ಡಾ. ಪದ್ಮಾಕರ ಅಶೋಕಕುಮಾರ ಎಸ್. ಮಟ್ಟಿ

ಡಾ. ಪದ್ಮಾಕರ ಅಶೋಕಕುಮಾರ ಎಸ್. ಮಟ್ಟಿ

ಡಾ. ಪದ್ಮಾಕರ ಅಶೋಕ ಕುಮಾರ ಎಸ್ ಮಟ್ಟಿ

ಶರಣರ ನಾಡಿನವರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಅವರು ಹುಮನಾಬಾದ (ಇಂದಿನ ಚಿಟಗುಪ್ಪ) ತಾಲೂಕಿನ ಮೀನಕೇರಿ ಗ್ರಾಮದಲ್ಲಿ ಶಿವರಾಜ ಮತ್ತು ಗಂಗಮ್ಮ ಮಟ್ಟಿ ದಂಪತಿಗಳಿಗೆ ಹಿರಿಯ ಮಗನಾಗಿ ದಿನಾಂಕ: ೨೩.೦೭.೧೯೬೭ ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಮುಗಿಸಿ,

ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮನ್ನಾಎಖೇಳಿಯಲ್ಲಿ ಮುಗಿಸಿ, ಬೀದರನ ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ ಪೂರೈಸಿದರು.೧೯೯೧ ರಲ್ಲಿ ಹುಮನಾಬಾದನಲ್ಲಿ ಬಿ.ಎ. ಪದವಿಯನ್ನು ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದರು. ೧೯೯೩ ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿಯಿಂದ ಎಂ.ಎ. ಪದವಿಯನ್ನು, ೧೯೯೪ ರಲ್ಲಿ ಯಶವಂತ ಚಿತ್ತಾಲರ "ಕಥೆಯಾದಳು ಹುಡುಗಿ " ವಿಷಯದ ಮೇಲೆ ಎಂ.ಫಿಲ್ ಪದವಿಯನ್ನು ಹಾಗೂ "ವಚನಕಾರ ಉರಿಲಿಂಗ ಪೆದ್ದಿ" ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಹೆಚ್.ಡಿ ಸಂಶೋಧನ ಪ್ರಬಂಧವನ್ನು ಮಂಡಿಸಿ ೨೦೦೨ ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಡಾ. ಅಶೋಕ ಕುಮಾರ ಎಸ್.ಮಟ್ಟಿ ಅವರು ಬಡತನದಲ್ಲಿ ಹುಟ್ಟಿ ಬೆಳೆದರೂ ಬಡತನವು ಅವರ ವಿದ್ಯಾಭ್ಯಾಸಕ್ಕೆ ಎಂದೂ ಅಡ್ಡಿಯಾಗಲಿಲ್ಲ. ಅವರ ತಂದೆ ತಾಯಿಗಳಿಗೆ ಒಟ್ಟು ಆರು ಜನ ಮಕ್ಕಳು. ಎಲ್ಲರು ಒಳ್ಳೆ ವಿದ್ಯಾಭ್ಯಾಸವನ್ನು ಪಡೆದು ಸರಕಾರಿ ನೌಕರಿಯಲ್ಲಿದ್ದಾರೆ.

ಮನೆಯಲ್ಲಿ ಕಿತ್ತುತಿನ್ನುವ ಬಡತನವಿದ್ದರೂ ಮಟ್ಟಿಯವರ ತಂದೆಯವರು ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಶಾಲೆ ಬಿಡಿಸಲಿಲ್ಲ. ಊರಿನ ಹಿರಿಯರೊಬ್ಬರು ಮಟ್ಟಿಯವರ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಸಾಕಲು ಪಡುತಿದ್ದ ಕಷ್ಟವನ್ನು ನೋಡಲಾರದೆ, ಎಲ್ಲ ಮಕ್ಕಳಿಗೆ ಶಾಲೆಗೆ ಕಳಿಸಿ ಯಾಕೆ ಕಷ್ಟ ಪಡುತ್ತಿಯಾ ನಿನ್ನ ಹಿರಿಯ ಮಗನಿಗೆ ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚು ನಿನ್ನ ಕಷ್ಟಗಳೆಲ್ಲ ಪರಿಹಾರವಾಗುತ್ತವೆ ಎಂದು ಹೇಳುತ್ತಿದ್ದರು. ಆದರೆ ಮಟ್ಟಿಯವರ ತಂದೆಯವರು ಆ ಹಿರಿಯರ ಮಾತಿನ ಕಡೆಗೆ ಗಮನ ಕೊಡದೆ ಬಂದ ಕಷ್ಟವೆಲ್ಲ ತಾವೇ ಅನುಭವಿಸಿದರು. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದೆಂದು ಎಲ್ಲ ಮಕ್ಕಳಿಗೂ ಶಾಲೆ ಕಲಿಸಿದರು. ಅದರ ಫಲವೇ ಇವತ್ತು ಡಾ. ಅಶೋಕ ಕುಮಾರ ಎಸ್.ಮಟ್ಟಿ ಅವರು ಉನ್ನತ ವಿದ್ಯಾಭ್ಯಾಸ ಮಾಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯಾಸಕ್ತರಾದ ಡಾ. ಅಶೋಕ ಕುಮಾರ ಎಸ್.ಮಟ್ಟಿ ಅವರು ಕಲಿಕೆಯಲ್ಲಷ್ಟೆ ಅಲ್ಲ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಎಲೆ ಮರೆ ಕಾಯಿಯಂತಿರುವ ಮಟ್ಟಿಯವರು ಕಾವ್ಯ ಕಾರಂಜಿ ಕವನ ಮಾಲಿಕೆಯಲ್ಲಿ ದಿನಕ್ಕೊಂದು ಹೊಸ ಕವನ ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಮೌಲಿಕ ಕೊಡುಗೆಯನ್ನು ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಕವಿಗಳ ಸಾಲಿನಲ್ಲಿ ಮಟ್ಟಿಯವರು ಪ್ರಸಿದ್ಧ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕವನಗಳ ಮೂಲಕ ಓದುಗರ ಮನ ಗೆದ್ದ ಮಟ್ಟಿಯವರಿಗೆ ನಾಡಿನ ಉದ್ದಗಲಕ್ಕೂ ಅಭಿಮಾನಿಗಳಿದ್ದಾರೆ. ದೇಶದ ಮೂಲೆ ಮೂಲೆಗೂ ಅವರ ಕವನಗಳ ಕಂಪು ಪಸರಿಸಿದೆ.

ಡಾ. ಅಶೋಕ ಕುಮಾರ ಎಸ್ ಮಟ್ಟಿ ಅವರ ವಚನಕಾರ ಉರಿಲಿಂಗ ಪೆದ್ದಿ ಎಂಬ ಸಂಶೋಧನ ಪ್ರಬಂಧವು ಗ್ರಂಥ ರೂಪವಾಗಿ ಪ್ರಕಟಗೊಂಡಿದೆ. ಜೊತೆಗೆ ಜನಪದ ಸಾಹಿತ್ಯ ಎಂಬ ಸಂಪಾದಿತ ಕೃತಿಯು ಗುಲಬರ್ಗಾ ವಿಶ್ವವಿದ್ಯಾಲಯದ ಬಿ. ಎ. ತರಗತಿಗೆ ಪಠ್ಯ ಪುಸ್ತಕವಾಗಿದೆ.ಸಾಹಿತ್ಯಾಸಕ್ತರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಅವರು ದೃಷ್ಟಿ ಬೊಟ್ಟು,ತ್ಯಾಗ ಜೀವಿ, ಕರುಳ ಬಳ್ಳಿ, ಆಸೆಯ ಬೆನ್ನೇರಿ,ಬೆಳಗುವ ದೀಪ, ಕಾವ್ಯ ಕಾರಂಜಿ, ಭಾವ ಬಿಂಬ, ಬೆಳ್ಳಿ ಚಿತ್ತಾರ, ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ, ಅಪ್ಪನ ನೆನಪು ಹಾಗೂ ಹರಕೆಯ ಕುರಿ,ಎಂಬ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಮಟ್ಟಿಯವರು ಸಾಹಿತ್ಯ ಕೃತಿಗಳನ್ನು ರಚಿಸಿರುವುದರ ಜೊತೆಗೆ ಕಥೆ, ಕವನ, ನಾಟಕ ಹಾಗೂ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಅನೇಕ ಕಥೆ, ಕವನ ಹಾಗೂ ಲೇಖನಗಳು ನಾಡಿನ ವಿವಿಧ ಕನ್ನಡ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬೇರೆ ಬೇರೆ ಲೇಖಕರು ಸಂಪಾದನೆ ಮಾಡಿರುವ ಗ್ರಂಥಗಳಲ್ಲಿಯೂ ಸಹ ಇವರ ಕವನ ಮತ್ತು ಲೇಖನಗಳು ಪ್ರಕಟವಾಗಿವೆ. ದಿನಕ್ಕೊಂದು ಹೊಸ ಕವನ ಮಾಲಿಕೆಯಲ್ಲಿ ಪ್ರತಿ ದಿನಕ್ಕೊಂದು ಹೊಸ ಕವನ ಬರೆದು ಇಲ್ಲಿವರೆಗೆ ಸಾವಿರ ಕವನಗಳ ಗಡಿ ದಾಟಿದ್ದಾರೆ. ಕಾವ್ಯ ಕಾರಂಜಿ ಕವನ ಮಾಲಿಕೆಯಲ್ಲಿ ನಿರಂತರವಾಗಿ ದಿನಕ್ಕೊಂದು ಹೊಸ ಕವನ ಬರೆಯುತ್ತಲೆ ಇದ್ದಾರೆ. ಡಾ. ಅಶೋಕ ಕುಮಾರ ಎಸ್ ಮಟ್ಟಿಯವರ "ಅರಿದೊಡೆ ಶರಣ ಮರೆದೊಡೆ ಮಾನವ" "ಶ್ರೀ ಶಾಂತವೀರ ಮಹಾಸ್ವಾಮಿಗಳು ಮತ್ತು ಶಿವಯೋಗ" "ಉರಿಲಿಂಗ ಪೆದ್ದಿಗಳ ಜೀವನ ಸಾಧನೆ ಮತ್ತು ಪವಾಡಗಳು" "ಶರಣರ ಸಾಮಾಜಿಕ ಜಾಗೃತಿ" "ಶ್ರೀ ಶಾಂತವೀರ ಮಹಾಸ್ವಾಮಿಗಳ ಆಧ್ಯಾತ್ಮಿಕ ಸಾಧನೆ ಮತ್ತು ಪವಾಡಗಳು" "ಉರಿಲಿಂಗ ಪೆದ್ದಿಗಳ ದೃಷ್ಟಿಯಲ್ಲಿ ಶಿವಯೋಗ" "ಕನಕ ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ವಿಡಂಬನೆ" "ವಿಶ್ವಾರಾಧ್ಯರ ಆಧ್ಯಾತ್ಮಿಕ ಸಾಧನೆ ಮತ್ತು ಶಿವಾನುಭವ" "ದೇವರ ದಾಸಿಮ್ಯನವರು ವಚನಗಳಲ್ಲಿ ಶಿವ ಭಕ್ತಿ ಚಿಂತನೆ" "ಕನ್ನಡ ನವ್ಯ ನಾಟಕಗಳಲ್ಲಿ ದಲಿತ ಸಂವೇದನೆಗಳು" "ಪುತಿನ ಅವರ ಕಾವ್ಯ ಮೀಮಾಂಸೆಯ ಒಳನೋಟಗಳು" "ಜಿ. ಎಸ್. ಶಿವರುದ್ರಪ್ಪ ನವರ ಕವಿತೆಗಳಲ್ಲಿ ಪ್ರೀತಿ ಸ್ನೇಹಗಳ ನೆಲೆಗಳು" ಎಂಬ ಲೇಖನಗಳು ಅಂತರ್ ರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.

ಡಾ. ಅಶೋಕ ಕುಮಾರ ಎಸ್ ಮಟ್ಟಿ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಚಿತ್ರದುರ್ಗದ ಮುರುಘಾ ಮಠ ಕೊಡಮಾಡುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಮತ್ತು ಶಿಕ್ಷಕ ಶ್ರೀ ಪ್ರಶಸ್ತಿಗಳು ಹಾಗೂ ಬೇಲೂರು ಉರಿಲಿಂಗ ಪೆದ್ದಿ ಮಠದ ವತಿಯಿಂದ ಕರುನಾಡ ಸಿರಿ ರಾಜ್ಯ ಪ್ರಶಸ್ತಿ, ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಪಾಳ ವತಿಯಿಂದ ಕೊಡಮಾಡುವ ರಾಷ್ಟ್ರೀಯ "ಬಸವ ಪ್ರಶಸ್ತಿ", "ದೇವನಾಂ ಪ್ರಿಯ" ರಾಜ್ಯ ಮಟ್ಟದ ಪ್ರಶಸ್ತಿ, ಕನ್ನಡ ಕಥಾ ಗುಚ್ಛ ಬಳಗದ ವತಿಯಿಂದ

"ಅತ್ಯುತ್ತಮ ಕವಿ ಪ್ರಶಸ್ತಿ", ಗುಲಬರ್ಗಾ ವಿಶ್ವವಿದ್ಯಾಲಯದ "ರಾಜ್ಯೋತ್ಸವ ಪ್ರಶಸ್ತಿ", ಯಾದಗಿರಿ ಜಿಲ್ಲಾಡಳಿತ ವತಿಯಿಂದ ಜಿಲ್ಲಾಮಟ್ಟದ "ಡಾ. ಬಾಬು ಜಗಜೀವನ ರಾಂ ಪ್ರಶಸ್ತಿ", ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವ ದೆಹಲಿ ವತಿಯಿಂದ "ಡಾ. ಅಂಬೇಡ್ಕರ ಫೆಲೋಶಿಪ್ ನ್ಯಾಷನಲ್ ಅವಾರ್ಡ್", ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ರಾಜ್ಯ ಮಟ್ಟದ "ಸಾಹಿತ್ಯ ಸಾರಥಿ ಪ್ರಶಸ್ತಿ", "ಆದರ್ಶ ಸಾಹಿತ್ಯ ದಂಪತಿ" ರಾಜ್ಯ ಮಟ್ಟದ ಪ್ರಶಸ್ತಿ, "ನ್ಯಾಷನಲ್ ಐಕಾನ್ ಅವಾರ್ಡ್" ಹಾಗೂ ರಾಜ್ಯ ಮಟ್ಟದ "ಕವಿ ವಿಭೂಷಣ" ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಡಾ. ಅಶೋಕ ಕುಮಾರ ಎಸ್ ಮಟ್ಟಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಿದ್ದಾರೆ. ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಹಳಕಟ್ಟಿ ಸಾಹಿತ್ಯ ಬಳಗದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ 

ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಹಾಗೂ 

 ಗುಲಬರ್ಗಾ ವಿಶ್ವವಿದ್ಯಾಲಯದ ಪಿಎಚ್. ಡಿ ಸಂಶೋಧನ ಮಾರ್ಗದರ್ಶಕರಾಗಿ ಅನೇಕ ಜನ ಪಿಎಚ್. ಡಿ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲದೇ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ತಮ್ಮ ಶಿಷ್ಯ ಬಳಗಕ್ಕೆ ನೆಚ್ಚಿನ ಮಟ್ಟಿ ಮೇಷ್ಟರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಪ್ರಸ್ತುತ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

                          ಡಾ. ಶಾಂತಪ್ಪ ಡಂಬಾಳ

               ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಂಪಿ.

ಬ‌ಸವ ಪುರಸ್ಕಾರ ಪಡೆದ ಚಿತ್ರ