ಉಪರಾಷ್ಟ್ರಪತಿಯ ಸಿ.ಪಿ. ರಾಧಾಕೃಷ್ಣನ್ ನಾಳೆ ಕರ್ನಾಟಕ ಪ್ರವಾಸ

ಉಪರಾಷ್ಟ್ರಪತಿಯ ಸಿ.ಪಿ. ರಾಧಾಕೃಷ್ಣನ್ ನಾಳೆ ಕರ್ನಾಟಕ ಪ್ರವಾಸ

ಉಪರಾಷ್ಟ್ರಪತಿಯ ಸಿ.ಪಿ. ರಾಧಾಕೃಷ್ಣನ್ ನಾಳೆ ಕರ್ನಾಟಕ ಪ್ರವಾಸ

ಶ್ರವಣಬೆಳಗೊಳದಲ್ಲಿ ಬೆಟ್ಟದ ನಾಮಕರಣ, ವಿಗ್ರಹ ಅನಾವರಣ – ಸುತ್ತೂರು ಮಠದ ಘಟಿಕೋತ್ಸವದಲ್ಲೂ ಪಾಲ್ಗೊಳ್ಳುವರು

ಬೆಂಗಳೂರು/ಹಾಸನ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ನಂತರ ನವೆಂಬರ್ 9ರಂದು ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಶ್ರವಣಬೆಳಗೊಳದಲ್ಲಿ ಜರುಗುವ 4ನೇ ಬೆಟ್ಟದ ಪದನಾಮ ಅನಾವರಣ ಮತ್ತು ಆಚಾರ್ಯ ಶ್ರೀ 108ನೇ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶಾಸಕರಾದ ಅಭಯ್ ಪಾಟೀಲ, ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ರಾಜ್ಯಸಭಾ ಸದಸ್ಯ ನವೀನ್ ಜೈನ್ ಹಾಗೂ ಮಹಾರಾಷ್ಟ್ರದ ಶಾಸಕರು ಭಾಗವಹಿಸಲಿದ್ದಾರೆ.

ಉಪರಾಷ್ಟ್ರಪತಿ ಅವರು ಬೆಳಗ್ಗೆ 8:45 ಕ್ಕೆ ಶ್ರವಣಬೆಳಗೊಳದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ.ಸುಧಾಕರ್, ಸಂಸದ ಶ್ರೇಯಸ್ ಪಟೇಲ್ ಹಾಗೂ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಸ್ವಾಗತಿಸಲಿದ್ದಾರೆ. ಬೆಳಗ್ಗೆ 9:05 ಕ್ಕೆ ಉಪರಾಷ್ಟ್ರಪತಿ ಬೆಟ್ಟದ ನಾಮಕರಣ ಮತ್ತು ವಿಗ್ರಹ ಅನಾವರಣ ನೆರವೇರಿಸಲಿದ್ದು, 10:15 ಕ್ಕೆ ಹೆಲಿಕಾಪ್ಟರ್ ಮೂಲಕ ಮುಂದಿನ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಅನಂತರ ಮೈಸೂರಿನ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಅಂಗ ಸಂಸ್ಥೆಯಾದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹದಿನಾರನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಂದೇಶ ನೀಡಲಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಮತ್ತು ಮಂಡ್ಯದ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯಗಳಲ್ಲಿ ಉಪರಾಷ್ಟ್ರಪತಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾನವ ರಹಿತ ಏರ್‌ಕ್ರಾಫ್ಟ್ ಹಾಗೂ ಏರ್ ಬಲೂನ್ ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಆದೇಶ ಹೊರಡಿಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.