ಡಾ.ಜಯದೇವಿ ಗಾಯಕವಾಡ ಅವರ 'ಸಾಕಿ ಹೇಳಿದ ರುಬಾಯಿಗಳು

ಡಾ.ಜಯದೇವಿ ಗಾಯಕವಾಡ ಅವರ 'ಸಾಕಿ ಹೇಳಿದ ರುಬಾಯಿಗಳು

ಕನ್ನಡದ ಮೊದಲ ಮಹಿಳಾ ರುಬಾಯಿ ಸಂಕಲನ

ಡಾ.ಜಯದೇವಿ ಗಾಯಕವಾಡ ಅವರ 'ಸಾಕಿ ಹೇಳಿದ ರುಬಾಯಿಗಳು'

ರುಬಾಯಿ ಅಥವಾ ರುಬಾಯತ್ ಕನ್ನಡಕ್ಕೆ ಉರ್ದು ಸಾಹಿತ್ಯದಿಂದ ಬಂದ ಇನ್ನೊಂದು ಪದ್ಯ ಪ್ರಕಾರ.ಶಾಯಿರಿ ಗಜಲ್‌ಗಳ ಹಾಗೆ ಇದು ಕೂಡ ಮೂಲದಲ್ಲಿ ಪಾರ್ಶಿ ಭಾಷೆಯಲ್ಲಿಯೆ ಜನಿಸಿದ ಕಾವ್ಯ. ಜಗತ್ತಿನ ಪ್ರಸಿದ್ಧ ರುಬಾಯಿಗಳನ್ನು ಬರೆದು ಜಗತ್ಪçಸಿದ್ಧನಾದ ಕವಿ ಉಮರ್ ಖಯ್ಯಾಮ್. ಅವನ ರುಬಾಯಿಗಳನ್ನು ಕನ್ನಡಕ್ಕೆ ಮೊಟ್ಟ ಮೊದಲು ಪರಿಚಯಿಸುವ ಮೂಲಕ ಅವುಗಳನ್ನು ಕನ್ನಡಕ್ಕೆ ತಂದವರು ಹಿರಿಯ ಕವಿಗಳಾದ ಡಿ. ವಿ. ಜಿ ಯವರು . ತಾವು ಬರೆಯುವ ಮಂಕುತಿಮ್ಮನ ಕಗ್ಗ ಚೌಪದಿಗಳಿಗೆ ಸಮೀಪವಿದ್ದ ಉಮರ್ ಖಯ್ಯಾಮನ ರುಬಾಯಿಗಳನ್ನು ಅವರು ಅನುವಾದಿಸಿದರು. ಆರೆ ಈಚೆಗೆ ಡಾ ಮಲ್ಲಿನಾಥ ತಳವಾರ ಅವರು ಬರೆದ ಒಂದು ಲೇಖನದಲ್ಲಿ “ಡಾ ಎಸ್ .ವಿದ್ಯಾಶಂಕರ್ ಅವರು ಹಿಂದಿಯ ಪ್ರಸಿದ್ಧ ರುಬಾಯಿಯಾತ್ ಅನ್ನು ಮೊದಲಿಗೆ ಕನ್ನಡಕ್ಕೆ ಅನುವಾದದ ಮೂಲಕ ಪರಿಚಯಿಸಿದರು ಎಂದು ಹೇಳಲಾಗುತ್ತದೆ” ಎನ್ನುತ್ತಾರೆ.ಅವರೇ ಮುಂದುವರೆದು ಕನ್ನಡಕ್ಕೆ ರೂಬಾಯ ಬಂದುದನ್ನು “ ಕನ್ನಡದಲ್ಲಿ ಡಿವಿಜಿ, ಅ,ನ,ಕೃ, ಗೋವಿಂದ ಪೈ (ಗಿಳಿವಿಂಡು ಸಮಕಲನದಲ್ಲಿ ಅವರಿಂದ ಅನುವಾದಿತ ೫೦ ರೂಬಾಯತ್ ಇವೆ) ಎಂ. ವಿ.ಚಿತ್ರಲಿಮಗಯ್ಯ, ಶಂತರಸ, ಶಾ. ಬಲುರಾವ್, ಚಂದ್ರಕಾAತ ಕುಸನುರ್, ಜಂಬಣ್ಣ ಅಮರಚಿಂತ, ಡ.ಕೆ,ಬಿ ಬ್ಯಾಳಿ, ಡಾ.ಪಂಚಾಕ್ಷರಿ ಹಿರೇಮಠ, ಲಕ್ಕೂರು ಅನಂದ ಮುಂತಾದವರು ರುಬಾಯಿಯಾತ್ ಅನ್ನು ಕನ್ನಡಕ್ಕೆ ತಂದಿದ್ದಾರೆ.” ಎನ್ನುತ್ತರೆ. ನಂತರದಲ್ಲಿ ಆ ಕಾರ್ಯ ಮುಂದುವರೆಸಿದವರು ಕೊಪ್ಪಳದ ಡಾ. ಕೆ. ಬಿ. ಬ್ಯಾಳಿಯವರು. ಹಿಂದಿಯ ಗೀತಕಾರ ಬರೆದ ನೀರಜರ ಉತ್ತಮೋತ್ತಮವೆನಿಸಿದ ೮೫ ರುಬಾಯಿಗಳನ್ನು ಕನ್ನಡಕ್ಕೆ ಅನುವಾದಿಸಿದರಲ್ಲದೇ ಮೊಟ್ಟ ಮೊದಲ ಬಾರಿಗೆ ಸ್ವತಂತ್ರವಾದ ೨೫ ರುಬಾಯಿಗಳನ್ನು ರಚಿಸಿದರು. ಗಜಲ್ ಕಾವ್ಯಕ್ಕೆ ಹೇಗೆ ಶಾಂತರಸರು ಆದ್ಯರೋ ಹಾಗೆ ರುಬಾಯಿ ಪದ್ಯ ರಚನೆಗೆ ಡಾ. ಕೆ.ಬಿ ಬ್ಯಾಳಿಯವರನ್ನು ಆದ್ಯರೆನ್ನುವ ಮಾತೂ ಇದೆ. ಆಮೇಲೆ ಅಲ್ಲೊಂದು ಇಲ್ಲೊಂದು ಬಿಡಿ ರಚನೆಗಳ ರೂಪದಲ್ಲಿ ರುಬಾಯಿ ರಚನೆಯಾಗುತ್ತಿದ್ದವು. ಹಿರಿಯರಾದ ಜಂಬಣ್ಣ ಅಮರಚಿಂತ, ರಾಘವೇಂದ್ರ ಅಲಮಪುರಿ ಮೊದಲಾದವರು ಈ ಪ್ರಕಾರದ ಸಾಹಿತ್ಯ ರಚನೆ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ.

    ಆದರೆ ಈಚೆಗೆ ಸ್ವತಂತ್ರವಾದ ಮತ್ತು ಬೃಹತ್ತಾದ ರುಬಾಯಿ ಸಂಕಲನ ತರುವ ಮೂಲಕ ಕನ್ನಡಕ್ಕೆ ಒಂದು ರುಬಾಯಿ ಸಂಕಲನವನ್ನು ಕೊಡುಗೆಯಾಗಿ ನೀಡಿದವರು ಡಾ. ಜಯದೇವಿ ಗಾಯಕವಾಡ ಅವರು. ಅವರು ಬರೆದ ೫೦೦ ರುಬಾಯಿಗಳು ‘ಸಾಕಿ ಕೇಳಿದ ರುಬಾಯಿಗಳು’ ಕನ್ನಡದ ಮೊದಲ ಸುದೀರ್ಘ ರುಬಾಯಿಗಳ ಸಂಕಲನವಾಗಿದೆ. ಮಾತ್ರವಲ್ಲ, ಹಿರಿಯ ವಿಮರ್ಶಕರಾದ ಡಾ.ಬಸವರಾಜ ಸಬರದ ಅವರು ಗುರುತಿಸಿದಂತೆ ಡಾ.ಜಯದೇವಿ ಗಾಯಕವಾಡ ಅವರು ‘ರುಬಾಯಿಗಳನ್ನು ರಚಿಸಿದ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯೂ ಆಗಿದ್ದಾರೆ. ಈ ಮೂಲಕ ಶಾಯರಿ, ಗಜಲ್ , ಹೈಕು , ತನಗ, ಟಂಕಾ, ಮೊದಲಾದ ವಿದೇಶದಿಂದ ಬಂದು ಸಮಕಾಲೀನ ಕನ್ನಡದಲ್ಲಿ ತುಂಬ ಪ್ರಸಿದ್ಧವಾಗಿರುವ ವಿಭಿನ್ನ ಕಾವ್ಯಪ್ರಕಾರಗಳ ಹಾಗೆ ರುಬಾಯಿ ಕೂಡ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ.

     ಬೆಂಗಳೂರಿನ ಪ್ರಸಿದ್ಧ ಪ್ರಕಾಶನ ಸಂಸ್ಥೆ ‘ಸಪ್ನ ಪುಸ್ತಕಾಲಯ’ದಿಂದ ಪ್ರಕಟಿತವಾಗಿರುವ ಈ ಕಾವ್ಯ ಸಂಕಲನದಲ್ಲಿ ಕವಯಿತ್ರಿ ಡಾ.ಜಯದೇವಿ ಯವರು “ನಾನು ಮೊದಲ ಬಾರಿಗೆ ‘ಸಾಕಿ ಕೇಳಿದ ರುಬಾಯಿ’ಗಳು ಎಂಬ ಹೆಸರಿನಲ್ಲಿ ೫೦೦ ರುಬಾಯಿಗಳನ್ನು ಬರೆದಿದ್ದೇನೆ.. ರುಬಾಯಿ ಇತಿಹಾಸ, ನಿಯಮ ಎಲ್ಲವನ್ನೂ ಓದಿಕೊಂಡು ಬರೆದಿದ್ದೇನೆ. ನನಗೆ ಕಾಡಿದ ವಿಷಯಗಳ ಕುರಿತು ಚಿಂತಿಸಿದ್ದೇನೆ. ಹಸಿವು, ಬಡತನ, ಅಜ್ಞಾನ, ಶೋಷಣೆ, ದೌರ್ಜನ್ಯ, ಮತ್ತು ಸಮಾಜ ಎದುರಿಸುತ್ತಿರುವ ಈಚಿನ ತಲ್ಲಣ ತಳಮಳಗಳು ಮತ್ತು ಸಾಮಾಜಿಕ ಚಿಂತನಮುಖಿ ಕುರಿತು ರುಬಾಯಿಗಳಾಗಿ ಹೊರಹೊಮ್ಮಿವೆ” ಎಂದು ತಮ್ಮ ಮಾತಿನಲ್ಲಿ ಹೇಳುತ್ತಾರೆ. ಅವರು ನೀಡುವ ರುಬಾಯಿ ಕಾವ್ಯ ಪರಿಚಯವೂ ಉಪಯುಕ್ತವಾಗಿದೆ. ಹಾಗೆಯೇ ವಿದ್ವಾಂಸರಾದ ಡಾ ಬಸವರಾಜ ಸಬರದ , ಡಾ ಕೆ. ಬಿ. ಬ್ಯಾಳಿಯವರು ಬರೆದ ಮುನ್ನುಡಿ ಮಾತುಗಳು ಈ ಕಾವ್ಯ ಸಂಕಲನವನ್ನು ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಸಹಾಯ ಮಾಡುತ್ತವೆ. ಪ್ರತಿ ರುಬಾಯಿ ‘ರುಬಾಯಿ ರಚನೆಯ’ನಿಯಮ ಗಳಿಗನುಗುಣವಾಗಿದೆ.

     ಇವು ಸಾಕಿ ಕೇಳಿದ ಗಜಲ್ ಗಳು. ‘ಸಾಕಿ’ ಎಂಬ ಪಾರಿಭಾಷಿಕ ಪದಕ್ಕೆ ಗಜಲ್ ಲೋಕದಲ್ಲಿ , ಉರ್ದು ಕಾವ್ಯ ಸಾಹಿತ್ಯದಲ್ಲಿ ಬಹಳ ವಿಶಿಷ್ಟವಾದ ಅರ್ಥವಿದೆ. ಅಕೆ ಸಂಗಾತಿ, ಆತ್ಮ ಸಂಗಾತಿ , ಒಮ್ಮೊಮ್ಮೆ ಯಾರೋ ಹೊರಗಿನವರೇ ಅಲ್ಲ, ನಮ್ಮೊಳಗಿನ ನಮ್ಮ ಆತ್ಮದ ಜೊತೆಗಾತಿಯೇ ಅನ್ನಿಸಿ ಬಿಡುತ್ತದೆ. ಇಲ್ಲಿ ಕವಿಯತ್ರಿ ಸಾಕಿಯನ್ನು ಮತ್ತೆ ಮತ್ತೆ ಕರೆಯುತ್ತಾರೆ. ಏನು ಹೇಳಬೇಕೊ ಅದನ್ನು ಸಾಕಿಗೆ ಹೇಳುತ್ತಾರೆ. ಕವಿಯತ್ರಿ ಹೇಳಿದ್ದೆಲ್ಲವನ್ನೂ ಸಾಕಿ ಕೇಳುತ್ತಾನೆ/ ಳೆ. ಅವರ ಪ್ರಕರ ಸಾಕಿ

ಸಾಕಿ ನನಗಂತು ನೀ ಕಟುಕಿ ಅಲ್ಲ

ಜಿಪುಣಗಾತಿಯೂ ಅಲ್ಲ

ನೀ ಬರೀ ಸುರಿಯುವ ಮಳೆ ಹನಿ

ಇನ್ನೊಬ್ಬರ ನೋವು ಕೇೆಳಲು ಬಂದ ಅಳಿಲು (೪೩೧)

ಇಲ್ಲಿ ಸಾಕಿ ಎಂದರೆ ಕವಿಯ ಆತ್ಮವೇ ಆಗಿದೆ.

     ಡಾ.ಜಯದೇವಿಯವರು ಮೇಲೆಯೇ ಹೇಳಿದಂತೆ ಇಲ್ಲಿ ೫೦೦ ರುಬಾಯಿಗಳನ್ನು ಸಂಕಲಿಸಿದ್ದಾರೆ. ಯಾವುದೇ ರಚನೆಗೆ ಶೀರ್ಷಿಕೆ ಇಲ್ಲ. ಅದು ಇರಬೇಕಾಗೂ ಇಲ್ಲ. ರುಬಾಯಿ ಚೌಪದಿಯಂತೆ ಕಂಡರೂ ಅದರ ಲಕ್ಷಣಗಳೇ ಭಿನ್ನ. ಡಿ.ವಿ.ಜಿ ಯವರಿಂದ ಹಿಡಿದು ಡಾ. ಜಯದೇವಿಯವರವರೆಗಿನ ಎಲ್ಲರೂ ಹೇಳುವ ಸರ್ವಸಮ್ಮತ ಲಕ್ಷಣಗಳೆಂದರೆ

೧ ಇದು ನಾಲ್ಕು ಸಾಲಿನ ಪದ್ಯ

೨ ಪ್ರತಿ ಸಾಲಿನಲ್ಲಿ ಇಷ್ಟೇ ಅಕ್ಷರ , ಗಣ ಮಾತ್ರೆಗಳಿರಬೇಕೆಂಬ ನಿಯಮವೇನಿಲ್ಲ .ಆದಷ್ಟೂ ಸಮ

         ಸಾಲುಗಳಿದ್ದರೆ ಉತ್ತಮ

೩ ಪ್ರತಿ ರುಬಾಯಿಯ ಒಂದನೆಯ , ಎರಡನೆಯ, ಮತ್ತು ನಾಲ್ಕನೆಯ ಸಾಲುಗಳು

          ಅಂತ್ಯಪ್ರಾಸವನ್ನು ಒಳಗೊಂಡಿರಬೇಕು

೪ ಮೂರನೆಯ ಸಾಲು ಅಂತ್ಯಪ್ರಾಸ ಇರಬೇಕಾಗಿಲ್ಲ

     ೫ ನಾಲ್ಕು ಸಾಲುಗಳು ಯಾವುದೋ ಒಂದು ವಿಷಯವನ್ನು ವಿವರಿಸಲು ದುಡಿಯುತ್ತವೆ. ಒಂದು

       ಎರಡು ಮೂರು ಸಾಲುಗಳು ದೇಹವಾದರೆ ನಾಲ್ಕನೆಯ ಸಾಲು ರುಬಾಯಿಯ ಪ್ರಾಣ ಎನ್ನುತ್ತಾರೆ. ರುಬಾಯಿ ರಚನೆಯ ಬಗ್ಗೆ ಡಾ.À ಮಲ್ಲಿನಾಥ ತಳವಾರ ಅವರು ಉಲ್ಲೇಖಿಸಿದ ಒಂದು ಮಾತು ಹೀಗಿದೆ. “ಹಿಂದಿ ಗಿತಕಾರ ನೀರಜ್ ಅವರ ಅನುಭವದಂತೆ ರುಬಾಯಿ ರಚನೆಯಲ್ಲಿ ಅದರ ನಾಲ್ಕನೆಯ ಮಿಶ್ರ ಮೊದಲು ಬರೆಯಲ್ಪಡುತ್ತದೆ.ಅಂದರೆ ನಂತರ ಮೂರನೆಯ ಮಿಶ್ರಾ ,ಎರಡನೆಯ ಮಿಶ್ರಾ ಹಾಗೂ ಒಂದನೆಯ ಮಿಶ್ರಾ ಈ ರೀತಿ ಬರೆಯಲ್ಪಡುತ್ತದೆ. ಇನ್ನೂಮುಂದುವರೆದು ಇದಕ್ಕೆ ‘ಉಲ್ಟಿ ಗಂಗಾ’ ಎಂದೂ ಕರೆಯುತ್ತಾರೆ” ಎಂದಿದ್ದಾರೆ. (ಕೃಪೆ ಡಾ.ಮಲ್ಲಿನಾಥ ತಳವಾರ ಅವರ ಫೇಸ್ ಬುಕ್) ಅಂದರೆ ರುಬಾಯಿ ರಚನೆಯಲ್ಲಿ ನಾಲಕನೆಯ ಸಾಲು ಬಹಳ ಮಹತ್ವದ್ದು ಎನ್ನುವದು ಸ್ಪಷ್ಟವಾಗುತ್ತದೆ.

     ಈ ನಿಯಮಗಳನ್ನು ಅನುಸರಿಸಿ ಇಲ್ಲಿನ ರುಬಾಯಿಗಳು ರಚನೆಯಾಗಿವೆ. ಆದರೂ ಅಪರೂಪಕ್ಕೆ ಒಮ್ಮೊಮ್ಮೆ ಈ ಅಂತ್ಯಪ್ರಾಸ ನಿಯಮ ಕಡ್ಡಾಯವಾಗಿ ಅನುಸರಣೆಯಾಗಿಲ್ಲ. ಮೊದ ಮೊದಲು ಪ್ರೀತಿ ಪ್ರೇಮಗಳ ಸುತ್ತ ಸುತ್ತುತ್ತಿದ್ದ ರುಬಾಯಿಗಳಿಗೆ ಸಾಮಾಜಿಕ ಆಯಾಮವನ್ನು ಡಾ. ಜಯದೇವಿಯವರು ನೀಡಿದ್ದಾರೆ. ಅವರ ಪ್ರಕಾರ ಕವಿತೆಯ ಉದ್ದೇಶವೇ ಸªಮಾಜದಲ್ಲಿ ಸಮತೆಯನ್ನು ಉಂಟು ಮಾಡುವದು . ಅದನ್ನು ಪೂರೈಸದಿದ್ದರೆ ಅದು ಕವಿತೆಯಾದರೂ ಹೇಗಾದೀತು? ಎನ್ನುವ ಕವಯಿತ್ರಿ ಅದನ್ನೇ ನೇರವಾಗಿ ಹೇಳಲು ಕವಿತೆಯನ್ನು ಬಳಸಿಕೊಂಡಿದ್ದಾರೆ. ಅವರ ಕಾವ್ಯದ ಉದ್ದೇಶ ಇದು

ಮಳೆ ಕಾಣದೇ ಕವನ ಬರೆಯುವುದು ಹೇಗೆ?

ಕನ್ನಡಿ ಇಲ್ಲದೇ ಮುಖ ನೋಡಿಕೊಳ್ಳುವುದು ಹೇಗೆ

ಕೊಳೆತ ವಿಚಾರಗಳು ಕೊಳೆತವು ಎಂದು ಕರೆಯದಿದ್ದರೆ

ಮನಸ್ಸಿಗೆ ನೆ,ಮ್ಮದಿ ಬರುವುದ ಹೇಗೆ (ರುಬಾಯಿ-೬೭)

ಕವಿಯ ಕೆಲಸ ತಪ್ಪನ್ನು ಇದು ತಪ್ಪು ಎಂದು ಸಾರುವದು. ಆತ ಅದನ್ನೂ ಮಾಡದಿದ್ದರೆ ಅವನ ಕಾವ್ಯ ಕಾವ್ಯವಲ,್ಲ ಕಾವ್ಯದ ಹೆಸರಿನ ನಾಟಕವಷ್ಟೇ ಎನ್ನುವದು ಅವರ ಸ್ಪಷ್ಟ ಅಭಿಪ್ರಾಯ ಇಂಥ ಸಾಮಾಜಿಕ ಎಚ್ಚರ ಇಲ್ಲಿನ ಅನೇಕ ರೂಬಾಯಿಗಳನ್ನು ಪೋಷಿಸಿದೆ. ಅವರ ಕಾವ್ಯ ಆಯ್ದುಕೊಂಡಿರುವದು ಬಡವರ , ದೀನರ ಕಣ್ಣೀರು ಒರೆಸುವ ದಾರಿಯನ್ನು.ಅವರ ಒಂದು ರುಬಾಯಿ ಇದನ್ನು ಸ್ಪಷ್ಟ ಪಡಿಸುತ್ತದೆ. ನಮ್ಮ ಮುಂದೆ ಎರಡು ದಾರಿಗಳಿವೆ. ಇಮತ ಸಂದರ್ಭದಲ್ಲಿ ಕವಿ ತನ್ನ ದಾರಿ ಯಾವುಯದು ಎಂಬುದನ್ನು ಖಂಡಿತವಾಗಿಯೂ ನಿರ್ಧರಿಸಿಕೊಳ್ಳಲೇಬೇಕು.

ಹೇಳು ಸಾಕಿ ನಾವೀಗ ಏನು ಮಾಡೋಣ

ಯಾರೊಂದಿಗೆ ಮಾತನಾಡೋಣ

ಒಂದೆಡೆ ಅರಮನೆ ಮತ್ತೊಂದೆಡೆ ಗುಡಿಸಲು

ಬಾ ಕಣ್ಣಿರು ಒರೆಸುವ ಕೈಗಳು ಆಗೋಣ (೧೧೯)

ಇದು ಲೇಖಕನ ಜವಾಬ್ದಾರಿಯೂ ಹೌದು ನಮ್ಮ ದಾರಿಗಳು ನಿರ್ಧಾರವಾಗದ ಹೊರತು ಕವಿತೆಗೆ ಮಹತ್ವ ಇಲ್ಲ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

  ಸಮಾಜದಲ್ಲಿ ಜನರನ್ನು ವಂಚಿಸುತ್ತ ನಾಯಕರ ಪಾತ್ರ ಹಾಕಿ ಮೋಸ ಮಾಡುವವರನ್ನು ಪುರಸ್ಕರಿಸುವದು ಬೇಡ ಅವರನ್ನು ಧಿಕ್ಕರಿಸೋಣ ಎನ್ನುವ ಅವರ ಒಂದು ರುಬಾಯಿ ಹೀಗಿದೆ.

ನಗುವ ಹೂವಾದರೆ ಶರಣಾಗಿ ಬಿಡೋಣ ಸಾಕಿ

ಕಣ್ಣಿರು ಒರೆಸುವ ಕೈಗಳಾದರೆ ಶರಣು ಅನ್ನೋಣ ಸಾಕಿ

ಹೊಳೆದಾಟಿದ ಮೇಲೆ ದೋಣಿ ಸುಡುವ ಜನ ಮನುಷ್ಯರೇ

ಮಾಡಿದ ಒಳಿತಿಗೆ ಕೃತಜ್ಞತೆ ಹೇಳುವವರಿಗೆ ಶರಣು ಅನ್ನೋಣ ಸಾಕಿ ( ರುಬಾಯಿ-೨)

ಅವರು ನಿಜ್ಕೂ ಜನಸೇವಕರಾದರೆ ಅವರನ್ನು ನಮಿಸೋಣ ಆದರೆ ಅವರದು ನಾಟಕೀಯ ವ್ಯಕ್ತಿತ್ವವಾದರೆ ಅವರನ್ನು ಧಿಕ್ಕರಿಸೋಣ ಎಂಬ ಗಟ್ಟಿ ಧ್ವನಿ ರುಬಾಯಿಯಲ್ಲಿದೆ. ಅಧಿಕಾರಕ್ಕೆ ಬರುವ ಊಸರವಳ್ಳಿ ವ್ಯಕ್ತಿತ್ವವನ್ನು ನಿರೂಪಿಸಲು ‘ಹೊಳೆ ದಾಟಿದ ಮೇಲೆ ಅಂಬಿಗ್ಯಾನ ಮಿಂಡ ‘ ಎಂಬ ಗಾದೆ ಮಾಯತಿನ ಆಶಯವನ್ನು ಬಳಸಿಕೊಂಡಿದ್ದಾರೆ. ಹಗೆಯೇ ಸುತ್ತಲು ತುಂಬಿರುವ ಅಧಿಕಾರದ ಹೆಸರಿನ ದುರುಳತನವನ್ನು ಕಂಡು ರೋಸಿ ಹೋದ ಕವಿಮನ ಅದನ್ನು ಇನ್ನೊಂದು ರುಬಾಯಿಯಲ್ಲಿ

  ಸುತ್ತಲೆಲ್ಲ ಮೋಸದ ಜಲ ಬಿಗಿಯುತ್ತಲೇ ಇದೆ

  ಹೆಜ್ಜೆ ಹೆಜ್ಜೆಗೂ ಸುಳ್ಳಿನ ನಡೆ ಸಾಗುತ್ತಿದೆ ಇಂದು

  ತಪ್ಪು ಮಾಡಿದವರು ಮುಚ್ಚಿ ಹಾಕಿ ಬೀಗುತ್ತಿದ್ದಾರೆ

  ಹೀಗೆಯೇ ಅನಾಚಾರ ಮುಂದುವರಿದರೆ ನ್ಯಾಯ ಎಲ್ಲಿ ಬದುಕುಕುತ್ತದೆ. (ರುಬಾಯಿ-೩)

ಎಂದು ವಿರೋಧಿಸುತ್ತದೆ. ನಾÀಲ್ಕನೆಯ ಸಾಲು ಸಾರುವ ‘ನ್ಯಾಯ ಎಲ್ಲಿ ಬದುಕುತ್ತದೆ’ ಎನ್ನುವ ನಾಲ್ಕನೆಯ ಸಾಲಿನ ಉದ್ದೆಶವನ್ನು ಸಾರಲು ಮೊದಲಿನ ಮೂರು ಸಾಲೂ ದುಡಿಯುತ್ತವೆ. . ಮನುಷ್ಯ ಸರಿಯಾದ ದಾರಿಯಲ್ಲಿ ಬದುಕದಿದ್ದರೆ ಅವನ ಜೀವನವೇ ವ್ಯರ್ಥ ಎನ್ನುವ ಕವಯಿತ್ರಿ

ನೆಮ್ಮದಿಯನ್ನು ಬಿಟ್ಟು ಹೊರಟರೆ ಜನ ಉರಿಯುವ ಕೆಂಡದೆಡೆಗೆ

ಪಾಪದ ಕೊಡ ತುಂಬಿಸಿ ಹೊರಟಿದೆ ಪಾಪದ ಕಡೆಗೆ

ಅಂಗುಲಿ ಮಾಲನಂತೆ ಬದಲಾಗಲೂ ಸಿದ್ದರಿಲ್ಲ ಯಾರೂ

ನೋಡು ಇಗಾಗಲೇ ಮಣ್ನು ತಿಂದು ಹೊರಟಿದ್ದಾರೆ ಮಣ್ಣಿನ ಕಡೆಗೆ ( ರುಬಾಯಿ -೧೧)

ಅನ್ಯಾಯದ ದಾರಿಯಲ್ಲಿ ಉಂಟಾಗುವ ದುರ್ಗತಿಯನ್ನು ಕವಿತೆ ಸೂಚಿಸುತ್ತದೆ. ತಪ್ಪು ಮಾಡಿದವ ಅಂಗುಲಿಮಾಲನAತೆ ಪರಿವರ್ತನಾದರೆ ಜಗತ್ತಿಗೆ ಒಳಿತಾಗುತ್ತದೆ. ಆದರೆ ಅಂಗುಲಿಮಾಲನAತೆ ಇಲ್ಲಿ ಯಾರೂ ಸಿದ್ದರಿಲ್ಲ ಎನ್ನುವ ಕವಿಯತ್ರಿಗೆ ಜಗತ್ತು ಬದಲಾಗಿ ಒಳ್ಳೆಯ ದಾರಿ ಕಡೆಗೆ ನಡೆಯಬೇಕು ಎಂಬ ತಹತಹಿಕೆ ಇದೆ. ಆದರೆ ಹಾಗಾಗದ ಬಗ್ಗೆ ವಿಷಾದವೂ ತುಂಬಿದೆ.

    ಡಾ.ಅಂಬೆಡ್ಕರ ಅವರನ್ನು ಕನ್ನಡ ಕಾವ್ಯ ಸ್ಮರಿಸುತ್ತಲೇ ಬಂದಿದೆ.ಡಾ ಜಯದೇವಿಯವರ ರುಬಾಯಿಗಳ ವಿಶೇಷತೆಯೆಂದರೆ ಇಲ್ಲಿ ಡಾಅಂಬೇಡ್ಕರ್ ಅವರನ್ನು ನೆನಪಿಸುವ ಹಲವು ರುಬಾಯಿಗಳು ಇಲ್ಲಿವೆ. ಅವರು ದುಡಿದ, ಶ್ರಮಪಟ್ಟ ಗಳಿಸಿದ ಸ್ವಾತಂತ್ರö್ಯದ ಬೆಳಕಿನಲ್ಲಿ ನಾವಿದ್ದೇವೆ. ಆದರೆ ಅವರ ತತ್ವಗಳನ್ನು ಗಾಳಿಗೆ ತೂರಿ ನಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವ ಜನರನ್ನು ಕಂಡು ಕವಿಯತ್ರಿಗೆ ಕೋಪ ಬರುತ್ತದೆ. ಅವರ ಹೆಸರನ್ನೂ ಹೇಳದೆ ಅವರನ್ನೆ ಸೂಚಿಸುತ್ತದೆ ರುಬಾಯಿ.

ಅವರು ಹಚ್ಚಿ ಹೋದರು ಸಮಾನತೆಯ ಹಣತೆಯಲ್ಲಿ

ನಾವು ಸುಖದಿಂದ ಮಜ ಮಾಡುತಿರುವೆವುಯಿಲ್ಲಿ

ಅವರು ಹಚ್ಚಿದ ಹಣತೆ ಗೆ ಗಾಳಿ ಬಡೆಯದಂತೆ ಕಾಯಬೇಕು

ಸಣ್ಣ ಕಾಯಿಗಳಿಗೂ ಮೀಸಲಾಗಿಡಬೆಕು ಹಣತೆಗಳೆಲ್ಲಾ (ರುಬಾಯಿ ೧೫)

ಸ್ವಾತಂತ್ರೋತ್ತರ ಭಾರತದ ಶೋಷಿತ ವರ್ಗಕ್ಕೆ ಡಾ.ಅಂಬೇಡ್ಕರ ಅವರ ತ್ಯಾಗ, ಶ್ರಮದ ಬಗ್ಗೆ ಅರಿವೇ ಇಲ್ಲ. ಅವರ ದುಡಿಮೆಯ ಫಲವುಣ್ಣುವ ನಾವು ಆ ದಾರಿಯನ್ನು ಮರೆತು ಮಜಾದ ದಾರಿಯಲ್ಲಿ ಇರುವುದನ್ನು ಕವಿಯತ್ರಿ ಖಂಡಿಸುತ್ತಾರೆ. ಕೃತಜ್ಞತೆಯ ದಾರಿಯನ್ನು ಬಿಟ್ಟು ಕೃತಘ್ನತೆಯ ದಾರಿಯನ್ನು ಹಿಡಿದಿರುವ ಜನಾಂಗವನ್ನು ವಿಡಂಬಿಸುವ ಈ ರುಬಾಯಿ. ಅವರು ಹಚ್ಚಿದ ಸ್ವಾತಂತ್ರ್ಯ , ಸಮಾನತೆ , ಅನ್ಯಾಯದ ವಿರುದ್ಧ ಹೋರಾಡುವ ಗುಣ ಇಂಥವುಗಳನ್ನು ನಾವೂ ಕಾಪಾಡಬೇಕಾಗಿದೆ ಎನ್ನುತ್ತಾರೆ. ಅದನ್ನು ಬಿಟ್ಟು ಅನ್ಯದಾರಿಯಲ್ಲಿ ಸಾಗುವವರು ‘ಮಜಾಕೋರರು’ ಎಂದು ಟೀಕಿಸುತ್ತಾರೆ. ಬಾಬಾಸಾಹೇಬರು ಕಂಡ ಸಮಾನತೆಯ ಕನಸು ಪೂರ್ಣಗೊಳ್ಳಲಿಲ್ಲ ಎಂಬ ವಿಷಾದ ಅಲ್ಲಲ್ಲಿ ಕಾಣುತ್ತಲೇ ಬಂದಿದೆ. ಡಾ.ಸಿದ್ದಲಿಂಗಯ್ಯನವರ ಪ್ರಸಿದ್ಧ ಕವಿತೆಯೊಂದು ಅಂಬೇಡ್ಕರ ಅವರ ವಿಚಾರಗಳು ಕಾರ್ಯರೂಪಕ್ಕೆ ಬಾರದಿರುವದನ್ನು ಸೂಚಿಸುತ್ತ ‘ಮಳೆಯನೇಕೆ ತಾರಲಿಲ್ಲ ಗುಡುಗು ಮಿಂಚು ಅಷ್ಟೆಯ’ ಎಂದು ವಿಷಾಧಿಸಿತ್ತು. ಇಲ್ಲಿಯೂ ಅದೇ ಭಾವ ಇರುವದು ಈ ರುಬಾಯಿಯ ಓದಿನಿಂದ ಗೊತ್ತಾಗುತ್ತದೆ.

ಬಾಬಾಸಾಹೇಬ ನಿನ್ನಂಥವರು

ಈ ನೆಲದಲ್ಲಿ ಸಮಾನತೆಯ ಬೀಜ ಬಿತ್ತಿ ಹೋದರು

ಆದರೆ ಅವು ಬೆಳೆಯಾಗಲು ಬಿಡಲೇ ಇಲ್ಲ

ಈ ರಾಕ್ಷಸರ ಕೈಗೆ ಕೊಳ ಹಾಕುವರು ಯಾರು? (ರುಬಾಯಿ ೫೦)

ಇನ್ನೊಂದು ರುಬಾಯಿಯಲ್ಲಿ

ಬಾಬಾ ಸಾಹೇಬ ನೀ ತಂದ ಸಮಾನತೆ ಮುಗಿಲೇರಿ ಕುಂತಿದೆ

ಈ ಮಣ್ಣಲ್ಲಿ ಬರಿ ಕೊಳಕು ಬೀಜಗಳು ಚಿಗುರುತ್ತಿವೆ ಇಂದು

ಏನೆಂದು ಹೇಳಲಿ ಸುರಿಯುವ ಮಳೆಡಹನಿ ಬೆಂಕಿಯಾಗುತ್ತಿದೆ

ಬಡವರ ಹೊಟ್ಟೆಗೆ ಅನ್ನ ವಿಷವಾಗುತ್ತಿದೆ À (೪೩೨)

ಎನ್ನುವ ವಾಸ್ತವ ಚಿತ್ರಣವಿದೆ. ಇಂದು ಅಂಬೇಡ್ಕರ್ ,ಬುದ್ದ ,ಬಸವ ನಂಥವರು ಕೇವಲ ಭಾಷಣದ ವಸ್ತುಗಳಾಗಿ , ತಮ್ಮ ಅಧಿಕರವನ್ನು ಉಳಿಸಿಕೊಳ್ಲಲು ಅಸ್ತçಗಳಾಗಿ ಬಳಸಿಕೊಂಡಿರುವದು ಕವಯಿತ್ರಿಗೆ ರೋಷ ತಂದಿದೆ. ಈ ಮಹಾತ್ಮರ ನಂತರ ಅವರು ಸಾರಿದ ತತ್ವಗಳು ಗಾಳಿಯಲ್ಲಿ ತೂರಿ ಹೋಗಿ ಇಲ್ಲಿ ಶೋಷಣೆ ನಿತ್ಯ ಸಾಮಾನ್ಯ ಸಂಗತಿಯಾಗಿರುವದು ಕವಿಯತ್ರಿಗೆ ಕಾಡಿದೆ. ಹೀಗಾಗಿ ಸಹಜವಾಗಿ ಆಕ್ರೋಶ ಎದ್ದು ಕಾಣುತ್ತದೆ. ೩೦೮ ನೆಯ ರುಬಾಯಿ “ ಸೂರ್ಯ ಚಂದ್ರ ಬೆಳಕು ಗುಡಿಸಲಿಗೆ ತರಬೇಕು ಎಂದು ಹೋದರು ,ಆದರೆ ಮರೆತು ಹಾಳಾಗಿ ಹೋದರಲ್ಲ ಯಾಕೆ?” ಎಂದು ಕೋಪಗೊಂಡೇ ಕೇಳುತ್ತದೆ. ಈ ಕೋಪ ಸಹಜವೂ ಆಗಿದೆ. ಕಾರಣ ಉತ್ತರ ಮೆಲಿನ ರುಬಾಯಿಯಲ್ಲಿದೆ. “ಈ ಜಗದ ಮನುಷ್ಯರೇಕೆ ಹೇಳುತ್ತಿಲ್ಲ ನೇವೆಲ್ಲ ಒಂದು ಎಂದು” ೩೦೭ ನೆಯ ರುಬಾಯಿ ಪ್ರಶ್ನಿಸಿದೆ. ಕೊಪಕ್ಕೆ ಕಾರಣ ಇಲ್ಲಿದೆ.

ಕನಸುಗಳ ಕೊಲೆ ಮಾಡಿ ಪ್ರಭುಗಳಾಗುತ್ತಾರೆ

ವಿಚಾರಗಳ ಗೋರಿ ಕಟ್ಟಿ ಸಂತರಾಗುತ್ತಾರೆ

ಮಹಾತ್ಮರಿಗೆ ಗುಡಿ ಕಟ್ಟಿ ಮಹಾತ್ಮರಾಗಲು ಹೊರಟಿದ್ದಾರೆ

ಕ್ಷಮಿಸುವುದಿಲ್ಲ ನಿಮಗೆ ಮುಂದಿನ ಪೀಳಿಗೆ ಶಪಿಸುತ್ತಾರೆ. (೩೦೪)

ಇದು ವಾಸ್ತವದಲ್ಲಿ ಅವರ ಕೋಪದ ಮೂಲ. ಇಂದು ಈ ದೇಶದಲ್ಲಿ ನಡೆಯುತ್ತಿರುವ ನಿತ್ಯ ನಡೆಯುತ್ತಿ ರುವ ಮನುಷ್ಯತ್ವದ ಮೇಲಿನ ದಾಳಿಯನ್ನು ಕಂಡು ರೋಸಿ ಹೋದ ಕವಿ ಜೀವ ಹೀಗೆಲ್ಲ ಅಕ್ರೋಶ ತಾಳುವದು ಅನಿವಾರ್ಯವೂ ಆಗುತ್ತದೆ.ಶೋಷಿತ ವಗ್ದ ದುರಂತ ಒಂದು ಬಗೆಯದಾದರೆ ರೈತರ ದುರಂತ ಇನ್ನೊಂದು ಬಗೆಯದು . ನಿಜವಾದ ರೈತ ಅನಾಥನಾದರೆ, ಒಂದುದಿನವೂ ಹೋಲಕ್ಕೆ ಹೊಗದೇ ಊಳದೆ ಇದ್ದವ ನಾನು, ರೈತ, ನಾನು ರೈತನ ಮಗ ಎಂದು ಇಲ್ಲಿ ರೈತನ ವೇಷಹಾಕುತ್ತಿರುವದೂ ಕಾÀಣಿಸುತ್ತಿದೆ. ಅದನ್ನು ಒಂದು ರೂಬಾಯಿ

ಬಿತ್ತದೆ ಬೆಳೆಯದೆ ರೈತರಾದರು

ಉತ್ತಿ ಬಿತ್ತಿ ಜೀತರಾದರು

ಇದು ನೋಡಿ ಮುಗಿಲೆಲ್ಲ ಹರಿದಿದೆ, ನೆಲವೆಲ್ಲ ಬಿರಿದಿದೆ

ದುಡಿಯುವವರು ಹಾÀಲು ಮೊಸರು ಕಾಣದಾದರು (೨೮೩)

ರೈತನ ನಿಜವಾದ ಬದುಕಿನ ಚಿತ್ರ ಇದು . ಇಲ್ಲಿ ಮಳೆ ಹೋಗಿರುವದಕ್ಕೆ, ಬೂಮಿ ಬರಡಾಗಿರುವದಕ್ಕೆ ಬೇರೇನೂ ಕಾರಣ ಬೇಕಿಲ್ಲ, ಇದೇ ಸಾಕಲ್ಲವೇ? ಇದನ್ನೆಲ್ಲ ವಿರೋಧಿಸ ಹೋದವರಿಗೆ ಪೆಟ್ಟು ಖಚಿತ ಏಕೆಂದರೆ ಇಲ್ಲಿ “ತಲೆ ಎತ್ತಿದರೆ ತಲೆಗೆ ಪೆಟ್ಟು , ತುಟಿ ಬಿಚ್ಚಿದರೆ ಬಾಯಿಗೆ ಪೆಟ್ಟು ಕಣ್ಣು ತೆರೆದರೆ ಕಣ್ಣಿಗೆ ಪೆಟ್ಟು, ತಿಳಿಯದಾಗಿದೆ ಶೊಷಣೆಯ ಪೆಟ್ಟು” ಎನ್ನುವ ಸ್ಥಿತಿ ಇದೆ.  

   ಇಲ್ಲಿ ಯಾರು ಯಾರೋ ಬೆಳಗಾಗುವದರೊಳಗೆ ನಾಯಕರಾಗುವದನ್ನು , ಅವನು ದುಷ್ಟ ಕಾರ್ಯ ಗಳನ್ನು ಮಾಡುವದಕ್ಕೆ ಅಧಿಕಾರದ ಮೂಲಕ ಲೈಸೆನ್ಸ ಪಡೆಯುವದ್ನು ದಿಕ್ಕರಿಸುವ ಕವಿಯತ್ರಿ “ ಕಲ್ಲೆಸೆಯುವ ಯುವಕ ನಾಯಕನಾಗುತ್ತಾನೆ ಇಲ್ಲಿ (೪೪)” ಎಂದು ವಿರೋಧಿಸುತ್ತಾತ್ತಾg.É ಸ್ವಾತಂತ್ರö್ಯ ಬಂದರೂ ಈ ದೆಶದಲ್ಲಿ ತನ್ನವರಿಗೆ ಸಿಗಬೇಕಾದ ಸವಲತ್ತು ಸಿಗಲೇ ಇಲ್ಲ ಎನ್ನುವದನ್ನು ದು:ಖಿತರಾಗಿಯೇ “ನನ್ನವರ ಮೈತುಂಬ ಬರಿ ಗಾಯಗಳಿವೆ, ಬರೀ ನೋವಿದೆ. (೫೨)” ಎನ್ನುತ್ತಾರೆ. ಮೌಲ್ಯಗಳು ಇಲ್ಲಿ ಕಡಿಮೆ ಯಾಗುತ್ತಿರುವದಕ್ಕೆ “ಮಾತು, ಕನಸು, ಮಮತೆ, ಪ್ರೀತಿಗೆ ಇಲ್ಲಿ ಬರ ಬಿದ್ದಿದೆ(೬೨)” ಎಂಬಂತಹ ಸಾಲುಗಳು ಸಾಕ್ಷಿಯಾಗಿವೆ.  

      ಅಪ್ಪ ಅವ್ವನನ್ನು ಕವಿಯತ್ರಿ ಕಾಣುವ ರೀತಿ ಇದು . ಅಲ್ಲಿ ನೋವೇ ತುಂಬಿರುವದನ್ನು ಹೇಳಲು ಕವಿಯತ್ರಿ ಮರೆಯುವದಿಲ್ಲ.

ಅವ್ವ ಜಗದ ಮೊದಲ ಸುಂದರ ಕವಿತೆ

ಅಪ್ಪ ಲೋಕದ ಪ್ರೇಮದ ಕಥೆ

ಕವಿತೆ ಕಥೆಗಳು ಸಾಯುವುದೇ ಇಲ್ಲ

ಅವ್ವ ಅಪ್ಪ ಜಗತ್ತಿನ ನೋವಿನ ಕಥೆ ಕವಿತೆ (೩೨೯)

ಅವರ ಬದುಕಿನಲ್ಲಿ ನೋವು ಸಂಕಟಗಳು ಕೊನೆಯಾಗಲೇ ಇಲ್ಲ ಎನ್ನುವದನ್ನು ರುಬಾಯಿ ಧ್ವನಿಸುತ್ತದೆ. ಸಮಾಜದಲ್ಲಿ ನಾವು ಬದುಕಬೇಕಾಗಿರುವ ರೀತಿಯನ್ನು ಅವರ ರುಬಾಯಿ ದರ್ಶಿಸುವದು ಹೀಗೆ.

ಪರರ ನೋವಿಗೆ ಒಂದಿಷ್ಟು ಕಣ್ಣೀರು ಸುರಿಸು

ಅನಾಥ ಮಕ್ಕಳಿಗೆ ಇನಿತು ಹಾಲು ಉಣಿಸು

ದಕ್ಕುವದು ನಿನಗೆ ಮಹಾಜೀವನದ ಸಾರ್ಥಕತೆ  

ಸಾಕಿ ನಮಗೆ ಪೂಜೆ ಪುನಸ್ಕಾರಗಳು ಬೇಕಿಲ್ಲ

ಕುಲಗೋತ್ರ ಧರ್ಮಗಳು ಬೇಕಿಲ್ಲ

ಹೀಗೆ ಅವರ ಕವಿತೆಗೆ ಮಾನವೀಯತೆ ಮುಖ್ಯವಾಗಿದೆ . ಇದು ಕವಿತೆಯ ಉದ್ದೇಶ ಕೂಡ ಹೌದು . ಹೀಗಾಗಿ ಅವರ ರೂಬಾಯಿಗಳು ನಮಗೆ ಮುಖ್ಯ ಎನಿಸುತ್ತವೆ. ಕವಿತೆ ಯಾವುದೆ ಕಾಲದ್ದೇ ಇರಲಿ, ಯಾವುದೇ ತತ್ವ ಸಿದ್ದಾಂತದ್ದೇ ಇರಲಿ ಅದರ ಮೊದಲ ಉದ್ದೆಶವೇ ಇದು. ಇದನ್ನು ಬಿಟ್ಟ ಕವಿತೆಯನ್ನು ಗೌರವಿಸಲಾಗದು. ಮಹಾ ಜೀವನವೆನ್ನುವದು ಯವುದೋ ಮಹಾ ಕಾರ್ಯಗಳಲ್ಲಿ ಇಲ್ಲ. ಹೀಗೆ ಸಹಜವಾಗಿ ತನ್ನ ಸುತ್ತಲಿರುವವರನ್ನು ಪ್ರೀತಿಸುತ್ತಲೇ ಸಹನೆಯಿಂದ ನೋಡುವಲ್ಲಿಯೆ ಇರುವುದು ಎನ್ನುವದನ್ನು ಅವರ ಕವಿತೆ ಸಾರಿದೆ.

    ಇವು ಒಮ್ಮೊಮ್ಮೆ ಕವಯಿತ್ರಿ ತಮ್ಮ ಮನಸ್ಸಿಗೆ ತಾವೇ ಹೇಳಿಕೊಂಡ ಉತ್ತರಗಳು ಎನಿಸುತ್ತದೆ. ಒಂದು ರುಬಾಯಿ ತನಗೆ ತಾನೆ ಹೇಳಿಕೊಂಡಿರುವದು ಹೀಗೆ

ಸಾಕಿ ನಾವು ಯಾರಿಗೆ ಯಾಕೆ ಅಂಜಬೇಕು ಹೇಳು?

ಯಾರಿಗೆ ಯಾಕೆ ಅಳುಕಬೆಕು ಹೇಳು

ಸುಳ್ಳಾಡಿದವರಲ್ಲ ಕದ್ದವರಲ್ಲ ಕೊಲ್ಲಿದವರಲ್ಲ

ಯಾರಿಗೇಕೆ ಜೈ ಅನ್ನಬೇಕು ಹೇಳು (೪೩೭)

ಇದು ಶೋಷಿತ ವರ್ಗ ಇಡೀ ಮನುಕುಲಕ್ಕೆ ಹಾಕಿದ ಪ್ರಶ್ನೆಯಂತಿದೆ. ನಿಜ ಆದರೆ ಉತ್ತರ ಅಷ್ಟು ಸರಳವಲ್ಲ. ಕವಿ ತನ್ನ ಕಾವ್ಯ ಲೋಕದಲ್ಲಿ ತಾನು ಸ್ವತಂತ್ರನಾದರೂ ಆತ ಬದುಕುತ್ತಿರುವದು ಸಮಾಜದಲ್ಲಿ. ಇದು ಕವಯಿತ್ರಿಗೂ ಅರಿವಾಗಿದೆ ಆದ್ದರಿಂದಲೇ “ಆದರೂ ಜಾರಿ ಬೀಳುವ ಗೋಲಿಗಳು ನಾವು” (೪೩೩) ಅವರು ಅರಿತ ಸತ್ಯ ಇದು .

ನನ್ನ ಮಾತೆ ಮನಸ್ಸು ಕೇಳುತ್ತಿಲ್ಲ

ನನ್ನೊಳಗಿನ ಆತಂಕ ಶಾಂತವಾಗಿಲ್ಲ

ಬಿತ್ತಿದ ಬೆಳೆ ಏನಾಯಿತೋ ಗೊತ್ತಿಲ್ಲ

ನನಗಂತೂ ಖಾತ್ರಿಯಾಯ್ತು ಕಳ್ಳ ಮಾತ್ರ ಸತ್ತಿಲ್ಲ (೩೫೮)

     ಕಳ್ಳರು ಸತ್ತಿಲ್ಲ ಆದರೆ ಕೈಗೂ ಸಿಗುತ್ತಿಲ್ಲ ಇದು ಸದ್ಯದ ದುರಂತ .ಇದು ಅವರ ಕವಿತೆ ಕಂಡುಕೊಂಡ ಮತ್ತು ಸಾರಿದ ಸತ್ಯ. ಇಲ್ಲಿ ಕವಯಿತ್ರಿ ಯಾರಿಗೆ ಹೇಳುತ್ತಿದ್ದಾರೆ. ಅವರ ಮನಸ್ಸಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ ಎನಿಸುತ್ತದೆ. ಕವಿತೆ ಯಂದರೆ ಒಮ್ಮೊಮ್ಮೆ ನಮಗೆ ನಾವೆ ಮಾಡಿಕೊಂಡ ಸಾಂತ್ವನ ನಮಗೆ ನಾವೆ ಹೇಳಿಕೊಳ್ಳುವ ಧೈರ್ಯವೂ ಆಗಿರುತ್ತದೆ. ಜೊತೆಗೆ ಅವರ ರುಬಾಯಿಗಳು ಕವಯಿತ್ರಿ ತನ್ನ ದಾರಿಯ ಕುರಿತೂ ಆತ್ಮಾವಲೋಕನ ಮಾಡದೇ ಬಿಟ್ಟಿಲ್ಲ. ಹೇಳುವ ಬರೆಯುವ ನಾವಾದರೂ ಸರಿದಾರಿಯಲ್ಲಿ ದ್ದೇವೆಯೇ? ಎಂದು ಪ್ರಶ್ನಿಸಿಕೊಂಡರೆ ಅದೂ ಇಲ್ಲ ಎನಿಸುತ್ತದೆ. ಬುದ್ಧ ನ ಬಗ್ಗೆ ಮಾತನಾಡುತ್ತೇವೆ ಹೊರತು ಅವನ ದಾರಿಯಲ್ಲಿ ನಡೆಯಲಿಲ್ಲ

ಬುದ್ಧನ ದಾರಿಯಲ್ಲಿ ನಾವು ನಡೆದಿದ್ದರೆ

ಆದಾಗದಿದ್ದರೂ ಇರಲಿ ನೆನಸಿಕೊಂಡರೆ

ಸನಿಹ ಸುಳಿಯುತ್ತಿರಲಿಲ್ಲ

ಜಗಳ ದ್ವೇಷ ಮತ್ಸರ ಬಂದೂಕಿನುತ್ತರ (೨೨೧)

ಹಾಗೂ ಆಗದೆ ನಮ್ಮ ಬದುಕು ನಿರಂತರ ಹಿಂಸೆ ದ್ವೇಷಗಳ ಕೂಪವೇ ಅಗಿರುವದು ಎದ್ದು ಕಾಣಿಸುತ್ತದೆ. ಹಗೆಂದು ಪೂರ್ತಿ ನಿರಾಸೆಯನ್ನೇ ಹೊಂದಬೇಕಿಲ್ಲ. ಅಲ್ಲಲ್ಲಿ ಬೆಳಕು ಕಾಣಿಸಿಕೊಂಡುದನ್ನೂ ಅವರ ಕವಿತೆ ಗುರುತಿಸದೇ ಹೋಗಿಲ್ಲ .ಉದಾಹರಣೆಗೆ ೧೯೧ ನೆಯ ರುಬಾಯಿ

ಸಾಕಿ ಅಮವಾಸ್ಯೆಯ ರಾತ್ರಿಯಲ್ಲಿ

ಲೈಟಿನ ಕಂಬ ಬೆಳಕಾಯಿತು ಕೊಳೆಗೇರಿಯಲ್ಲಿ

ಓದುತ್ತಿದ್ದ ಹುಡುಗ ನಕ್ಕೆ ನಕ್ಕನು

ಮುಖ ಹೂವಾಯಿತು ಆನಂದದಲ್ಲಿ (೧೯೧)  

    ಸರಕಾರ, ಆಡಳಿತ ವ್ಯವಸ್ಥೆ ದಲಿತರ ಬದುಕಿಗೆ ಅವರ ಬೀದಿಗಳಿಗೆ ದೀಪ ಹಾಕಿಸಿದ್ದರಿಂದ ಎಲ್ಲೋ ಒಬ್ಬರು ಅದರ ಲಾಭ ಪಡೆದುದನ್ನು ಅವರು ಗುರುತಿಸದೇ ಹೋಗಿಲ್ಲ.

       ಇಡೀ ಸಂಕಲನ ಸಮಾಜಮುಖಿಯಾದದ್ದೆ ಹೆಚ್ಚು . ವಯಕ್ತಿಕ ಪ್ರೇಮ, ಮೋಹದಂತಹ ವಿಷಯಗಳು ಅಷ್ಟಾಗಿ ಕಾಣಿಸದಿರುವದು ಈ ಸಂಕಲನದ ವಿಶೇಷ.ಆದರೂ ಎಲ್ಲೊ ಒಂದೆಡೆ

ಈ ಹೃದಯವು ಕತ್ತಲು ಮನೆಯು ಸಾಕಿ

ನಡೆ ಸಾಕಿ ದೀಪ ಹಚ್ಚೋಣ ಬೆಳಕು ಕಾಣಲು

ಹಗಲು ರಾತ್ರಿ ನನ್ನ ನಿನ್ನ ದಾರಿಗಳು

ಅಳುತ್ತಲೇ ಸವೆದು ಹೋಗಿವೆ ಏನು ಹೇಳಲಿ(೧೭೮)

ಹೌದು, ಒಮ್ಮೊಮ್ಮೆ ಜೀವನವೇ ದು:ಖದ ದಾರಿಯಾದಾಗ ಮದುರ ಭಾವದ ಆಲಾಪಗಳಿಗೆ ಅವಕಾಶವೆಲ್ಲಿ ? ಅಂತೆಯೇ ಇಲ್ಲಿ ಅಂತ ಸಾಲುಗಲಿಗೆ ಕಡಿಮೆ ಅವಕಾಶವಿದೆ. ಅಂತೆಯೆ ಕವಯಿತ್ರಿ “ಅನುರಾಗದ ಸುಳಿವು ಕಾಣುತ್ತಿಲ್ಲ, ದನಿ ಎತ್ತಿ ಹಾಡಿದರೆ ನಿಲ್ಲಿಸುವ ಹದುಗಳೆ ಹೆಚ್ಚಾಗಿವೆ” (೧೧೮) ಎನ್ನುತ್ತಾರೆ.  

     ಕೆಲವು ರೂಬಾಯಿಗಳಲ್ಲಿ ಬರೀ ಹೇಳಿಕೆಯ ಸ್ವರೂಪ ಪಡೆದಿವೆ ಎನ್ನುªದು ಓದುಗರಿಗೆ ಅನುಭವಕ್ಕೆ ಬರುತ್ತದೆ. ೫೦೦ ರಷ್ಟು ಪದ್ಯ ಒಮ್ಮೆಲೆ ಬರೆಯುವಾಗ ಹೀಗೆ ಆಗುವದು ಸಹಜ, ಒಂದೊಂದು ಸಲ ಹೇಳಬೇಕಾದುದೇ ಮುಂದೆ ಬಂದು ಸೂಚ್ಯತೆ ಹಿಂದೆ ಸರಿಯಬೇಕಾಗುತ್ತದೆ, ಬೋಧನಾತ್ಮಕ ಕಾವ್ಯದ ಗುರಿ ಲೋಕಬೋಧೆಯಾದಾಗ ಕಾವ್ಯ ಹಿಂದೆ ಸರಿಯಬೇಕಾಗುತ್ತದೆ. ಇಲ್ಲಿ ಆಗಿರುವದು ಅದೇ. ಬಹಳಷ್ಟು ಸಲ ವಾಚ್ಯತೆಯೇ ಪ್ರಧಾನ ಆಗಿ ಬಿಡುವದೂ ಉಂಟು. ಅಂತಹ ಕೆಲ ಪದ್ಯಗಳು ಇಲ್ಲಿಯೂ ಇವೆ.ಇವುಗಳ ಬಗ್ಗೆ ಅಷ್ಟು ಗಮನ ಕೊಡಬೇಕಾಗಿಲ್ಲ. ಅಲ್ಲಲ್ಲಿ ಕಾಣಿಸುವ ಅಕ್ಷರ (ಮುದ್ರಣ ದೋಷಗಳ) ದೋಷಗಳ ಕುರಿತೂ ತುಸು ಎಚ್ಚರಿಕೆ ವಹಿಸಬೇಕಿತ್ತು ಎನಿಸುತ್ತದೆ.

      ಡಾ. ಜಯದೇವಿ ಗಾಯಕವಾಡ ಅವರ ಈ ರುಬಾಯಿ ಸಂಕಲನ ಕನ್ನಡದ ಮೊದಲ ಸ್ವತಂತ್ರ ಮತ್ತು ಮಹಿಳೆಯೊಬ್ಬರ ಮೊದಲ ರುಬಾಯಿ ಸಂಕಲನ ಎಂಬ ಅಗ್ಗಳಿಕೆ ಹೊತ್ತಿದೆ. ಕವಿತೆಯನ್ನು ಮಹಿಳೆಯ ಕವಿತೆ, ಪುರುಷನ ಕವಿತೆ ಎಂದು ವರ್ಗೀಕರಿಸುವದು ಅಷ್ಟೇನೂ ಸೂಕ್ತವಲ್ಲವಾದರೂ ಇಂಥದೂ ಒಂದು ನೆಲೆಯಿಂದ ಅಧ್ಯಯನಸಾಧ್ಯತೆ ಇದ್ದೇ ಇದೆ. ಒಂದು ವಿಶಿಷ್ಟ ಸಂಕಲನಕ್ಕಾಗಿ ಅವರಿಗೆ ಇಡೀ ಕನ್ನಡ ಕಾವ್ಯ ಲೋಕ ಋಣಿಯಾಗಿದೆ.

        ಡಾ. ವೈ.ಎಂ.ಯಾಕೊಳ್ಳಿ

    ಕವಿ , ವಿಮರ್ಶಕರು ಸವದತ್ತಿ           ಮೊ-೯೭೩೧೯೭೦೮೫೭