ಡಾ.ಪ್ರೇಮಾ ಅಪಚಂದ
ಡಾ. ಪ್ರೇಮಾ ಅಪಚಂದ
ಕಲ್ಯಾಣ ಕರ್ನಾಟಕದ ಮಹಿಳಾ ಯುವ ಸಾಹಿತಿಗಳ ಹೆಸರಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಡಾ. ಪ್ರೇಮಾ ಅಪಚಂದ. ಇವರು ರಾಜೇಂದ್ರಪ್ಪ ಹಾಗೂ ತಿಪ್ಪಮ್ಮ ದಂಪತಿಗಳಿಗೆ ಜುಲೈ 24, 1981 ರಲ್ಲಿ ಜನಿಸಿದರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತರ ಪದವಿಯನ್ನು ಪಡೆದು ನಂತರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹೈದರಾಬಾದ್ ಕರ್ನಾಟಕದ ಮಹಿಳಾ ಕಾವ್ಯ ಎಂಬ ವಿಷಯದಲ್ಲಿ ಪಿ. ಎಚ್. ಡಿ. ಪದವಿ ಪಡೆದರು.
ಪ್ರೇಮಾ ಅಪಚಂದ ಅವರು ನಾಗಾವಿ, ಚುಟುಗುಪ್ಪ, ಕಲ್ಬುರ್ಗಿಗಳ ಹಲವಾರು ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬರವಣಿಗೆಯನ್ನು ಮೆಚ್ಚಿಕೊಂಡಿರುವ ಇವರು ಕನ್ನಡ ಸಾರಸತ್ವ ಲೋಕಕ್ಕೆ ಹಲವಾರು ಕೃತಿಗಳನ್ನು ನೀಡಿ ಕಲಬುರಗಿ ಅಷ್ಟೇ ಅಲ್ಲ ನಾಡಿನ ಬಹುತೇಕ ಮಹಿಳಾ ಕವಯಿತ್ರಿ ಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಪ್ರೇಮಾ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಹಾಗೂ ಅದರ ಮೇರುತನದ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿ ವಿದ್ಯಾರ್ಥಿಗಳ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.
ಶೈಲಜಾ ಉಡಚಣರ ಕವಿತೆಗಳಲ್ಲಿ ಸ್ತ್ರೀ ಸಂವೇದನೆ, ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ, ವಿಜಯಶ್ರೀ ಸಬರದ ಕವಿತೆಗಳಲ್ಲಿ ಸಾಮಾಜಿಕ ಪ್ರಜ್ಞೆ, ಶೂದ್ರ ವಚನಗಾರ್ತಿಯರು ಒಂದು ಅಧ್ಯಯನ, ಕನ್ನಡ ಕಾವ್ಯದ ಸಲೆ ಡಾ. ಶೈಲಜಾ ಉಡಚಣ, ಅನುಭವ ಮಂಟಪದಲ್ಲಿ ಸ್ತ್ರೀ ಚಿಂತನೆ, ಮಹಿಳೆ ಅಂದು ಇಂದು, ಕಲ್ಬುರ್ಗಿ ಮಹಿಳಾ ಸಾಹಿತ್ಯ, ಜನಪದರಲ್ಲಿ ಮಾತೃತ್ವದ ಪರಿಕಲ್ಪನೆ, ಕಲಬುರ್ಗಿ ಸಾಹಿತ್ಯ ಸಮೀಕ್ಷೆ, ವಚನ ಸಾಹಿತ್ಯದಲ್ಲಿ ಜಾತಿ ಪದ್ಧತಿ, ಬೀದರ್ ಜಿಲ್ಲೆಯ ಒಕ್ಕಲಿಗನ ಹಾಡು, ಕಾಳವ್ವೆ ವಚನದಲ್ಲಿ ದಲಿತ ಸಂವೇದನೆ, ಸಾಮಾಜಿಕ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಪಾತ್ರ, ಕಲಬುರ್ಗಿ ತಾಲೂಕಿನ ಸಾಹಿತಿಗಳು ಹೀಗೆ ನೂರಾರು ಲೇಖನಗಳನ್ನು ಬರೆದು ಸಾಹಿತ್ಯ ಸೇವೆಯನ್ನು ಗೈಯ್ದಿದ್ದಾರೆ.
ಲಿಂಗ ವ್ಯವಸ್ಥೆಯ ಸಂಕಥನ, ಬಿಸಿಲ ನಾಡಿನ ಮಹಿಳಾ ಕಾವ್ಯ, ನಲಿವಿನಂಗಳದಲ್ಲಿ ನೂರೆಂಟು ನೋವುಗಳು, ಛಂದದ ಛಂದಸ್ಸು ಸಂಕ್ಷಿಪ್ತ ಅವಲೋಕನ ವಲೋಕನ, ಅಂತರಂಗ ಅರುಹಿದಾಗ, ಸಮಾನತೆಯೆಡೆಗೆ ಒಂದು ನಡಿಗೆ, ಸುಭೋದ ರಾಮರಾಯರ ಜೀವನ ಸಾಧನೆ , ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ, ಸಾಹಿತ್ಯ ಸಮ್ಮಿಲನ, ಹೊನಲ ಹೊತ್ತಿಗೆ, ಕರ್ನಾಟಕ ಕಾದಂಬರಿ ಒಂದು ಸಂಕ್ಷಿಪ್ತ ಅವಲೋಕನ, ಪ್ರತಿಬಿಂಬ, ಮಾನಿನಿ ಹಾಗೂ ಅಚ್ಚು ಬೆಲ್ಲ ಹೀಗೆ ಹಲವಾರು ವಿಭಿನ್ನ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಪ್ರೇಮಾ ಅಪಚಂದ ಅವರು ಬಹಳಷ್ಟು ದೂರ ದೃಷ್ಟಿಯುಳ್ಳ ಸಾಹಿತಿಯಾಗಿದ್ದಾರೆ. ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ರಂಗಭೂಮಿಯ ಕುರಿತು ಚಿಂತನೆಯುಳ್ಳವರು ಇವರಾಗಿದ್ದು, ಹೈದ್ರಾಬಾದ್ ಕರ್ನಾಟಕದ ಆಧುನಿಕ ರಂಗಭೂಮಿ ಕುರಿತು ಕಾರ್ಯಯೋಜನೆಯಲ್ಲಿ ಸಂಶೋಧನಾ ಸಹಾಯಕಿಯಾಗಿ ಹಾಗೂ ಬೀದರ್ ಜಿಲ್ಲೆಯ ಮಹಿಳಾ ಕಾವ್ಯ ಎಂಬ ವಿಷಯದ ಕುರಿತು ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಈ ಭಾಗದ ಸಾಹಿತಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಮೆರೆದಿದ್ದಾರೆ.
ಶಾಸ್ತ್ರೀಯ ಭಾಷೆ ಮತ್ತು ಪ್ರಸ್ತುತ ಸವಾಲುಗಳು, mother concept in literature, ಗೀತಾ ನಾಗಭೂಷಣರ ದುಮ್ಮಸ್ಸು ಕಾದಂಬರಿಯಲ್ಲಿ ಮಹಿಳಾ ಸಂಘರ್ಷ ಎಂಬ ಶೀರ್ಷಿಕೆ ಅಡಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ, ಕರ್ನಾಟಕದಲ್ಲಿ ಮಹಿಳಾ ಅಧ್ಯಯನ ಸಮ್ಮೇಳನಗಳು, ವಚನ ಚಳುವಳಿಗಳಲ್ಲಿ ಜಾತಿ ಮತ್ತು ಮಹಿಳಾ ಪ್ರತಿನಿಧಿಕರಣ, ಬುದ್ಧ, ಬಸವ, ಅಂಬೇಡ್ಕರ್ ದೃಷ್ಟಿಯಲ್ಲಿ ಸ್ತ್ರೀ ಸ್ವಾತಂತ್ರ್ಯತೆ, ಕಣ್ಮರೆ ಅಂಚಿನಲ್ಲಿ ಸೂತ್ರದ ಬೊಂಬೆಯಾಟ, ಹೊಸ ತಲೆಮಾರಿನ ಕವಯತ್ರಿಯರು, ಬದುಕು ಕಾದಂಬರಿಯಲ್ಲಿ ಮಹಿಳಾ ಪ್ರತಿನಿಧಿಕರಣ, ಮಹಿಳೆ ಮತ್ತು ಆರ್ಥಿಕ ಸಬಲೀಕರಣ, ಮಹಮ್ಮದ್ ಗವಾನನ ಶೈಕ್ಷಣಿಕ ಕೊಡುಗೆ, ಕನ್ನಡ ಸಾಹಿತ್ಯಕ್ಕೆ ಅಮೋಘ ವರ್ಷನ ಕೊಡುಗೆ, ಡಾ. ಬಿ. ಆರ್. ಅಂಬೇಡ್ಕರ್ ದೃಷ್ಟಿಯಲ್ಲಿ ಶ್ರೀ ಚಿಂತನೆ, ಕಾಳವ್ವೆಯ ವಚನದಲ್ಲಿ ದಲಿತ ಸಂವೇದನೆ, ದಲಿತ ವಚನಗಾರ್ತಿಯರಲ್ಲಿ ಸಮಾನತೆ, ದಾಸ ಸಾಹಿತ್ಯದಲ್ಲಿ ಕೂಟಗಳ ಪರಿಕಲ್ಪನೆ, ಉತ್ತರ ಕರ್ನಾಟಕದ ರಂಗಭೂಮಿ ಸಬಲೀಕರಣಕ್ಕೆ ಮಹಿಳೆಯರ ಪಾತ್ರ, ಬೌದ್ಧ ಧರ್ಮ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ದೃಷ್ಟಿಕೋನ, ಜಾನಪದ ಮಹಾಕಾವ್ಯಗಳಲ್ಲಿ ವಿವಾಹ ಒಂದು ಅವಲೋಕನ ಎಂಬ ವಿಷಯಗಳ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧಗಳನ್ನು ಮಂಡನೆ ಮಾಡಿದ್ದಾರೆ.
ಪ್ರೇಮಾ ಅಪಚಂದ ಇವರು ಲೇಖನಗಳನ್ನು ಉಪನ್ಯಾಸಗಳನ್ನು ಹಾಗೂ ಇನ್ನಿತರ ಅವರ ಸಾಹಿತ್ಯ ಬದುಕನ್ನು ನೋಡಿದಾಗ ಯಾವತ್ತೂ ನೈಸರ್ಗಿಕ ಜೀವನದ ಶೈಲಿಗಳನ್ನು ಒಪ್ಪಿಕೊಂಡು ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಮಹಿಳೆಗೆ ತನ್ನದೇ ಆದಂತಹ ಸ್ಥಾನ ಇರಬೇಕು ಹಾಗೂ ಇರುವ ನಿಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಹಾಗೂ ಸಂಘರ್ಷದ ಹಾದಿ ತುಂಬಾ ದುರ್ಗಮವಾದದ್ದು ಅಂತಹ ರಹದ್ದಾರಿಗಳನ್ನು ಮಹಿಳೆ ಹಾಗೂ ಶೋಷಿತರು ಯಾವ ತೆರನಾದಂತಹ ಜೀವನ ಸಾಗಿಸಿದ್ದಾರೆ ಹಾಗೂ ಅವರ ಜೀವನ ಮುಂದಿನ ಪೀಳಿಗೆಗೆ ಕೊಡುವ ಸಂದೇಶವೇನು ಎಂಬುದನ್ನು ತಮ್ಮ ಹಲವಾರು ಪ್ರಬಂಧ ಉಪನ್ಯಾಸ ಹಾಗೂ ಕೃತಿಗಳ ಮೂಲಕ ತಿಳಿಸಿಕೊಟ್ಟಿದ್ದಾರೆ.
ಪ್ರೇಮಾ ಅಪಚಂದ ಇವರು ಹಲವಾರು ಮಹಿಳಾ ಸಂವೇದಗಳನ್ನುಳ್ಳಂತಹ ಲೇಖನಗಳನ್ನು ಹಾಗೂ ಕೃತಿಗಳನ್ನು ಈ ನಾಡಿಗೆ ನೀಡುವುದರ ಮೂಲಕ ಮಹಿಳಾ ಸಂಬಂಧಿ ಆಲೋಚನೆಗಳು ಸಾಹಿತ್ಯ ಕ್ಷೇತ್ರದಲ್ಲಿ ಹೇಗೆ ಘಟಿಸುತ್ತವೆ ಎಂಬುದನ್ನು ಸಾಬೀತು ಮಾಡುತ್ತಾರೆ. ಲಿಂಗ ವ್ಯವಸ್ಥೆಯ ಪರಿಕಲ್ಪನೆಗಳನ್ನು ಕೂಡ ತಮ್ಮ ಅದ್ಭುತವಾದ ಲೇಖನಗಳ ಮೂಲಕ ಅವುಗಳ ಹಲವಾರು ವಿಚಾರಗಳು ಹಾಗೂ ಅದರ ತಾರ್ಕಿಕ ನೆಲೆಗಟ್ಟನ್ನು ಮಹಿಳಾ ಅಧ್ಯಯನದ ಭಾಗವಾಗಿ ಲಿಂಗ ತಾರತಮ್ಯ ಮತ್ತು ಸಮಾನತೆಯ ಕುರಿತು ಬೆಳಕನ್ನು ಚೆಲ್ಲುತ್ತಾರೆ.
ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಕಾಲೀನ ವಚನ ಹಾಗೂ ಇನ್ನಿತರ ಸಾಹಿತ್ಯಗಳನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ಸಾಹಿತ್ಯದ ತೌಲನಿಕ ದೃಷ್ಟಿಕೋನವನ್ನು ಒಂದು ತಕ್ಕಡಿಯಲ್ಲಿಟ್ಟು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳಾ ಸಬಲೀಕರಣಕ್ಕೆ ನೀಡಿರುವ ರಕ್ಷಣೆಗಳನ್ನು ಉಲ್ಲೇಖಿಸುತ್ತಾ ಪ್ರಸ್ತುತ ಭಾರತೀಯ ಕುಟುಂಬದ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಪಾತ್ರವನ್ನು ವಿಶ್ಲೇಷಿಸುತ್ತಾ ಅವಳು ಅನುಭವಿಸುವ ಶೋಷಣೆಗಳನ್ನು ಕೂಡ ತಮ್ಮ ಲೇಖನಗಳಲ್ಲಿ ಸೂಚಿಸುತ್ತಾ ಅವುಗಳಿಗೆ ಪರಿಹಾರೋಪಾಯಗಳನ್ನು ನೀಡುವಂತಹ ಕೆಲಸವನ್ನು ತಮ್ಮ ಕೃತಿಗಳಲ್ಲಿ ಮಾಡಿದ್ದಾರೆ.
ಇಂತಹ ಪ್ರಗತಿಪರ ಚಿಂತನೆಯುಳ್ಳ ಪ್ರೇಮಾರವರಿಗೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆ ವತಿಯಿಂದ ದೇವಾನಾಂ ಪ್ರಿಯ ಪ್ರಶಸ್ತಿ, ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವೀರ ಕನ್ನಡಿಗರ ಸೇನೆಯಿಂದ ಉತ್ತಮ ಸೇವಾ ಪ್ರಶಸ್ತಿ, ನಿತ್ಯೋತ್ಸವ ಸಾಮಾಜಿಕ ಸಂಸ್ಥೆಯಿಂದ ಜಗಜ್ಯೋತಿ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ, ವೀರ ಕನ್ನಡಿಗರೇ ಸೇನೆಯಿಂದ ಕನ್ನಡರತ್ನ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಗಳು ಹೀಗೆ ಇನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಅವರ ಮುಡಿಗೇರಿವೆ.
ಪ್ರೇಮಾ ಅವರು ಹಲವಾರು ಮಾಸಿಕ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯೆಯಾಗಿ ಅಜೀವ ಸದಸ್ಯರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ.
ಡಾ. ಶರಣಬಸಪ್ಪ ವಡ್ಡನಕೇರಿ