್ಟಲಿಂಗ ಆರಾಧಕರೂ ಆಗಿದ್ದು, ದೇವರ ಹೆಸರಿನಲ್ಲಿ ವೃಥಾ ಕಾಲಹರಣ ಮಾಡುವವರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರು. ಮೃದುವಚನವೇ ಸಕಲ ಜಪಂಗಳಯ್ಯ ಎಂಬ ಬಸವವಾಣಿಯಂತೆ ಎಲ್ಲರನ್ನೂ ಗೌರವದಿಂದ ಮಾತ ನುಡಿಸುತ್ತಿದ್ದರು.ಇವರು ಹೈದರಾಬಾದ ಕರ್ನಾಟಕ ವಿಮೋಚನಾ ಚಳುವಳಿಯ ಸಂದರ್ಭದಲ್ಲಿ ನೇತಾರ ಶರಡಗೌಡ ಇನಾಂದಾರ ಹಾಗೂ ಇನ್ನಿತರ ನಾಯಕರನ್ನು ಭೇಟಿ ಮಾಡಿ ಸಂಘಟನಾ ಕಾರ್ಯದಲ್ಲಿ ತೊಡಗುತ್ತಿದ್ದರು. ಇವರನ್ನು ಸ್ವಾತಂತ್ರ್ಯ ಸೇನಾನಿ ಎಂದು ಇಂದಿಗೂ ಅವರನ್ನು ಸಂಕನೂರಿನ ಜನ ಸ್ಮರಿಸುತ್ತಾರೆ.
ಸಂಗಣ್ಣಗೌಡರು 86 ವರ್ಷಗಳ ತುಂಬು ಜೀವನ ನಡೆಸಿ ಇಹಲೋಕವನ್ನು ತ್ಯಜಿಸಿದರು. ಬದುಕಿರುವಾಗ ರೋಗದಿಂದ ನರಳಿದವರಲ್ಲ. ಆಸ್ಪತ್ರೆಗೆ ಹೋದವರಲ್ಲ. ಯಾರಿಂದಲೂ ಆರೈಕೆ ಮಾಡಿಸಿಕೊಳ್ಳದೆ ಕಣ್ಮುಚ್ಚಿಕೊಳ್ಳಬೇಕೆಂದವರು. ಇವರು ಇಚ್ಚಾಮರಣಿಗಳು. ರಾತ್ರಿ ಮಲಗಿದಲ್ಲಿಯೇ ಪ್ರಾಣಪಕ್ಷಿ ಹಾರಿಹೋಯಿತು. ಸಾವು ಅವರ ಇಚ್ಚೆಯಂತೆ ಬಂದಿರುವುದು ಅವರ ಪುಣ್ಯ ವಿಶೇಷತೆಯೇ ಸರಿ. ಲೇಖಕರಾದ ಪ್ರೊ.ಬಿ.ರಾಮರೆಡ್ಡಿಯವರು ತಮ್ಮ ತಂದೆಯ ಬಗ್ಗೆ ಅಗಾಧವಾದ ಗೌರವ ಹಾಗೂ ಕೃತಜ್ಞತಾ ಭಾವವಿರಿಸಿದ ಕಾರಣ ಸಂಗಣ್ಣಗೌಡರ ಕುರಿತಾಗಿ *ಅಪ್ಪ ಮರೆಯಲಾಗದ ಮಾಣಿಕ್ಯ* ಎಂದು ಬರೆಯಲು ಸಾಧ್ಯವಾಗಿದೆ.
*ನೆನಹು* ಈ ಕೃತಿಯ ಎರಡನೆಯ ಭಾಗದಲ್ಲಿ ಲೇಖಕ ಪ್ರೊ. ಬಿ.ರಾಮರೆಡ್ಡಿಯವರು *ನನಗೆ ನಾನೇ ಸಾಕ್ಷಿ* ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಜೀವನ ಅನುಭವ ಕಥನವನ್ನು ಚಿತ್ರಿಸಿದ್ದಾರೆ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಲೇಖಕರಿಗೆ ತಂದೆಯೆಂದರೆ ಎಲ್ಲಿಲ್ಲದ ಪ್ರೀತಿ. ಅವರ ತಂದೆ ಸಂಗಣ್ಣಗೌಡ ಪಾಟೀಲರಿಗೂ ಮಗನೆಂದರೆ ವಾತ್ಸಲ್ಯ. ಲೇಖಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಾಠ ಕಲಿಸಿದ ಗುರುಗಳನ್ನು ಯಾವತ್ತೂ ಮರೆತಿಲ್ಲ. ರಾಜ್ಯಶಾಸ್ತ್ರ, ಇತಿಹಾಸ ಮತ್ತು ಕನ್ನಡ ಇವರ ನೆಚ್ಚಿನ ವಿಷಯಗಳಾಗಿದ್ದವು. ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯದ ಜೊತೆಗೆ N.S.S. ಹಾಗೂ N.C.C. ಸೇರಿಕೊಂಡು ಶಿಸ್ತು, ಸಂಯಮ,ಸಾಹಸ ಹಾಗೂ ನಾಯಕತ್ವದ ಗುಣಗಳನ್ನು ಬೆಳಸಿಕೊಂಡರು. ರೈಫಲ್ ಶೂಟಿಂಗ್ ನಲ್ಲಿ ಪ್ರಾವೀಣ್ಯತೆಯನ್ನು ಗಳಿಸಿಕೊಂಡ ಬಗೆಯನ್ನು ಲೇಖಕರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ., ಪೂರೈಸಿದರು. ಬಸವಕಲ್ಯಾಣದ ಎಸ್.ಎಸ್ ಖೂಬಾ ಬಸವೇಶ್ವರ ಕಾಲೇಜಿಗೆ ಪೂಜ್ಯ ಶ್ರೀ ಶರಣ ಬಸವಪ್ಪಾ ಅಪ್ಪಾಅವರು ಬಿ.ರಾಮರೆಡ್ಡಿಯವರನ್ನು ರಾಜ್ಯಶಾಸ್ತ್ರ ಉಪನ್ಯಾಸಕರನ್ನಾಗಿ ನೇಮಕಾತಿ ಮಾಡಿದರು. ಅಪ್ಪಾ ಅವರ ಅನುಗ್ರಹದಿಂದ ಉದ್ಯೋಗ ದೊರತದ್ದು ತಮ್ಮ ಸೌಭಾಗ್ಯವೆಂದು ಲೇಖಕರು ನುಡಿದಿದ್ದಾರೆ.
ಕಲಬುರಗಿಯ ಶ್ರೀ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಮಾತೋಶ್ರೀ ಗೋದೂತಾಯಿ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾ ಶೈಕ್ಷಣಿಕ ಪ್ರಗತಿಗಾಗಿ ಅಹರ್ನಿಶಿ ಶ್ರಮಿಸಿದ್ದಾರೆ. 35 ವರ್ಷಗಳ ಕಾಲ ವೃತ್ತಿ ನಂತರ 15 ವರ್ಷಗಳ ಕಾಲ ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಪ್ರಕಲ್ಪಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಗೆ ಡಿ.ಎಡ್ ಕಾಲೇಜು, ಬಿ.ಎಡ್ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಬಿ.ಸಿ.ಎ., ಎಂ.ಟಿ.ಎ., ಕಾಲೇಜುಗಳಿಗಾಗಿ ಸರಕಾರದಿಂದ ಅನುಮತಿ ತರುವಲ್ಲಿ ಲೇಖಕ ಪ್ರೊ.ಬಿ.ರಾಮರೆಡ್ಡಿಯವರ ಪಾತ್ರ ಗಣನೀಯವಾದುದಾಗಿದೆ.
ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಾತ್ಸಲ್ಯ ಭಾವದಿಂದ ವರ್ತಿಸುವುದು, ಸಹ ಸಿಬ್ಬಂದಿಯೊಂದಿಗೆ ಸಮಾನತೆ ಸಾಮರಸ್ಯದಿಂದ ವರ್ತಿಸುವುದು, ಪಾಲಕರನ್ನು ಗೌರವದಿಂದ ಕಾಣುವುದು. ಈ ಮೂರು ಅಂಶಗಳನ್ನು ಲೇಖಕರು ತಾವು ಪ್ರಾಚಾರ್ಯರಾಗಿರುವಾಗ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಎರಡು ದಶಕಗಳ ಕಾಲ ಕಲಬುರಗಿ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್,ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಲೇಖಕರು ತಮ್ಮ ಬದುಕಿನ ಅನೇಕ ಸಿಹಿಕಹಿ ಪ್ರಸಂಗಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ನಿವೃತ್ತಿಯ ನಂತರ ಪೂಜ್ಯ ಡಾ.ಶರಣ ಬಸವಪ್ಪ ಅಪ್ಪಾ ಅವರ ಆಪ್ತಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. I.A.S ಟ್ರೇನಿಂಗ್, ಇನ್ಸ್ ಟಿಟ್ಯೂಟನ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಾ ಶ್ರೀ ಶರಣ ಬಸವೇಶ್ವರ ಸಂಸ್ಥೆಯು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಶ್ರಮಿಸಿದ್ದಾರೆ.ಇದರ ಪರಿಣಾಮವಾಗಿ ಇಂದು ಅಪ್ಪನ ಕೆರೆಯ ಹತ್ತಿರ ಇರುವ ಸ್ಥಳದಲ್ಲಿ ಭವ್ಯ ಶೈಕ್ಷಣಿಕ ಕಟ್ಟಡಗಳು, ಆಯುರ್ವೇದ ಆಸ್ಪತ್ರೆ ಮತ್ತು ವಿಶಾಲ ಸಭಾಂಗಣ ನಿರ್ಮಾಣಗೊಂಡಿದೆ.
ನಿರಂತರವಾಗಿ ಐದು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡುತ್ತಾ, ಪಾರದರ್ಶಕ, ಸ್ಪಟಿಕ ಸದೃಶ ಜೀವನವನ್ನು ನಡೆಸಿದ ಲೇಖಕರಾದ ಪ್ರೊ.ಬಿ.ರಾಮರೆಡ್ಡಿವರು *ನೆನಹು* ಕೃತಿಯನ್ನು ಕಟ್ಟಿಕೊಟ್ಟದ್ದು ಶ್ಲಾಘನೀಯವಾಗಿದೆ. ಇದೊಂದು ವಿಶಿಷ್ಟ,ಮೌಲಿಕ ಹಾಗೂ ಸಂಗ್ರಹಯೋಗ್ಯ ಕೃತಿಯಾಗಿದೆ.
*ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ
