ಮಾಧುರಿ ದೇಶಪಾಂಡೆ -ಸಾಹಿತ್ಯದ ನಕ್ಷತ್ರ

ಮಾಧುರಿ ದೇಶಪಾಂಡೆ -ಸಾಹಿತ್ಯದ ನಕ್ಷತ್ರ

ಮಾಧುರಿ ದೇಶಪಾಂಡೆ -ಸಾಹಿತ್ಯದ ನಕ್ಷತ್ರ 

ಬೆಂಗಳೂರು:ಅನುವಾದ ಕ್ಷೇತ್ರದಲ್ಲಿ ನಿಖರತೆ, ಸಾಹಿತ್ಯದಲ್ಲಿ ನೈಜ ಭಾವನೆ ಮತ್ತು ಸಂಘಟನೆಯಲ್ಲಿ ನಿಸ್ವಾರ್ಥ ಸೇವೆಯನ್ನು ತೋರಿದ ಮಾಧುರಿ ದೇಶಪಾಂಡೆ.

ಮೂಲತಃ ವಿಜಯಪುರ ಜಿಲ್ಲೆಯವರಾದ ಮಾಧುರಿ ದೇಶಪಾಂಡೆ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಿಂದ ಅನುವಾದಕರಾಗಿದ್ದು, ಪ್ರವೃತ್ತಿಯಿಂದ “ಮಾಧುರಿ” ಎಂಬ ಕಾವ್ಯನಾಮದಲ್ಲಿ ಸಾಹಿತ್ಯಸಾಧನೆ ನಡೆಸುತ್ತಿರುವ ಅವರು ಕನ್ನಡದ ಪ್ರೇಮಿಯಾಗಿ ಖ್ಯಾತರಾಗಿದ್ದಾರೆ.

 ಸಾಹಿತ್ಯ ಸೇವೆ

ಮಾಧುರಿ ದೇಶಪಾಂಡೆ ಅವರ ಸಾಹಿತ್ಯ ಸೃಜನಶೀಲತೆ ವೈವಿಧ್ಯಮಯವಾಗಿದೆ. ಅವರ ಕೃತಿಗಳಲ್ಲಿ ಮಾತೃತ್ವ ಮತ್ತು ಇತರ ಕಥೆಗಳು ,ಪರಿವರ್ತನೆ ಮತ್ತು ಇತರ ಕಥೆಗಳು,ಕಾದಂಬರಿ ಮತ್ತು ಇತರ ಕಥೆಗಳು, ಕಥಾರಂಜಿನಿ ಎಂ ಮುಂತಾದ ಕಥಾಸಂಕಲನಗಳು ಹಾಗೂ ಕವನ ಝರಿ ಎಂಬ ಕವನ ಸಂಕಲನ ಪ್ರಖ್ಯಾತಿ ಪಡೆದಿವೆ.

ಅವರ ಕಾದಂಬರಿಯಾದ ಬಾಂಧವ್ಯ ವಾಚಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇವರ ಅನುವಾದಿತ ಕೃತಿಗಳಲ್ಲಿ ಮುನ್ಶಿ ಪ್ರೇಮಚಂದ್ ಅವರ ಪ್ರೇಮ, ಜಯಶಂಕರ ಪ್ರಸಾದ್ ಅವರ ಚಂದ್ರಗುಪ್ತ ನಾಟಕ, ವಿನೋಬಾ ಭಾವೆಯ ಋಗ್ವೇದದ ಆಯ್ದ ಶ್ಲೋಕಗಳ ಕನ್ನಡಾನುವಾದ ಪ್ರಮುಖವಾಗಿವೆ.

ಮಾಧುರಿ ದೇಶಪಾಂಡೆ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಸಂವಿಧಾನದ ಕರಡು ಪ್ರತಿಯ ಆಂಗ್ಲ ಆವೃತ್ತಿಯನ್ನು ಕನ್ನಡಕ್ಕೆ ಅನುವಾದಿಸಿದ ಸಾಧನೆಗೈದಿದ್ದಾರೆ.

KHPT,IHAT, ಹಾಗೂ ಕರ್ನಾಟಕ ಸೌಹಾರ್ದ ಕೋಆಪರೇಟಿವ್ ಸಂಸ್ಥೆಗಳಿಗೆ ಅನೇಕ ಮಾರ್ಗಸೂಚಿ ಪುಸ್ತಕಗಳನ್ನು ರೂಪಿಸಿದ್ದಾರೆ. ಧರ್ಮ ಪಾಲ್ ಅವರ British Origin of Cow Slaughter ಪುಸ್ತಕದ ಆಯ್ದ ಪುಟಗಳನ್ನೂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕಾನೂನು ನೋಟಿಸ್‌ಗಳು, ಮೊಕದ್ದಮೆ ದಾಖಲೆಗಳು ಹಾಗೂ ಪತ್ರಿಕಾ ಪ್ರಕಟಣೆಗಳ ಅನುವಾದದ ಕ್ಷೇತ್ರದಲ್ಲೂ ಅವರು ನಿಖರತೆ ಮತ್ತು ಶುದ್ಧತೆಗೆ ಖ್ಯಾತರಾಗಿದ್ದಾರೆ.

 ಪತ್ರಿಕಾ ಬರಹ ಮತ್ತು ಅಂಕಣಗಳು

ಪತ್ರಿಕಾ ಅಂಕಣಕಾರ್ತಿಯಾಗಿ ಮಾಧುರಿ ದೇಶಪಾಂಡೆ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ “ಹಿತ್ತಲ ಮದ್ದು” ಎಂಬ ಆರೋಗ್ಯ–ಆಹಾರ ಸರಣಿ 135 ಕಂತುಗಳಲ್ಲಿ ಪ್ರಕಟಗೊಂಡಿದ್ದು ಜನಪ್ರಿಯವಾಗಿದೆ.

ಇಂದು ಸಂಜೆ ಪತ್ರಿಕೆಯಲ್ಲಿ ಪ್ರತಿದಿನ “ಸುವಿಚಾರ” ಅಂಕಣ ನೀಡುತ್ತಿರುವ ಅವರು, ವಿಶ್ವವಾಣಿ,ಸಂಯುಕ್ತ ಕರ್ನಾಟಕ,ಸಪ್ತಗಿರಿ,ಶ್ರೀ ಶೈಲಪ್ರಭ,ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಿದ್ದಾರೆ.

* ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ (2012)

* ಬುದ್ಧ ಬಸವ ಗಾಂಧಿ ಪ್ರತಿಷ್ಠಾನದ ದತ್ತಿ ಪ್ರಶಸ್ತಿ (2020)

* ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತದ ಮಹಿಳಾ ಸಾಧಕಿ ಪ್ರಶಸ್ತಿ (2023) ಸಂದಿವೆ 

ಮಾಧುರಿ ದೇಶಪಾಂಡೆ ಅವರು ಸಾಹಿತ್ಯ ಗೋಷ್ಠಿ, ಕಾವ್ಯ ವಾಚನ, ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಕನ್ನಡಾಭಿಮಾನಿ ಸಂಘಟಕರೂ ಆಗಿದ್ದಾರೆ.