ಚಂದ್ರಕಾಂತ ಕುಸನೂರ

ಚಂದ್ರಕಾಂತ ಕುಸನೂರ

ವಾಚಿಕೆ-5

ಚಂದ್ರಕಾಂತ ಕುಸನೂರ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಪ್ರಕಾಶ ಎಚ್. ಸಂಗಮರವರು ಚಂದ್ರಕಾಂತ ಕುಸನೂರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಚಂದ್ರಕಾಂತ ಕುಸನೂರರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಥೆ, ನಾಟಕ, ಕಾದಂಬರಿ ಸೇರಿದಂತೆ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಚಂದ್ರಕಾಂತ ಕುಸನೂರರ ಶಿಕ್ಷಣ ಹಾಗೂ ಸಾಹಿತ್ಯ ಸಾಧನೆ ಗಮನಾರ್ಹವಾಗಿದೆ. ಅವರು ಬಹುಮಖ ಪ್ರತಿಭೆಯುಳ್ಳ ಲೇಖಕರಾಗಿದ್ದಾರೆ. ನವ್ಯದ ಸಂದರ್ಭದಲ್ಲಿ ಅವರ ಸಾಹಿತ್ಯಕೃಷಿ ಸಮೃದ್ಧವಾಗಿ ಕಾಣಿಸಿಕೊಂಡರೂ ಅವರ ಮನೋಧೋರಣೆ ನವೋದಯದ ಆದರ್ಶ, ರಾಷ್ಟ್ರಪ್ರಜ್ಞೆ ಹಾಗೂ ಪ್ರಜ್ಞಾಪ್ರವಾಹ ತಂತ್ರದ ಎಳೆತ-ಸೆಳೆತದಿಂದ ಕೂಡಿದೆ. ನವ್ಯರ ಗುಣಲಕ್ಷಣಗಳು ಅವರಲ್ಲಿ ಢಾಳವಾಗಿವೆ. ಆದರೆ ಸಮಾಜದ ಅಂತಿಮ ಗುರಿ ಜನರಲ್ಲಿ ವಿಶಾಲ ಭಾವನೆಗಳನ್ನು ಬಿತ್ತಿ ಬೆಳೆಯುವುದು. ಹೀಗಾಗಿ ಅವರು ಬದುಕನ್ನು ಪ್ರೀತಿಸಿದಂತೆ, ಕಲೆಯನ್ನೂ ಪ್ರೀತಿಸಿದರು. ಅವರು ಕೇವಲ ಕವಿ ಮಾತ್ರವಲ್ಲ, ಅವರೊಬ್ಬ ಸಾಹಿತಿ, ವಿದ್ವಾಂಸ, ಚಿತ್ರಕಲೆಗಾರ, ನಾಟಕಕಾರ, ಕಾದಂಬರಿಕಾರ ಹೀಗೆ ಕಾಲಧರ್ಮಕ್ಕೆ ತಕ್ಕಂತೆ ಅವರು ಬೆಳೆದುಬಂದ ಬಗೆ ಅಧ್ಯಯನ ಯೋಗ್ಯವಾಗಿದೆ.

ಇವರ ಮೇಲೆ ದ.ರಾ. ಬೇಂದ್ರೆ, ಶಾಂತರಸ, ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪ್ರಭಾವವಾಗಿದೆ. ಶಾಂತರಸರ ಸಾಹಿತ್ಯ ಕುಸನೂರರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಜಮೀನ್ದಾರಿ ವ್ಯವಸ್ಥೆಯ ವಿರುದ್ಧ, ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಶಾಂತರಸರು ಕಿಡಿ ಕಾರಿದ್ದಾರೆ. ವಂದೇಮಾತರಂ ಅಂದ್ರ ನಿಜಾಂಗ ಯಾಕಿಷ್ಟು ಸಿಟ್ಟು? ಎಂದು ತಮ್ಮ 'ಗುರುಪಾದ ನೀಲಗಂಗಾ ಅವರ ಒಂದು ರೂಪಾಯಿ' ಎಂಬ ಕಥೆಯಲ್ಲಿ ಅಳಲು ತೋಡಿಕೊಂಡ ಶಾಂತರಸರು 'ತಾಯಿಗೆ ಒಂದಿಸಿ ಜೈಲಿಗೆ ಹೋದೆವು' ಎಂಬಲ್ಲಿ ಅವರ ಮನೋ ಧೋರಣೆ ವ್ಯಕ್ತವಾಗಿದೆ. ಅವರು ಬರೆದ 'ಸ್ವಾತಂತ್ರ್ಯವೀರ ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ. 'ರೇಶಮ್ ಕೀ ಗುಡಿಯಾ' ಎಂಬ ಮೊದಲ ಕೃತಿ ಹೊರತಂದರು. ಇವರ ಬರವಣಿಗೆಗೆ ಮಾರು ಹೋದ ಜನ ಇವರಿಗೆ ಬರೆಯಲು ಪ್ರೋತ್ಸಾಹಿಸಿದರು. ಅನುವಾದ, ಸೃಜನಶೀಲ ಹಾಗೂ ಚಿತ್ರಕಲೆ ಸೇರಿದಂತೆ ಚಂದ್ರಕಾಂತ ಕುಸನೂರರ ನಲವತ್ತಕ್ಕೂ ಹೆಚ್ಚು ಕೃತಿಗಳು ಓದುಗರಿಗೆ ಲಭ್ಯವಿವೆ. ಚಂದ್ರಕಾಂತ ಕುಸನೂರರು ಪ್ರಾರಂಭದಲ್ಲಿ 'ನಂದಿಕೋಲು' ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಜಗತ್ತಿಗೆ ಪ್ರವೇಶಿಸಿದರು.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 196 ಪುಟಗಳನ್ನು ಹೊಂದಿದ್ದು 195 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.