ಜಿ.ಬಿ.ವಿಸಾಜಿ
ವಾಚಿಕೆ-8. ಜಿ.ಬಿ.ವಿಸಾಜಿ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ರಾಜಕುಮಾರ ಮಾಳಗೆಯವರು ಜಿ. ಬಿ. ವಿಸಾಜಿಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಜಿ.ಬಿ. ವಿಸಾಜಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟುವುದರ ಜೊತೆ ಸಾಹಿತ್ಯ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ, ಪ್ರವೃತ್ತಿಯಿಂದ ಸಾಹಿತ್ಯದ ಕೃಷಿಯನ್ನು ಮಾಡುತ್ತ ಕಥೆ, ಕಾವ್ಯ, ಸಂಪಾದನೆ, ವಿಮರ್ಶೆ ಹಾಗೆ ಸಾಂಸ್ಕೃತಿಕ ಸಂಘಟನೆ ಸಮಾಜ ಸೇವೆ, ಪತ್ರಿಕಾ ವರಿದಿಗಾರರು, ಸಂಪಾದಕರು ಹೀಗೆ ಹಲವಾರು ವಿಭಾಗದಲ್ಲಿ ತಮ್ಮನ್ನ ತೊಡಗಿಸಿಕೊಂಡು ಬಂದ ಜಿ. ಬಿ. ವಿಸಾಜಿ ಅವರು ಮೂಲತ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಭೀಮರಾವ ವಿಸಾಜಿ ಮತ್ತು ಶ್ರೀಮತಿ ಶಿವಗಂಗಾ ದಂಪತಿಗಳ ಮಗನಾದ ಗುರುಲಿಂಗಪ್ಪ ವಿಸಾಜಿ ಅವರು ಆಳಂದ ತಾಲೂಕಿನ ದೇಗಾಂವ ಗ್ರಾಮದಲ್ಲಿ ದಿನಾಂಕ ೦೫-೦೧-೧೯೪೩ರಂದು ಜನಿಸಿದರು. ಇವರು ಕನ್ನಡ ವಿಷಯದಲ್ಲಿ ಎಂ. ಎ ಮತ್ತು ಪಿಎಚ್.ಡಿ ಪದವಿಯನ್ನು ಪಡೆದು ಭಾಲ್ಕಿ ಚನ್ನಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಬೀದರ ಕನ್ನಡ ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ನೆಲದ ನುಡಿ, ಅನಂತ ಸಂಗಮ, ಮುಂಜಾವು, ಭಾವದಿಂದ ವಿನಯ ಭಂಡಾರಿ, ಚೆಂಬೆಳಕು, ಚಿಂತನಾ ದೀಪಿಕೆ, ಭಾಲ್ಕಿ ತಾಲೂಕು ದರ್ಶನ, ಸಾಹಿತ್ಯ ಅವಲೋಕನ ಸೇರಿದಂತೆ ಕಥೆ, ಕಾವ್ಯ, ಸಂಪಾದನೆ, ವ್ಯಕ್ತಿ ಪರಿಚಯ ಹೀಗೆ ೩೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರರಾಗಿ, ಶಾಂತಿ ಕಿರಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ, ರಾಜೋಳೆ ಸಂಘರ್ಷ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಜಾವಾಣಿಯಲ್ಲಿ ವರದಿಗಾರರಾಗಿ ಸುಮಾರು ೧೫ ವರ್ಷ ಸೇವೆ ಸಲ್ಲಿಸುವುದರೊಂದಿಗೆ ಪತ್ರಿಕಾ ಧರ್ಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಭಾಗದ ಜನರ ನೋವು ನಲಿವು ಯಾತನೆಗಳನ್ನು ಕುಂದು ಕೊರತೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸರಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಭಾಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಹಸ್ತಪ್ರತಿ ಅಭಿಯಾನದಸಂಯೋಜಕರಾಗಿ, ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷರಾಗಿ ಹೀಗೆ ಹಲವು ಸಂಘ ಸಂಸ್ಥೆಗಳ ಮೂಲಕ ಸಾಹಿತ್ಯ ಹಾಗೂ ಸಂಘಟನಾತ್ಮಕ ಕೆಲಸಗಳನ್ನು ಮಾಡಿದ್ದಾರೆ
ಇವರ ಸೇವೆಗೆ ಪ್ರತಿಯಾಗಿ ೧೯೯೩ರಲ್ಲಿ ಬಸವಕಲ್ಯಾಣ ತಾಲೂಕು ೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ೨೦೦೧ನೇ ಸಾಲಿನ ಬೀದರ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ, ಧರಿನಾಡು ಕನ್ನಡ ಸಂಘಟನೆಯಿಂದ ಸುವರ್ಣ ಕನ್ನಡಿಗ ಪ್ರಶಸ್ತಿ, ಬಸವೇಶ್ವರ ಸಂಘದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಚನ್ನಬಸವ ಪಟ್ಟದೇವರು ಪುಸ್ತಕ ಪ್ರಶಸ್ತಿ, ಅಡೈಸರ್ ಪತ್ರಿಕೆಯ ವಚನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಯಿಂದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 184 ಪುಟಗಳನ್ನು ಹೊಂದಿದ್ದು 180 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.